Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 49 - ಕನ್ನಡ ಸತ್ಯವೇದವು C.L. Bible (BSI)


‘ದೇವರ ದಾಸ’ ಕುರಿತ ಎರಡನೆಯ ಗೀತೆ

1 ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ.

2 ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ.

3 ಆತನೆನಗೆ ಇಂತೆಂದ : “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.”

4 ಇಂತೆಂದುಕೊಂಡೆ ನಾನಾಗ : ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ.

5 ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮರ್ಥ್ಯ ಇರುವುದು ಆ ದೇವರಲಿ.

6 ಮತ್ತೆ ಆತ ಇಂತೆಂದನು ನನಗೆ : “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

7 ಪೂರ್ತಿಯಾಗಿ ತಿರಸ್ಕೃತನಾದವನಿಗೆ ಅನ್ಯಜನಾಂಗಗಳಿಗೆ ಅಸಹ್ಯವಾದವನಿಗೆ ದರ್ಪಾಧಿಪತಿಗಳಿಗೆ ದಾಸನಾದವನಿಗೆ, ಇಸ್ರಯೇಲಿನ ವಿಮೋಚಕನು ಹಾಗೂ ಪರಮಪಾವನನು ಆದ ಸರ್ವೇಶ್ವರನು ಹೀಗೆಂದು ಹೇಳುವನು : “ಸರ್ವೇಶ್ವರ ಸ್ವಾಮಿಯ ಪ್ರಾಮಾಣಿಕತೆಯನ್ನೂ ಇಸ್ರಯೇಲಿನ ಪರಮ ಪಾವನನಿಂದ ನೀನು ಆಯ್ಕೆಯಾದುದನ್ನೂ ನಿನ್ನ ಅರಸರುಗಳು ಕಂಡು, ಎದ್ದುನಿಲ್ಲುವರು ನಿನಗೆ ಅಧಿಪತಿಗಳು ಅಡ್ಡಬೀಳುವರು.”


ಜೆರುಸಲೇಮಿನ ಪುನಃಸ್ಥಾಪನೆ

8 ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರ ಸ್ವಾಮಿ : “ನಿನಗೆ ದಯಪಾಲಿಸುವೆನು ಸದುತ್ತರವನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನು ಕಾಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ.

9 ‘ಹೊರಟುಹೋಗಿರಿ’ ಎನ್ನುವೆನು ಸೆರೆಯಾಳುಗಳಿಗೆ ‘ಬೆಳಕಿಗೆ ಬನ್ನಿರಿ’ ಎನ್ನುವೆನು ಕತ್ತಲಲ್ಲಿರುವವರಿಗೆ ಪಾಳುಬಿದ್ದ ಸೊತ್ತುಗಳನ್ನು ಹಂಚಿಕೊಡುವೆನು ಅವರಿಗೆ. ದೇಶವನ್ನು ಪುನಃ ತರುವೆನು ಪೂರ್ವಸ್ಥಿತಿಗೆ ದಾರಿಯುದ್ದಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ಹುಲ್ಲುಗಾವಲುಗಳಾಗುವುವು ನನ್ನಾ ಮಂದೆಗೆ.

10 ಇರದು ಅವರಿಗೆ ಹಸಿವು ಬಾಯಾರಿಕೆ ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ ಕರುಣಾಕರನು ದಾರಿತೋರಿಸುವನು ಅವರಿಗೆ.

11 ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು ಎತ್ತರಿಸುವೆನು ನನ್ನ ರಾಜಮಾರ್ಗಗಳನು.

12 ನೋಡಿ, ಬರುತಿಹರು ನನ್ನ ಜನರು ದೂರದಿಂದ ಹೌದು, ಬರುತಿಹರು ಉತ್ತರ ಪಶ್ಚಿಮದಿಂದ ದಕ್ಷಿಣದ ಆ ಅಶ್ವಾನ್ ನಾಡಿನಿಂದ.

13 ಹರ್ಷಧ್ವನಿಗೈ ಆಕಾಶವೇ ಉಲ್ಲಾಸಪಡು ಪೊಡವಿಯೇ ತಟ್ಟಾಡಿರಿ ಬೆಟ್ಟಗುಡ್ಡಗಳೇ ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು ಕನಿಕರಿಸಿಹನು ಶೋಷಿತರಾದ ತನ್ನ ಜನರನು.

14 ಜೆರುಸಲೇಮಿನ ಜನರಾದರೋ ಇಂತೆಂದರು : ಸರ್ವೇಶ್ವರ ನಮ್ಮನ್ನು ಕೈಬಿಟ್ಟಿಹನು, ಆ ಸ್ವಾಮಿ ನಮ್ಮನ್ನು ಮರೆತುಬಿಟ್ಟಿಹನು.”

15 ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನು ಮರೆಯೆ.

16 ನೋಡು, ನಿನ್ನ ಚಿತ್ರ ಕೊರೆದಿದೆ ನನ್ನ ಅಂಗೈಗಳಲೆ ನಿನ್ನ ಪೌಳಿಗೋಡೆಗಳು ಇವೆ ಸದಾ ನನ್ನ ಕಣ್ಣೆದುರಿನಲೆ.

17 ನಿನ್ನ ಮರಳಿ ಕಟ್ಟುವವರು ಬರುತಿಹರು ತ್ವರೆಯಿಂದ ನಿನ್ನ ಕೆಡವಿ ಹಾಳುಮಾಡಿದವರು ಹೊರಡುತಿಹರು ನಿನ್ನಿಂದ.

18 ಕಣ್ಣೆತ್ತಿ ಸುತ್ತಮುತ್ತಲು ನೋಡು : ಬರುತಿಹರು ನಿನ್ನ ಬಳಿಗೆ ಅವರೆಲ್ಲರು ಕೂಡಿಕೊಂಡು. ನನ್ನ ಜೀವದಾಣೆ ನಿನಗೆ ಹೇಳುವುದೇನೆಂದರೆ : ‘ವಧುವು ಒಡವೆಗಳನು ಧರಿಸಿಕೊಳ್ಳುವಂತೆ ಅವರಾಗುವರು ನಿನಗೆ ಆಭರಣಗಳಂತೆ.’

19 ಪಾಳುಬಿದ್ದ ನಿನ್ನ ಪ್ರದೇಶಗಳು ಬೀಳುಬಿದ್ದ ನಿನ್ನ ಭೂಮಿಗಳು ಕೆಡವಿಬಿದ್ದ ನಿನ್ನ ಬೀಡುಗಳು ಕಿಕ್ಕಿರಿದಾಗುವುವು ನಿನ್ನ ನಿವಾಸಿಗಳಿಗೆ; ನಿನ್ನ ಕಬಳಿಸಿದವರು ದೂರವಾಗುವರು ನಿನಗೆ.

20 “ಸರಿದುಕೊ, ನಮಗೆ ಸ್ಥಳಾವಕಾಶ ಸಾಲದು” ಎಂದು ಪೇಳ್ವರು ನಿನ್ನ ಕಿವಿಯೊಳು ಮಕ್ಕಳು ನೀ ಪರದೇಶಿಯಾಗಿದ್ದಾಗ ನಿನಗೆ ಹುಟ್ಟಿದಾ ಮಕ್ಕಳು.

21 ಆಗ ನೀನು ಹೀಗೆಂದುಕೊಳ್ಳುವೆ ಮನದೊಳು : “ನಾನೋ ಮಕ್ಕಳನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇಷ್ಟೊಂದು ಮಕ್ಕಳನು ಕೊಟ್ಟವರಾರು ನನಗೆ? ಇವರನ್ನು ಪೋಷಿಸಿದವರಾರು ಹೀಗೆ? ಇವರೆಲ್ಲಿದ್ದರು? ನಾನೋ ಒಬ್ಬಂಟಿಗಳಾಗಿದ್ದೆ!”

22 ಇಂತೆನ್ನುವರು ಸ್ವಾಮಿ ಸರ್ವೇಶ್ವರ : ಇದೋ, ಕೈಸನ್ನೆಮಾಡುವೆ ಜನಾಂಗಗಳಿಗೆ ನನ್ನ ಧ್ವಜವನ್ನೆತ್ತುವೆ ದೇಶಾಂತರಗಳವರೆಗೆ ಬರುವರವರು ನಿನ್ನ ಕುವರರನು ಅಪ್ಪಿಕೊಂಡು ಎದೆಗೆ ಕರೆತರುವರು ನಿನ್ನ ಕುವರಿಯರನು ಹೆಗಲಮೇಲೆ.

23 ಸಾಕುತಂದೆಗಳಾಗುವರು ರಾಜರು ನಿನಗೆ ಸಾಕುತಾಯಿಯರಾಗುವರು ರಾಣಿಯರು ನಿನಗೆ. ನಿನ್ನ ಪಾದಧೂಳಿಯ ನೆಕ್ಕುವರವರು ಸಾಷ್ಟಾಂಗವೆರಗಿ ನನಗೆ. ಆಗ ನಿನಗೆ ಗೊತ್ತಾಗುವುದು ನಾನೇ ಸರ್ವೇಶ್ವರನೆಂದು ನನ್ನನ್ನು ನಿರೀಕ್ಷಿಸುವವರು ಆಶಾಭಂಗಪಡರೆಂದು.

24 ಬಲಾಢ್ಯನಿಂದ ಕೊಳ್ಳೆಯನ್ನು ಕಸಿದುಕೊಳ್ಳಲಾದೀತೆ? ಭೀಕರನಿಗೆ ಸೆರೆಯಾದವರನ್ನು ಬಿಡಿಸಲಾದೀತೆ?

25 ಸರ್ವೇಶ್ವರ ಹೀಗೆನ್ನುತ್ತಾರೆ : “ಹೌದು, ಅಪಹರಿಸಲಾಗುವುದು ಬಲಾಢ್ಯನ ಸೆರೆಯಾಳುಗಳನು ಕಸಿದುಕೊಳ್ಳಲಾಗುವುದು ಭೀಕರನ ಕೊಳ್ಳೆಯನು. ನಿನ್ನೊಡನೆ ಹೋರಾಡುವವನ ಸಂಗಡ ಹೊರಾಡುವೆ ನಾನೇ. ಅಷ್ಟೇ ಅಲ್ಲ, ನಿನ್ನ ಮಕ್ಕಳನು ಉದ್ಧರಿಸುವೆ ನಾನೇ.

26 ಮಾಡುವೆನು ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಅಮಲೇರುವರು ಸ್ವಂತ ರಕ್ತವನ್ನು ಕುಡಿದು ದ್ರಾಕ್ಷಾರಸದಂತೆ. ಅರಿವರು ನರಮಾನವರೆಲ್ಲರು ಇಂತು : ನಾನೇ ಸರ್ವೇಶ್ವರ, ನಿನ್ನ ರಕ್ಷಕ, ನಿನ್ನ ನಿನ್ನ ವಿಮೋಚಕನೆಂದು; ನಾನೇ ಯಕೋಬ ವಂಶದ ಬಲಾಢ್ಯ ದೇವನೆಂದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು