Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 48 - ಕನ್ನಡ ಸತ್ಯವೇದವು C.L. Bible (BSI)


ಭವಿಷ್ಯತ್ತಿನ ನಿರ್ಮಾಪಕರಾದ ಸರ್ವೇಶ್ವರ

1 ಇಸ್ರಯೇಲೆಂಬ ನಾಮಧಾರಿಗಳೇ, ಯೆಹೂದ ವಂಶೋತ್ಪನ್ನರೇ, ಯಕೋಬ ಮನೆತನದವರೇ, ಇಡುತ್ತೀರಿ ನೀವು ಸರ್ವೇಶ್ವರನ ಮೇಲೆ ಆಣೆ ಸ್ಮರಿಸುತ್ತೀರಿ ನಿಸ್ಸಂದೇಹವಾಗಿ ಇಸ್ರಯೇಲಿನ ದೇವರನೆ. ಆದರೆ, ದೂರವಾಗಿದೆ ಸತ್ಯಕ್ಕೂ ಧರ್ಮಕ್ಕೂ ನಿಮ್ಮ ಕಾರ್ಯಾಚರಣೆ.

2 ಹೆಮ್ಮೆಪಡುವರಿವರು ತಾವು ಪವಿತ್ರನಗರದವರೆಂದು ಭರವಸೆಯಿಂದಿರುವರು ದೇವರು ಇಸ್ರಯೇಲಿನವನೇ ಎಂದು ಆತನ ಹೆಸರು ಸೇನಾಧೀಶ್ವರ ಸರ್ವೇಶ್ವರನೇ ಎಂದು.

3 “ಕೇಳು, ಎಲೈ ಯಕೋಬ ಮನೆತನವೇ, ನಿನಗೆ ತಿಳಿಸಿದೆ ಈವರೆಗೆ ನಡೆದ ಸಂಗತಿಗಳನು ಪೂರ್ವದಲೇ. ಹೌದು ಪ್ರಕಟಿಸಿದೆ ನಾನು, ಹೊರಡಿಸಿದೆ ನನ್ನ ಬಾಯಿಂದಲೇ ಕೈಗೂಡುವಂತೆ ಮಾಡಿದೆ ನಾನವುಗಳನು ಕೂಡಲೆ.

4 ತಿಳಿದಿದೆ ನನಗೆ ನಿನ್ನ ಹಟಮಾರಿತನ ನಿನ್ನ ಕುತ್ತಿಗೆಯ ನರಗಳು ಕಬ್ಬಿಣ ನಿನ್ನ ಹಣೆ ಕಂಚಿನಂತೆ ಕಠಿಣ.

5 ‘ಈ ಕಾರ್ಯಗಳನ್ನು ನಡೆಸಿದ್ದು ನನ್ನ ವಿಗ್ರಹವೇ ವಿಧಿಸಿದ್ದು ನನ್ನ ಕೆತ್ತನೆಯ ಬೊಂಬೆಯೇ, ಎರಕದ ಮೂರ್ತಿಯೇ’ ಎಂದು ನೀ ಜಂಬ ಕೊಚ್ಚಿಕೊಳ್ಳದಂತೆ ಪುರಾತನ ಕಾಲದಲ್ಲೆ ನಾನಿವುಗಳನು ಮುಂತಿಳಿಸಿದೆ. ಅವುಗಳು ನೆರವೇರುವುದಕ್ಕೆ ಮುಂಚೆಯೇ ಪ್ರಕಟಿಸಿದೆ.

6 ನೋಡು, ನೀ ಕೇಳಿದವೆಲ್ಲ ನಡೆದಿದೆಯೊ ಇಲ್ಲವೋ ಎಂಬುದನು. ಆದರೂ ಘೋಷಿಸುತ್ತಾರೆಯೇ ನಿನ್ನವರು ಅವುಗಳನ್ನು? ಅರುಹುವೆನು ನಿನಗಿಂದಿನಿಂದ ಹೊಸ ಸಂಗತಿಗಳನು ಈವರೆಗೂ ನೀನರಿಯದ ಗುಪ್ತ ವಿಷಯಗಳನು.

7 ಪುರಾತನ ಕಾಲದಲ್ಲಿ ಅಲ್ಲ, ಈಗ ನಡೆಯುತ್ತಿವೆ ಈ ಘಟನೆಗಳೆಲ್ಲ. ‘ಇದೆಲ್ಲ ನನಗೆ ಮೊದಲೇ ತಿಳಿದಿತ್ತಲ್ಲಾ,’ ಎಂದು ನೀ ಕೊಚ್ಚಿಕೊಳ್ಳದಂತೆ, ನಾ ನಿನಗೆ ಮುಂತಿಳಿಸಲಿಲ್ಲ.

8 ಹೌದು, ಹೌದು ನೀ ಕೇಳಿಲ್ಲ, ತಿಳಿದೂ ಇಲ್ಲ ಅದಿಯಿಂದ ನಿನ್ನ ಕಿವಿ ತೆರೆದೂ ಇಲ್ಲ ನೀನು ಆಗರ್ಭ ದ್ರೋಹಿ, ಮಹಾ ಕುಟಿಲ ಎಂಬುದು ನನಗೆ ತಿಳಿದು ಇದೆಯಲ್ಲ !

9 ಆದರೂ ನನ್ನ ಹೆಸರು ಕೆಡದಂತೆ ತಡೆಹಿಡಿವೆನು ನಿನ್ನ ಮೇಲಣ ಕೋಪವನು; ನನ್ನ ಕೀರ್ತಿಗೆ ಕಳಂಕ ಬಾರದಂತೆ ತಾಳಿಕೊಳ್ಳುವೆನು, ನಿರ್ಮೂಲಮಾಡದೆ ನಿನ್ನನು.

10 ಬೆಳ್ಳಿಯನು ಪುಟಕ್ಕೆ ಹಾಕಿದಂತಲ್ಲ; ನಿನ್ನನು ಸಂಕಟವೆಂಬ ಕೆಂಡಕ್ಕೆ ಹಾಕಿರುವೆ. ಶೋಧಿಸಿರುವೆನು, ಪರಿಶೋಧಿಸಿರುವೆನು ನಿನ್ನನು ನನಗಾಗೆ;

11 ಇದನ್ನು ಮಾಡುವೆ ನನಗೋಸ್ಕರವೆ ಇದನ್ನು ಮಾಡುವೆ ಕಳಂಕಬಾರದಂತೆ ನನ್ನ ಹೆಸರಿಗೆ ಸಲ್ಲಗೊಡಿಸೆನು ನನ್ನ ಮಹಿಮೆಯನು ಮತ್ತೊಬ್ಬನಿಗೆ.”


ಸರ್ವೇಶ್ವರನಿಂದ ಆಯ್ಕೆಯಾದ ಸೈರಸನು

12 “ಯಕೋಬೆ, ನಾ ಕರೆದ ಇಸ್ರಯೇಲೆ ನನಗೆ ಕಿವಿಗೊಡು, ಪರಮಾತ್ಮ ನಾನೆ ಆದಿಯು ನಾನೆ, ಅಂತ್ಯವು ನಾನೆ.

13 ಭೂಮಿಗೆ ಅಸ್ತಿವಾರ ಹಾಕಿದ್ದು ನನ್ನ ಕೈಯೇ, ಆಕಾಶವನ್ನು ಹರಡಿದ್ದು ನನ್ನ ಬಲಗೈಯೇ ಇವೆರಡೂ ಬರುತ್ತವೆ ನಾ ಕರೆದ ಮಾತ್ರಕ್ಕೇ.

14 ಒಟ್ಟುಗೂಡಿ ಕೇಳಿ ನೀವೆಲ್ಲರು ಇದನ್ನು : ಆ ದೇವರುಗಳಲ್ಲಿ ಮುಂತಿಳಿಸಿದವನಾರು ಈ ಸಂಗತಿಯನು? ನನ್ನ ಪ್ರೀತಿಗೆ ಪಾತ್ರನಾದ ವ್ಯಕ್ತಿ ಸೈರಸನು ಕಸ್ದೀಯರ ಮೇಲೆ ಕೈಯೆತ್ತುವನು, ಈಡೇರಿಸುವನು ಬಾಬೆಲಿನಲ್ಲಿ ನನ್ನ ಇಷ್ಟಾರ್ಥವನು.

15 ಆತನನ್ನು ಹೆಸರಿಸಿ ಕರೆದವನು ನಾನೇ ಆತನನ್ನು ಬರಮಾಡಿದವನೂ ನಾನೇ. ಆತನು ಗಳಿಸುವುದು ಜಯವನ್ನೇ.

16 ಬಂದು ಕೇಳಿ ಇದನ್ನು ಹತ್ತಿರದಿಂದ ನಾ ಮಾತಾಡಿಲ್ಲ ಗುಟ್ಟಾಗಿ ಆದಿಯಿಂದ ಪ್ರಸನ್ನನಾಗಿಹೆನು ಭುವಿ ಉಂಟಾದಂದಿನಿಂದ.” (ಕಳುಹಿಸಿದ್ದಾರೆ ದೇವರಾದ ಸರ್ವೇಶ್ವರ ನನ್ನನ್ನೀಗ ತಮ್ಮ ಪವಿತ್ರಾತ್ಮರ ಸಮೇತ).


ಇಸ್ರಯೇಲಿನ ಬಗ್ಗೆ ದೇವರ ಸಂಕಲ್ಪ

17 ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರ ಸ್ವಾಮಿಯೆ ನುಡಿದಿಹನು : “ನಿನಗೆ ಕ್ಷೇಮ‍ಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರ ಸ್ವಾಮಿ ದೇವರು ನಾನು.

18 ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತ್ತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ.

19 ಅಗಣಿತವಾಗಿರುತ್ತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ.”

20 ಹೊರಡಿರಿ ಬಾಬಿಲೋನ್ ನಗರದಿಂದ, ಓಡಿರಿ ಕಸ್ದೀಯರ ಕಡೆಯಿಂದ ಪ್ರಚುರಪಡಿಸಿರಿ ಹರ್ಷಧ್ವನಿಯಿಂದ, ಪ್ರಕಟಿಸಿರಿ ಭೂಮಿಯ ಕಟ್ಟಕಡೆಯ ತನಕ, ಈ ಪರಿ ತಿಳಿಸಿರಿ : “ಸರ್ವೇಶ್ವರ, ತಮ್ಮ ದಾಸ ಯಕೋಬನ ಉದ್ಧಾರಕ".

21 ಆತ ಮರುಭೂಮಿಯಲ್ಲಿ ತನ್ನ ಜನರನ್ನು ನಡೆಸಿದಾಗ ಬಳಲಲಿಲ್ಲ ಅವರು ಬಾಯಾರಿಕೆಯಿಂದ; ಹರಿಸಿದನು ನೀರನ್ನು ಅವರಿಗಾಗಿ ಕಲ್ಲಿನೊಳಗಿಂದ ಜಲವಾಹಿನಿ ಹರಿಯಿತು ಆತ ಸೀಳಿದ ಬಂಡೆಯಿಂದ.

22 “ದುಷ್ಟರಿಗಿಲ್ಲ ಶಾಂತಿಸಮಾಧಾನ” ಇದು ಸರ್ವೇಶ್ವರ ಸ್ವಾಮಿಯ ವಚನ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು