ಯೆಶಾಯ 47 - ಕನ್ನಡ ಸತ್ಯವೇದವು C.L. Bible (BSI)ಬಾಬಿಲೋನಿಯ ಕುರಿತು ವ್ಯಂಗ್ಯ ಗೀತೆ 1 “ಕೆಳಕ್ಕಿಳಿದು ಬಾ, ಯುವತಿಯೇ ಧೂಳಲ್ಲಿ ಕುಳಿತುಕೋ, ಬಾಬೆಲೆ ! ಕುವರಿಯೇ, ಕುಕ್ಕರಿಸು ನೆಲದಲಿ ಸಿಂಹಾಸನವಿಲ್ಲ ಇಲ್ಲಿ. ಎಲೈ, ಕಸ್ದೀಯರ ನಗರಿಯೇ, ನೀನಲ್ಲ ಇನ್ನು ಕೋಮಲೆ,, ಸುಕುಮಾರಿ ಎಂದು ಎನಿಸಿಕೊಳ್ಳೆ. 2 ಬೀಸುವ ಕಲ್ಲನು ಹಿಡಿ, ಹಿಟ್ಟಿಗಾಗಿ ನೆರಿಗೆಯನ್ನು ಹರಿ, ಮುಸುಕನ್ನು ತೆಗೆದುಹಾಕಿ ಹೊಳೆಗಳನ್ನು ಹಾದುಹೋಗು, ನಡೆ ಬರೆಗಾಲಿನಲ್ಲಿ. 3 ಮುಯ್ಯಿ ತೀರಿಸುವೆನು ಯಾರನ್ನೂ ಕರುಣಿಸದೆ ಬೀದಿಪಾಲಾಗುವೆ ನೀನು ಲಜ್ಜೆಗೆಟ್ಟು, ಮಾನವಿಲ್ಲದೆ.” 4 ನಮ್ಮ ಉದ್ಧಾರಕನ ನಾಮಧೇಯ ಸೇನಾಧೀಶ್ವರ ಸರ್ವೇಶ್ವರ ಆತನೇ ಇಸ್ರಯೇಲರಿಗೆ ಪರಮಪವಿತ್ರ. 5 “ಕಸ್ದೀಯ ನಗರಿಯೇ, ಕುಳಿತುಕೊ ಮೌನವಾಗಿ ಕತ್ತಲೆಯೊಳಗೆ ಇನ್ನು ಎನಿಸಿಕೊಳ್ಳೆ ರಾಣಿಯೆಂದು ರಾಜ್ಯಗಳಿಗೆ.” 6 “ನಾ ರೋಷಗೊಂಡು ನನ್ನ ಜನರನ್ನೇ ನಿನ್ನ ಕೈವಶಮಾಡಿದೆ ನನಗೆ ಸ್ವಂತವಾದವರನ್ನೇ ಈ ಪರಿ ಹೊಲೆಗೆಡಿಸಿದೆ. ನೀನಾದರೋ ಕರುಣೆ ತೋರಿಸದೆಹೋದೆ ಮುದುಕರ ಮೇಲೂ ತೂಕದ ನೊಗವನು ಹೊರಿಸಿದೆ. 7 ನನ್ನ ಜನರ ಹಿಂಸೆಬಾಧೆಗಳನ್ನು ಗಮನಿಸದೆ ಬರಲಿರುವ ಪರಿಣಾಮವನ್ನು ನೆನೆಸಿಕೊಳ್ಳದೆ ನೀನೇ ಶಾಶ್ವತ ರಾಣಿಯೆಂದು ಮೆರೆದೆ. 8 ಭೋಗಾಸಕ್ತಳೆ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ‘ಏಕೈಕಳು ನಾನೇ, ನನ್ನ ಹೊರತು ಇನ್ನಾರು ಇಲ್ಲ,’ ಎನ್ನುವವಳೇ, ‘ವಿಧವೆಯಾಗೆನು, ಪುತ್ರಶೋಕ ಎನಗಿರದು’ ಎನ್ನುವವಳೇ, ಇದನು ಕೇಳು : 9 ಒಂದೇ ದಿನದೊಳಗೆ, ಒಂದೇ ಕ್ಷಣದೊಳಗೆ ಪುತ್ರಶೋಕ, ವೈಧವ್ಯ - ಇವೆರಡು ಒದಗುವುವು ನಿನಗೆ. ಎಷ್ಟೇ ಮಂತ್ರತಂತ್ರಗಳನು ನಡೆಸಿದರೂ ಅನುಭವಿಸುವೆ ನೀ ಪೂರ್ತಿಯಾಗಿ ಇವುಗಳನು. 10 ಕೇಡನು ನೀ ಮಾಡಿದೆ ಭಯಪಡದೆ ನೋಡರಾರೂ ಎಂದುಕೊಂಡಿದ್ದೆ, ನೀನು ಜ್ಞಾನಿ ವಿವೇಕಿಯೆಂದು ತಿಳಿದುಕೊಂಡೇ ಮರುಳಾದೆ; ‘ಏಕೈಕಳು ನಾನೇ, ಇನ್ನಾರೂ ಇಲ್ಲ’ ಎಂದುಕೊಂಡೆ. 11 ಇಂತಿರಲು ನಿನಗೊದಗುವುದು ಮಂತ್ರಕ್ಕು ಮೀರಿದ ಆಪತ್ತು ನಿನ್ನ ಮೇಲೆರಗುವುದು ಪರಿಹರಿಸಲಾಗದ ವಿಪತ್ತು ತಟ್ಟನೆ ತಟ್ಟುವುದು ನಿನಗೆ ತಪ್ಪಿಸಲಾಗದ ಕುತ್ತು. 12 ಪ್ರಯೋಗಿಸಿ ನೋಡು ನಿನ್ನ ಅಗಣಿತ ಮಂತ್ರತಂತ್ರಗಳನು ಬಾಲ್ಯಾರಭ್ಯ ನೀ ಕಲಿತ ಮಾಯಮಾಟಗಳನು ಪ್ರಾಯಶಃ ನಿನಗವು ಪ್ರಯೋಜನವಾದಾವು ಬಹುಶಃ ನಿನಗವು ಭಯಹುಟ್ಟಿಸಿಯಾವು. 13 ಬೇಸರವಾಯಿತೆ ನಿನಗೆಕೇಳಿ ಮಂತ್ರಾಲೋಚನೆಗಳನು? ಉದ್ಧರಿಸಲಿ ಬರಲಿರುವ ಆ ವಿಪತ್ತುಗಳಿಂದ ನಿನ್ನನು ಖಗೋಳಜ್ಞರು, ಜೋಯಿಸರು ನೋಡಿ ಪಂಚಾಂಗವನು. 14 ಇರುವರವರೆಲ್ಲರು ಒಣಹುಲ್ಲಿನ ಕೂಳೆಯಂತೆ ಸುಟ್ಟುಬಿಡುವುದವರನು ಉರಿಯುವ ಚಿತೆ ತುತ್ತಾಗುವರವರು ಆ ಜ್ವಾಲಾಗ್ನಿಗೆ ತಪ್ಪದೆ. ಅದು ಚಳಿಗೆ ಮೈಕಾಯಿಸಿಕೊಳ್ಳುವ ಬೆಂಕಿಯಂತಲ್ಲ ಮೈಬೆಚ್ಚಗಾಗಿಸಿಕೊಳ್ಳುವ ಉರಿಯಂತಲ್ಲ. 15 ಇಂತಾಗುವುದು ನೀ ಗೈದ ಪ್ರಯತ್ನಗಳೆಲ್ಲ. ಬಾಲ್ಯದಿಂದ ನಿನ್ನೊಡನೆ ವ್ಯವಹರಿಸಿದವರು ಸರಿವರು ದೂರಕೆ ಹಿಂದಿರುಗುವರೆಲ್ಲರು ತಂತಮ್ಮ ನಾಡಿಗೆ ಅಂತ್ಯದಲಿ ಯಾರೂ ಆಗರು ರಕ್ಷಣೆ ನಿನಗೆ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India