ಯೆಶಾಯ 46 - ಕನ್ನಡ ಸತ್ಯವೇದವು C.L. Bible (BSI)ಬಾಬಿಲೋನಿಯದ ಪತನ 1 ತಗ್ಗಿದೆ ಬೇಲ್ ದೇವತೆ ಕುಗ್ಗಿದೆ ನೆಬೋ ದೇವತೆ ಅವುಗಳ ಪ್ರತಿಮೆಗಳನು ಕತ್ತೆಗಳು ಹೊತ್ತಿವೆ. ನೀವು ಮೆರವಣಿಗೆಯಾಗಿ ಹೊರುತ್ತಿದ್ದ ಆ ಬೊಂಬೆಗಳೆ, ಭಾರವಾದ ಹೊರೆಯಾಗಿವೆ, ಬಳಲಿದಾ ಪಶುಗಳಿಗೆ 2 ಆ ಬೊಂಬೆಗಳೆಲ್ಲ ಬಗ್ಗಿ ಕುಗ್ಗಿಹೋಗಿವೆ ಭಾರವನ್ನು ನೀಗಿಸಲು ಅವು ನಿಶ್ಯಕ್ತವಾಗಿವೆ ತಾವೆ ಸೆರೆಮನೆ ಸೇರಿಹೋಗಿವೆ. 3 “ಕಿವಿಗೊಡು, ಓ ಯಕೋಬ ಮನೆತನವೆ, ಅಳಿದುಳಿದಾ ಇಸ್ರಯೇಲಿನ ಮನೆತನವೆ, ಹೊರುತ್ತಿರುವೆ ನಿಮ್ಮನು ಗರ್ಭದಿಂದ ಸಾಕಿ ಸಲಹುತ್ತಿರುವೆ ಹುಟ್ಟಿದಂದಿನಿಂದ. 4 ನಾನೇ ನಿಮಗೆ ಆಧಾರ ಮುಪ್ಪಿನ ತನಕ ಹೊತ್ತು ಸಲಹುವೆನು ನಿಮ್ಮನು ನರೆಬಂದಾಗ. ಉಂಟುಮಾಡಿದವನು ನಾನೇ, ಹೊರುವವನು ನಾನೇ ಹೌದು, ನಿಮ್ಮನು ಹೊತ್ತು ಸಲಹುವವನು ನಾನೇ. 5 ನನ್ನನ್ನು ಯಾರಿಗೆ ಸರಿಹೋಲಿಸಬಲ್ಲಿರಿ? ನನ್ನನ್ನು ಯಾರಿಗೆ ಸಾಟಿಮಾಡಬಲ್ಲಿರಿ? 6 ಸುರಿಯುತ್ತಾರೆ ಜನರು ಚಿನ್ನವನ್ನು ಚೀಲದಿಂದ ತೂಗಿ ತೂಕಹಾಕುತ್ತಾರೆ ಬೆಳ್ಳಿಯನ್ನು ತಕ್ಕಡಿಯಿಂದ. ದೇವರನ್ನು ಮಾಡಿಸುತ್ತಾರೆ ಕೂಲಿಕೊಟ್ಟು ಅಕ್ಕಸಾಲಿಗನಿಂದ ಪೂಜಿಸುತ್ತಾರೆ ಅದನ್ನು ಸಾಷ್ಟಾಂಗ ನಮಸ್ಕಾರದಿಂದ. 7 ಅದನ್ನು ಮೆರವಣಿಗೆ ಮಾಡುತ್ತಾರೆ ಹೊತ್ತು ಹೆಗಲಮೇಲೆ ಪ್ರತಿಷ್ಠಾಪನೆ ಮಾಡುತ್ತಾರೆ ಇಟ್ಟು ಪೀಠದ ಮೇಲೆ. ಕೂಗಿಕೊಂಡರೂ ಜರುಗದದು ಅಲ್ಲಿಂದ ಉತ್ತರಿಸಿ ಬಿಡಿಸದು ಯಾರನ್ನು ಕಷ್ಟದಿಂದ. 8 ಮತಭ್ರಷ್ಟರೇ, ಜ್ಞಾಪಕದಲ್ಲಿಡಿ ಇದನ್ನು ಧೈರ್ಯದಿಂದ ಒಪ್ಪಿಕೊಳ್ಳಿ ನಿಮ್ಮ ತಪ್ಪನ್ನು. 9 ನೆನಪಿಗೆ ತಂದುಕೊಳ್ಳಿ ಪ್ರಾಚೀನ ಘಟನೆಗಳನ್ನು ಅರಿತುಕೊಳ್ಳಿ ನಾನೇ ದೇವರು, ಇನ್ನಾರೂ ಇಲ್ಲ ಎಂಬುದನ್ನು ನಾನೇ ಪರಮದೇವರು, ನನಗೆ ಸರಿಸಮಾನವಿಲ್ಲ ಎಂಬುದನ್ನು. 10 ಆರಂಭದಲ್ಲಿಯೇ ಅಂತ್ಯವನು ತಿಳಿಸಿದವನು ನಾನು ಭೂತಕಾಲದಲ್ಲಿಯೆ ಭವಿಷ್ಯವನು ಅರುಹಿದವನು ನಾನು. ಸ್ಥಿರವಿರುವುದು ನನ್ನ ಸಂಕಲ್ಪ, ನೆರವೇರುವುದು ನನ್ನ ಇಷ್ಟಾರ್ಥ 11 ಮೂಡಲಿಂದ ಬೇಟೆಗಾಗಿ ರಣಹದ್ದನು ಕರೆದಂತೆ ಕರೆದಿಹೆನು ದೂರದೇಶದಿಂದ ನನ್ನ ಸಂಕಲ್ಪ ಈಡೇರಿಸಲೆಂದೇ. ನುಡಿದಿರುವೆನು ನಾನು; ಈಡೇರಿಸುವೆನು ಅದನ್ನು ಯೋಜಿಸಿರುವೆನು ನಾನು; ಸಾಧಿಸುವೆನು ಅದನ್ನು. 12 ಧರ್ಮಕ್ಕೆ ದೂರವಾದ ಹಟಮಾರಿಗಳೇ, ಕಿವಿಗೊಡಿರಿ ನೀವು ನನ್ನ ಮಾತಿಗೆ. 13 ಬರಮಾಡುವೆನು ಮುಕ್ತಿಯನು ಹತ್ತಿರಕೆ ಅದಿನ್ನು ದೂರವಿರದು ನಿಮಗೆ. ತಡವಾಗದು ನಿಮಗೆ ನನ್ನ ರಕ್ಷಣೆ ಸಾಧಿಸುವೆನು ರಕ್ಷಣೆಯನ್ನು ಸಿಯೋನಿನಲೇ, ಬೀರುವೆನು ನನ್ನ ಮಹಿಮೆಯನ್ನು ಇಸ್ರಯೇಲ ಮೇಲೆ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India