ಯೆಶಾಯ 45 - ಕನ್ನಡ ಸತ್ಯವೇದವು C.L. Bible (BSI)ಸೈರಸ್ ಅರಸನ ಬಗ್ಗೆ ಸರ್ವೇಶ್ವರನ ಸಂಕಲ್ಪ 1 ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯುವಂತೆ ನಾ ನಿನ್ನ ಕೈಹಿಡಿದು ನಡೆಸುವೆನು ಮುಂದೆ. 2 ನಿನ್ನ ಮುಂದೆ ಸಾಗುವೆನು ನಾನು ಸಮಮಾಡುವೆನು ಬೆಟ್ಟಗುಡ್ಡಗಳನು ಒಡೆದುಹಾಕುವೆನು ಕಂಚಿನ ಕದಗಳನು ಮುರಿದುಬಿಡುವೆನು ಕಬ್ಬಿಣದ ಅಗುಳಿಗಳನು. 3 ಹೆಸರು ಹಿಡಿದು ನಿನ್ನ ಕರೆಯುವ ಸರ್ವೇಶ್ವರ ನಾನು ಕೊಡುವೆ ನಾ ನಿನಗೆ ಕತ್ತಲಲಿ ಬಚ್ಚಿಟ್ಟ ಭಂಡಾರಗಳನು ಗುಪ್ತಸ್ಥಳಗಳಲ್ಲಿ ಮರೆಮಾಡಿರುವ ನಿಧಿನಿಕ್ಷೇಪಗಳನು. ಈ ಪರಿ ಅರಿತುಕೊಳ್ಳುವೆ ನೀನು ನಾನೇ ಇಸ್ರಯೇಲರ ದೇವರೆಂಬುದನು. 4 ನನ್ನ ಸೇವಕನಾದ ಯಕೋಬನ ನಿಮಿತ್ತ ನಾನು ಆರಿಸಿಕೊಂಡ ಇಸ್ರಯೇಲಿನ ನಿಮಿತ್ತ ನನ್ನ ಅರಿವೇ ಇಲ್ಲದ ನಿನ್ನನು ಹೆಸರು ಹಿಡಿದು ಕರೆದಿರುವೆನು, ಬಿರುದಿತ್ತು ಸನ್ಮಾನಿಸಿರುವೆನು. 5 ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನ್ನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ. 6 ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು : ನಿನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು; 7 ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು. 8 ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲಾ.” ಸರ್ವೇಶ್ವರ ಸೃಷ್ಟಿಗೂ ಇತಿಹಾಸಕ್ಕೂ ಕರ್ತ 9 ಧಿಕ್ಕಾರ ! ತನ್ನನು ರೂಪಿಸಿದವನೊಡನೇ ವ್ಯಾಜ್ಯ ಮಾಡುವವನಿಗೆ; ಅವನು ಕೂಡ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? “ಏನು ಮಾಡುತ್ತಿ” ಎಂದು ಮಣ್ಣು ಕುಂಬಾರನನು ಕೇಳುವುದುಂಟೆ? ‘ನಾನು ನಿನ್ನ ಕೈಯ ಕೃತಿ ಅಲ್ಲ’ ಎಂದು ಆ ಮಡಕೆ ಹೇಳುವುದುಂಟೆ? 10 ‘ನೀನು ಹುಟ್ಟಿಸುವುದೇನು’ ಎಂದು ತಂದೆಯನು ಕೇಳುವವನಿಗೆ ಧಿಕ್ಕಾರ ! ‘ನೀನು ಹೆರುವುದೇನು’ ಎಂದು ತಾಯಿಯನು ಕೇಳುವವನಿಗೆ ಧಿಕ್ಕಾರ ! 11 ಸರ್ವೇಶ್ವರ ಇಸ್ರಯೇಲಿನ ಪರಮಪಾವನ ಸ್ವಾಮಿ, ಅದರ ಸೃಷ್ಟಿಕರ್ತ. ಆ ಸರ್ವೇಶ್ವರನ ನುಡಿಯಿದು : “ನನ್ನ ಮಕ್ಕಳ ಬಗ್ಗೆ ನೀ ಕೇಳುವುದೆಂತು? ನನ್ನ ಕೈಯ ಕೃತಿಗಳ ಬಗ್ಗೆ ನೀ ವಿಧಿಸುವುದೆಂತು? 12 ಜಗವನು, ಅದರಲ್ಲಿನ ಮನುಜರನು ಸೃಜಿಸಿದವನು ನಾನೇ, ಆಕಾಶಮಂಡಲವನು ವಿಶಾಲವಾಗಿ ಹರಡಿದ್ದು ನನ್ನ ಕೈಗಳೇ, ಸೂರ್ಯ, ಚಂದ್ರ, ನಕ್ಷತ್ರಗಳನು ನಿಯಂತ್ರಿಸುವವನು ನಾನೆ. 13 ಧರ್ಮಸಾಧನೆಗಾಗಿ ಕೋರೆಷನನ್ನು ಉದಯಗೊಳಿಸಿರುವೆನು ಅವನ ಮಾರ್ಗಗಳನ್ನು ನಾನೇ ಸರಾಗಮಾಡುವೆನು ನನ್ನ ನಗರವನು ಪುನರ್ ನಿರ್ಮಾಣಮಾಡುವನು ಅವನು ಸೆರೆಯಾದ ನನ್ನ ಜನರನು ಬಿಡುಗಡೆ ಮಾಡುವನು ಸಂಬಳವನ್ನಾಗಲಿ ಸಂಭಾವನೆಯನ್ನಾಗಲಿ ಸ್ವೀಕರಿಸನು. ಇದ ನುಡಿದಿರುವೆನು ಸೇನಾಧೀಶ್ವರ ಸರ್ವೇಶ್ವರನಾದ ನಾನು.” 14 ಕೇಳಿರಿ ಸರ್ವೇಶ್ವರನ ಈ ಮಾತನ್ನು : “ನಿಮ್ಮದಾಗುವುದು ಈಜಿಪ್ಟಿನ ಸಿರಿಯು, ಸುಡಾನಿನ ಸಂಪದವು. ನಿಮ್ಮನ್ನು ಸೇರಿ ನಿಮಗಧೀನರಾಗುವರು ಎತ್ತರದ ಸೆಬಾಯರು. ಬೇಡಿತೊಟ್ಟು ಅಡ್ಡಬೀಳುವರು ನಿಮ್ಮ ಮುಂದೆ ಅರಿಕೆಮಾಡಿಕೊಳ್ಳುವರು ಹೀಗೆಂದೆ : ‘ನಿಶ್ಚಯವಾಗಿ ನಿಮ್ಮಲ್ಲಿಹರು ದೇವರು ಅವರಲ್ಲದೆ ದೇವರಿಲ್ಲ ಬೇರೆಯಾರು.’ 15 ಇಸ್ರಯೇಲರ ದೇವರೇ, ಉದ್ಧಾರಕನೇ, ನಿಶ್ಚಯವಾಗಿ ದೇವರಾದ ನೀನು ಮರೆಯಾಗಿರುವೆ. 16 ಮೂರ್ತಿಗಳನು ಮಾಡುವವರೆಲ್ಲರು ಈಡಾಗುವರು ನಾಚಿಕೆಗೆ ಮಾನಭಂಗಪಟ್ಟು ಒಟ್ಟಿಗೆ ಮುಳುಗುವರವರು ಅವಮಾನದೊಳಗೆ. 17 ಇಸ್ರಯೇಲಿಗಾದರೋ, ದೊರೆವುದು ಶಾಶ್ವತ ರಕ್ಷಣೆ ಸರ್ವೇಶ್ವರನಿಂದ; ಯುಗಯುಗಾಂತರಕ್ಕೂ ಅದಕ್ಕಾಗದು ಲಜ್ಜೆ, ಮಾನಭಂಗ.” 18 ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು : ಭೂಲೋಕವನ್ನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ : “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ. 19 ನಾನು ಗುಟ್ಟುಗುಟ್ಟಾಗಿ ಮಾತಾಡಿದವನಲ್ಲ ಕಗ್ಗತ್ತಲೆಯೊಳಗಿನಿಂದ ನುಡಿದವನಲ್ಲ ಶೂನ್ಯದಲ್ಲಿ ನನ್ನ ಹುಡುಕಿರಿ ಎಂದು ಯಕೋಬ ವಂಶಕ್ಕೆ ಹೇಳಿದವನಲ್ಲ. ಸರ್ವೇಶ್ವರನಾದ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೆ ಸ್ಪಷ್ಟವಾಗಿ ಹೇಳುವವನು.” ಸರ್ವೇಶ್ವರ ಜಗದಾದ್ಯಂತಕ್ಕೆ ಒಡೆಯ 20 “ಅಳಿದುಳಿದ ಅನ್ಯಜನರೇ, ನೆರೆದು ಬನ್ನಿ, ಒಟ್ಟಿಗೆ ನನ್ನ ಬಳಿಗೆ ಬನ್ನಿ. ತಮ್ಮ ಮರದ ಬೊಂಬೆಯನು ಹೊತ್ತು ತಿರುಗುವವರು ರಕ್ಷಿಸಲಾಗದ ದೇವತೆಗೆ ಮೊರೆಯಿಡುವ ಬುದ್ಧಿಹೀನರು. 21 ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ. 22 “ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ. 23 ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ. 24 “ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು. 25 ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India