ಯೆಶಾಯ 44 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿನ ಏಳಿಗೆ 1 “ಕೇಳೀಗ ನನ್ನ ದಾಸ ಯಕೋಬೇ, ನಾನು ಆರಿಸಿಕೊಂಡ ಇಸ್ರಯೇಲೇ, 2 ನಿನ್ನನ್ನು ಸೃಷ್ಟಿಸಿದ ಸರ್ವೇಶ್ವರ ನಾನೆ ತಾಯ ಗರ್ಭದಿಂದ ನಿನ್ನನ್ನು ರೂಪಿಸಿದವನು ನಾನೆ ಅಂದಿನಿಂದ ನಿನಗೆ ನೆರವಾಗುತ್ತಾ ಬಂದವನು ನಾನೆ. ಭಯಪಡಬೇಡ, ನನ್ನ ದಾಸ ಯಕೋಬನೇ, ಅಂಜಬೇಡ, ನಾನು ಆರಿಸಿಕೊಂಡ ಯೆಶುರೂನೇ. 3 ಮಳೆಗರೆವೆನು ಬತ್ತಿದ ಭೂಮಿಯಲಿ ಹರಿಸುವೆನು ಕಾಲುವೆಗಳನು ಒಣನೆಲದಲಿ. ಮಳೆಗರೆವೆನು ನನ್ನಾತ್ಮವನು ನಿನ್ನ ಸಂತಾನದ ಮೇಲೆ ನನ್ನ ಆಶೀರ್ವಾದವನು ನಿನ್ನ ಸಂತತಿಯ ಮೇಲೆ. 4 ವೃದ್ಧಿಯಾಗುವರವರು ನೀರನಾಲೆ ಬದಿಯ ಪಚ್ಚೆಪಸಿರಂತೆ, ಹರಿವ ಕಾಲುವೆಗಳ ಬಳಿಯ ಜೊಂಡುಹುಲ್ಲಿನಂತೆ. 5 ಹೇಳಿಕೊಳ್ಳುವನೊಬ್ಬನು ತಾನು ಸರ್ವೇಶ್ವರನ ಶರಣನೆಂದು ಹೆಸರಿಸಿಕೊಳ್ಳುವನು ಇನ್ನೊಬ್ಬನು ತಾನು ಯಕೋಬ್ಯನೆಂದು ಕೈಯಲ್ಲಿ ಹಚ್ಚೆ ಹೊಯ್ದುಕೊಳ್ಳುವನು ಮತ್ತೊಬ್ಬನು ಸರ್ವೇಶ್ವರನ ದಾಸನೆಂದು ಬಿರುದನ್ನು ಧರಿಸಿಕೊಳ್ಳುವನವನು ತಾನು ಇಸ್ರಯೇಲ್ಯನೆಂದು.” 6 ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ, ಇಸ್ರಯೇಲರ ಅರಸ, ಅವರ ಉದ್ಧಾರಕ: “ಆದಿಯು ನಾನೇ, ಅಂತ್ಯವು ನಾನೇ, ನನ್ನ ಹೊರತು ದೇವರಾರು ಇಲ್ಲ ಬೇರೆ. 7 ನನಗೆ ಸಮಾನರು ಯಾರು? ರುಜುಪಡಿಸಲಿ, ನನ್ನ ಎದುರಿಗೆ ಬಂದು ವಾದಿಸಿ ಸ್ಥಿರಪಡಿಸಲಿ. ನರ ಸೃಷ್ಟಿಯಾದಂದಿನಿಂದ ನಡೆದುದೆಲ್ಲವನು ತಿಳಿಸಲಿ ಮುಂದಿನವುಗಳನು, ಭವಿಷ್ಯತ್ತುಗಳನು, ಈಗ ಊಹಿಸಿ ಹೇಳಲಿ. 8 ಹೆದರಬೇಡಿ, ಅಂಜದಿರಿ, ನನ್ನ ಜನರೇ, ನನಗೆ ಸಾಕ್ಷಿಗಳು ನೀವೇ; ಪೂರ್ವಕಾಲದಿಂದ ನಡೆದವುಗಳನು ನಾ ನಿಮಗೆ ಮುಂತಿಳಿಸಿ ಶ್ರುತಪಡಿಸಿಲ್ಲವೆ? ನನ್ನ ಹೊರತು ಬೇರೆ ದೇವನಿರುವನೆ? ನನ್ನ ಹೊರತು ಬೇರೆ ಸೇನಾಧೀಶ್ವರನಿರುವನೆ? ಅಂಥವನಾರೋ ನಾನರಿಯೆ.” ವಿಗ್ರಹಾರಾಧನೆ ಹಾಸ್ಯಾಸ್ಪದ 9 ವಿಗ್ರಹಗಳನ್ನು ಕೆತ್ತುವವರೆಲ್ಲರು ನಿರರ್ಥಕರು; ಅವರ ಇಷ್ಟಬೊಂಬೆಗಳು ಏತಕ್ಕೂ ಬಾರವು; ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು. 10 ದೇವತೆಯನ್ನು ರೂಪಿಸುವವರು ಹಾಗೂ ನಿರರ್ಥಕ ಬೊಂಬೆಗಳನ್ನು ಎರಕಹೊಯ್ಯುವವರು ನಿಷ್ಪ್ರಯೋಜಕರು. 11 ವಿಗ್ರಹಾರಾಧಕರೆಲ್ಲರೂ ಆಶಾಭಂಗಪಡುವರು. ಅದನ್ನು ಕೆತ್ತಿದವರು ಕೇವಲ ಮನುಷ್ಯ ಮಾತ್ರರು. ಅವರೆಲ್ಲರು ಇಲ್ಲಿಗೆ ಕೂಡಿಬರಲಿ; ನಿಶ್ಚಯವಾಗಿ ಅವರು ಹೆದರಿ ಲಜ್ಜೆಪಡುವರು. 12 ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಬಲವಾದ ತೋಳಿನಿಂದ ಚಮಟಿಕೆ ಹಿಡಿದು ಬಡಿದು ವಿಗ್ರಹವನ್ನು ರೂಪಿಸುತ್ತಾನೆ; ಹಸಿದು ಬಳಲುತ್ತಾನೆ, ಬಾಯಾರಿ ಸೊರಗುತ್ತಾನೆ. 13 ಬಡಗಿಯು ಮರಕ್ಕೆ ನೂಲು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ; ಕೈವಾರದಿಂದ ಗುರುತಿಸುತ್ತಾನೆ, ಉಳಿ ಬಾಚಿಗಳಿಂದ ಕೆತ್ತುತ್ತಾನೆ; ಸುಂದರವಾದ ನರನಂತೆ ರೂಪಿಸಿ ಮಂದಿರದಲ್ಲಿ ಇಡಲು ಯೋಗ್ಯವಾಗುವಂತೆ ಮಾಡುತ್ತಾನೆ. 14 ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುತ್ತಾನೆ, ತುರಾಯಿ ಅಲ್ಲೋನ್ ಮರಗಳನ್ನು ಆರಿಸಿಕೊಳ್ಳುತ್ತಾನೆ; ಅವುಗಳನ್ನು ವನವೃಕ್ಷಗಳ ನಡುವೆ ಬೆಳೆಸುತ್ತಾನೆ; ಪೀತದಾರ ಮರವನ್ನು ನೆಟ್ಟು, ಮಳೆ ಸುರಿದು ಬೆಳೆಯುವವರೆಗೂ ಕಾಯುತ್ತಾನೆ, 15 ಅದರ ಒಂದು ಭಾಗ ಒಲೆಗಾಗುತ್ತದೆ, ಚಳಿ ಕಾಯಿಸಿಕೊಳ್ಳುವುದಕ್ಕೆ ಆಗುತ್ತದೆ, ರೊಟ್ಟಿ ಸುಡುವುದಕ್ಕಾಗುತ್ತದೆ. ಇನ್ನೊಂದು ಭಾಗದಿಂದ ದೇವತೆಯನ್ನು ಮಾಡಿ ಮನುಷ್ಯ ಪೂಜಿಸುತ್ತಾನೆ; ವಿಗ್ರಹ ಕೆತ್ತಿ ಅದಕ್ಕೆ ಅಡ್ಡಬೀಳುತ್ತಾನೆ. 16 ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುತ್ತಾನೆ. ಅದು ಮಾಂಸ ಬೇಯಿಸಲಾಗುತ್ತದೆ, ಆ ಸುಟ್ಟ ಮಾಂಸದಿಂದ ಹಸಿವೆ ತೀರಿಸಿಕೊಳ್ಳುತ್ತಾನೆ. ಆ ಬೆಂಕಿಯಿಂದ ಮೈ ಬೆಚ್ಚಗಾಯಿತು,” ಎಂದುಕೊಳ್ಳುತ್ತಾನೆ. 17 ಉಳಿದ ಭಾಗದಿಂದ ತನ್ನ ದೇವತೆಯ ವಿಗ್ರಹವನ್ನು ಕೆತ್ತಿ, ಅದಕ್ಕೆ ಎರಗಿ ಅಡ್ಡಬೀಳುತ್ತಾನೆ; “ನೀನೇ ನನ್ನ ದೇವರು; ನನ್ನನ್ನು ರಕ್ಷಿಸು,” ಎಂದು ಪ್ರಾರ್ಥಿಸುತ್ತಾನೆ. 18 ಇಂಥವರು ಮಂದಮತಿಗಳು, ಏನೂ ಗ್ರಹಿಸಲಾರದವರು; ಅವರ ಕಣ್ಣು ಕಾಣದಂತೆಯೂ ಹೃದಯ ಗ್ರಹಿಸದಂತೆಯೂ ಅವರಿಗೆ ಅಂಟು ಬಳಿಯಲಾಗಿದೆ. 19 “ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದ್ದೇನೆ. ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ, ಮಾಂಸ ಸುಟ್ಟು ತಿಂದಿದ್ದೇನೆ; ಮಿಕ್ಕಿದ್ದರಿಂದ ವಿಗ್ರಹಮಾಡುವುದು ಸರಿಯೇ? ಆ ಮರದ ತುಂಡಿಗೆ ಅಡ್ಡಬೀಳುವುದು ಅಸಹ್ಯವಲ್ಲವೆ?” ಎಂದುಕೊಳ್ಳುವಷ್ಟು ವಿವೇಕ ಯಾರಿಗೂ ಇಲ್ಲ; ಯಾರೂ ಇದನ್ನು ಮನಸ್ಸಿನಲ್ಲಿ ಅರ್ಥೈಸಿಕೊಳ್ಳುವುದಿಲ್ಲ. 20 ಅಂಥವನು ಮುಕ್ಕುವುದು ಬೂದಿಯನ್ನೇ; ಅವನ ಹೃದಯ ಮೋಸಗೊಂಡು ಅವನನ್ನು ತಪ್ಪುದಾರಿಗೆ ಎಳೆದಿದೆ. ಎಂದೇ, ಅವನು ಅಂಗೈ ಹುಣ್ಣಿನಂತಿರುವ ಆ ಸುಳ್ಳನ್ನೂ ಅರಿಯದೆ ಇದ್ದಾನೆ; ತನ್ನನ್ನೇ ರಕ್ಷಿಸಿಕೊಳ್ಳಲು ಆಗದೆ ಇದ್ದಾನೆ. ಸರ್ವೇಶ್ವರ ಸೃಷ್ಟಿಕರ್ತ ಹಾಗೂ ಉದ್ಧಾರಕ 21 “ಯಕೋಬೇ, ಇಸ್ರಯೇಲೇ, ನೆನಪಿನಲ್ಲಿಡು ಇದನ್ನು : ನೀನೆನ್ನ ದಾಸನು, ಇಸ್ರಯೇಲ್, ನಿನ್ನ ನಿರ್ಮಿಸಿದವನು ನಾನು; ನೀನೆನ್ನ ದಾಸನು, ನಿನ್ನನ್ನು ನಾನು ಮರೆತುಬಿಡೆನು. 22 ಪರಿಹರಿಸಿದೆ ನಿನ್ನ ದ್ರೋಹಗಳನ್ನು ಮಂಜಿನಂತೆ ಚದರಿಸಿದ್ದೇನೆ ನಿನ್ನ ಪಾಪಗಳನು ಮೋಡದಂತೆ ವಿಮೋಚಿಸಿದ್ದೇನೆ ನೀ ನನಗೆ ಅಭಿಮುಖನಾಗಬೇಕೆಂದೆ.” 23 ಜಯ ಜಯಕಾರ ಮಾಡು ಓ ಆಕಾಶವೇ, ಜಯಘೋಷ ಮಾಡು ಭೂ ತಳವೇ, ಹರ್ಷಧ್ವನಿಗೈಯಿರಿ ಬೆಟ್ಟಗುಡ್ಡಗಳೇ ವನವೃಕ್ಷಗಳೇ. ವಿಮೋಚಿಸಿದನು ಸರ್ವೇಶ್ವರ ಯಕೋಬನನು, ಇಸ್ರಯೇಲನ್ನು ರಕ್ಷಿಸಿ ಪ್ರಚಾರಗೊಳಿಸಿದನು ತನ್ನ ಮಹಿಮೆಯನು. 24 ತಾಯ ಗರ್ಭದಿಂದ ರೂಪಿಸಿ ನಿನ್ನನು ಹೊರತಂದ ಸರ್ವೇಶ್ವರ ಹೇಳಿಹನು ಇದನ್ನು : “ಸರ್ವವನು ಸೃಷ್ಟಿಸಿದ ಸರ್ವೇಶ್ವರನು ನಾನೆ ಗಗನಮಂಡಲವನು ವಿಸ್ತರಿಸಿದವನು ನಾನೆ ಭೂಮಂಡಲವನು ಹರಡಿದವನು ನಾನೆ ನನಗಾಗ ನೆರವಾಗಲು ಯಾರಾದರೂ ಇದ್ದರೆ? 25 ಸುಳ್ಳುಶಕುನ ಹೇಳುವವರನು ನಿರರ್ಥಕಗೊಳಿಸುವವನು ನಾನೆ ಕಣಿ ಹೇಳುವವರನು ಮರುಳುಗೊಳಿಸುವವನು ನಾನೆ ವಿವೇಕಿಗಳೊಡನೆ ವಾದಿಸಿ ಅವರ ವಿವೇಕವೇ ಅವಿವೇಕವೆಂದು ತೋರಿಸಿದವನು ನಾನೆ. 26 ನನ್ನ ದಾಸನ ಮಾತನ್ನಾದರೋ ದೃಢೀಕರಿಸುವವನು ನಾನೆ ನನ್ನ ದೂತರ ಯೋಜನೆಯನ್ನು ಸಫಲಗೊಳಿಸುವವನು ನಾನೆ ಜನನಿವಾಸವಾಗುವುದು ಜೆರುಸಲೇಮ್ ನಗರವು ಪುನಃ ಕಟ್ಟಲ್ಪಡುವುವು ಜುದೇಯ ಪಟ್ಟಣಗಳು. ಅಲ್ಲಿ ಹಾಳುಬಿದ್ದವುಗಳು ಮರಳಿ ಎದ್ದು ನಿಲ್ಲುವುವು. 27 ‘ಬತ್ತಿಹೋಗು’ ಎಂದು ಜಲರಾಶಿಗಳಿಗೆ ‘ಒಣಗಿಹೋಗು’ ಎಂದು ನಿನ್ನ ಸೇರುವ ನದಿಗಳಿಗೆ ಅಪ್ಪಣೆ ಕೊಡುವಾತನು ನಾನೆ. 28 ಕೋರೆಷನಿಗೆ ಇಂತೆನ್ನುವೆನು ನಾನು : ನನ್ನ ಮಂದೆ ಕಾಯುವವನು ನೀನು ನನ್ನ ಇಷ್ಟಾರ್ಥವನು ನೆರವೇರಿಸುವವನು ನೀನು; 'ಪುನಃ ನಿರ್ಮಾಣವಾಗುವೆ' ಎನ್ನುವೆ ಜೆರುಸಲೇಮಿಗೆ, ನೀನು; ‘ಪುನಃ ನಿನಗೆ ಅಸ್ತಿವಾರ ಹಾಕಿಸುವೆ’ ಎನ್ನುವೆ ಆ ದೇವಾಲಯಕೆ ನೀನು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India