Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 43 - ಕನ್ನಡ ಸತ್ಯವೇದವು C.L. Bible (BSI)


ದೇವರೇ ತಮ್ಮ ಜನತೆಯ ರಕ್ಷಕ

1 ಈಗಲಾದರೋ ಯಕೋಬ ವಂಶವೇ, ಇಸ್ರಯೇಲ್ ಸಂತಾನವೇ ಕೇಳು : ನಿನ್ನನ್ನು ಸೃಷ್ಟಿಸಿದ, ರೂಪಿಸಿದ ಸರ್ವೇಶ್ವರನ ನುಡಿಯನ್ನು ಕೇಳು; “ಭಯಪಡಬೇಡ, ನಿನ್ನನ್ನು ರಕ್ಷಿಸಿದಾತ ನಾನಲ್ಲವೆ? ನಿನ್ನನ್ನು ಹೆಸರು ಹಿಡಿದು ಕರೆದಾತ ನಾನಲ್ಲವೆ? ನೀನು ನನ್ನವನೇ ಅಲ್ಲವೆ?

2 ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.

3 ನಿನ್ನ ದೇವರಾದ ಸರ್ವೇಶ್ವರ ನಾನು, ಇಸ್ರಯೇಲರ ಪರಮಪಾವನ ಸ್ವಾಮಿ, ನಿನ್ನ ರಕ್ಷಕ ನಾನು. ಈಡುಮಾಡಿದ್ದೇನೆ ಈಜಿಪ್ಟನ್ನು ನಿನ್ನ ವಿಮೋಚನೆಗಾಗಿ ಕೊಟ್ಟಿದ್ದೇನೆ ಸುಡಾನ್ ಸೆಬಾ ನಾಡುಗಳನ್ನು ನಿನಗೆ ಈಡಾಗಿ.

4 ನೀನೆನ್ನ ದೃಷ್ಟಿಗೆ ಅಮೂಲ್ಯನು, ಘನವಂತನು, ಅತಿಪ್ರಿಯನು. ಎಂದೇ ನಿನ್ನ ಪ್ರಾಣರಕ್ಷಣೆಗಾಗಿ ತ್ಯಜಿಸುವೆನು ಜನರನ್ನೂ ಜನಾಂಗಗಳನ್ನೂ.

5 ಭಯಪಡಬೇಡ, ನಾನಿರುವೆ ನಿನ್ನ ಸಂಗಡ ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.

6 ನಾನಪ್ಪಣೆ ಕೊಡುವೆ ‘ಬೀಳ್ಕೊಡು’ ಎಂದು ಬಡಗಲಿಗೆ ‘ತಡೆಯಬೇಡ’ ಎಂದು ನಾನೇ ಹೇಳುವೆ ತೆಂಕಲಿಗೆ. ಹೀಗೆ ಬರಮಾಡುವೆ ನನ್ನ ಕುವರರನ್ನು ದೂರದಿಂದ ಬರಮಾಡುವೆ ನನ್ನ ಕುವರಿಯರನ್ನು ದಿಗಂತಗಳಿಂದ.

7 ಕರೆತರುವೆ ಈ ಪರಿ ನನ್ನ ನಾಮಧಾರಿಗಳೆಲ್ಲರನು ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿದವರನು.


ಸರ್ವೇಶ್ವರನಿಗೆ ಇಸ್ರಯೇಲರೇ ಸಾಕ್ಷಿ

8 ಕರೆಗೊಡಿರಿ ಆ ಜನರಿಗೆ ಕಣ್ಣಿದ್ದರೂ ಕುರುಡರಾದವರಿಗೆ ಕಿವಿಯಿದ್ದರೂ ಕಿವುಡಾದವರಿಗೆ.

9 ಬರಲಿ, ಎಲ್ಲಾ ಜನಾಂಗಗಳು ಒಟ್ಟಿಗೆ ನೆರೆಯಲಿ, ಸಕಲ ದೇಶಿಯರು ಇಲ್ಲಿಯೇ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಘಟನೆಗಳನ್ನು ಮುಂತಿಳಿಸಿದವರಾರು? ಕರೆತರಲಿ, ಆ ದೇವರುಗಳು ಸಾಕ್ಷಿಗಳನು ಸ್ಥಾಪಿಸಿಕೊಳ್ಳಲಿ, ತಾವು ಸತ್ಯವಂತರೆಂಬುದನು; ರುಜುಪಡಿಸಲಿ ಕೇಳುವವರಿಗೆ ತಮ್ಮ ಮಾತು ನಿಜವೆಂಬುದನು.

10 ಇಂತೆನ್ನುತ್ತಾರೆ ಸರ್ವೇಶ್ವರ : “ನೀವೇ ನನಗೆ ಸಾಕ್ಷಿಗಳು; ನನ್ನಿಂದ ಆಯ್ಕೆಯಾದ ನನ್ನ ದಾಸರು; ಏಕೆನೆ ನಾನೇ ಪರಮಾತ್ಮನೆಂದು ಅರಿತು, ವಿಶ್ವಾಸವಿಟ್ಟು, ಗ್ರಹಿಸಬೇಕಾದವರು; ದೇವರಾರೂ ನನಗಿಂತ ಮುಂದೆ ಇರಲಿಲ್ಲ ನನ್ನಾನಂತರವೂ ಇರುವುದಿಲ್ಲ.

11 “ನಾನು, ನಾನೇ ಸರ್ವೇಶ್ವರ, ನನ್ನ ಹೊರತು ಇಲ್ಲ ಬೇರೆ ಉದ್ಧಾರಕ.

12 ಶ್ರುತಪಡಿಸಿದವನು ನಾನೇ, ಉದ್ಧರಿಸಿದವನು ನಾನೇ, ಘೋಷಿಸಿದವನು ನಾನೇ. ಇದನ್ನು ಮಾಡಿಲ್ಲ ಅನ್ಯದೇವರಾರು ನಿಮ್ಮ ಮಧ್ಯೆ. ನನಗೆ ಸಾಕ್ಷಿಗಳು ನೀವೇ, ದೇವರು ನಾನೊಬ್ಬನೇ.

13 ಹೌದು, ನಾನೇ ಪರಮಾತ್ಮ ಆದಿಯಿಂದ ಬಿಡಿಸುವವರಾರು ಇಲ್ಲ ನನ್ನ ಕೈಯಿಂದ ನಾಗೈದುದನು ತಡೆಯಲಾಗದು ಯಾರಿಂದ.” ಈ ಪರಿ ನುಡಿದಿಹನು ಸರ್ವೇಶ್ವರನು, ನಿಮ್ಮ ಉದ್ಧಾರಕನು, ಇಸ್ರಯೇಲಿನ ಪರಮಪಾವನನು;


ಬಾಬಿಲೋನಿನ ವಿನಾಶ

14 “ಬಾಬಿಲೋನಿಯಗೆ ಕಳುಹಿಸುವೆ ಒಬ್ಬಾತನನು ನಿಮಗಾಗಿ ಮುರಿವನಾತ ಆ ಕಾರಾಗೃಹದ ಕಂಬಿಗಳನು ತುಂಡುತುಂಡಾಗಿ ಬಾಬಿಲೋನಿಯರ ಕೂಗಾಟವನು ಮಾರ್ಪಡಿಸುವೆನು ಗೋಳಾಟವನ್ನಾಗಿ.

15 ನಾನೇ ಸರ್ವೇಶ್ವರನು, ನಿಮ್ಮ ಪರಮಪೂಜ್ಯನು ಇಸ್ರಯೇಲಿನ ಸೃಷ್ಟಿಕರ್ತನು, ನಿಮ್ಮ ಅರಸನು.”

16 ಸಮುದ್ರದ ಮಧ್ಯೆ ದಾರಿಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗವೇರ್ಪಡಿಸಿದವನಾರೋ,

17 ಅಶ್ವರಥಭಟಸೈನ್ಯಗಳನ್ನು ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿಕರಗಿಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ;

18 “ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ ಪುರಾತನ ಕಾರ್ಯಗಳ ನೆನಸಿಕೊಳ್ಳಬೇಕಾಗಿಲ್ಲ.

19 ಇಗೋ, ನೂತನ ಕಾರ್ಯವನು ನಾನೆಸಗುವೆ ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? ಮಾರ್ಗವನ್ನು ಏರ್ಪಡಿಸುವೆ ಮರುಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ.

20 ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನು. ಏಕೆನೆ ಕೊಡುವೆನು ನೀರನ್ನು ಮರುಭೂಮಿಯಲಿ ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ.

21 ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.”


ಇಸ್ರಯೇಲಿನ ಪಾಪದೋಷ

22 “ಯಕೋಬೇ, ನೀನೆನ್ನ ನಾಮಸ್ಮರಣೆ ಮಾಡದೆಹೋದೆ; ಇಸ್ರಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡೆ.

23 ಕುರಿಮೇಕೆಗಳನ್ನು ನೀನು ತರಲಿಲ್ಲ ನನಗೆ ಹೋಮಕ್ಕಾಗಿ ಬಲಿಗಳನ್ನು ಅರ್ಪಿಸಲಿಲ್ಲ ನನ್ನ ಘನತೆಗಾಗಿ ನಾ ನಿನ್ನನು ಒತ್ತಾಯಿಸಲಿಲ್ಲ ನೈವೇದ್ಯಕ್ಕಾಗಿ ನಾ ನಿನ್ನನು ಬೇಸರಗೊಳಿಸಲಿಲ್ಲ ಧೂಪಾರತಿಗಾಗಿ.

24 ನನಗೋಸ್ಕರ ನೀನು ಹಣ ತೆತ್ತು ಅಗರಬತ್ತಿ ತರಲಿಲ್ಲ ಯಜ್ಞಪಶುಗಳ ವಪೆಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಬದಲಿಗೆ ನನ್ನನ್ನು ಪೀಡಿಸಿರುವೆ ನಿನ್ನ ಪಾಪಗಳಿಂದ ಬೇಸರಗೊಳಿಸಿರುವೆ ನನ್ನನು ನಿನ್ನ ದೋಷಗಳಿಂದ.

25 ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದುಹಾಕುವೆ ನಿನ್ನ ಪಾಪಗಳನು.

26 ಮಂಡಿಸು ನನ್ನ ವಿರುದ್ಧ ನಿನ್ನ ಆಪಾದನೆಯನ್ನು; ಒಟ್ಟಿಗೆ ವಾದಿಸೋಣ ಮಂಡಿಸು ನಿನ್ನ ನ್ಯಾಯವನ್ನು; ನೀನು ನಿರ್ದೋಷಿಯೆಂದು ರುಜುಪಡಿಸು ನೋಡೋಣ.

27 ಪಾಪಿಷ್ಟನಾಗಿದ್ದನು ನಿನ್ನ ಮೂಲಪಿತೃವು ನನಗೆ ದ್ರೋಹಿಗಳಾಗಿದ್ದರು ನಿನ್ನ ಪರವಾದಿಗಳು ನನ್ನ ಪವಿತ್ರಾಲಯವನ್ನು ಹೊಲೆಮಾಡಿದರು ನಿನ್ನ ಅಧಿಪತಿಗಳು.

28 ಎಂದೇ ಗುರಿಮಾಡಿದೆ ಯಕೋಬನ್ನು ಶಾಪಕ್ಕೆ ಈಡುಪಡಿಸಿದೆ ಇಸ್ರಯೇಲನ್ನು ನಿಂದೆದೂಷಣೆಗೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು