Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 42 - ಕನ್ನಡ ಸತ್ಯವೇದವು C.L. Bible (BSI)


‘ದೇವರ ದಾಸ’ ಕುರಿತ ಮೊದಲನೆಯ ಗೀತೆ

1 ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು.

2 ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ.

3 ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ಧರ್ಮವನು.

4 ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ-ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು.

5 ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದುದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು :

6 ಸರ್ವೇಶ್ವರ ಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ.

7 ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

8 ನಾನೇ ಸರ್ವೇಶ್ವರ, ನನ್ನ ನಾಮವು ಅದುವೆ. ಸಲ್ಲಿಸೆನು ನನ್ನ ಮಹಿಮೆಯನ್ನು ಮತ್ತೊಬ್ಬರಿಗೆ ನನ್ನ ಸ್ತೋತ್ರವನು ವಿಗ್ರಹಗಳ ಪಾಲಿಗೆ.

9 ಮುಂತಿಳಿಸಿದ ಸಂಗತಿಗಳಿದೋ ಈಡೇರಿವೆ ಹೊಸ ಸಂಗತಿಗಳನಿದೋ ಪ್ರಕಟಿಸುವೆ ಅವು ತಲೆದೋರುವುದಕ್ಕೆ ಮುಂಚೆಯೇ ನಿಮಗೆ ತಿಳಿಸುವೆ.”


ಸ್ತುತಿಗೀತೆ

10 ಸಮುದ್ರಯಾತ್ರಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ದ್ವೀಪಾಂತರ ನಿವಾಸಿಗಳೇ, ನೂತನ ಗೀತವ ಹಾಡಿ ಹೊಗಳಿ ಸರ್ವೇಶ್ವರನನು, ದಿಗಂತಗಳಲ್ಲಿಯೂ ಕೀರ್ತಿಸಿ ಆತನನು.

11 ಘೋಷಿಸಲಿ ಮರುಭೂಮಿಯೂ ಅದರ ನಗರಗಳೂ ಕೇದಾರಿನವರೂ ಗ್ರಾಮನಿವಾಸಿಗಳೂ ಜಯಘೋಷಮಾಡಲಿ ಸೆಲ ಪಟ್ಟಣದವರೂ ಸಂತೋಷದಿಂದ ಹರ್ಷಧ್ವನಿಗೈಯಲಿ ಆ ಪರ್ವತದ ತುತ್ತತುದಿಗಳಿಂದ.

12 ಸರ್ವೇಶ್ವರನ ಮಹಿಮೆಯನು ಹೊಗಳಲಿ ಆತನ ಸ್ತೋತ್ರವ ಪಸರಿಸಲಿ ದ್ವೀಪದ್ವೀಪಗಳಲಿ.

13 ಸರ್ವೇಶ್ವರ ಹೊರಟಿರುವನು ಶೂರನಂತೆ ರೌದ್ರದಿಂದಿರುವನು ಯುದ್ಧವೀರನಂತೆ ಆರ್ಭಟಿಸಿ ಗರ್ಜಿಸುವನು ರಣಕಹಳೆಯಂತೆ ಶತ್ರುಗಳ ಮೇಲೆ ಬೀಳುವನು ಪರಾಕ್ರಮಿಯಂತೆ.


ದೇವರ ಅಭಯದಾನ

14 ನನ್ನನ್ನೇ ತಡೆಹಿಡಿದೆನು : ಆದರೀಗ ಸಮಯ ಬಂದಿಹುದು; ಪ್ರಸವವೇದನೆಯನು ಅನುಭವಿಸುವ ಸ್ತ್ರೀಯಂತೆ ಅಬ್ಬರಿಸುವೆನು

15 ನಾಶಪಡಿಸುವೆನು ಬೆಟ್ಟಗುಡ್ಡಗಳನು ಒಣಗಿಸಿಬಿಡುವೆನು ಹುಲ್ಲು ಸಸಿಗಳನು. ಒಣನೆಲ ಮಾಡುವೆನು ನದಿಗಳನು ಬತ್ತಿಸಿಬಿಡುವೆನು ಕೆರೆಕುಂಟೆಗಳನು.

16 ಕುರುಡರನ್ನು ನೆಪ್ಪಿಲ್ಲದ ಮಾರ್ಗದಲ್ಲಿ ಬರಮಾಡುವೆನು ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಸುವೆನು. ಅವರೆದುರಿನ ಕತ್ತಲನ್ನು ಬೆಳಕಾಗಿಸುವೆನು ಅವರ ಹಾದಿಯ ಡೊಂಕನು ನೇರಮಾಡುವೆನು. ಬಿಡದೆ ಮಾಡುವೆನು ಈ ಕಾರ್ಯಗಳನು.

17 ಆದರೆ, ಕೆತ್ತಿದ ವಿಗ್ರಹಗಳಲ್ಲಿ ಭರವಸೆಯಿಡುವವರು : “ನೀವೇ ನಮ್ಮ ದೇವರು"ಗಳು ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು; ಅವಮಾನಕ್ಕೆ ಈಡಾಗುವರು ಹಿಂಜರಿದು.


ಇಸ್ರಯೇಲಿನ ಹಟಮಾರಿತನ

18 “ಕಿವುಡ ಜನರೇ ಕೇಳಿ ಕುರುಡರಾದ ನೀವು ಕಣ್ಣಿಟ್ಟು ನೋಡಿ;

19 ನನ್ನ ಸೇವಕನಿಗಿಂತ ಕುರುಡರು ಯಾರು? ನನ್ನ ದೂತನಿಗಿಂತ ಕಿವುಡರು ಯಾರು? ನನ್ನ ಭಕ್ತನಿಗಿಂತ ಕುರುಡರು ಯಾರು? ಸರ್ವೇಶ್ವರನ ದಾಸನಿಗಿಂತ ಅಂಧಕರು ಯಾರು?

20 ನೀವು ಗಮನಿಸುವುದಿಲ್ಲ ಹಲವಿಷಯಗಳನ್ನು ಕಂಡಿದ್ದರೂ ನೀವು ಕೇಳುವುದಿಲ್ಲ ನಿಮ್ಮ ಕಿವಿಗಳು ತೆರೆದಿದ್ದರೂ.

21 ಸರ್ವೇಶ್ವರ ಮುಕ್ತಿದಾತನಾದುದರಿಂದ ಧರ್ಮಶಾಸ್ತ್ರಕ್ಕೆ ಮಹಿಮೆಯಿತ್ತು ಅದನ್ನು ಮಹತ್ತಾಗಿಸಿದ.

22 ಈ ಜನರಾದರೋ ಸೂರೆಯಾಗಿದ್ದಾರೆ ಕೊಳ್ಳೆಗೆ ಈಡಾಗಿ, ಎಲ್ಲರೂ ಬಿದ್ದಿದ್ದಾರೆ ಹಳ್ಳಕೊಳ್ಳಗಳಲ್ಲಿ, ಸೆರೆಮನೆಗಳಲ್ಲಿ ಬಂಧಿಗಳಾಗಿ; ಸುಲಿಗೆಯಾಗಿದ್ದರೂ ಅವರನ್ನು ಬಿಡಿಸುವವರಾರೂ ಇಲ್ಲ ಸೂರೆಯಾಗಿದ್ದರೂ ಅವರನ್ನು ಬಿಟ್ಟುಬಿಡಿ ಎನ್ನುವವರಾರೂ ಇಲ್ಲ.

23 ಈ ಮಾತಿಗೆ ನಿಮ್ಮಲ್ಲಿ ಕಿವಿಗೊಡುವವರಾರು? ಮುಂದಕ್ಕಾದರೂ ಕಿವಿಗೊಟ್ಟು ಆಲಿಸುವವರಾರು?

24 ಕೊಟ್ಟವರಾರು ಯಕೋಬನ್ನು ಸುಲಿಗೆಗೆ, ಇಸ್ರಯೇಲನ್ನು ಕೊಳ್ಳೆಗೆ? ಯಾವ ಸರ್ವೇಶ್ವರನಿಗೆ ದ್ರೋಹಮಾಡಿದ್ದೇವೋ ಆತನೇ ಅಲ್ಲವೇ? ಜನರು ಆತನ ಮಾರ್ಗದಲ್ಲಿ ನಡೆಯದೇ, ಆತನ ಉಪದೇಶವನ್ನು ಕೇಳದೆಹೋದರಲ್ಲವೆ?

25 ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು