Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 41 - ಕನ್ನಡ ಸತ್ಯವೇದವು C.L. Bible (BSI)


ಇಸ್ರಯೇಲರಿಗೆ ದೇವರಿತ್ತ ಭರವಸೆ

1 ದೂರದೇಶದವರೇ, ಮೌನದಿಂದ ನನಗೆ ಕಿವಿಗೊಡಿ; ರಾಷ್ಟ್ರಗಳು ಎಷ್ಟೇ ಬಲಿಷ್ಠರಾಗಿರಲಿ ಬಂದು ಮಾತಾಡಲಿ ಸಮೀಪದಲಿ. ಒಟ್ಟಿಗೆ ಸೇರೋಣ ನ್ಯಾಯಸ್ಥಾನದಲಿ.

2 ಕರೆತಂದವರಾರು ಆ ಪರಾಕ್ರಮಿಯನ್ನು ಪೂರ್ವದಿಂದ? ಅವನು ಗೆದ್ದುಬರುವಂತೆ ಮಾಡಿದವರಾರು ದಿಗ್ವಿಜಯದಿಂದ? ರಾಷ್ಟ್ರಗಳನ್ನು, ರಾಜರುಗಳನ್ನು ಸೋಲಿಸಿದವರಾರು ಅವನ ಕೈಯಿಂದ? ಧೂಳು ಧೂಳಾಗಿಸುತ್ತಾನೆ ಅವರನ್ನು ಅವನ ಖಡ್ಗದಿಂದ ಗಾಳಿಗೆ ತೂರಿಹೋಗುವ ಹುಲ್ಲನ್ನಾಗಿಸುತ್ತಾನೆ ಅವನ ಬಿಲ್ಲಿನಿಂದ.

3 ಹಿಂದಟ್ಟುತ್ತಾನೆ ಅವರನ್ನು ನಿರ್ಭೀತಿಯಿಂದ ಮುನ್ನುಗ್ಗುತ್ತಾನೆ ಕಾಲು ನೆಲ ಊರದಷ್ಟು ವೇಗದಿಂದ.

4 ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವರು ಯಾರು? ಸರ್ವೇಶ್ವರನಾದ ನಾನೇ. ಹೌದು, ಆದಿಯಲ್ಲಿದ್ದವನು. ಅಂತ್ಯದಲ್ಲಿ ಇರುವವನು ಆದ ನಾನೇ.

5 ದೂರದೇಶದವರು ಕಂಡು ಬೆರಗಾದರು ಭೂಮಿಯ ಕಟ್ಟಕಡೆಯವರು ನಡುಗಿದರು ಎಲ್ಲರೂ ಇಲ್ಲಿಗೆ ನೆರೆದುಬಂದಿಹರು.

6 ಸಹಾಯಮಾಡಿದರು ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು ಒಬ್ಬರಿಗೊಬ್ಬರು.

7 ಚೆನ್ನಾಗಿದೆ ಎನ್ನುತ್ತಾನೆ ಬಡಗಿ ಅಕ್ಕಸಾಲಿಗನಿಗೆ; ಪ್ರೋತ್ಸಾಹ ನೀಡುತ್ತಾನೆ ನುಣುಪು ಮಾಡುವವನು ಅಡಿಗಲ್ಲನ್ನು ತಟ್ಟುವವನಿಗೆ. ಬೆಸುಗೆ ಚೆನ್ನಾಗಿದೆ ಎಂದವರು ಮೊಳೆಗಳನ್ನು ಬಡಿಯುತ್ತಾರೆ ವಿಗ್ರಹ ಅಲುಗದಂತೆ.

8 ಇಂತಿರಲು ನನ್ನ ದಾಸನಾದ ಇಸ್ರಯೇಲೇ, ನಾನು ಆಯ್ದುಕೊಂಡ ಯಕೋಬೇ, ನನ್ನ ಗೆಳೆಯ ಅಬ್ರಹಾಮನ ಸಂತತಿಯೇ,

9 ಬರಮಾಡಿದೆ ನಾನು ನಿನ್ನನ್ನು ಭೂಮಿಯ ಕಟ್ಟಕಡೆಯಿಂದ ಕರೆದುತಂದೆ ನಿನ್ನನ್ನು ದಿಗಂತದಿಂದ. ನಿನಗೆ ನಾನು ಇಂತೆಂದೆ : ನೀನೆನ್ನ ದಾಸ, ನಿನ್ನ ನಾ ತಿರಸ್ಕರಿಸದೆ ಆರಿಸಿಕೊಂಡೆ !

10 ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ. ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ.

11 ಆಶಾಭಂಗಪಟ್ಟು ಅವಮಾನ ಹೊಂದುವರು ನಿನ್ನ ಮೇಲೆ ಕೋಪಗೊಂಡವರು ನಾಶವಾಗಿ ನಿರ್ಮೂಲವಾಗುವರು ನಿನ್ನ ಸಂಗಡ ವ್ಯಾಜ್ಯವಾಡಿದವರು.

12 ಹುಡುಕಿದರೂ ಸಿಗರು ನಿನ್ನೊಡನೆ ಹೋರಾಡಿದವರು ನಾಶವಾಗಿ ನಿರ್ನಾಮವಾಗುವರು ನಿನ್ನ ವಿರುದ್ಧ ಯುದ್ಧಮಾಡಿದವರು.

13 ನಿನ್ನ ದೇವರಾದ ಸರ್ವೇಶ್ವರ ನಾನೇ ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ.

14 ಸರ್ವೇಶ್ವರ ಇಂತೆನ್ನುತ್ತಾರೆ : “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.

15 ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನೆ ಹೊಟ್ಟು ಧೂಳಾಗಿಸುವೆ ಗುಡ್ಡಗಳನೆ.

16 ನೀನು ತೂರಲು ಅವುಗಳನ್ನು ಕೊಂಡೊಯ್ವುದು ಗಾಳಿ ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ.

17 ದೀನದರಿದ್ರರು ನೀರಿಗಾಗಿ ಪರದಾಡುವಾಗ ಬಾಯಾರಿ ಅವರ ನಾಲಿಗೆ ಒಣಗಿಹೋದಾಗ ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವೆನೆ?

18 ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು ತಗ್ಗುತಿಟ್ಟುಗಳಲ್ಲಿ ಒರತೆಗಳನು ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು ಬುಗ್ಗೆಗಳಾಗಿ ಮರುಭೂಮಿಯನು.

19 ನೆಡುವೆನು ಅಡವಿಯಲ್ಲಿ ದೇವದಾರು ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು.

20 ಇದನು ಕಂಡರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ‘ಇದನ್ನು ಮಾಡಿದ ಹಸ್ತವು ಸರ್ವೇಶ್ವರ ಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ.’


ಸುಳ್ಳುದೇವತೆಗಳಿಗೆ ಸರ್ವೇಶ್ವರನ ಸವಾಲು

21 ಯಕೋಬ್ಯರ ಅರಸನಾದ ಸರ್ವೇಶ್ವರ ಇಂತೆನ್ನುತ್ತಾರೆ : “ನಾಡದೇವತೆಗಳೇ, ಹೊರಗೆ ಬರಲಿ ನಿಮ್ಮ ವ್ಯಾಜ್ಯ ಸಾಬೀತಾಗಲಿ ನಿಮ್ಮ ನ್ಯಾಯ.

22 ಬನ್ನಿರಿ ಮುಂದಕ್ಕೆ ತಿಳಿಸಿ ಭವಿಷ್ಯತ್ತನು ನಮಗೆ. ವಿವರಿಸಿ ಗತಿಸಿದ ಘಟನೆಗಳು ಏನೇನೆಂದು; ಗ್ರಹಿಸುವೆವು ಅವುಗಳ ಪರಿಣಾಮವನ್ನು ಮನಸ್ಸಿಗೆ ತಂದು, ಇಲ್ಲವಾದರೆ ತಿಳಿಸಿ ನಮಗೆ ಸಂಭವಿಸಲಿರುವುದೇನೆಂದು.

23 ತಿಳಿಸಿ ನಮಗೆ ಮುಂದೆ ನಡೆಯಬೇಕಾದವುಗಳನು ನಂಬುವೆವು ಆಗ ನೀವು ದೇವರುಗಳೆಂಬುದನು, ಪ್ರದರ್ಶಿಸಿ ಒಳಿತನ್ನಾಗಲಿ ಕೆಡುಕನ್ನಾಗಲಿ ಆಗ ನೋಡುವೆವು ಒಟ್ಟಿಗೆ ನಿಬ್ಬೆರಗಾಗಿ !

24 ಇಗೋ, ನೀವು ಶೂನ್ಯರೇ ಸರಿ, ನಿಮ್ಮ ಕಾರ್ಯವು ವ್ಯರ್ಥವೇ, ಸರಿ ನಿಮ್ಮನ್ನು ಮರೆಹೋಗುವವರು ತುಚ್ಛರೇ ಸರಿ !

25 ಹುರಿದುಂಬಿಸಿ ಕರೆತಂದಿರುವೆನು ಒಬ್ಬನನ್ನು ಉತ್ತರದಿಂದ ನನ್ನ ನಾಮವನ್ನು ಪ್ರಚುರಪಡಿಸಲು ಬಂದಿಹನಾತ ಪೂರ್ವದಿಂದ ಕುಂಬಾರನು ಜೇಡಿಮಣ್ಣನ್ನು ತುಳಿಯುವಂತೆ ತುಳಿಯುವನಾತ ರಾಜರನ್ನು ಮಣ್ಣಂತೆ.

26 ಈ ಘಟನೆಯನ್ನು ಅರುಹಿದವನಾರು ಅದು ನೆರವೇರುವ ಮುಂದೆ? ಇದನ್ನು ಮುನ್ನ ತಿಳಿಸಿದವನಾರು ನಮಗೆ ಗೊತ್ತಾಗುವಂತೆ? ತಿಳಿಸಿದ್ದರೆ ಹೇಳುತ್ತಿದ್ದೆವು ಅವನು ಸತ್ಯವಂತನೆಂದೆ. ಆದರೆ ಇದನ್ನು ತಿಳಿಸಿದವನಿಲ್ಲ ಮುನ್ನ ತಿಳಿಸಬಲ್ಲವನಾರೂ ಇಲ್ಲ ನಿಮ್ಮಿಂದ ಮಾತೊಂದನ್ನು ಕೇಳಿದವನಾರೂ ಇಲ್ಲ.

27 ಕೇಳಿ, ಇದನ್ನು ಮೊದಲು ತಿಳಿಸಿದವನು ನಾನೇ ಸಿಯೋನಿಗೆ; ಶುಭಸಂದೇಶಕ ದೂತನನ್ನು ಕಳುಹಿಸಿದವನು ನಾನೇ ಜೆರುಸಲೇಮಿಗೆ.

28 ನಾ ನೋಡಲು ಅವರಲ್ಲಿ ಸಮರ್ಥರಾರು ಇಲ್ಲ ನಾ ಪ್ರಶ್ನಿಸಲು ಉತ್ತರಿಸಬಲ್ಲ ವಿವೇಕಿ ಇಲ್ಲ.

29 ನಿಶ್ಚಯವಾಗಿ ಆ ದೇವತೆಗಳೆಲ್ಲ ಕ್ಷುದ್ರರೇ‍ ಅವರ ಕಾರ್ಯಗಳೆಲ್ಲ ಶೂನ್ಯವೇ ಆ ಎರಕದ ಬೊಂಬೆಗಳೆಲ್ಲಾ ಬರಿ ಗಾಳಿಯೆ !

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು