Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 4 - ಕನ್ನಡ ಸತ್ಯವೇದವು C.L. Bible (BSI)

1 ಆ ಕಾಲ ಬಂದಾಗ ಏಳುಮಂದಿ ಅವಿವಾಹಿತ ಮಹಿಳೆಯರು ಒಬ್ಬ ಪುರುಷನನ್ನು ಹಿಡಿದುಕೊಂಡು: “ನಾವು ಸ್ವಂತವಾಗಿ ದುಡಿದು ಊಟಮಾಡುತ್ತೇವೆ, ಸ್ವಂತವಾಗಿ ಸಂಪಾದನೆಮಾಡಿ ಬಟ್ಟೆ ಉಡುತ್ತೇವೆ. ನೀನು ನಮ್ಮ ಯಜಮಾನನೆನಿಸಿಕೊಂಡು ನಮ್ಮ ಮಾನವನ್ನು ಕಾಪಾಡಿದರೆ ಸಾಕು,” ಎಂದು ಕೋರುವರು.


ಜೆರುಸಲೇಮಿನ ಭವ್ಯಭವಿಷ್ಯ

2 ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.

3 ಸಿಯೋನಿನಲ್ಲಿ ಉಳಿದವರು, ಜೆರುಸಲೇಮಿನಲ್ಲಿ ಮಿಕ್ಕವರು - ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿರುವ ಜೆರುಸಲೇಮಿನ ನಿವಾಸಿಗಳೆಲ್ಲರು - ಪವಿತ್ರರೆನಿಸಿಕೊಳ್ಳುವರು.

4 ಆಗ ಒಡೆಯರಾದ ಸ್ವಾಮಿ ನ್ಯಾಯನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದುಹಾಕುವರು.

5 ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.

6 ಅದು ಹಗಲಿನ ಬಿಸಿಲಲ್ಲಿ ನೆರಳನ್ನೂ ಮಳೆಗಾಳಿ ಬಂದಾಗ ಆಶ್ರಯವನ್ನೂ ಕೊಡುವ ಮಂಟಪವಾಗಿರುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು