Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 39 - ಕನ್ನಡ ಸತ್ಯವೇದವು C.L. Bible (BSI)


ಬಾಬಿಲೋನಿಯದಿಂದ ಬಂದ ದೂತರು
( ೨ ಅರಸು. 20:12-19 )

1 ಅದೇ ಕಾಲದಲ್ಲಿ ಬಲದಾನನ ಮಗನು ಹಾಗೂ ಬಾಬಿಲೋನಿಯದ ಅರಸನು ಆದ ಮೆರೋದಕಬಲದಾನ ಎಂಬವನು, ರಾಜ ಹಿಜ್ಕೀಯನು ರೋಗದಿಂದ ಗುಣಹೊಂದಿದನು ಎಂದು ಕೇಳಿ ಅವನಿಗೆ ಉಡುಗೊರೆಯೊಂದಿಗೆ ಒಂದು ಪತ್ರವನ್ನು ಕಳುಹಿಸಿದನು.

2 ಹಿಜ್ಕೀಯನು ಆ ದೂತರನ್ನು ಸಂತೋಷದಿಂದ ಬರಮಾಡಿಕೊಂಡು ಅವರಿಗೆ ಬೆಳ್ಳಿಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದಲಾದ ಪದಾರ್ಥಗಳಿಂದ ಕೂಡಿದ ಕರಂಡಗಳನ್ನು, ಆಯುಧ ಶಾಲೆಯನ್ನು ಮತ್ತು ತನ್ನ ಭಂಡಾರದಲ್ಲಿದ್ದ ಒಡವೆವಸ್ತುಗಳನ್ನು ತೋರಿಸಿದನು. ಅವನ ಅರಮನೆಯಲ್ಲೂ ರಾಜ್ಯದಲ್ಲೂ ಇದ್ದ ಸಮಸ್ತವನ್ನು ತೋರಿಸಿದನು.

3 ಆಗ ಪ್ರವಾದಿ ಯೆಶಾಯನು ಹಿಜ್ಕೀಯನ ಬಳಿಗೆ ಬಂದು, “ಆ ದೂತರು ಎಲ್ಲಿಯವರು? ಏನು ಕೇಳಿದರು?” ಎಂದನು. ಅದಕ್ಕೆ ಹಿಜ್ಕೀಯನು, “ಅವರು ಬಹುದೂರದ ನಾಡಾದ ಬಾಬಿಲೋನಿಯದಿಂದ ಬಂದವರು,” ಎಂದು ಉತ್ತರಕೊಟ್ಟನು.

4 ಯೆಶಾಯನು ಮತ್ತೆ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನೇನನ್ನು ನೋಡಿದರು?” ಎಂದು ಕೇಳಲು ಹಿಜ್ಕೀಯನು, “ಅರಮನೆಯಲ್ಲಿ ಇರುವುದೆಲ್ಲವನ್ನು ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದ ಒಡವೆ ವಸ್ತು ಒಂದೂ ಇಲ್ಲ,” ಎಂದನು.

5 ಆಗ ಯೆಶಾಯನು ಅವನಿಗೆ, “ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಈ ಮಾತನ್ನು ಕೇಳು :

6 ನಿನ್ನ ಪೂರ್ವಜರ ಕಾಲದಿಂದ ಇಂದಿನವರೆಗೆ ಅರಮನೆಯಲ್ಲಿ ಕೂಡಿಸಿಟ್ಟ ಎಲ್ಲವನ್ನು ಬಾಬಿಲೋನಿಯಾಗೆ ಕೊಂಡೊಯ್ಯುವ ದಿನ ಬರುವುದು; ಇಲ್ಲಿ ಏನೂ ಉಳಿಯುವುದಿಲ್ಲ.

7 ನೀನು ಪಡೆದ ಮಕ್ಕಳಲ್ಲಿ ಕೆಲವರನ್ನು, ನಿನ್ನ ಸ್ವಂತ ಪುತ್ರರನ್ನು ತೆಗೆದುಕೊಂಡು ಹೋಗಿ ಬಾಬಿಲೋನಿಯರ ಅರಸರ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು,” ಎಂದು ಹೇಳಿದನು.

8 ಆಗ ರಾಜ ಹಿಜ್ಕೀಯನು ಹೇಗೂ ತನ್ನ ಜೀವಮಾನದಲ್ಲಿ ಶಾಂತಿ ಸೌಭಾಗ್ಯ ಇರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ನೀನು ತಿಳಿಸಿದ ಸರ್ವೇಶ್ವರ ಸ್ವಾಮಿಯ ಮಾತು ಹಿತಕರವಾದುದು,” ಎಂದು ಉತ್ತರಕೊಟ್ಟನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು