ಯೆಶಾಯ 38 - ಕನ್ನಡ ಸತ್ಯವೇದವು C.L. Bible (BSI)ಹಿಜ್ಕೀಯನ ರೋಗನಿವಾರಣೆ ( ೨ ಅರಸು. 20:1-11 ) 1 ಆ ದಿನಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು. 2 ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು, 3 “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು. 4 ಆಗ ಸರ್ವೇಶ್ವರ ಯೆಶಾಯನಿಗೆ, 5 “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು : ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ. 6 ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ’.” 21 ಯೆಶಾಯನು ಹಿಜ್ಕೀಯನಿಗೆ ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ, ‘ನಿನ್ನ ಕುರುವಿನ ಮೇಲೆ ಕಟ್ಟು, ಆಗ ನೀನು ಗುಣಹೊಂದುವೆ,” ಎಂದು ಹೇಳಲು 22 ಹಿಜ್ಕೀಯನು, “ನಾನು ಗುಣಹೊಂದಿ ಸರ್ವೇಶ್ವರ ಸ್ವಾಮಿಯ ಆಲಯವನ್ನು ಸೇರುವೆನು ಎಂಬುದಕ್ಕೆ ಗುರುತೇನು?” ಎಂದು ಕೇಳಿದನು. 7 ಅದಕ್ಕೆ ಯೆಶಾಯನು, “ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ : 8 ಇಗೋ, ಅಹಾಜನು ಕಟ್ಟಿಸಿದ ನೆರಳು ಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು. 9 ಜುದೇಯದ ಅರಸ ಹಿಜ್ಕೀಯನು ರೋಗದಿಂದ ಗುಣಹೊಂದಿದಾಗ ಬರೆದ ಸ್ತುತಿಗೀತೆ : 10 ನನ್ನ ರೋಗದಲ್ಲಿ ನಾನು ಇಂತೆಂದುಕೊಂಡೆ : ಮಧ್ಯಪ್ರಾಯದಲ್ಲೇ ಮೃತ್ಯುಲೋಕವನ್ನು ಸಮೀಪಿಸಿರುವೆ ನನ್ನ ಆಯುಷ್ಯವನ್ನು ನಾ ಕಳೆದುಕೊಂಡಿರುವೆ. 11 ಜೀವಲೋಕದಲ್ಲಿ ಇನ್ನು ದೇವನನ್ನು ಕಾಣೆನೆಂದುಕೊಂಡೆ ಭೂಲೋಕನಿವಾಸಿಗಳಲ್ಲಿ ಒಬ್ಬನನ್ನೂ ನೋಡಲಾರೆನೆಂದುಕೊಂಡೆ. 12 ಕುರುಬನು ತನ್ನ ಗುಡಿಸಲನ್ನು ಕಿತ್ತುಹಾಕುವಂತೆ ನೇಯಿಗೆಯವನು ತನ್ನ ಹಾಸನ್ನು ಸುತ್ತುವಂತೆ ಮಗ್ಗದಿಂದ ಅವನು ದಾರವನ್ನು ಕತ್ತರಿಸುವಂತೆ ಬೆಳಗುಬೈಗಿನೊಳಗೆ ನನ್ನ ಆಯುಷ್ಯವನ್ನು ನೀ ಮುಗಿಸುತ್ತಿರುವೆನೆಂದೆ. 13 ಸಿಂಹವು ಮೇಲೆಬಿದ್ದು ಮೂಳೆ ಮುರಿದಂತೆ ನನಗಾಗುತ್ತಿತ್ತು ಅತೀವ ಬಾಧೆ, ಆದರೂ ಇರುಳೆಲ್ಲ ಮೊರೆಯಿಡುತ್ತಿದ್ದೆ ಬೆಳಗು ಬೈಗಿನೊಳಗೆ ನೀ ನನ್ನ ಮುಗಿಸುತ್ತಿರುವೆನೆಂದೆ. 14 ಕಿಚುಗುಟ್ಟಿದೆ ನಾ ಬಾನಕ್ಕಿ-ಬಕಗಳಂತೆ ಗುಬ್ಬಳಿಸಿದೆ ನಾ ಪಾರಿವಾಳದಂತೆ ಕಂಗೆಟ್ಟೆ, ನಾ ಮೇಲೆ ಮೇಲಕ್ಕೆ ನೋಡುತಾ ಸರ್ವೇಶ್ವರಾ, ನಾನಿರುವೆ ಬಾಧೆಪಡುತಾ ನೀ ಎನಗೆ ನೆರವಾಗಲು ಬಾ ಎನ್ನುತಾ. 15 ನುಡಿದಂತೆ ಪ್ರಭೂ ನೆರವೇರಿಸಿಹನು; ನಾನೇನು ಹೇಳಲಿ; ಮುಳುಗಿದೆ ನನ್ನಾತ್ಮ ದುಃಖಸಾಗರದಲಿ ನಿದ್ರೆಯಿಲ್ಲದೆ ಸೊರಗುತಿದೆ ನನ್ನ ಜೀವಮಾನವಿಡೀ. 16 ಸರ್ವೇಶ್ವರಾ, ಮಾನವನ ಜೀವನ ಇಂತಿದೆ, ಇವುಗಳಿಂದಲೇ ನನ್ನ ಆತ್ಮ ಚೇತನಗೊಳ್ಳುತಿದೆ, ನೀನೀಗ ಗುಣಪಡಿಸು, ನಾ ಬಾಳುವೆ. 17 ನಾ ಪಟ್ಟ ದುಃಖವು ನನ್ನ ಸುಖಕ್ಕಾಗಿಯೇ ನನ್ನಾತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ; ನನ್ನ ಪಾಪಗಳನ್ನೆಲ್ಲಾ ನೀ ಹಾಕಿರುವೆ ನಿನ್ನ ಬೆನ್ನ ಹಿಂದೆ. 18 ಸತ್ತವರು ನಿನ್ನನ್ನು ಕೀರ್ತಿಸರು ಪಾತಾಳದವರು ನಿನ್ನನ್ನು ಸ್ತುತಿಸರು ಅಧೋಲೋಕಕ್ಕೆ ಇಳಿದುಹೋದವರು ನಿನ್ನ ಸತ್ಯಸಂಧತೆಯನ್ನು ಆಶ್ರಯಿಸರು. 19 ಜೀವಂತನು, ಜೀವಂತನು ಮಾತ್ರವೇ ನಿನ್ನ ಸ್ತುತಿಮಾಡುವಂತೆ ನಾನಿಂದು ನಿನ್ನನ್ನು ಜೀವಂತನಾಗಿ ಸ್ತುತಿಮಾಡುತ್ತಿರುವೆ ನಿನ್ನ ಸತ್ಯಸಂಧತೆಯನ್ನು ಮಕ್ಕಳಿಗೆ ಬೋಧಿಸುವನು ತಂದೆ. 20 ಸರ್ವೇಶ್ವರಾ, ನೀ ನನ್ನ ಉದ್ಧಾರಕ ಹೊಗಳುವೆ ನಿನ್ನ ನಾ ತಂತಿವಾದ್ಯ ಸಮೇತ ದಿನನಿತ್ಯ, ನಿನ್ನಾಲಯದೊಳು, ಜೀವವಿರುವ ತನಕ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India