Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 36 - ಕನ್ನಡ ಸತ್ಯವೇದವು C.L. Bible (BSI)


ಅಸ್ಸೀರಿಯಾದವರು ಜೆರುಸಲೇಮಿಗೆ ಹಾಕಿದ ಬೆದರಿಕೆ

1 ಅರಸ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ, ಅಸ್ಸೀರಿಯದ ಅರಸ ಸನ್ಹೇರೀಬನು ಬಂದು ಜುದೇಯ ಪ್ರಾಂತ್ಯದ ಸುಭದ್ರ ಪಟ್ಟಣಗಳನ್ನೆಲ್ಲಾ ಸ್ವಾಧೀನಮಾಡಿಕೊಂಡನು.

2 ಬಳಿಕ ಅವನು ಲಾಕೀಷಿನಿಂದ ರಬ್ಷಾಕೆ ಎಂಬ ಒಬ್ಬ ದಳಪತಿಯನ್ನು ಮಹಾಸೈನ್ಯದೊಂದಿಗೆ ಜೆರುಸಲೇಮಿನಲ್ಲಿದ್ದ ರಾಜ ಹಿಜ್ಕೀಯನ ಬಳಿಗೆ ಕಳುಹಿಸಿದನು. ಈ ದಳಪತಿ ಅಗಸರ ಹೊಲದ ಮೇಲೆ ಹಾದುಹೋಗುವ ರಾಜಮಾರ್ಗದ ಹತ್ತಿರವಿರುವ ಕೆರೆಯ ಕಾಲುವೆಯ ಬಳಿ ಪಾಳೆಯ ಮಾಡಿಕೊಂಡನು.

3 ಆಮೇಲೆ ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆದ ಎಲ್ಯಾಕೀಮ್, ಕಾರ್ಯದರ್ಶಿಯಾದ‍ ಶೆಬ್ನ ಮತ್ತು ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬ ಮೂವರು ಅಲ್ಲಿಗೆ ಬಂದರು.

4 ದಳಪತಿ ಅವರಿಗೆ, “ನೀವು ಹೋಗಿ ಅಸ್ಸೀರಿಯದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿಸಿರಿ : “ನಿನ್ನ ಭರವಸೆಗೆ ಆಧಾರವಾದರೂ ಏನು?

5 ಯುದ್ಧಕ್ಕೆ ಬೇಕಾದ ವಿವೇಕ ಹಾಗೂ ಶಕ್ತಿ ಉಂಟೆಂಬ ನಿನ್ನ ಮಾತು ಬರೀ ಬಾಯಿಮಾತು ಎಂದು ನಾನು ಹೇಳಬಲ್ಲೆ. ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ಎದ್ದಿರುವೆ?

6 ಮುರಿದ ಜೊಂಡಿಗೆ ಸಮಾನವಾದ ಈಜಿಪ್ಟ್ ಎಂಬ ಊರುಗೋಲಿನ ಮೇಲೆ ನಿನಗೆ ಭರವಸೆಯಿದೆಯಷ್ಟೆ. ಆದರೆ ಅದು ಊರಿಕೊಳ್ಳುವವನ ಕೈಯನ್ನು ಚುಚ್ಚಿ ತಿವಿಯುವ ಕೋಲು. ಈಜಿಪ್ಟಿನ ರಾಜ ಫರೋಹನಲ್ಲಿ ಭರವಸೆಯಿಟ್ಟವರಿಗೆ ಆಗುವ ಗತಿ ಇದೇ.

7 ‘ಬಹುಶಃ, ನೀನು ‘ನಮ್ಮ ದೇವರಾದ ಸರ್ವೇಶ್ವರನನ್ನೇ ನಂಬಿಕೊಂಡಿದ್ದೇವೆ’, ಎಂದು ಹೇಳಬಹುದು. ಹಿಜ್ಕೀಯನು, ಇದೇ ಬಲಿಪೀಠದ ಮುಂದೆ ಆರಾಧನೆಮಾಡಬೇಕು ಎಂದು ಯೆಹೂದ್ಯರಿಗೆ ಮತ್ತು ಜೆರುಸಲೇಮಿನವರಿಗೆ ಆಜ್ಞಾಪಿಸಿ ಆ ಸರ್ವೇಶ್ವರ ಸ್ವಾಮಿಯ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೆ?

8 ಆದುದರಿಂದ ಬಾ, ಎಂದು ನನ್ನ ಒಡೆಯನಾದ ಅಸ್ಸೀರಿಯದ ಅರಸನೊಂದಿಗೆ ಒಂದು ಒಪ್ಪಂದ ಮಾಡಿಕೊ. ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುವನು; ಅವುಗಳ ಮೇಲೆ ಕೂರಿಸುವಷ್ಟು ಮಂದಿ ಸವಾರರು ನಿನಗಿದ್ದಾರೋ?

9 ಇದು ಕೂಡ ನಿನಗೆ ಅಸಾಧ್ಯವಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವುದು ಹೇಗೆ? ರಥಾಶ್ವಬಲಗಳಿಗಾಗಿ ಈಜಿಪ್ಟಿನವರನ್ನು ನೀನು ನಂಬಿಕೊಂಡಿರುವಂತೆ ಕಾಣುತ್ತದೆ.

10 ಈ ನಾಡನ್ನು ಹಾಳುಮಾಡುವುದಕ್ಕೆ ಸರ್ವೇಶ್ವರ ಸ್ವಾಮಿಯ ಒಪ್ಪಿಗೆಯಿಲ್ಲದೆ ಇಲ್ಲಿಗೆ ನಾನು ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು’ ಎಂದು ಆ ಸರ್ವೇಶ್ವರ ಸ್ವಾಮಿಯೇ ನಿನಗೆ ಆಜ್ಞೆಮಾಡಿದ್ದಾರೆ,’ ಎಂಬ ಈ ಮಾತುಗಳು ಅರಸನ ಮಾತುಗಳೆಂದು ಹೋಗಿ ತಿಳಿಸಿರಿ” ಎಂದನು.

11 ಆಗ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬವರು ಆ ದಳಪತಿಗೆ, “ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಆರಾಮಾಯಿಕ ಭಾಷೆಯಲ್ಲಿ ಮಾತನಾಡಿ, ಅದು ನಮಗೆ ಅರ್ಥವಾಗುತ್ತದೆ. ಆದರೆ ಹಿಬ್ರು ಭಾಷೆಯಲ್ಲಿ ಮಾತನಾಡಬೇಡಿ, ಅದು ಪೌಳಿಗೋಡೆಯ ಮೇಲಿರುವ ಎಲ್ಲರಿಗೂ ಅರ್ಥವಾಗುತ್ತದೆ,” ಎಂದರು.

12 ಅದಕ್ಕೆ ಆ ದಳಪತಿಯು, “ನನ್ನ ಯಜಮಾನನು, ನಿಮ್ಮ ಸಂಗಡವಾಗಲಿ ಮತ್ತು ನಿಮ್ಮ ಒಡೆಯರ ಸಂಗಡವಾಗಲಿ ಮಾತ್ರ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತಿರುವ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಮಗೆ ವಿರುದ್ಧವಾಗಿ ಹೋರಾಡಿದರೆ ನಿಮ್ಮ ಹಾಗೆ ಇವರು ಕೂಡ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ” ಎಂದು ಉತ್ತರಕೊಟ್ಟನು.

13 ಬಳಿಕ ಆ ದಳಪತಿಯು ಆ ಗೋಡೆಯ ಮೇಲೆ ನಿಂತಿದ್ದವರನ್ನು ಉದ್ದೇಶಿಸಿ ಹಿಬ್ರು ಭಾಷೆಯಲ್ಲಿ, “ನೀವು ಅಸ್ಸೀರಿಯದ ರಾಜಾಧಿರಾಜನ ಮಾತನ್ನು ಕೇಳಿರಿ;

14 ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿ; ನಿಮ್ಮನ್ನು ಬಿಡಿಸಲು ಅವನಿಂದಾಗದು.

15 ಹಿಜ್ಕೀಯನು ನಿಮಗೆ, ‘ಸರ್ವೇಶ್ವರ ಸ್ವಾಮಿಯಲ್ಲಿ ನಂಬಿಕೆಯಿಡಿ; ಅವರು ನಿಮ್ಮನ್ನು ಹೇಗಾದರೂ ಮಾಡಿ ರಕ್ಷಿಸುವರು; ಈ ಪಟ್ಟಣವು ಅಸ್ಸೀರಿಯದ ರಾಜನ ವಶವಾಗುವುದಿಲ್ಲ,’ ಎಂಬುದಾಗಿ ಹೇಳಿದರೆ ಅವನಿಗೆ ಕಿವಿಗೊಡಬೇಡಿ, ಒಪ್ಪಿಕೊಳ್ಳಬೇಡಿ.

16 ಅಸ್ಸೀರಿಯದ ಅರಸನಾದ ನನ್ನ ಒಡೆಯನ ಮಾತನ್ನು ಕೇಳಿ; ಆತನೊಡನೆ ಒಪ್ಪಂದ ಮಾಡಿಕೊಂಡು ಆತನ ಆಶ್ರಯವನ್ನು ಸೇರಿರಿ. ಆಗ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರಮರದ ಹಾಗೂ ದ್ರಾಕ್ಷಾಲತೆಯ ಹಣ್ಣುಗಳನ್ನು ತಿನ್ನುವನು; ತನ್ನ ಬಾವಿಯ ನೀರನ್ನು ಕುಡಿಯುವನು.

17 ಸ್ವಲ್ಪ ಕಾಲವಾದನಂತರ ಆತನು ಬಂದು ನಿಮ್ಮನ್ನು ಇನ್ನೊಂದು ನಾಡಿಗೆ ಕರೆದುಕೊಂಡು ಹೋಗುವನು. ಅಲ್ಲಿ ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ ಇವು ಸಮೃದ್ಧಿಯಾಗಿರುವುವು, ನಿಮ್ಮ ನಾಡಿಗೆ ಸರಿಸಮಾನವಾಗಿರುವುವು;

18 ‘ಸರ್ವೇಶ್ವರ ನಮ್ಮನ್ನು ರಕ್ಷಿಸುವರು’ ಎಂಬ ನಂಬಿಕೆಯನ್ನು ಹಿಜ್ಕೀಯನು ನಿಮ್ಮಲ್ಲಿ ಮೂಡಿಸದಂತೆ ಎಚ್ಚರಿಕೆಯಾಗಿರಿ. ಯಾವ ರಾಷ್ಟ್ರದ ದೇವರುಗಳು ತಾನೇ ಅಸ್ಸೀರಿಯದ ಅರಸನ ಕೈಯಿಂದ ನಾಡನ್ನು ಬಿಡಿಸಿಕೊಂಡಿದ್ದಾರೆ?

19 ಹಮಾತ್, ಅರ್ಪಾದ್, ಸೆಫರ್ವಯಿಮ್ ಎಂಬ ಊರುಗಳ ದೇವರುಗಳು ಏನಾದರು? ಅವರು ಸಮಾರ್ಯವನ್ನು ನನ್ನ ಅರಸನ ಕೈಯಿಂದ ಬಿಡಿಸಿಕೊಂಡರೋ?

20 ಯಾವ ರಾಷ್ಟ್ರದ ದೇವರುಗಳೂ ತಮ್ಮ ನಾಡನ್ನು ನನ್ನ ಅರಸನ ಕೈಯಿಂದ ಬಿಡಿಸಲಾರದೆ ಹೋದಮೇಲೆ ಸರ್ವೇಶ್ವರ ಜೆರುಸಲೇಮನ್ನು ಆತನ ಕೈಯಿಂದ ಬಿಡಿಸಿ ಕಾಪಾಡಲು ಸಾಧ್ಯವೋ?’ ಎಂದು ಕೇಳಿದನು.

21 ಆ ಸೇನಾಧಿಪತಿಗೆ ಯಾವ ಉತ್ತರವನ್ನು ಕೊಡಬಾರದೆಂದು ರಾಜ ಹಿಜ್ಕೀಯನು ಆಜ್ಞಾಪಿಸಿದ್ದರಿಂದ ಆ ಮೂವರು ಏನನ್ನು ಹೇಳದೆ ಸುಮ್ಮನಿದ್ದರು.

22 ಬಳಿಕ, ಹಿಲ್ಕೀಯನ ಮಗನೂ ರಾಜ ಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, ಅರಸ ಹಿಜ್ಕೀಯನ ಬಳಿಗೆ ಬಂದು, ಅವನಿಗೆ ಆ ಸೇನಾಪತಿಯ ಮಾತುಗಳನ್ನು ತಿಳಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು