ಯೆಶಾಯ 34 - ಕನ್ನಡ ಸತ್ಯವೇದವು C.L. Bible (BSI)ಶತ್ರುರಾಷ್ಟ್ರಗಳಿಗೆ ಬರಲಿರುವ ಶಿಕ್ಷೆ 1 ರಾಷ್ಟ್ರಗಳೇ, ಬನ್ನಿ, ಹತ್ತಿರಕ್ಕೆ ಬಂದು ಕೇಳಿರಿ; ಜನಾಂಗಗಳೇ, ಕಿವಿಗೊಡಿರಿ; ಜಗವೂ ಅದರಲ್ಲಿರುವ ಸಮಸ್ತವೂ, ಲೋಕವೂ ಅದರ ನಿವಾಸಿಗಳೆಲ್ಲರೂ ಆಲಿಸಲಿ. 2 ಸರ್ವೇಶ್ವರ ಸ್ವಾಮಿ ಸಕಲ ರಾಷ್ಟ್ರಗಳ ಮೇಲೆ ಕೋಪಗೊಂಡಿದ್ದಾರೆ - ಅವುಗಳ ಸೈನ್ಯಗಳ ಮೇಲೆ ರೋಷಗೊಂಡಿದ್ದಾರೆ. ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ಸಂಹರಿಸಲು ನಿಶ್ಚಯಿಸಿದ್ದಾರೆ. 3 ಅವರಲ್ಲಿ ಹತರಾದವರು ಬೀದಿಪಾಲಾಗುವರು, ಅವರ ಶವಗಳಿಂದ ದುರ್ವಾಸನೆಯು ಬಡಿಯುವುದು. ಅವರ ರಕ್ತಪ್ರವಾಹವು ಗುಡ್ಡಗಳನ್ನು ತೋಯಿಸುವುದು. 4 ಗಗನದ ನಕ್ಷತ್ರವ್ಯೂಹವು ಕ್ಷಯಿಸುವುದು, ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿಯ ಎಲೆಗಳು ಒಣಗಿಬೀಳುವಂತೆ, ಅಂಜೂರದ ತರಗುಗಳು ಉದುರುವಂತೆ ತಾರಾಮಂಡಲವೆಲ್ಲ ಕಳಚಿಬೀಳುವುದು. 5 ಆಕಾಶದಲ್ಲಿ ನನ್ನ ಖಡ್ಗವು ಆವೇಶದಿಂದ ಕಾರ್ಯಮಾಡಿದೆ. ಇಗೋ, ನಾನು ಶಪಿಸಿದ ಎದೋಮ್ ಎಂಬ ಜನಾಂಗದ ಮೇಲೆ ನ್ಯಾಯತೀರಿಸಲು ಅದು ಎರಗಲಿದೆ. 6 ಸರ್ವೇಶ್ವರ ಸ್ವಾಮಿಯ ಖಡ್ಗವು ರಕ್ತಮಯವಾಗಿದೆ; ಅದು ಕೊಬ್ಬಿನಿಂದಲೂ ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡಗಳ ವಪೆಯಿಂದಲೂ ತುಂಬಿದೆ; ಸರ್ವೇಶ್ವರ ಬೊಚ್ರದಲ್ಲಿ ಈ ಬಲಿಯನ್ನೂ ಎದೋಮಿನಲ್ಲಿ ಈ ದೊಡ್ಡ ಸಂಹಾರವನ್ನೂ ಮಾಡಬೇಕೆಂದಿದ್ದಾರೆ. 7 ಕಾಡುಕೋಣಗಳಂತೆ, ಹೋರಿಗೂಳಿಗಳಂತೆ, ಈ ಯಜ್ಞಪಶುಗಳು ಬೀಳುವುವು; ನಾಡು ರಕ್ತದಿಂದು ತೊಯಿದಿರುವುದು, ಅಲ್ಲಿನ ದೂಳು ಕೊಬ್ಬಿನಿಂದ ಜಿಡ್ಡಾಗಿರುವುದು. 8 ಏಕೆಂದರೆ ಸರ್ವೇಶ್ವರ ಮುಯ್ಯಿತೀರಿಸುವ ದಿನವು ಬಂದಿದೆ. ಸಿಯೋನಿಗೆ ನ್ಯಾಯ ದೊರಕಿಸಿ ಎದೋಮಿಗೆ ದಂಡನೆ ವಿಧಿಸುವ ವರ್ಷವು ಒದಗಿದೆ. 9 ಎದೋಮಿನ ತೊರೆಗಳು ಡಾಂಬರಾಗಿ ಹರಿಯುವುವು. ಅದರ ಮಣ್ಣು ಗಂಧಕವಾಗುವುದು, ನಾಡೆಲ್ಲಾ ಉರಿಯುವ ಡಾಂಬರಿನಂತೆ ಇರುವುದು. 10 ಅದು ಹಗಲಿರುಳು ಆರದೆ ಉರಿಯುವುದು. ಅದರ ಹೊಗೆ ನಿರಂತರವಾಗಿ ಏರುತ್ತಿರುವುದು. ನಾಡು ತಲತಲಾಂತರಕ್ಕೂ ಹಾಳುಬಿದ್ದಿರುವುದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದುಹೋಗರು. 11 ಅದು ಹದ್ದುಗಳ, ಮುಳ್ಳುಹಂದಿಗಳ ಸ್ವಾಧೀನವಾಗುವುದು. ಕಾಗೆಗೂಗೆಗಳಿಗೆ ಅದು ಗೂಡಾಗುವುದು. ಸರ್ವೇಶ್ವರ ಹಾಳುಪಾಳನ್ನೇ ಅದರ ಅಳತೆಗೋಲನ್ನಾಗಿಯೂ ಅಸ್ತವ್ಯಸ್ತತೆಯನ್ನೇ ಅದರ ಮಟ್ಟಗೋಲನ್ನಾಗಿಯೂ ಮಾಡುವರು. 12 ಅಲ್ಲಿ ಪಟ್ಟಕ್ಕೆ ಪ್ರಮುಖರಾರೂ ಸಿಕ್ಕರು, ನಾಡಿಗೆ ಒಡೆಯರಾರೂ ಇಲ್ಲದಾಗುವರು. 13 ಅಲ್ಲಿನ ಅರಮನೆಗಳಲ್ಲಿ ಕಳ್ಳಬಳ್ಳಿಗಳೂ ಕೋಟೆಗಳಲ್ಲಿ ಮುಳ್ಳುಗಿಳ್ಳುಗಳೂ ಹಬ್ಬಿಕೊಳ್ಳುವುವು. ಅದು ಮರಿಗಳಿಗೆ ಗುಹೆಯಾಗಿಯೂ ಗೂಬೆಗಳಿಗೆ ಗೂಡಾಗಿಯೂ ಇರುವುದು. 14 ಕಾಡುನಾಯಿಗಳೂ ತೋಳಗಳೂ ಅಲ್ಲಿ ಸೇರುವುವು; ಕಾಡುಮೇಕೆ ತನ್ನ ಜೊತೆ ಮೇಕೆಯನ್ನು ಕರೆದು ಕೂಗುವುದು; ಭೂತಪ್ರೇತಗಳು ಅಲ್ಲಿ ಹಾಯಾಗಿ ವಾಸಮಾಡುವುವು. 15 ಹಾರುವ ಹಾವು ಅಲ್ಲಿ ಗೂಡುಮಾಡಿಕೊಂಡು, ಮೊಟ್ಟೆಯಿಕ್ಕಿ ಮರಿಮಾಡಿ, ರೆಕ್ಕೆಗಳ ಅಡಿಯಲ್ಲಿ ಅವುಗಳನ್ನು ಕೂಡಿಸಿಕೊಳ್ಳುವುದು. ರಣಹದ್ದುಗಳು ಅಲ್ಲಿ ಜೋಡಿಜೋಡಿಯಾಗಿ ಸೇರಿಕೊಳ್ಳುವುವು. 16 ಸರ್ವೇಶ್ವರ ಸ್ವಾಮಿಯ ಗ್ರಂಥದಲ್ಲಿ ಬರೆದಿರುವುದನ್ನು ಹುಡುಕಿ ಓದಿರಿ. ಆ ಸೃಷ್ಟಿಗಳಲ್ಲಿ ಯಾವುದೂ ಇಲ್ಲದಿರದು. ಎಲ್ಲವು ಜೊತೆಜೊತೆಯಾಗಿ ಇರುವುವು. ಸ್ವಾಮಿಯ ಬಾಯಿಂದ ಅಪ್ಪಣೆ ಆಯಿತು, ಅವರ ಆತ್ಮವು ಅವುಗಳನ್ನು ಒಟ್ಟಿಗೆ ಬರಮಾಡಿತು. 17 ಅವರೇ, ಇವುಗಳಿಗೆ ಹಂಚಿಕೊಟ್ಟಿದ್ದಾರೆ, ಅವರ ಕೈಯೇ ನೂಲುಹಿಡಿದು ನಾಡನ್ನು ಇವುಗಳಿಗೆ ವಿಭಾಗಮಾಡಿದೆ; ಅದು ಇವುಗಳಿಗೆ ಶಾಶ್ವತ ಸೊತ್ತಾಗುವುದು, ತಲತಲಾಂತರಕ್ಕೂ ಅವು ಅಲ್ಲಿ ವಾಸಮಾಡುವುವು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India