Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 33 - ಕನ್ನಡ ಸತ್ಯವೇದವು C.L. Bible (BSI)


ಬರಲಿದೆ ಬಿಡುಗಡೆ

1 ಹಾಳುಮಾಡುತ್ತಿರುವವನೇ, ನಿನಗೆ ಧಿಕ್ಕಾರ ! ನಿನ್ನನ್ನು ಯಾರೂ ಹಾಳುಮಾಡದಿದ್ದರೂ ನೀನು ಹಾಳುಮಾಡುತ್ತಿರುವೆ. ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳುಮಾಡುತ್ತಿರುವ ನೀನು ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ.

2 ಸರ್ವೇಶ್ವರಾ, ನಮಗೆ ಕೃಪೆತೋರಿ. ನಿಮಗಾಗಿ ಕಾದಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಬೆಂಬಲವಾಗಿರಿ. ಆಪತ್ಕಾಲದಲ್ಲಿ ನಮಗೆ ರಕ್ಷಣೆ ನೀಡಿರಿ.

3 ನಿಮ್ಮ ಮೇಘಗರ್ಜನೆಗೆ ಜನಾಂಗಗಳು ಓಡುತ್ತವೆ. ನೀವು ಎದ್ದುನಿಂತಾಗ ರಾಷ್ಟ್ರಗಳು ದಿಕ್ಕುಪಾಲಾಗುತ್ತವೆ.

4 ಅವರು ಕೊಳ್ಳೆಗೆ ಒಳಗಾಗುವರು; ಜನ ಮಿಡತೆಗಳಂತೆ ಆ ಕೊಳ್ಳೆಗೆ ಹಾರಿಬೀಳುವರು.

5 ಸರ್ವೇಶ್ವರ ಸ್ವಾಮಿ ಉನ್ನತೋನ್ನತರು, ಮೇಲಿನ ಲೋಕದಲ್ಲಿ ಆಸೀನರು. ಅವರು ಜೆರುಸಲೇಮನ್ನು ನ್ಯಾಯನೀತಿಯಿಂದಲೂ ಸತ್ಯಸಂಧತೆಯಿಂದಲೂ ತುಂಬಿಸುವರು.

6 ನಿಮ್ಮ ಕಾಲಕ್ಕೆ ಬೇಕಾದ ಸ್ಥಿರತೆಯನ್ನು ನೀಡುವರು. ರಕ್ಷಣೆಗೆ ಬೇಕಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುವರು. ಸರ್ವೇಶ್ವರ ಸ್ವಾಮಿಯಲ್ಲಿ ನಿಮಗಿರುವ ಭಯಭಕ್ತಿಯೇ ನಿಮ್ಮ ನಿಧಿಯಾಗಿರುವುದು.

7 ಇಗೋ, ವೀರರು ಹೊರಗೆ ಹಾಹಾಕಾರ ಮಾಡುತಿಹರು. ಶಾಂತಿದೂತರಾದ ರಾಯಭಾರಿಗಳು ಘೋರವಾಗಿ ಅಳುತಿಹರು.

8 ರಾಜಮಾರ್ಗಗಳು ಬರಿದಾಗಿವೆ. ದಾರಿಗರೇ ಇಲ್ಲ.. ಶತ್ರುಗಳು ಒಪ್ಪಂದವನ್ನು ಮುರಿದಿದ್ದಾರೆ. ಸಾಕ್ಷಿಗಳನ್ನು ತಿರಸ್ಕರಿಸಿದ್ದಾರೆ. ಮಾನವರನ್ನು ಗಣನೆಗೆ ತಂದುಕೊಳ್ಳದವರಾಗಿದ್ದಾರೆ.

9 ನಾಡು ದುಃಖದಿಂದ ಸೊರಗುತ್ತಿದೆ. ಲೆಬನೋನ್ ನಾಚಿಕೆಯಿಂದ ಒಣಗುತ್ತಿದೆ. ಶಾರೋನ್ ಬೆಂದು ಬೆಂಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳಿಲ್ಲದೆ ಬೋಳಾಗಿವೆ.


ಶತ್ರುಗಳಿಗೆ ದೇವರಿತ್ತ ಎಚ್ಚರಿಕೆ

10 ಸರ್ವೇಶ್ವರ ಹೀಗೆನ್ನೆತ್ತಾರೆ : “ಈಗ ಏಳುವೆನು. ಈಗಲೇ ಎದ್ದು ಸಿದ್ಧನಾಗುವೆನು. ಇದೀಗಲೇ ನನ್ನ ಮಹಿಮೆಯನ್ನು ತೋರಿಸುವೆನು.

11 ನೀವು ಹೊಟ್ಟನ್ನು ಗರ್ಭದಲ್ಲಿ ಬೆಳೆಸಿ ಕೂಳೆಯನ್ನು ಹೆರುವಿರಿ. ನಿಮ್ಮ ನಿಟ್ಟುಸಿರು ನಿಮ್ಮನ್ನೇ ನುಂಗುವ ಬೆಂಕಿಯಾಗುವುದು.

12 ನೀವು ಸುಟ್ಟ ಸುಣ್ಣದಂತಾಗುವಿರಿ.

13 ದೂರ ಇರುವವರೇ, ನಾನು ಎಸಗಿದ ಕಾರ್ಯಗಳನ್ನು ಕೇಳಿ ತಿಳಿದುಕೊಳ್ಳಿರಿ. ಹತ್ತಿರ ಇರುವವರೇ, ನನ್ನ ಪರಾಕ್ರಮವನ್ನು ಒಪ್ಪಿಕೊಳ್ಳಿರಿ.”

14 ಸಿಯೋನಿನಲ್ಲಿರುವ ಪಾಪಾತ್ಮರು ಭಯಪಡುತ್ತಾರೆ. ಭಕ್ತಿಹೀನರು ಗಡಗಡನೆ ನಡುಗುತ್ತಾರೆ. ‘ನಮ್ಮಲ್ಲಿ ಯಾರು ತಾನೇ ಕಬಳಿಸುವ ಕಿಚ್ಚಿನ ಬಳಿ ವಾಸಿಸಬಲ್ಲರು?’ ಎಂದು ಹೇಳಿಕೊಳ್ಳುತ್ತಾರೆ.

15 ಸನ್ಮಾರ್ಗದಲ್ಲಿ ನಡೆವವನು, ಸತ್ಯವನ್ನೇ ನುಡಿವವನು, ಬಲಾತ್ಕಾರ್ಯದಿಂದ ಲಭಿಸಿದ್ದನ್ನು ತಿರಸ್ಕರಿಸುವವನು, ಲಂಚಕ್ಕೆ ಕೈಚಾಚದೆ ಹಿಂದಕ್ಕೆ ಸರಿವವನು, ಕೊಲೆ ಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವವನು, ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನು - ಇಂಥವನೇ ಉನ್ನತ ಸ್ಥಾನದಲ್ಲಿ ವಾಸಿಸುವನು.

16 ಅಂಥವನಿಗೆ ಗಿರಿದುರ್ಗವೇ ಆಶ್ರಯ, ಅನ್ನ ಆಹಾರ ಉಚಿತ, ನೀರುನಿಡಿ ನಿಸ್ಸಂದೇಹ.


ಭವ್ಯವಾದ ಭವಿಷ್ಯ

17 ಅಲಂಕೃತ ರಾಜನನ್ನು ನಿಮ್ಮ ಕಣ್ಣುಗಳು ಕಾಣುವುವು. ಸವಿಸ್ತಾರವಾದ ನಾಡೊಂದನ್ನು ನಿಮ್ಮ ಕಣ್ಣುಗಳು ನೋಡಿ ನಲಿಯುವುವು.

18 ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ - “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕಮಾಡಿದವನು ಎಲ್ಲಿ? ಗೋಪುರಗಳನ್ನು ಗಣಿಸಿದವನು ಎಲ್ಲಿ?” ಎಂದು ಹೇಳಿಕೊಳ್ಳುವಿರಿ.

19 ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನು, ನೀವು ಗ್ರಹಿಸಲಾಗದ ಅಸ್ಪಷ್ಟ ಮಾತುಗಳನ್ನು ಆಡುವ ಅಹಂಕಾರದ ಜನರನ್ನು ಇನ್ನು ಮೇಲೆ ಕಾಣಲಾರಿರಿ.

20 ನಮ್ಮ ಹಬ್ಬ ಆಚರಣೆಗಳ ನಗರವಾದ ಸಿಯೋನನ್ನು ದೃಷ್ಟಿಸಿನೋಡಿ. ಆ ಜೆರುಸಲೇಮನ್ನು ಕಣ್ಣಿಟ್ಟು ನೋಡಿ. ಅದು ನೆಮ್ಮದಿಯ ನಿವಾಸವಾಗಿ, ಕೀಳಲಾಗದ, ಕೆಡವಲಾಗದ ದೃಢವಾದ ಗುಡಾರದಂತೆ ನಿಂತಿರುವುದನ್ನು ನೀವು ಕಣ್ಣಾರೆ ಕಾಣುವಿರಿ.

21 ಅಲ್ಲಿ ಸರ್ವೇಶ್ವರ ತಮ್ಮ ಶಕ್ತಿಯನ್ನು ತೋರ್ಪಡಿಸುವರು. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟವು.

22 ಸರ್ವೇಶ್ವರ ಸ್ವಾಮಿಯೇ ನಮ್ಮ ನ್ಯಾಯಾಧಿಪತಿ, ಸರ್ವೇಶ್ವರ ಸ್ವಾಮಿಯೇ ನಮಗೆ ಶಾಸನದಾಯಕ, ಸರ್ವೇಶ್ವರ ಸ್ವಾಮಿಯೇ ನಮ್ಮ ರಾಜ. ಅವರೇ ನಮ್ಮ ಉದ್ಧಾರಕ.

23 ಶತ್ರು ಹಡಗುಗಳ ಹಗ್ಗಗಳು ಸಡಿಲ, ಅದರ ಕೂವೆಯ ಬುಡ ಸಡಿಲ; ಅದರ ಹಾಯಿಯನ್ನು ಮುದುರದಂತೆ ಹಿಡಿದುಕೊಳ್ಳಲು ಅಸಾಧ್ಯ. ಅವುಗಳನ್ನು ಸೂರೆಮಾಡಿ ಕೊಳ್ಳೆಹೊಡೆದು, ಸಮನಾಗಿ ಹಂಚಿಕೊಳ್ಳಲು ಎಲ್ಲರಿಗೂ ಆಸ್ಪದವುಂಟು. ಕುಂಟರು ಕೂಡ ತಮ್ಮ ಪಾಲನ್ನು ಪಡೆಯಬಲ್ಲರು.

24 ಸಿಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನು” ಎಂದು ಹೇಳನು, ಅಲ್ಲಿಯ ಜನರ ಪಾಪವು ಪರಿಹಾರವಾಗುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು