ಯೆಶಾಯ 32 - ಕನ್ನಡ ಸತ್ಯವೇದವು C.L. Bible (BSI)ಆದರ್ಶಪೂರ್ವಕ ರಾಜ್ಯ 1 ಇಗೋ, ರಾಜನೊಬ್ಬನು ನೀತಿಗನುಸಾರ ರಾಜ್ಯವಾಳುವನು. ದೇಶಾಧಿಪತಿಗಳು ನ್ಯಾಯದಿಂದ ದೊರೆತನಮಾಡುವರು. 2 ಪ್ರತಿಯೊಬ್ಬನೂ ಬಿರುಗಾಳಿಗೆ ತಡೆಯಂತೆ, ಬಿರುಮಳೆಗೆ ಬಿಡಾರದಂತೆ, ಮರುಭೂಮಿಯಲ್ಲಿ ಜಲಧಾರೆಯಂತೆ, ಬೆಂಗಾಡಿನಲ್ಲಿ ಭಾರಿಬಂಡೆಯ ನೆರಳಿನಂತೆ ಇರುವನು. 3 ಆಗ ನೋಡುವವರ ಕಣ್ಣು ಮಬ್ಬಾಗದು, ಕೇಳುವವರ ಕಿವಿ ಮಂದವಾಗದು. 4 ಆತುರಗಾರರ ಬುದ್ಧಿ ಸಾವಧಾನದಿಂದ ಗ್ರಹಿಸುವುದು. ತೊದಲುಮಾತಿನವರ ನಾಲಿಗೆ ಸ್ವಚ್ಛವಾಗಿಯೂ ತ್ವರಿತವಾಗಿಯೂ ನುಡಿಯುವುದು. 5 ಇನ್ನು ಮೇಲೆ ಮೂರ್ಖನು ಮಹಾತ್ಮನೆನಿಸಿಕೊಳ್ಳನು. ಕಳ್ಳನು ಒಳ್ಳೆಯವನೆನಿಸಿಕೊಳ್ಳನು. 6 ಮೂರ್ಖನು ಆಡುವುದು ಕೆಡುಕನ್ನೇ, ಅವನು ಮಾಡುವುದು ಅಧರ್ಮವನ್ನೇ, ನುಡಿಯುವುದು ಸರ್ವೇಶ್ವರ ಸ್ವಾಮಿಗೆ ವಿರುದ್ಧವಾದ ಅಸತ್ಯವನ್ನೇ. ಆತ ಹಸಿದವರಿಗೆ ಆಹಾರವನ್ನು ಕೊಡುವುದಿಲ್ಲ. ಬಾಯಾರಿದವರಿಗೆ ನೀರನ್ನು ಕೊಡಿಸುವುದಿಲ್ಲ. 7 ಕಳ್ಳನ ಸಾಧನಗಳು ಕೆಟ್ಟವುಗಳೇ. ಅವನ ಯೋಜನೆಗಳು ಅಬದ್ಧವಾದುವೇ. ದೀನದಲಿತರ ಕೋರಿಕೆಗಳು ನ್ಯಾಯಬದ್ಧವಾಗಿದ್ದರೂ ಸುಳ್ಳುಮಾತುಗಳಿಂದ ಅವರನ್ನು ಹಾಳುಮಾಡುತ್ತಾನೆ. 8 ಆದರೆ ಧರ್ಮವಂತನು ಮಹತ್ಕಾರ್ಯಗಳಲ್ಲಿಯೇ ನಿರತನಾಗಿರುತ್ತಾನೆ. ಜೆರುಸಲೇಮಿನ ಮಹಿಳೆಯರಿಗೆ ಎಚ್ಚರಿಕೆ 9 ಸುಖಜೀವಿಗಳಾದ ಮಹಿಳೆಯರೇ, ಏಳಿ ನನ್ನ ಮಾತನ್ನು ಕೇಳಿ. ನಿಶ್ಚಿಂತೆಯಿಂದಿರುವ ಯುವತಿಯರೇ, ನನ್ನ ಧ್ವನಿಗೆ ಕಿವಿಗೊಡಿ. 10 ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷೆಯ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದಕ್ಕದು. 11 ಸುಖವಾಗಿರುವವರೇ, ಗಡಗಡನೆ ನಡುಗಿರಿ. ನಿಶ್ಚಿಂತರಾಗಿರುವವರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಗಳನ್ನು ಕಿತ್ತುಹಾಕಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. 12 ಎದೆ ಬಡಿದುಕೊಂಡು ಗೋಳಾಡಿರಿ. ಏಕೆಂದರೆ ಹುಲುಸಾದ ಹೊಲಗಳು ಫಲವತ್ತಾದ ದ್ರಾಕ್ಷಾತೋಟಗಳು ನಾಶವಾಗಿವೆ. 13 ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದರುಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ, ಅರಮನೆ ಪಾಳುಬಿದ್ದಿದೆ. 14 ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು; ಓಫೆಲ್ ಗುಡ್ಡವು, ಕೀಸ್ ಕೋವರವು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು. 15 ಆದರೆ ದೇವರು ಉನ್ನತಲೋಕದಿಂದ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು; ಫಲಭರಿತ ಭೂಮಿ ಸಮೃದ್ಧ ಅರಣ್ಯವಾಗಿ ಮಾರ್ಪಡುವುದು. 16 ಸತ್ಯಸಂಧತೆ ಕಾಡುಮೇಡೆನ್ನದೆ ಎಲ್ಲೆಡೆ ನೆಲೆಗೊಳ್ಳುವುದು. ಸರ್ವರೂ ಸತ್ಯಸಂಧರಾಗಿರುವುದರಿಂದ ಸಮಾಧಾನ ನೆಲೆಗೊಳ್ಳುವುದು. 17 ಆ ಸತ್ಯಸಂಧತೆಯಿಂದ ಚಿರಶಾಂತಿ ಮತ್ತು ಸುಭದ್ರತೆ ಪರಿಣಮಿಸುವುದು. 18 ನನ್ನ ಜನರು ಶಾಂತಿಸದನಗಳಲ್ಲಿಯೂ ನಿರ್ಭಯವಾದ ನಿಲಯಗಳಲ್ಲಿಯೂ ನೆಮ್ಮದಿಯಾಗಿರುವ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು. 19 ಕಲ್ಮಳೆ ಸುರಿದು ಕಾಡು ಹಾಳಾದರೂ ಶತ್ರುಗಳ ಪಟ್ಟಣವು ನೆಲಸಮವಾದರೂ ನೀವು ಸಂತೋಷದಿಂದ ಬಾಳುವಿರಿ. 20 ನೀರಿರುವ ಕಡೆಗಳಲ್ಲೆಲ್ಲಾ ಬಿತ್ತನೆಮಾಡುವಿರಿ. ದನಕತ್ತೆಗಳನ್ನು ಇಷ್ಟಬಂದ ಹಾಗೆ ಮೇಯಲು ಬಿಡುವಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India