ಯೆಶಾಯ 30 - ಕನ್ನಡ ಸತ್ಯವೇದವು C.L. Bible (BSI)ಈಜಿಪ್ಟಿನೊಡನೆ ಸಂಧಾನ ವ್ಯರ್ಥ 1 ಸರ್ವೇಶ್ವರ ಸ್ವಾಮಿಯ ನುಡಿಯಿದು : “ದ್ರೋಹಿಗಳಾದ ಈ ಪೀಳಿಗೆಗೆ ಧಿಕ್ಕಾರ ! ಇವರು ನನ್ನನ್ನು ಕೇಳದೆ ತಮ್ಮದೇ ಆದ ಯೋಜನೆಯನ್ನು ಸಾಧಿಸುತ್ತಾರೆ. ನನ್ನಾತ್ಮಪ್ರೇರಣೆಯಿಲ್ಲದೆ ತಂತ್ರೋಪಾಯಗಳನ್ನು ಹೂಡುತ್ತಾರೆ. ಪಾಪದ ಮೇಲೆ ಪಾಪವನ್ನು ಸೇರಿಸಿಕೊಳ್ಳುತ್ತಾರೆ. 2 ನನ್ನ ಸಲಹೆಯನ್ನು ಕೇಳದೆ ಈಜಿಪ್ಟಿಗೆ ಪ್ರಯಾಣ ಬೆಳೆಸಿದ್ದಾರೆ. ಫರೋಹನ ಆಶ್ರಯವನ್ನು ಬಯಸುತ್ತಾರೆ. ಈಜಿಪ್ಟಿನವರನ್ನು ಮರೆಹೋಗಬೇಕೆಂದಿದ್ದಾರೆ. 3 ಆದರೆ ಫರೋಹನ ಆಶ್ರಯದಿಂದ ಅವರಿಗೆ ನಾಚಿಕೆಯಾಗುವುದು. ಈಜಿಪ್ಟಿನವರನ್ನು ಮರೆಹೋಗುವುದರಿಂದ ಅವರಿಗೆ ಅವಮಾನ ಉಂಟಾಗುವುದು. 4 ಫರೋಹನ ಸಾಮಂತರಾಜರು ಚೊವನಿನಲ್ಲಿದ್ದಾರೆ. ಅವನ ರಾಯಭಾರಿಗಳು ಹಾನೇಸನ್ನು ತಲುಪಿದ್ದಾರೆ. 5 ಆದರೂ ಅವರು ಯಾವ ಸಹಾಯವನ್ನಾಗಲೀ ಸೌಕರ್ಯವನ್ನಾಗಲೀ ನೀಡಲಾರರು. ಬದಲಿಗೆ, ಈ ಪೀಳಿಗೆಯವರಿಗೆ ನಾಚಿಕೆಯಾಗುವುದು, ಅವಮಾನವಾಗುವುದು, ಆ ನಿಷ್ಪ್ರಯೋಜಕ ರಾಷ್ಟ್ರದ ಬಗ್ಗೆ ಎಲ್ಲರೂ ವಿಷಾದಿಸುವರು. 6 ನೆಗೇಬಿನ ಮೃಗಗಳನ್ನು ಕುರಿತ ದೈವವಾಣಿ : ಸಿಂಹಸಿಂಹಿಣಿಗಳಿಂದಲೂ ವಿಷಸರ್ಪ - ಘಟಸರ್ಪಗಳಿಂದಲೂ ಕೂಡಿದ ಭಯಂಕರ ಹಾಗೂ ಸಂಕಟಕರವಾದ ಆ ನಾಡಿನ ಮಾರ್ಗವಾಗಿ ತಮ್ಮ ಧನಕನಕಗಳನ್ನು ಕತ್ತೆಗಳ ಮೇಲೂ ಆಸ್ತಿಪಾಸ್ತಿಗಳನ್ನು ಒಂಟೆಗಳ ಮೇಲೂ ಹೊರಿಸಿಕೊಂಡು ನಿಷ್ಪ್ರಯೋಜಕವಾದ ಆ ರಾಷ್ಟ್ರಕ್ಕೆ ಹೋಗುತ್ತಾರೆ. 7 ಈಜಿಪ್ಟ್ ನೀಡುವ ಸಹಾಯ ನಿರರ್ಥಕ, ನಿಷ್ಫ್ರಯೋಜಕ. ಆದುದರಿಂದಲೇ ಅದಕ್ಕೆ ನಾನು ಜಡವಾಗಿ ಬಿದ್ದಿರುವ ಘಟಸರ್ಪ ಎಂದು ಹೆಸರು ಇಟ್ಟಿದ್ದೇನೆ. ಈಜಿಪ್ಟಿನಿಂದಾಗುವ ದುರ್ಗತಿ 8 ಸರ್ವೇಶ್ವರ ನನಗೆ ಇಂತೆಂದರು : “ನೀನು ಈಗಲೇ ಹೋಗಿ, ನಾನು ಹೇಳುವುದನ್ನು ಅವರೆದುರಿನಲ್ಲಿಯೆ ಹಲಗೆಯ ಮೇಲೆ ಕೆತ್ತು, ಪುಸ್ತಕದಲ್ಲಿ ಬರೆ. ಅದು ಮುಂದಿನ ಕಾಲಕ್ಕೆ - ಶಾಶ್ವತ ಸಾಕ್ಷಿಯಾಗಿರಲಿ. 9 ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ, 10 ಇವರು ದಿವ್ಯದರ್ಶಿಗಳನ್ನು ನೋಡಿ : “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ : “ನಯವಾದುದ್ದನ್ನು ನಮಗೆ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದನೆ ಮಾಡಿರಿ. 11 ನಮಗೆ ಅಡ್ಡ ಬರಬೇಡಿ. ನಮ್ಮ ದಾರಿಯಿಂದ ದೂರವಿರಿ. ಇಸ್ರಯೇಲರ ಪರಮಪಾವನ ಸ್ವಾಮಿಯ ವಿಷಯವನ್ನು ನಮ್ಮ ಮುಂದೆ ಎತ್ತಬೇಡಿ,” ಎಂದು ಹೇಳುತ್ತಾರೆ. 12 ಆದಕಾರಣ, ಇಸ್ರಯೇಲಿನ ಪರಮಪಾವನ ಸ್ವಾಮಿ ಹೀಗೆನ್ನುತ್ತಾರೆ : “ನೀವು ನನ್ನ ಮಾತನ್ನು ತಿರಸ್ಕರಿಸಿ ಹಿಂಸೆ ಕುತಂತ್ರಗಳನ್ನೇ ನೆಚ್ಚಿಕೊಂಡಿದ್ದೀರಿ. 13 ಇದ್ದಕ್ಕಿದ್ದಂತೆ ಆ ಗೋಡೆ ತಟ್ಟನೆ ಬಿದ್ದುಹೋಗುವುದು. ಅಂತೆಯೇ ನಿಮ್ಮ ಅಪರಾಧ ನಿಮಗೆ ಅಪಾಯಕರವಾಗಿರುವುದು. 14 ಆ ಗೋಡೆಯೆಂಬ ಕುಂಬಾರನ ಮಡಕೆಯ ಚೂರಿನಿಂದ, ಬೆಂಕಿಯ ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲೀ ತೊಟ್ಟಿಯ ನೀರನ್ನು ತೋಡಿಕೊಳ್ಳುವುದಕ್ಕಾಗಲೀ ಸಾಧ್ಯವಾಗದು.” 15 ಪರಮಪಾವನವಾಗಿರುವ ಇಸ್ರಯೇಲಿನ ಸರ್ವೇಶ್ವರ ಸ್ವಾಮಿಯಾದ ನಾನು ನಿಮಗೆ ಹೇಳುವುದೇನೆಂದರೆ : “ನೀವು ಪಶ್ಚಾತ್ತಾಪಪಟ್ಟು ನನಗೆ ಅಭಿಮುಖವಾಗಿ ನೆಮ್ಮದಿಯಿಂದಿದ್ದರೆ ಉದ್ಧಾರವಾಗುವಿರಿ. ಶಾಂತಿಸಮಾಧಾನ ಮತ್ತು ಭಕ್ತಿಭರವಸೆಯಲ್ಲೇ ಶಕ್ತಿಯನ್ನು ಪಡೆಯುವಿರಿ.” ಆದರೆ ನೀವು ಒಪ್ಪಿಕೊಂಡಿಲ್ಲ. 16 ಬದಲಿಗೆ, “ಬೇಡ ಬೇಡ, ನಾವು ಕುದುರೆಗಳ ಮೇಲೆ ಓಡಿಹೋಗುತ್ತೇವೆ,” ಎಂದುಕೊಂಡಿರಿ. ಅಂತೆಯೇ ಓಡಿಹೋಗುವಿರಿ.” ನಾವು ದೌಡೋಡುವ ಕುದುರೆಗಳ ಮೇಲೆ ಸವಾರಿಮಾಡುತ್ತೇವೆ,” ಎಂದುಕೊಂಡಿರಿ. ಅಂತೆಯೇ ದೌಡೋಡುವವರೇ ನಿಮ್ಮನ್ನು ಅಟ್ಟಿಕೊಂಡುಬರುವರು. 17 ಒಬ್ಬ ಸೈನಿಕನ ಬೆದರಿಕೆಗೆ ಸಾವಿರ ಜನರು ಪರಾರಿಯಾಗುವರು. ಐದು ಸೈನಿಕರ ಬೆದರಿಕೆಗೆ ನೀವೆಲ್ಲರೂ ಓಡಿಹೋಗುವಿರಿ. ಕಟ್ಟಕಡೆಗೆ ಬೆಟ್ಟದ ತುದಿಯಲ್ಲಿರುವ ಧ್ವಜಸ್ತಂಭದಂತೆ, ಗುಡ್ಡದ ಮೇಲಿರುವ ಕೈಕಂಬದಂತೆ ಒಬ್ಬಂಟಿಗನಾಗಿ ಉಳಿಯುವಿರಿ. 18 ಆದರೆ ಸರ್ವೇಶ್ವರ ನಿಮಗೆ ಕೃಪೆತೋರಬೇಕೆಂದು ಕಾದಿರುತ್ತಾರೆ. ನಿಮ್ಮನ್ನು ಕರುಣಿಸಲು ಎದ್ದುನಿಂತಿದ್ದಾರೆ. ಅವರು ನ್ಯಾಯಪರರಾದ ದೇವರು, ಅವರಿಗಾಗಿ ಕಾದಿರುವವರೆಲ್ಲರೂ ಧನ್ಯರು. ಸಿಯೋನಿಗೆ ಶಾಂತಿಯ ಸಂದೇಶ 19 ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು. 20 ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ. 21 ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ, ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ,’ ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು. 22 ಆಗ ಬೆಳ್ಳಿಯ ಕವಚಗಳಿಂದ ಕೂಡಿದ ನಿಮ್ಮ ವಿಗ್ರಹಗಳನ್ನೂ ಚಿನ್ನದಿಂದ ಲೇಪಿತವಾದ ನಿಮ್ಮ ಬೊಂಬೆಗಳನ್ನೂ ಬಿಸಾಡುವಿರಿ. ಅವುಗಳನ್ನು ಹೊಲೆಮಾಡಿ ‘ತೊಲಗಿ’ ಎಂದು ಹೇಳುತ್ತಾ ಎಸೆದುಬಿಡುವಿರಿ. 23 ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು. 24 ಹೊಲಗೇಯುವ ನಿಮ್ಮ ಎತ್ತುಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು. 25 ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು. 26 ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು. ಅಸ್ಸೀರಿಯಾಕ್ಕೆ ಬರಲಿರುವ ದಂಡನೆ 27 ಇಗೋ, ಸರ್ವೇಶ್ವರ ನಾಮಧೇಯನು ಬರುತಿಹನು ದೂರದಿಂದ; ಭುಗಿಲೇರುತಿದೆ ಆತನ ಕೋಪ ಏಳುತಿದೆ ದಟ್ಟವಾದ ಧೂಮ ಅದರಿಂದ. ದಹಿಸುವ ಅಗ್ನಿಯಂತಿದೆ ಆತನ ನಾಲಗೆ. ಭರಿತವಾಗಿದೆ ಆತನ ತುಟಿಗಳು ರೋಷದಿಂದ. 28 ತುಂಬಿತುಳುಕಿ ಕಂಠದವರೆಗೆ ಏರುವ ತೊರೆಯಂತಿದೆ ಆತನ ಶ್ವಾಸ ಆತನ ಕೈಯಲ್ಲಿದೆ ಜನಾಂಗಗಳನ್ನು ಜಾಲಿಸುವ ಜರಡಿಯ ವಿನಾಶ ಜನರ ಕಟಿಬಾಯಲ್ಲಿರುವುದು ದಾರಿ ತಪ್ಪಿಸುವ ಕಡಿವಾಣದ ಪಾಶ. 29 ನೀವಾದರೋ ಹಾಡುವಿರಿ ಹಬ್ಬದ ರಾತ್ರಿಯಲ್ಲೋ ಎಂಬಂತೆ ಹೃದಯಾನಂದ ಪಡುವಿರಿ, ಇಸ್ರಯೇಲರ ರಕ್ಷಣೆಯ ಕೋಟೆಗೆ, ಸರ್ವೇಶ್ವರನ ಶಿಖರಕ್ಕೆ ಕೊಳಲನೂದುತ ಹೋಗುವವರಂತೆ. 30 ಆಗ ಸರ್ವೇಶ್ವರ ತಮ್ಮ ಗಂಭೀರವಾದ ವಾಣಿಯನ್ನು ಕೇಳುವಂತೆ ಮಾಡುವರು. ತೀವ್ರಕೋಪ, ದಹಿಸುವ ಅಗ್ನಿಜ್ವಾಲೆ, ಸಿಡಿಯುವ ಮೋಡ, ಚಂಡಮಾರುತ, ಕಲ್ಮಳೆ - ಇವುಗಳಿಂದ ತಮ್ಮ ಶಿಕ್ಷಾಹಸ್ತವನ್ನು ಪ್ರದರ್ಶಿಸುವರು. 31 ಹೀಗೆ ಸರ್ವೇಶ್ವರ ಸ್ವಾಮಿಯ ವಾಣಿಯನ್ನು ಕೇಳಿದ ಅಸ್ಸೀರಿಯಾದವರು ದಿಗ್ಬ್ರಮೆಗೊಳ್ಳುವರು. ರಾಜದಂಡದ ಶಿಕ್ಷೆಯನ್ನು ಸವಿಯುವರು. 32 ಸರ್ವೇಶ್ವರ ಸ್ವಾಮಿ ವಿಧಿಸುವ ಪ್ರತಿಯೊಂದು ಪೆಟ್ಟು ತಾಳ ತಮ್ಮಟೆಯಂತೆ ಅವರ ಮೇಲೆ ಬೀಳುವುದು. ಸರ್ವೇಶ್ವರ ತಾವೇ ಅವರ ವಿರುದ್ಧವಾಗಿ ಕೈಬೀಸಿ ಯುದ್ಧಮಾಡುವರು. 33 ಪುರಾತನ ಕಾಲದಿಂದಲೇ ಅಸ್ಸೀರಿಯದ ಅರಸನಿಗೆ ಅಗ್ನಿಕುಂಡವು ಅಣಿಯಾಗಿದೆ. ಅದನ್ನು ಆಳವಾಗಿಯೂ ಅಗಲವಾಗಿಯೂ ಮಾಡಲಾಗಿದೆ. ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಸೌದೆಯೂ ತುಂಬಿದೆ. ಗಂಧಕದ ಪ್ರವಾಹದೋಪಾದಿಯಲ್ಲಿ ಸರ್ವೇಶ್ವರ ಸ್ವಾಮಿ ತಮ್ಮ ಶ್ವಾಸವನ್ನೂದಿ ಅದನ್ನು ಭುಗಿಲೆಬ್ಬಿಸುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India