Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 3 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿನ ಅಸ್ತವ್ಯಸ್ತತೆ

1 ಇಗೋ, ಪ್ರಭುವೂ ಸೇನಾಧೀಶ್ವರ ಆದ ಸರ್ವೇಶ್ವರಸ್ವಾಮಿ ಜೆರುಸಲೇಮ್ ಮತ್ತು ಜುದೇಯದ ಜನರ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲ ತೆಗೆದುಬಿಡುವರು.

2 ಧೀರರು ಮತ್ತು ಯೋಧರು, ನ್ಯಾಯಾಧಿಪತಿಗಳು ಮತ್ತು ಪ್ರವಾದಿಗಳು, ಶಕುನದವರು ಮತ್ತು ಶಾಸಕರು,

3 ದಳಪತಿಗಳು ಮತ್ತು ಗಣ್ಯವ್ಯಕ್ತಿಗಳು, ಮಂತ್ರಿಗಳು ಮತ್ತು ಮಂತ್ರತಂತ್ರದವರು - ಎಲ್ಲರನ್ನು ತೊಲಗಿಸಿಬಿಡುವರು.

4 ಸರ್ವೇಶ್ವರ ಅವರಿಗೆ ಬಾಲಕರನ್ನು ಪಾಲಕರನ್ನಾಗಿಸಿ, ಹಸುಳೆಗಳು ಅವರನ್ನು ಆಳುವಂತೆ ಮಾಡುವರು.

5 ಪ್ರಜೆಗಳೆಲ್ಲ ಪರಸ್ಪರ ವಿರೋಧಿಗಳಾಗಿ, ಒಬ್ಬರನ್ನೊಬ್ಬರು ಹಿಂಸಿಸುವರು. ನೆರೆಹೊರೆಯವರನ್ನು ನಿಂದಿಸುವರು. ಕಿರಿಯರು ಹಿರಿಯರನ್ನು, ದುಷ್ಟರು ಶಿಷ್ಟರನ್ನು ಹೀಯಾಳಿಸುವರು.

6 ಕಾಲ ಬರುವುದು. ಆಗ ಒಬ್ಬನು ತನ್ನ ಸಹೋದರರಲ್ಲೊಬ್ಬನಿಗೆ: “ನಿನಗೆ ನಿಲುವಂಗಿಯಾದರೂ ಇದೆ. ನೀನೇ ನಮಗೆ ಒಡೆಯನಾಗು. ಹಾಳುಬಿದ್ದ ಈ ಊರಿಗೆ ನೀನೇ ಗೌಡನಾಗು,” ಎಂದು ಹುಟ್ಟುಮನೆಯಲ್ಲೇ ಒತ್ತಾಯಿಸುತ್ತಾ ಹೇಳುವನು.

7 ಆಗ ಆ ಸಹೋದರನು ಹೂಂಕರಿಸಿ, “ಈ ನಾಡಿಗೆ ವ್ರಣವೈದ್ಯನಾಗಿರಲು ನನಗಿಷ್ಟವಿಲ್ಲ. ಮನೆಯಲ್ಲಿ ತಿನ್ನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ. ನನ್ನನ್ನು ಜನನಾಯಕನನ್ನಾಗಿ ಮಾಡುವುದು ಬೇಡ,” ಎಂದು ತಿರಸ್ಕಾರದಿಂದ ಉತ್ತರಿಸುವನು.

8 ಜೆರುಸಲೇಮ್ ನಗರ ಹಾಳಾಯಿತು. ಜುದೇಯ ನಾಡು ಬಿದ್ದುಹೋಯಿತು. ಜನರ ನಡೆನುಡಿಗಳೆಲ್ಲ ಸ್ವಾಮಿಗೆ ವಿರುದ್ಧವಾದವು. ಸ್ವಾಮಿಯ ಮಹಿಮಾ ಸಾನ್ನಿಧ್ಯಕ್ಕೆ ಪ್ರತೀಕೂಲವಾದವು.

9 ಅವರ ಮುಖಲಕ್ಷಣವೇ ಅವರ ವಿರುದ್ಧ ಸಾಕ್ಷಿಯಾಗಿದೆ. ಅವರು ಸೊದೋಮಿನವರಂತೆ ತಮ್ಮ ಪಾಪಗಳನ್ನು ಮುಚ್ಚುಮರೆಯಿಲ್ಲದೆ ಮೆರೆಯಿಸುತ್ತಾರೆ. ಅಯ್ಯೋ, ಅವರಿಗೆ ಕೇಡು! ತಮಗೆ ತಾವೇ ಕೇಡನ್ನು ಬರಮಾಡಿಕೊಂಡಿದ್ದಾರೆ.

10 ಸಜ್ಜನರಿಗೆ ಶುಭವೆಂದು ಸಾರಿರಿ. ಅವರು ತಮ್ಮ ಕ್ರಿಯೆಗಳ ಸತ್ಫಲವನ್ನು ಸವಿಯುತ್ತಾರೆ.

11 ದುರ್ಜನರಿಗೆ ಧಿಕ್ಕಾರ! ಅವರ ಕೃತ್ಯಗಳಿಗೆ ಕಹಿಫಲ ದೊರಕುತ್ತದೆ.

12 ನನ್ನ ಜನರನ್ನೋ ಬಾಧಿಸುತ್ತಿರುವವರು ಹುಡುಗರು; ಆಳುತ್ತಿರುವವರೋ ಹೆಂಗಳೆಯರು. ಎಲೈ ನನ್ನ ಜನರೇ, ನಿಮ್ಮ ನಾಯಕರು ನಿಮ್ಮನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ನಿಮ್ಮ ಮಾರ್ಗವನ್ನು ವಕ್ರಗೊಳಿಸುತ್ತಿದ್ದಾರೆ.


ಪ್ರಜೆಗಳಿಗೆ ಸರ್ವೇಶ್ವರನ ತೀರ್ಪು

13 ಸ್ವಾಮಿ ವಾದಿಸುವುದಕ್ಕೆ ಸಿದ್ಧವಿದ್ದಾರೆ. ಅವರು ಜನರ ನ್ಯಾಯವನ್ನು ನಿರ್ಣಯಿಸುವುದಕ್ಕೆ ತಯಾರಾಗಿದ್ದಾರೆ.

14 ಸ್ವಾಮಿ ಜನರ ನಾಯಕರನ್ನೂ ಅಧಿಪತಿಗಳನ್ನೂ ನ್ಯಾಯವಿಚಾರಣೆಗೆ ಗುರಿಪಡಿಸುವರು. “ನೀವು ದ್ರಾಕ್ಷಾತೋಟವನ್ನು ಕಬಳಿಸಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದನ್ನು ಮನೆಗಳಲ್ಲಿ ತುಂಬಿಸಿಕೊಂಡಿದ್ದೀರಿ.

15 ನೀವು ನನ್ನ ಜನರನ್ನು ನಸುಕಿಬಿಟ್ಟಿದ್ದೀರಲ್ಲವೇ? ಬಡವರನ್ನು ಹಿಸುಕಿಬಿಟ್ಟಿದ್ದೀರಲ್ಲವೇ?” ಎಂದು ಸೇನಾಧೀಶ್ವರ ಸರ್ವೇಶ್ವರಸ್ವಾಮಿ ವಾದಿಸುತ್ತಾರೆ.


ಮಹಿಳೆಯರಿಗಾಗುವ ವಂಚನೆ

16 ಸ್ವಾಮಿ ಇಂತೆನ್ನುತ್ತಾರೆ: ಸಿಯೋನಿನ ಮಹಿಳೆಯರ ಒನಪು ಒಯ್ಯಾರಗಳನ್ನು ನೋಡಿರಿ. ಅವರು ಕತ್ತುತೂಗುತ್ತಾ, ಕಡೆಗಣ್ಣು ಹಾಕುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುತ್ತಾರೆ.

17 ಒಡೆಯರಾದ ಸ್ವಾಮಿ ಅವರ ನಡುನೆತ್ತಿಯನ್ನು ಹುಣ್ಣಾಗಿಸಿ ಬೋಳುಮಾಡುವರು. ಅವರ ಮಾನವನ್ನು ಬಯಲುಮಾಡುವರು.

18 ದಿನ ಬರುವುದು, ಆಗ ಸ್ವಾಮಿ ಅವರ ಬೆಡಗಿನ ಆಭರಣಗಳೆಲ್ಲವನ್ನು ತೆಗೆದುಹಾಕುವರು. ಕಾಲಂದಿಗೆ, ತುರುಬು, ಬಲೆ, ಅರ್ಧಚಂದ್ರ,

19 ಜುಮಕಿ, ಬಳೆ, ಕುಲಾವಿ, ಶಿರವಸ್ತ್ರ,

20 ಕಂಠವಸ್ತ್ರ, ಕಾಲಸರಪಣಿ, ಡಾಬು, ಸುಗಂಧ ಭರಣಿ, ತಾಯಿತಿ,

21 ಮುದ್ರೆ ಉಂಗುರ, ಮೂಗುತಿ,

22 ಹಬ್ಬದ ಉಡಿಗೆ ತೊಡಿಗೆ, ಮೇಲಂಗಿ, ಶಾಲು, ಕೈಚೀಲ,

23 ನವಿರು ಜಾಲರಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.

24 ಇದಲ್ಲದೆ ಸುಗಂಧಕ್ಕೆ ಬದಲಾಗಿ ದುರ್ಗಂಧ, ನಡುಪಟ್ಟಿಗೆ ಬದಲಾಗಿ ಹುರಿಹಗ್ಗ, ಜಡೆದಲೆಗೆ ಬದಲಾಗಿ ಬೋಳುದಲೆ, ರೇಷ್ಮೆಬಟ್ಟೆಗೆ ಬದಲಾಗಿ ಗೋಣಿತಟ್ಟು, ಬೆಡಗಿಗೆ ಬದಲಾಗಿ ಬೆತ್ತಲೆ, ಇಂಥ ಗತಿ ಅವರಿಗೆ ಬಂದೊದಗುವುದು.

25 ಎಲೌ, ಸಿಯೋನ್ ನಗರಿಯೇ, ನಿನ್ನ ವೀರರು ಖಡ್ಗಕ್ಕೆ ತುತ್ತಾಗುವರು; ನಿನ್ನ ಯೋಧರು ಯುದ್ಧದಲ್ಲಿ ಮಡಿಯುವರು.

26 ನಿನ್ನ ಪುರದ್ವಾರಗಳಲ್ಲಿ ದುಃಖ ಪ್ರಲಾಪ ತುಂಬಿರುವುದು. ನೀನು ನಗ್ನಳಂತೆ ನೆಲದ ಮೇಲೆ ಕುಳಿತುಬಿಡುವೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು