ಯೆಶಾಯ 29 - ಕನ್ನಡ ಸತ್ಯವೇದವು C.L. Bible (BSI)ಜೆರುಸಲೇಮಿನ ದುರ್ಗತಿ 1 ಅರೀಯೇಲೇ, ಅರೀಯೇಲೇ, ದಾವೀದನು ದಂಡಿಳಿದ ಪಟ್ಟಣವೇ, ನಿನಗೆ ಧಿಕ್ಕಾರ ! ಒಂದೆರಡು ವರ್ಷ ತುಂಬಲಿ. ಹಬ್ಬಹುಣ್ಣಿಮೆಗಳು ಕಳೆಯಲಿ. 2 ಅನಂತರ ನಾನು ಅರೀಯೇಲನ್ನು ಬಾಧಿಸುವೆನು. ಅಲ್ಲಿ ಅರಚಾಟ ಕಿರಿಚಾಟ ಇರುವುದು. ಆ ಪಟ್ಟಣವು ವಾಸ್ತವವಾಗಿ ನನಗೆ ಅರೀಯೇಲಾಗಿಯೇ ಪರಿಣಮಿಸುವುದು. 3 ನಾನು ನಿನ್ನ ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೊತ್ತಲ ಕಟ್ಟುವೆನು. ದಿಬ್ಬವನ್ನೆಬ್ಬಿಸಿ ನಿನ್ನನ್ನು ಮುತ್ತುವೆನು. 4 ನೀನು ಕುಗ್ಗಿ ಭೂಮಿಯೊಳಗಿಂದ ಮಾತಾಡುವೆ. ನಿನ್ನ ನುಡಿ ಮಣ್ಣಿನೊಳಗಿಂದ ಶಿಥಿಲ ಸ್ವರವಾಗಿ ಹೊರಡುವುದು. ನಿನ್ನ ಧ್ವನಿ ಭೂತದ ಧ್ವನಿಯಂತೆ ನೆಲದೊಳಗಿಂದ ಬರುವುದು. ಧೂಳಿನೊಳಗಿಂದ ನಿನ್ನ ಮಾತು ಲೊಚಗುಟ್ಟುವಂತೆ ಕೇಳಿಸುವುದು. 5 ಅರೀಯೇಲೇ, ಗುಂಪುಗುಂಪಾಗಿ ಕೂಡಿಬರುವ ನಿನ್ನ ಶತ್ರುಗಳು ಧೂಳಿಪುಡಿಯಂತೆ ತೂರಿಹೋಗುವರು. ತಂಡೋಪತಂಡವಾಗಿ ಬಂದಿರುವ ಭಯಂಕರ ಸೈನಿಕರು ಹೊಟ್ಟಿನಂತೆ ಹಾರಿಹೋಗುವರು. ತಟ್ಟನೆ ಕ್ಷಣಮಾತ್ರದಲ್ಲಿ ಕಣ್ಮರೆಯಾಗುವರು. 6 ಗುಡುಗು, ಭೂಕಂಪ, ಮಹಾಗರ್ಜನೆ, ಬಿರುಗಾಳಿ, ಚಂಡಮಾರುತ, ಭಸ್ಮಮಾಡುವಂಥ ಅಗ್ನಿಜ್ವಾಲೆ - ಇವುಗಳ ಮೂಲಕ ಸರ್ವೇಶ್ವರ ನಿನ್ನ ಪರವಾಗಿ ಪ್ರತ್ಯಕ್ಷವಾಗುವರು. 7 ಆಗ, ನಿನ್ನ ಮೇಲೆ ಹೋರಾಡಿ, ನಿನಗೂ ನಿನ್ನ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ, ನಿನ್ನನ್ನು ಬಾಧಿಸುವ ಸಕಲ ಜಾತಿಜನಾಂಗಗಳು ಕನಸಿನಂತೆ, ರಾತ್ರಿಕಾಲದ ಸ್ವಪ್ನದಂತೆ ಮಾಯವಾಗುವುವು. 8 ಸಿಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲ ರಾಷ್ಟ್ರಗಳ ಸಮುದಾಯದ ಗತಿ ಸ್ವಪ್ನಕಾಣುವವನ ಗತಿಯಾಗುವುದು. ಹಸಿದಿರುವ ಅವನು ಉಣ್ಣುವಂತೆ ಕನಸುಕಂಡರೂ ಎಚ್ಚರವಾದಾಗ ಅವನ ಹೊಟ್ಟೆ ಬರಿದಾಗಿಯೇ ಇರುತ್ತದೆ. ಬಾಯಾರಿದ ಅವನು ಕುಡಿಯುವಂತೆ ಕನಸು ಕಂಡರೂ ಎಚ್ಚರವಾದಾಗ ಅವನ ಹೊಟ್ಟೆ ಬರಿದಾಗಿಯೇ ಇರುತ್ತದೆ. ಬಾಯಾರಿದ ಅವನು ಕುಡಿಯುವಂತೆ ಕನಸು ಕಂಡರೂ ಎಚ್ಚರವಾದಾಗ ಬಳಲಿ ಬಾಯಾರಿಕೆಯಿಂದಲೇ ಇರುತ್ತಾನೆ. ಎಚ್ಚರಿಕೆಯ ಮಾತುಗಳ ಉಪೇಕ್ಷೆ 9 ನಿಮ್ಮನ್ನು ನೀವೇ ಬೆರಗುಮಾಡಿಕೊಂಡು ನಿಬ್ಬೆರಗಾಗಿರಿ. ಕುರುಡು ಮಾಡಿಕೊಂಡು ಕಡುಕುರುಡರಾಗಿರಿ. ಮದ್ಯಪಾನ ಮಾಡದೆಯೇ ಮತ್ತರಾಗಿರಿ, ಕುಡಿಯದೆಯೇ ಓಲಾಡಿರಿ. 10 ಸರ್ವೇಶ್ವರ ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ ಪ್ರವಾದಿಗಳೆಂಬ ಕಣ್ಣುಗಳನ್ನು ಕಟ್ಟಿಬಿಟ್ಟಿದ್ದಾರೆ. ದಿವ್ಯದರ್ಶನಗಳೆಂಬ ಕಲೆಗಳಿಗೆ ಮುಸುಕು ಹಾಕಿಬಿಟ್ಟಿದ್ದಾರೆ. 11 ಈ ಕಾರಣ, ನಿನ್ನ ಕುರಿತ ದಿವ್ಯದರ್ಶನ ನಿಗೂಢ ಗ್ರಂಥವಾಕ್ಯವಾಗಿಬಿಟ್ಟಿದೆ. ಅದನ್ನು ಅಕ್ಷರಬಲ್ಲವನಿಗೆ, “ದಯಮಾಡಿ ಇದನ್ನು ಓದು,” ಎಂದು ಕೊಟ್ಟರೆ, ಅವನು : “ಇದು ನಿಗೂಢವಾಗಿದೆ, ಆಗುವುದಿಲ್ಲ,” ಎನ್ನುತ್ತಾನೆ. 12 ಅಕ್ಷರವಿಲ್ಲದವನಿಗೆ, “ದಯವಿಟ್ಟು ಇದನ್ನು ಓದು,” ಎಂದು ಒಪ್ಪಿಸಿದರೆ, ಅವನು : “ನನಗೆ ಅಕ್ಷರವಿದ್ಯೆ ಇಲ್ಲ,” ಎನ್ನುತ್ತಾನೆ. 13 ಸರ್ವೇಶ್ವರ ಹೀಗೆಂದರು : “ಈ ಜನರು ನನ್ನನ್ನು ಸಮೀಪಿಸುವುದು ಬರೀ ಮಾತಿನ ಮರ್ಯಾದೆಯಿಂದ, ಇವರು ನನ್ನನ್ನು ಸನ್ಮಾನಿಸುವುದು ಬರೀ ಮಾತಿನ ಮಾಲೆಯಿಂದ, ಇವರ ಹೃದಯವಾದರೋ ಬಲು ದೂರವಿದೆ ನನ್ನಿಂದ, ಇವರು ನನಗೆ ಸಲ್ಲಿಸುವ ಭಕ್ತಿ ಕೂಡಿದೆ ಕೇವಲ ಭಯದಿಂದ, ಕಲಿತಿಹರಿವರು ಮಾನವಕಲ್ಪಿತ ಕಟ್ಟಳೆಯನು ಬಾಯಿಪಾಠದಿಂದ. 14 ಇಂತಿರಲು ಇವರ ಮಧ್ಯೆ ಎಸಗುವೆನು ಅಧಿಕಾಶ್ಚರ್ಯವಾದ ಅದ್ಭುತಕಾರ್ಯಗಳನು, ಅಳಿವುದು ಇವರ ಜ್ಞಾನಿಗಳ ಜ್ಞಾನವು, ಅಡಗುವುದು ವಿವೇಕಿಗಳ ವಿವೇಕವು". ಭವ್ಯಭವಿಷ್ಯದ ಭರವಸೆ 15 ತಮ್ಮ ಆಲೋಚನೆಯನ್ನು ಸರ್ವೇಶ್ವರ ಸ್ವಾಮಿಯಿಂದ ಬಚ್ಚಿಡುವುದಕ್ಕಾಗಿ ಒಳಸಂಚುಮಾಡುವವರಿಗೆ ಧಿಕ್ಕಾರ ! ಇವರು, “ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ಗಮನಿಸಿಯಾರು?” ಎಂದುಕೊಂಡು ಕತ್ತಲಲ್ಲೇ ತಮ್ಮ ಕೃತ್ಯಗಳನ್ನು ನಡೆಸುತ್ತಾರೆ. 16 ಇವರು ಎಲ್ಲವನ್ನೂ ತಲೆಕೆಳಗಾಗಿಸುತ್ತಾರೆ. ಜೇಡಿಮಣ್ಣು ಕುಂಬಾರನಿಗೆ ಸಾಟಿಯೇ? ಕೃತಿಯು ತನ್ನ ಕರ್ತನನ್ನೇ ಕುರಿತು : “ನಿನಗೆ ಬುದ್ಧಿಯಿಲ್ಲ,” ಎಂದೀತೆ? 17 ಕೊಂಚ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು. ಈಗಿನ ತೋಟವಾದರೋ ಅರಣ್ಯವಾಗಿ ಕಾಣಿಸುವುದು. 18 ಆ ದಿನದಂದು ಕಿವುಡರು ಗ್ರಂಥವಾಕ್ಯಗಳನ್ನು ಓದುವುದನ್ನು ಕೇಳುವರು. ಕುರುಡರಿಗೆ ಮಬ್ಬಿನಲ್ಲೂ ಕತ್ತಲಲ್ಲೂ ಕಣ್ಣು ಕಾಣಿಸುವುದು. 19 ದೀನದಲಿತರು ಸರ್ವೇಶ್ವರನಲ್ಲಿ ಅತಿಯಾಗಿ ಆನಂದಿಸುವರು. ಬಡಬಗ್ಗರು ಇಸ್ರಯೇಲಿನ ಪರಮಪಾವನ ಸ್ವಾಮಿಯಲ್ಲಿ ಉಲ್ಲಾಸಿಸುವರು. 20 ಏಕೆಂದರೆ ಭಯೋತ್ಪಾದಕರು ನಿಶ್ಶೇಷರಾಗುವರು, ಧರ್ಮನಿಂದಕರು ನಿರ್ನಾಮವಾಗುವರು. 21 ಸುಳ್ಳುಸಾಕ್ಷಿ ಹೇಳಿ ತಪ್ಪುಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವರು, ನೀತಿವಂತನಿಗೆ ನ್ಯಾಯ ತಪ್ಪಿಸುವವರು - ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು. 22 ಹೀಗಿರಲು ಅಬ್ರಹಾಮನನ್ನು ಉದ್ಧರಿಸಿದ ಸರ್ವೇಶ್ವರ ಸ್ವಾಮಿ ಯಕೋಬನ ಮನೆತನದ ವಿಷಯವಾಗಿ ಹೀಗೆನ್ನುತ್ತಾರೆ : “ಯಕೋಬ ವಂಶದವರೇ, ಇನ್ನು ಮೇಲೆ ನೀವು ನಾಚಿಕೆಗೀಡಾಗುವುದಿಲ್ಲ, ನಿಮ್ಮ ಮುಖ ಇನ್ನು ಬಾಡುವುದಿಲ್ಲ. 23 ನಿಮ್ಮ ವಂಶಜರು ತಮ್ಮ ಮಧ್ಯದಲ್ಲಿ ನಾನು ಎಸಗುವ ಕಾರ್ಯಗಳನ್ನು ನೋಡಿ, ನನ್ನ ನಾಮವೇ ಪರಮಪೂಜಿತವೆಂದು ಸ್ಥಿರಪಡಿಸುವರು. ಹೌದು, ಯಕೋಬ ವಂಶದ ಪರಮಪಾವನ ಸ್ವಾಮಿಯಾದ ನನ್ನನ್ನು ಪ್ರತಿಷ್ಠಾಪಿಸುವರು. ಇಸ್ರಯೇಲರ ದೇವರಾದ ನನ್ನಲ್ಲಿ ಭಯಭಕ್ತಿಯಿಂದಿರುವರು. 24 ಚಂಚಲಚಿತ್ತರು ಬುದ್ಧಿವಂತರಾಗುವರು. ಗೊಣಗುಟ್ಟುವವರು ಧ್ಯಾನಮಗ್ನರಾಗುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India