ಯೆಶಾಯ 28 - ಕನ್ನಡ ಸತ್ಯವೇದವು C.L. Bible (BSI)ಉತ್ತರರಾಜ್ಯಗಳಿಗೆ ಎಚ್ಚರಿಕೆ 1 ಕುಡುಕರಿಂದ ಕೂಡಿದ ಎಫ್ರಯಿಮಿನ ಕಿರೀಟದಂತಿರುವ ನಗರಕ್ಕೆ ಧಿಕ್ಕಾರ ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಧಿಕ್ಕಾರ ! 2 ಇದೋ, ಸರ್ವೇಶ್ವರ ಸ್ವಾಮಿ ಬಳಿ ಮಹಾ ಬಲಿಷ್ಠನೊಬ್ಬನು ಇದ್ದಾನೆ. ಆತನು ರಭಸವಾಗಿರುವ ಕಲ್ಮಳೆಯಂತೆ, ವಿನಾಶಕರವಾದ ಬಿರುಗಾಳಿಯಂತೆ, ಕೊಚ್ಚಿ ಹರಿಯುವ ತುಂಬು ಪ್ರವಾಹದಂತೆ ಬರುವನು. ಆ ನಗರ ನೆಲಕ್ಕೆ ಕುಸಿದುಬಿದ್ದು ನೆಲಸಮವಾಗುವಂತೆ ಮಾಡುವನು. 3 ಎಫ್ರಯಿಮಿನ ಕುಡುಕರ ಮಹಾಮುಕುಟದಂತಿರುವ ಆ ನಗರ ಕಾಲಿನ ತುಳಿತಕ್ಕೆ ಈಡಾಗುವುದು. 4 ಫಲವತ್ತಾದ ಕಣಿವೆಗೆ ಶ್ರೇಷ್ಠಶಿರೋಭೂಷಣವಾಗಿದ್ದು, ಈಗ ಬಾಡುತ್ತಿರುವ ಆ ನಗರ, ಹೂ ಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವುದು. ಆ ಹಣ್ಣನ್ನು ಕಂಡವರು ಕಿತ್ತ ಕೂಡಲೆ ತಿಂದುಬಿಡುವರು. 5 ಆ ದಿನದಂದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯೇ ಅಳಿದುಳಿದ ತಮ್ಮ ಜನರಿಗೆ ಅಂದದ ಕಿರೀಟ, ಸುಂದರ ಮುಕುಟವಾಗುವರು. 6 ಅವರು ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯನ್ನೂ ಊರಬಾಗಿಲ ಬಳಿ ಶತ್ರುಗಳನ್ನು ತಡೆಗಟ್ಟುವವರಿಗೆ ಶೌರ್ಯವನ್ನೂ ನೀಡುವರು. ಕುಡುಕ ಪ್ರವಾದಿಗಳಿಗೆ ಧಿಕ್ಕಾರ 7 ಯಾಜಕರು, ಪ್ರವಾದಿಗಳು ಮದ್ಯಪಾನದಿಂದ ಮತ್ತರಾಗಿದ್ದಾರೆ; ದ್ರಾಕ್ಷಾರಸದಿಂದ ಓಲಾಡುತ್ತಿದ್ದಾರೆ; ಕುಡಿತದಿಂದ ತೂರಾಡುತ್ತಿದ್ದಾರೆ. ದ್ರಾಕ್ಷಾರಸವೇ ಅವರನ್ನು ಮುಳುಗಿಸಿಬಿಟ್ಟಿದೆ. ಹೌದು, ಅವರು ಮದ್ಯದಲ್ಲಿ ತೇಲಾಡುತ್ತಿದ್ದಾರೆ. ದೈವದರ್ಶನವಾಗುತ್ತಿರುವಾಗಲೂ ಅವರು ಓಲಾಡುತ್ತಾರೆ. 8 ಅವರು ಕುಳಿತುಕೊಳ್ಳುವ ಮೇಜುಗಳ ಮೇಲೆಲ್ಲಾ ಹೊಲಸು ವಾಂತಿ ! ಸ್ವಚ್ಛವಾದ ಸ್ಥಳವಂತೂ ಕೊಂಚವೂ ಇಲ್ಲ. 9 ಇವರು ನನ್ನನ್ನು ಕುರಿತು : “ಇವನ ಜ್ಞಾನೋಪದೇಶ ಯಾರಿಗೆ? ಇವನು ಸಾರುವ ಸಂದೇಶ ಯಾರಿಗೆ? ಮೊಲೆಬಿಟ್ಟ ಕೂಸುಗಳಿಗೋ? ಎದೆಬಿಟ್ಟ ಮಕ್ಕಳಿಗೋ? 10 ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ; ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ” ಎಂದು ಹರಟೆ ಕೊಚ್ಚಿಕೊಳ್ಳುತ್ತಾರೆ. 11 ನೀವು ನನಗೆ ಕಿವಿಗೊಡದೆಹೋದರೆ, ಸರ್ವೇಶ್ವರ ಅಪರಿಚಿತವಾದ ಅನ್ಯಭಾಷೆಯನ್ನು ಆಡುವ ಜನರ ಮುಖಾಂತರ ನಿಮಗೆ ಪಾಠಕಲಿಸುವರು. 12 “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ : ಬಳಲಿದವರನ್ನು ವಿಶ್ರಮಗೊಳಿಸಿರಿ; ಇದೇ ನಿಮಗೆ ಅನುಕೂಲವಾದ ಉಪಶಮನ” ಎಂದು ದೇವರು ನಿಮಗೆ ಹೇಳಿದಾಗ, ನೀವು ಕೇಳದೆಹೋದಿರಿ. 13 ಆದುದರಿಂದಲೇ ಸರ್ವೇಶ್ವರ ನಿಮಗೆ ;ಆಜ್ಞೆಯ ಮೇಲೆ ಅಜ್ಞೆ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ’ ಎಂದು ಹೇಳಿ ಪಾಠಕಲಿಸುವರು. ಆಗ ನೀವು ನಡೆ ನಡೆದೂ ಎಡವಿ ಬೀಳುವಿರಿ, ಗಾಯಗೊಳ್ಳುವಿರಿ. ಉರುಲಿಗೆ ಸಿಕ್ಕಿಬೀಳುವಿರಿ, ಬಂಧನಕ್ಕೊಳಗಾಗುವಿರಿ. ಸಿಯೋನಿನ ಅಪೂರ್ವ ಮೂಲೆಗಲ್ಲು 14 ಆದಕಾರಣ, ಜೆರುಸಲೇಮಿನ ಜನರನ್ನಾಳುವ ಧರ್ಮನಿಂದಕರೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಕೇಳಿರಿ. 15 ನೀವು ನಿಮ್ಮನಿಮ್ಮೊಳಗೆ : “ಮೃತ್ಯುವಿನೊಂದಿಗೆ ಮುಚ್ಚಳಿಕೆ, ಪಾತಾಳದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾವಿಪತ್ತು ನಾಡನ್ನು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು. ನಾವು ಅಸತ್ಯವನ್ನು ಆಶ್ರಯಿಸಿಕೊಂಡಿದ್ದೇವೆ. ಮೋಸವನ್ನು ಮರೆಹೊಕ್ಕಿದ್ದೇವೆ” ಎಂದು ಕೊಚ್ಚಿಕೊಳ್ಳುತ್ತಿದ್ದೀರಿ. 16 ಎಂದೇ, ಒಡೆಯರಾದ ಸರ್ವೇಶ್ವರ ಹೀಗೆನ್ನುತ್ತಾರೆ : ‘ಇಗೋ, ನಾನು ಸಿಯೋನಿನಲ್ಲಿ ಅಸ್ತಿವಾರದ ಕಲ್ಲೊಂದನ್ನು ಇಡುತ್ತೇನೆ. ಅದು ಸ್ಥಿರವಾದ, ಪರೀಕ್ಷಿತವಾದ, ಮೌಲ್ಯವಾದ ಮೂಲೆಗಲ್ಲು. ಇದರಲ್ಲಿ ವಿಶ್ವಾಸವಿಡುವವನು ತಾಳ್ಮೆಯಿಂದ ಬಾಳುವನು. 17 ನ್ಯಾಯನೀತಿಯನ್ನು ಅದರ ಅಳತೆಗೋಲನ್ನಾಗಿಯೂ ಸತ್ಯಸಂಧತೆಯನ್ನು ಅದರ ಮಟ್ಟಗೋಲನ್ನಾಗಿಯೂ ಮಾಡುತ್ತೇನೆ. ನಿಮ್ಮ ಅಸತ್ಯದಆಶ್ರಯವನ್ನು ಕಲ್ಮಳೆ ಕೊಚ್ಚಿಕೊಂಡು ಹೋಗುವುದು. ಜಲಪ್ರವಾಹವು ನಿಮ್ಮ ಮೋಸದ ಆಸರೆಯನ್ನು ಮುಳುಗಿಸುವುದು. 18 ಮೃತ್ಯುವಿನೊಂದಿಗೆ ನೀವು ಮಾಡಿಕೊಂಡ ಒಪ್ಪಂದ ಬಿದ್ದುಹೋಗುವುದು. ಆ ಮಹಾವಿಪತ್ತು ನಾಡನ್ನು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು. 19 ಅದು ಹಾದುಹೋಗುವಾಗಲೆಲ್ಲಾ ನಿಮ್ಮನ್ನು ಹಿಡಿದುಬಿಡುವುದು. ಪ್ರತಿದಿನವೂ ಹಗಲೂ ರಾತ್ರಿ ಅದು ಹಾದುಹೋಗುವುದು. ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು. 20 ನೀವಾದರೋ ಕಾಲು ಚಾಚಲು ಚಾಪೆ ಸಾಲದವನಂತೆ, ಹೊದ್ದುಕೊಳ್ಳಲು ಕಂಬಳಿ ಸಾಲದವನಂತೆ ಇರುವಿರಿ. 21 ಒಮ್ಮೆ ಸರ್ವೇಶ್ವರ ಪೆರಾಚೀಮ್ ಬೆಟ್ಟದ ಮೇಲೆ ಎದ್ದಂತೆ ಏಳುವರು; ಗೊಬ್ಯೋನ್ ಕಣಿವೆಯಲ್ಲಿ ರೋಷಗೊಂಡಂತೆ ರೋಷಗೊಳ್ಳುವರು. ಆಗ ಅಸಾಧಾರಣ ಕಾರ್ಯವೊಂದನ್ನು ನಡೆಸುವರು; ಅಪೂರ್ವವಾದ ತಮ್ಮ ಕೆಲಸವನ್ನು ನೆರವೇರಿಸುವರು; 22 ಆದಕಾರಣ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಟ್ಟುಬಿಡಿ. ‘ಇಡೀ ನಾಡೇ ನಾಶವಾಗಲಿ’ ಎಂಬ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ತೀರ್ಪನ್ನು ನಾನು ಕೇಳಿದ್ದೇನೆ. ದೇವರ ಕಾರ್ಯಗಳಲ್ಲಿ ಕಾಣುವ ಕುಶಲತೆ 23 ನನ್ನ ಮಾತಿಗೆ ಕಿವಿಗೊಡಿ, ನಾನು ಹೇಳುವುದನ್ನು ಗಮನವಿಟ್ಟು ಆಲಿಸಿ. 24 ಬಿತ್ತನೆಗಾಗಿ ಉಳುವವನು ಸದಾ ಉತ್ತುಕೊಂಡೇ ಇರುವನೋ? ಪ್ರತಿನಿತ್ಯವೂ ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆದುಕೊಂಡೇ ಇರುವನೋ? 25 ಒಮ್ಮೆ ಭೂಮಿಯನ್ನು ಹಸನುಮಾಡಿದ ಮೇಲೆ ಜೀರಿಗೆಯನ್ನು ಚೆಲ್ಲಿ, ಸದಾಪನ್ನು ಬಿತ್ತುವವನಲ್ಲವೆ? ಗೋದಿಯನ್ನು ಸಾಲುಸಾಲಾಗಿಯೂ ಬಾರ್ಲಿಯನ್ನು ತಕ್ಕ ಸ್ಥಳದಲ್ಲಿ ಬಿತ್ತಿ, ಕಡಲೆಯನ್ನು ಅಂಚಿನಲ್ಲಿ ಹಾಕುವವನಲ್ಲವೆ? 26 ಅವನ ದೇವರು ಇದನ್ನೆಲ್ಲಾ ಸರಿಯಾಗಿ ತಿಳಿಸಿ ಕಲಿಸಿಕೊಡುತ್ತಾರೆ. 27 ಸದಾಪನ್ನು ಒಕ್ಕುವುದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ. 28 ಗೋದಿಯನ್ನು ಒಕ್ಕುವಾಗ ಕುದುರೆಗಳನ್ನು ಹೊಡೆದು ಗುಂಡನ್ನು ಉರುಳಿಸಿ ಕಾಳನ್ನು ಪುಡಿಪುಡಿಮಾಡುವನೋ? ಇಲ್ಲ. 29 ಈ ವಿವೇಕವು ಕೂಡ ಸೇನಾಧೀಶ್ವರ ಸರ್ವೇಶ್ವರನಿಂದಲೇ ಬರುತ್ತದೆ. ಅವರ ಆಲೋಚನೆ ಅತಿಶಯವಾದುದು. ಅವರ ಜ್ಞಾನ ಸರ್ವಶ್ರೇಷ್ಠವಾದುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India