Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 26 - ಕನ್ನಡ ಸತ್ಯವೇದವು C.L. Bible (BSI)


ಜಯಗೀತೆ

1 ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು : ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.

2 ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.

3 ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.

4 ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.

5 ತಗ್ಗಿಸುವನಾತ ಎತ್ತರದಲಿ ವಾಸಿಸುವವರನು, ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು.

6 ಈಡಾಗುವುದದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ.

7 ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ.

8 ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು.

9 ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು.

10 ದಯೆತೋರಿದರೂ ಕಲಿಯನು ದುಷ್ಟನು ಆ ನ್ಯಾಯನೀತಿಯನು ಧರ್ಮಕ್ಷೇತ್ರದೊಳು ಸಹ ಗೈವನು ಅಕ್ರಮವನು ಗೌರವಿಸನು ಸರ್ವೇಶ್ವರನ ಮಹಿಮೆಯನು.

11 ಅವರ ಮೇಲೆ ನೀ ಕೈಯೆತ್ತಿದರೂ, ಸರ್ವೇಶ್ವರಾ, ಲಕ್ಷಿಸರವರು ನಿನ್ನನ್ನು. ನಾಚಲಿ ಅವರು ನೋಡಿ ನಿನ್ನ ಸ್ವಜನಾಭಿಮಾನವನು ದಹಿಸಿಬಿಡಲಿ ಅಗ್ನಿಜ್ವಾಲೆಯು ಆ ನಿನ್ನ ವಿರೋಧಿಗಳನು.

12 ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ.

13 ನಮ್ಮ ದೇವರಾದ ಸರ್ವೇಶ್ವರಾ, ಇಗೋ, ನೋಡು ನಮ್ಮನಾಳಿಹರು ಭೂರಾಜರು ನಿನ್ನ ಬಿಟ್ಟು, ಆದರೇನು, ಹೊಗಳುವೆವು ನಿನ್ನ ನಾಮವನೆ ಮುನ್ನಿಟ್ಟು.

14 ಮಡಿದುಹೋದರು ಆ ಒಡೆಯರೆಲ್ಲ ಮರಳಿ ಅವರ ಪ್ರೇತಗಳು ಎದ್ದುಬರುವಂತಿಲ್ಲ. ನೀನವರನು ಬಡಿದು ನಸುಕಿಹಾಕಿರುವೆ ಅವರ ನೆನಪನೆ ಅಳಿಸಿಹಾಕಿರುವೆ.

15 ಹೆಚ್ಚಿಸಿರುವೆ ಸರ್ವೇಶ್ವರಾ, ನಿನ್ನ ಜನರನು ಹೌದು, ವೃದ್ಧಿಗೊಳಿಸಿರುವೆ ನಿನ್ನ ಪ್ರಜೆಯನು. ವಿಸ್ತರಿಸಿರುವೆ ನಾಡಿನ ಮೇರೆಗಳನು ಈಪರಿ ಪಡೆದಿರುವೆ ಮಹಿಮೆಯನು.

16 ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ.

17 ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ.

18 ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.

19 ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನಹೊಂದುವರು ನೆಲದಿಂದ.


ದೈವದಂಡನೆ

20 ನನ್ನ ಜನರೇ, ಹೋಗಿ; ನಿಮ್ಮ ನಿಮ್ಮ ಮನೆಗಳನ್ನು ಸೇರಿ ಬಾಗಿಲು ಮುಚ್ಚಿಕೊಳ್ಳಿ. ದೇವರ ಕೋಪ ತೀರುವತನಕ ಕೊಂಚಕಾಲ ಅವಿತುಕೊಳ್ಳಿ.

21 ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು