Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 25 - ಕನ್ನಡ ಸತ್ಯವೇದವು C.L. Bible (BSI)


ಸ್ತುತಿ ಗೀತೆ

1 ಸರ್ವೇಶ್ವರಾ, ನೀನೆನ್ನ ದೇವನು, ಏಕೆನೆ ನೀನು ಸತ್ಯಸ್ವರೂಪನು, ನಿಷ್ಟಾವಂತನು, ಆದಿ ಯೋಜನೆಗಳನು ಪೂರೈಸುವವನು, ಅದ್ಭುತಕಾರ್ಯಗಳನು ಎಸಗಿದಂತವನು. ಘನಪಡಿಸುವೆ ನಾ ನಿನ್ನನು, ಸ್ತುತಿಸುವೆನು ನಿನ್ನ ನಾಮ ಮಹಿಮೆಯನು.

2 ನಾಶಪಡಿಸಿದೆ ನೀ ನಗರವನು, ದಿಬ್ಬವಾಗಿಸಿದೆ ದುರ್ಗವನು, ಕೆಡವಿದೆ ವಿದೇಶೀಯರ ಕೋಟೆಯನು, ಮರಳಿ ಕಟ್ಟಲಾಗದ ಹಾಳೂರನ್ನಾಗಿಸಿದೆ ಅದನು.

3 ಹೊಗಳುವುವು ನಿನ್ನನ್ನು ಬಲಿಷ್ಟ ರಾಷ್ಟ್ರಗಳು, ನಿನಗಂಜುವುವು ಕ್ರೂರಿಗಳ ಪಟ್ಟಣಗಳು.

4 ದುರ್ಗವಾಗಿರುವೆ ನೀನು ದೀನದಲಿತರಿಗೆ, ಸುರಕ್ಷಿತ ಕೋಟೆಯಾಗಿರುವೆ ದಟ್ಟದರಿದ್ರರಿಗೆ, ನೆರಳಾಗಿರುವೆ ಬಿಸಿಲೊಳು ಬೆಂದವರಿಗೆ. ಕ್ರೂರಿಗಳ ಹೊಡೆತ ಚಳಿಗಾಲದ ಚಂಡಮಾರುತವಾಗಿರೆ, ಬಿರುಗಾಳಿಯ ಆ ಬಡಿತಕೆ ನೀನಾದೆ ಆಸರೆ.

5 ಅನ್ಯರ ಆರ್ಭಟವನು ನೀ ಅಡಗಿಸುವೆ, ಸುಡುವ ಒಣ ನೆಲವನು ಮೇಘ ತಣಿಸುವಂತೆ. ಕ್ರೂರಿಗಳ ಹರ್ಷೋದ್ಗಾರವನು ನಿಲ್ಲಿಸುವೆ, ಬಿಸಿಲನು ತಡೆಯುವ ಮೋಡದ ನೆರಳಿನಂತೆ.


ದೇವರು ಬಡಿಸುವ ಭೋಜನ

6 ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು.

7 ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು.

8 ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವರು. ಸರ್ವೇಶ್ವರ ಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರ ಸ್ವಾಮಿಯೇ ಇಂತೆಂದು ನುಡಿದಿದ್ದಾರೆ.

9 ಇದು ನೆರವೇರಿದಾಗ ಜನರು : “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ !” ಎಂದು ಹೇಳಿಕೊಳ್ಳುವರು.


ದೇವರು ನೀಡುವ ದಂಡನೆ

10 ಸರ್ವೇಶ್ವರ ಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.

11 ಈಜುವವರು ಕೈಯಾಡಿಸುವಂತೆ ಮೋವಾಬ್ ರೊಚ್ಚಿನಲ್ಲಿ ಕೈಯಾಡಿಸುವುದು. ಅದರ ಗರ್ವವನ್ನೂ ಕೈಚಳಕವನ್ನೂ ಸರ್ವೇಶ್ವರ ಸ್ವಾಮಿ ಅಡಗಿಸಿಬಿಡುವರು.

12 ದುರ್ಗದಂತೆ ಎತ್ತರವಾಗಿರುವ ಅದರ ಕೋಟೆಕೊತ್ತಲಗಳನ್ನು ಕೆಳಕ್ಕೆ ಕೆಡವಿ ನೆಲಸಮಮಾಡುವರು. ಅದು ಧೂಳು ಪಾಲಾಗುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು