ಯೆಶಾಯ 24 - ಕನ್ನಡ ಸತ್ಯವೇದವು C.L. Bible (BSI)ಧರೆಗೆ ಬರಲಿದೆ ದುರ್ಗತಿ 1 ಇಗೋ, ಸರ್ವೇಶ್ವರ ಬರಿದುಮಾಡುವರು ಧರೆಯನು, ನಿರ್ಜನ ಪ್ರದೇಶವಾಗಿಸುವರು ವಿರೂಪಗೊಳಿಸಿ ಅದನು, ಚದರಿಸುವರು ಅದರ ನಿವಾಸಿಗಳನು. 2 ಪ್ರಜೆಗೆ ಹೇಗೋ ಹಾಗೆ ಯಾಜಕನಿಗೆ, ದಾಸನಿಗೆ ಹೇಗೋ ಹಾಗೆ ದಣಿಗೆ , ದಾಸಿಗೆ ಹೇಗೋ ಹಾಗೆ ಯಜಮಾನಿಗೆ, ಕೊಳ್ಳುವವನಿಗೆ ಹೇಗೋ ಹಾಗೆ ಕೊಡುವವನಿಗೆ, ಸಾಲ ಕೊಡುವವನಿಗೆ ಹೇಗೋ ಹಾಗೆ ಸಾಲ ಪಡೆಯುವವನಿಗೆ, ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆ ಬಡ್ಡಿ ತೆರುವವನಿಗೆ, ಬರುವುದು ಒಂದೇ ಗತಿ ಇವರೆಲ್ಲರಿಗೆ. 3 ಬೆಟ್ಟ ಬರಿದಾಗಿ ಸಂಪೂರ್ಣ ಸುಲಿಗೆಯಾಗುವುದು ಜಗವು, ಸರ್ವೇಶ್ವರ ಸ್ವಾಮಿಯ ನುಡಿಗಳಿವು: 4 ಸೊರಗಿಹೋಗುವುದು ಲೋಕ ದುಃಖಿಸುತ್ತಾ ಕುಗ್ಗಿಹೋಗುವುದು ಬುವಿ ಗೋಳಾಡುತ್ತಾ ಕಂಗೆಟ್ಟುಹೋಗುವನು ಪ್ರತಿಯೊಬ್ಬ ವಿಶ್ವವಿಖ್ಯಾತ. 5 ಭೂನಿವಾಸಿಗಳು ಮೀರಿಹರು ದೈವಾಜ್ಞೆಗಳನು ಉಲ್ಲಂಘಿಸಿಹರು ದೈವನಿಯಮಗಳನು, ಭಂಗಪಡಿಸಿಹರು ಶಾಶ್ವತ ಒಡಂಬಡಿಕೆಯನ್ನು, ಮಲಿನವಾಗಿಸಿಹರು ನಡತೆಯಿಂದ ಲೋಕವನು. 6 ಇದಕಾರಣ ಕಬಳಿಸಿದೆ ಜಗವನು ಶಾಪ, ತಟ್ಟಿದೆ ಆ ಜನರಿಗೆ ದಂಡನೆಯ ತಾಪ. ಸುಟ್ಟಮೇಲೆ ಉಳಿದಿಹರು ಅವರಲಿ ಕೆಲವರು ಮಾತ್ರ. 7 ಬಾಡಿಹೋಗಿದೆ ದ್ರಾಕ್ಷಾಲತೆ, ದುಬಾರಿಯಾಗಿದೆ ದ್ರಾಕ್ಷಾರಸ, ನರಳುತಿದೆ ನಲಿಯುತ್ತಿದ್ದ ಜನಸಮೂಹ. 8 ನಿಂತುಹೋಗಿದೆ ದಮ್ಮಡಿಗಳ ಹರ್ಷನಾದ, ಕೊನೆಗೊಂಡಿದೆ ಉಲ್ಲಾಸಿಗಳ ಕೋಲಾಹಲ, ಅಡಗಿಹೋಗಿದೆ ಕಿನ್ನರಿಯ ಮಧುರಸ್ವರ. 9 ಇನ್ನಿಲ್ಲ ಮದ್ಯಪಾನ ಗೀತಾಗಾನ, ಕಹಿಪಾನವಾಯಿತು ಕುಡುಕನಿಗೆ ಸುರಾಪಾನ. 10 ಪಾಳುಬಿದ್ದಿದೆ ಅಸ್ತವ್ಯಸ್ತವಾದ ನಗರ, ಯಾರೂ ಪ್ರವೇಶಿಸದಂತೆ ಮುಚ್ಚಿದೆ ಪ್ರತಿಯೊಂದು ಗೃಹ. 11 ಮದ್ಯಪಾನವಿಲ್ಲವೆಂದು ಬೀದಿಗಳಲಿ ಬೊಬ್ಬೆ ಇಡುತಿಹರೆಲ್ಲ, ಅಸ್ತಮಿಸಿಹೋಯಿತು ಜಗದ ಉಲ್ಲಾಸವೆಲ್ಲ, ಸೆರೆಯಾಗಿ ತೊಲಗಿತು ಅದರ ಸಡಗರವೆಲ್ಲ. 12 ಪಾಳುಬಿದ್ದಿದೆ ನಗರ, ಮುರಿದು ಬಿದ್ದಿದೆ ಪುರದ್ವಾರ. 13 ಉಳಿಯುವುವು ಜನಾಂಗಗಳು ಜಗದ ಮಧ್ಯೆ, ಎಣ್ಣೆಯ ಬೀಜವನು ಉದುರಿಸಿದ ಮೇಲೆ ಮಿಗುವ ಹೀಚಿನಂತೆ, ದ್ರಾಕ್ಷಿ ಹಣ್ಣನು ಕೊಯ್ದ ಮೇಲೆ ಉಳಿದ ಕೂಳೆಯಂತೆ. 14 ಆರ್ಭಟಿಸುವರು ಅಳಿದುಳಿದವರು ಆನಂದದಿಂದ, ಕೊಂಡಾಡುವರು ಸರ್ವೇಶ್ವರನ ಮಹಿಮೆಯನು ಪಡುವಣದಿಂದ, 15 ಎಂದೇ ಮೂಡಣದವರೇ, ಸನ್ಮಾನಿಸಿರಿ ಸರ್ವೇಶ್ವರ ಸ್ವಾಮಿಯನು, ಕರಾವಳಿಯವರೇ, ಘನಪಡಿಸಿರಿ ಇಸ್ರಯೇಲಿನ ದೇವರಾದ ಸ್ವಾಮಿಯ ನಾಮವನು. 16 ಜಗದ ಕಟ್ಟಕಡೆಯಿಂದ ಕೇಳಿಬರುತಿದೆ, ‘ಸತ್ಯಸ್ವರೂಪನಿಗೆ ಸ್ತೋತ್ರ’ ಎಂಬ ಗೀತೆ. ಆದರೆ ನಶಿಸಿಹೋಗುತ್ತಿರುವೆನು ನಾನು, ಹೌದು, ನಶಿಸಿ ನಾಶವಾಗುತ್ತಿರುವೆನು, ಏನೆಂದು ಹೇಳಲಿ ನನ್ನ ಗತಿಯನು. ಇದೋ, ಬಾಧಿಸುತ್ತಿಹರು ದ್ರೋಹಿಗಳು, ದ್ರೋಹದ ಮೇಲೆ ದ್ರೋಹವೆಸಗುತಿಹರು. 17 ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು, ಕಾದಿದೆ ನಿಮಗೆ ಭಯಭೀತಿ, ಕುಳಿ ಮತ್ತು ಬಲೆಯು. 18 ಬೀಳುವನು ಕುಳಿಯಲ್ಲಿ, ಭಯಭೀತಿಯ ಸಪ್ಪಳಕ್ಕೆ ಓಡಿಹೋಗುವವನು, ಸಿಕ್ಕಿಬೀಳುವನು ಬಲೆಯಲ್ಲಿ ಕುಳಿಯ ಹತ್ತಿ ಬರುವವನು. ತೆರೆದಿವೆ ನೋಡಿ, ಆಕಾಶದ ದ್ವಾರಗಳು, ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು. 19 ಬಿರುಕು ಬಿಡುವುದು ಭೂಮಿ ಸೀಳುಪಾಳಾಗಿ ಕತ್ತರಿಸುವುದು ಕದಲಿಹೋಗಿ. 20 ಓಲಾಡುವುದು ಭೂಮಿ ಅಮಲೇರಿದವನಂತೆ, ತೂಗಾಡುವುದು ಬಿರುಗಾಳಿಗೆ ಸಿಕ್ಕಿದ ಗುಡಿಸಲಂತೆ, ಕುಸಿದು ಬೀಳುವುದು ದ್ರೋಹದ ಭಾರಕೆ, ಮರಳಿ ಏಳದಂತೆ. 21 ಆ ದಿನ ಸರ್ವೇಶ್ವರ ದಂಡಿಸುವರು ಮೇಲಣ ಸೇನಾಶೂರರನು, ಕೆಳಗಣ ಭೂ ರಾಜರನು. 22 ತಳ್ಳುವವರನು ಖೈದಿಗಳ ಗುಂಪಿನಂತೆ ನೆಲಮಾಳಿಗೆಗೆ, ಇರುವರವರು ಸೆರೆಯಲಿ ಬಹುದಿನಗಳವರೆಗೆ, ತದನಂತರ ಗುರಿಯಾಗುವರು ದಂಡನೆಗೆ. 23 ನಾಚುವನು ಚಂದ್ರ, ಹೇಸುವನು ಸೂರ್ಯ, ಏಕೆನೆ ಆಳುವರು ಸೇನಾಧೀಶ್ವರ ಸರ್ವೇಶ್ವರ ಸಿಯೋನ್ ಪರ್ವತದೊಳು, ಜೆರುಸಲೇಮ್ ನಗರದೊಳು. ಪ್ರತ್ಯಕ್ಷವಾಗುವುದಾತನ ಮಹಿಮಾಪ್ರಭಾವವು, ಅಲ್ಲಿನ ಜನನಾಯಕರ ಸಮ್ಮುಖದೊಳು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India