Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 23 - ಕನ್ನಡ ಸತ್ಯವೇದವು C.L. Bible (BSI)


ಫಿನೀಶಿಯ ಕುರಿತ ಸಂದೇಶ

1 ಟೈರ್ ನಗರವನ್ನು ಕುರಿತ ದೈವೋಕ್ತಿ : “ಗೋಳಾಡಿರಿ ತಾರ್ಷಿಷಿನ ನಾವಿಕರೆಲ್ಲ, ಹಾಳಾಗಿವೆ ನಿಮ್ಮ ಬಂದರುಗಳೆಲ್ಲ; ಹಡಗುಗಳಿಗೆ ರೇವಿಲ್ಲ, ನೆಲೆಯಿಲ್ಲ, ಸೈಪ್ರಸ್ಸಿನಿಂದ ಬಂದ ನಾವಿಕರಿಂದ ಈ ಸುದ್ದಿ ನಿಮಗೆ ತಿಳಿಯುವುದು.”

2 ಕರಾವಳಿಯ ನಿವಾಸಿಗಳೇ, ಸಿದೋನಿನ ವರ್ತಕರೇ, ಮೌನತಾಳಿರಿ. ನಿಮ್ಮ ಜನರು ವ್ಯಾಪಾರಕ್ಕಾಗಿ ವಿಶಾಲವಾದ ಸಮುದ್ರವನ್ನು ದಾಟುವಂತೆ ಮಾಡಿದಿರಿ.

3 ಶೀಹೋರಿನ ಧಾನ್ಯದಿಂದಲೂ ನೈಲಿನ ಬೆಳೆಯಿಂದಲೂ ಆದಾಯ ಪಡೆದಿರಿ, ನಿಮ್ಮ ನಗರ ಹಲವಾರು ನಾಡುಗಳಿಗೆ ಮಾರುಕಟ್ಟೆಯಾಗಿತ್ತು.

4 ಸಿದೋನ್ ನಗರವೇ, ನಿನಗೆ ನಾಚಿಕೆಗೇಡು ! ಸಮುದ್ರವೂ ಸಮುದ್ರ ತಳವೂ ನಿನ್ನನ್ನು ನಿರಾಕರಿಸುತ್ತಾ; “ನಾನು ಗರ್ಭಧರಿಸಲಿಲ್ಲ, ಪ್ರಸವಿಸಲಿಲ್ಲ, ಪುತ್ರಪುತ್ರಿಯರನ್ನು ಸಾಕಿ ಸಲಹಲಿಲ್ಲ,” ಎಂದು ನುಡಿದಿದೆ.

5 ಟೈರಿನ ದುರ್ಗತಿಯ ಸುದ್ದಿಯನ್ನು ಕೇಳಿದ ಈಜಿಪ್ಟಿನವರು ಸಹ ಕಳವಳಪಡುವರು.

6 ಕರಾವಳಿಯ ನಿವಾಸಿಗಳೇ, ಗೋಳಾಡಿರಿ, ಸಮುದ್ರವನ್ನು ದಾಟಿ ತಾರ್ಷೀಷಿಗೆ ಹೋಗಿರಿ.

7 ಇದು ತಾನೋ, ನಿಮ್ಮ ವಸಾಹತುಗಳನ್ನು ನಿರ್ಮಿಸಿಕೊಳ್ಳಲು ಜನರನ್ನು ಕಳುಹಿಸಿದ ನಗರ ! ಇದರ ವರ್ತಕರು ಪ್ರಭುಗಳು !

8 ಇದರ ವ್ಯಾಪಾರಿಗಳು ವಿಶ್ವವಿಖ್ಯಾತರು. ಇಂಥ ಟೈರ್ ಪಟ್ಟಣಕ್ಕೆ ನಾಶವೊದಗಿದುದನ್ನು ಯೋಚಿಸಿದವರಾರು?

9 ಇದು ಸೇನಾಧೀಶ್ವರ ಸರ್ವೇಶ್ವರ ಮಾಡಿದ ಸಂಕಲ್ಪವೇ ಸರಿ. ಗರ್ವಿಗಳ ಸಕಲ ದರ್ಪವನ್ನು ದಮನಮಾಡಲು, ವಿಶ್ವವಿಖ್ಯಾತರನ್ನು ಅವಮಾನಗೊಳಿಸಲು ಸೇನಾಧೀಶ್ವರ ಸರ್ವೇಶ್ವರ ಮಾಡಿದ ಯೋಜನೆಯಿದು.

10 ತಾರ್ಷೀಷ್ ನಗರವೇ, ನೈಲ್ ನದಿಯಂತೆ ನಿನ್ನ ನಾಡನ್ನು ಕೃಷಿಮಾಡು. ನಿನಗೆ ಬಂದರು ಇಲ್ಲವೇ ಇಲ್ಲ.

11 ಸರ್ವೇಶ್ವರ ಸಮುದ್ರದ ಮೇಲೆ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾರೆ. ಕಾನಾನಿನ ದುರ್ಗಗಳನ್ನು ನಾಶಮಾಡಲು ಅಪ್ಪಣೆಕೊಟ್ಟಿದ್ದಾರೆ.

12 “ಹಿಂಸೆಗೆ ಈಡಾದ ಕನ್ಯೆಯಂತೆ ಇರುವ ಸಿದೋನ್ ನಗರವೇ, ಇನ್ನು ಮೇಲೆ ನಿನಗಿರದು ಸಂತೃಪ್ತಿ: ಸಮುದ್ರ ದಾಟಿ ಸೈಪ್ರಸ್ಸಿಗೆ ಹಾದುಹೋಗು, ಅಲ್ಲಿಯೂ ನಿನಗೆ ದೊರಕದು ವಿಶ್ರಾಂತಿ,” ಎಂದು ಹೇಳಿದ್ದಾರೆ.

13 ಬಾಬಿಲೋನಿನ ನಾಡನ್ನು ನೋಡು. ಅದರ ಜನಾಂಗ ನಿರ್ನಾಮವಾಯಿತು. ಅಸ್ಸೀರಿಯದವರು ಆ ನಾಡನ್ನು ಕಾಡುಮೃಗಗಳಿಗೆ ಈಡುಮಾಡಿದರು. ಅಲ್ಲಿ ಬುರುಜುಗಳನ್ನು ಕಟ್ಟಿಕೊಂಡರು. ಇದರ ಕೋಟೆಗಳನ್ನಾದರೋ ಕೆಡವಿ ನಾಶಮಾಡಿದರು.

14 ‘ಗೋಳಾಡಿರಿ, ತಾರ್ಷೀಷಿನ ನಾವಿಕರೆಲ್ಲರು; ಹಾಳಾಗಿವೆ ನಿಮ್ಮ ಬಂದರುಗಳೆಲ್ಲವು.’

15 ಒಬ್ಬ ಅರಸನ ಜೀವಮಾನ ಕಾಲದಷ್ಟು ದಿನ - ಅಂದರೆ ಎಪ್ಪತ್ತು ವರ್ಷಕಾಲ - ನಗರವು ಯಾರ ನೆನಪಿಗೂ ಬಾರದೆಹೋಗುವುದು. ಆ ಅವಧಿಯು ಮುಗಿದ ಮೇಲೆ ಅದರ ಗತಿ ವೇಶ್ಯೆಯ ಗೀತದಂತಾಗುವುದು:

16 ‘ಓ ವೇಶ್ಯೆಯೇ, ಮರೆತಿಹರು, ನೋಡು, ಜನರು ನಿನ್ನನು; ಎಂದೇ ತೆಗೆದುಕೋ ಕೈಯಲಿ ಕಿನ್ನರಿಯನು: ನುಡಿಸು ಇಂಪಾಗಿ ನಿನ್ನ ವಾದ್ಯವನು; ಹಾಡು ಅನೇಕಾನೇಕ ಗೀತಗಳನು; ಆಗಲಾದರೂ ನೆನಸಿಕೊಳ್ಳಲಿ ಜನರು ನಿನ್ನನು.’

17 ಎಪ್ಪತ್ತು ವರ್ಷಗಳಾದ ಮೇಲೆ ಸರ್ವೇಶ್ವರ ಟೈರಿಗೆ ಭೇಟಿನೀಡುವರು. ಆ ನಗರಿ ತನ್ನ ಕಸುಬಿಗೆ ಹಿಂದಿರುಗುವಳು. ಜಗದ ಎಲ್ಲ ರಾಷ್ಟ್ರಗಳೊಂದಿಗೆ ವ್ಯಾಪಾರ ಗೈಯುವಳು.

18 ಅವಳ ವ್ಯಾಪಾರದಿಂದ ಬಂದ ಆದಾಯ ಅವಳಿಗೆ ನಿಧಿನಿಕ್ಷೇಪವಾಗದೆ ಸರ್ವೇಶ್ವರ ಸ್ವಾಮಿಗೆ ಮೀಸಲಾಗುವುದು. ಅದು ಸರ್ವೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ವಾಸಮಾಡುವವರಿಗೆ ಬೇಕಾದಷ್ಟು ಆಹಾರವನ್ನೂ ಅತ್ಯುತ್ತಮವಾದ ಉಡುಪನ್ನೂ ಒದಗಿಸುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು