ಯೆಶಾಯ 22 - ಕನ್ನಡ ಸತ್ಯವೇದವು C.L. Bible (BSI)ಜೆರುಸಲೇಮನ್ನು ಕುರಿತ ಸಂದೇಶ 1 ‘ದಿವ್ಯದರ್ಶನದ ಕಣಿವೆ’ಯ ಕುರಿತ ದೈವೋಕ್ತಿ : ಏನಾಯಿತು? ಜನರೆಲ್ಲರೂ ಮನೆಮಾಳಿಗೆಗಳನ್ನು ಏರಿ ಸಡಗರದಿಂದ ಇರುವುದೇಕೆ? 2 ಊರಿಗೆ ಊರೇ ಆರ್ಭಟಿಸುತ್ತಿರುವಂತಿದೆ ! ಯುದ್ಧದಲ್ಲಿ ಸತ್ತ ನಿಮ್ಮ ಯೋಧರೆಲ್ಲ ಕಾದಾಟದಿಂದ ಮಡಿದವರಲ್ಲ. 3 ನಿಮ್ಮ ಮುಖಂಡರೆಲ್ಲ ಒಟ್ಟಿಗೆ ಪಲಾಯನಗೈದರು; ಒಂದೇ ಒಂದು ಬಾಣವನ್ನು ಬಿಡುವುದಕ್ಕೆ ಮುಂಚೆ ಸೆರೆಹೋದರು. ದೂರಕ್ಕೆ ಪಲಾಯನಗೈದಿದ್ದರೂ ಅವರೆಲ್ಲರೂ ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ. 4 “ಆದ್ದರಿಂದ ನನ್ನ ಕಡೆ ನೋಡಬೇಡಿ. ನನ್ನನ್ನು ಸಂತೈಸಲು ಪ್ರಯತ್ನಿಸಬೇಡಿ. ಸತ್ತುಹೋದ ನನ್ನ ಜನರಿಗಾಗಿ ಕಣ್ಣೀರು ಸುರಿಸುತ್ತಿರುವೆನು” ಎಂದೆ ನಾನು. 5 ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಕಳುಹಿಸಿರುವ ದಿನವಿದು - ದಿವ್ಯದರ್ಶನದ ಕಣಿವೆಯ ದಿನ, ಗಲಿಬಿಲಿಯ ದಿನ, ತುಳಿದಾಟದ ದಿನ, ಭಯಭ್ರಾಂತಿಯ ದಿನ, ಕೋಟೆಕೊತ್ತಲಗಳನ್ನು ಹೊಡೆದುರುಳಿಸುವ ದಿನ. ಕೂಗಾಟವು ಬೆಟ್ಟದಲ್ಲಿ ಮಾರ್ದನಿಸುವ ದಿನ ! 6 ಏಲಾಮಿನ ಸೈನಿಕರು ಬಿಲ್ಲುಬಾಣಗಳನ್ನೂ, ರಥಾಶ್ವಗಳನ್ನೂ ಸಜ್ಜುಗೊಳಿಸಿರುವರು. ಕೀರಿನವರು ಗುರಾಣಿಗಳನ್ನು ಅಣಿಗೊಳಿಸಿರುವರು. 7 ನಿಮ್ಮ ಫಲವತ್ತಾದ ತಗ್ಗುಪ್ರದೇಶಗಳು ರಥಗಳಿಂದ ತುಂಬಿರುವುವು. ಅಶ್ವದಳಗಳು ಪುರದ್ವಾರದ ಬಳಿ ಕಾವಲು ನಿಂತಿರುವುವು. 8 ಜುದೇಯದ ಕೋಟೆ ನೆಲಸಮವಾಯಿತು. ಆಗ ಲೆಬನೋನಿನ ವನಮಂದಿರದ ಕಡೆಗೆ ಕೈಚಾಚಿದಿರಿ. 9 ದಾವೀದನ ಕೋಟೆಯ ಬಿರುಕುಗಳು ಬಹಳವೆಂಬುದನ್ನು ಗಮನಿಸಿದಿರಿ. ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ. 10 ಜೆರುಸಲೇಮಿನ ಮನೆಗಳನ್ನು ಪರೀಕ್ಷಿಸಿದಿರಿ. ಕೋಟೆಯ ಗೋಡೆಗಳನ್ನು ಭದ್ರಪಡಿಸಲು ಆ ಮನೆಗಳನ್ನು ಕೆಡವಿಬಿಟ್ಟಿರಿ. 11 ಎರಡು ಗೋಡೆಗಳ ನಡುವೆ ಹಳೆಯ ಕೊಳದಿಂದ ಹರಿಯುವ ನೀರಿಗಾಗಿ ಜಲಾಶಯವನ್ನು ಕಟ್ಟಿದಿರಿ. ಆದರೆ ಪುರಾತನ ಕಾಲದಿಂದ ನಿಯೋಜಿಸಿ ಇದನ್ನೆಲ್ಲಾ ನಡೆಸಿದಾತನ ಕಡೆಗೆ ಗಮನ ಕೊಡದೆಹೋದಿರಿ. 12 ಎಂದೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆ ದಿನದಂದು ನಿಮಗೆ ಆಜ್ಞಾಪಿಸಿ : “ನೀವು ಅತ್ತು ಪ್ರಲಾಪಿಸಬೇಕು, ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು,” ಎಂದು ಹೇಳಿದರು. 13 ಆದರೆ ನೀವು ಹರ್ಷಾನಂದಗೊಂಡಿರಿ. ದನಕರುಗಳನ್ನು ಕೊಯ್ದಿರಿ, ಮಾಂಸವನ್ನು ಭುಜಿಸಿ ಮದ್ಯಪಾನ ಮಾಡಿದಿರಿ. “ಇಂದೇ ತಿಂದು ಕುಡಿಯೋಣ, ನಾಳೆ ಬರುತ್ತದೆ ಮರಣ,” ಎಂದು ಹೇಳಿಕೊಂಡಿರಿ. 14 ಇಂತಿರಲು, ಸೇನಾಧೀಶ್ವರ ಸರ್ವೇಶ್ವರ ನನ್ನ ಕಿವಿಯಲ್ಲಿ ಉಸುರಿದ್ದೇನೆಂದರೆ : “ಇವರು ಸಾಯುವತನಕ ಇವರಿಗೆ ಪಾಪಕ್ಷಮೆ ದೊರಕುವುದಿಲ್ಲ. ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.” ಮೇಲ್ವಿಚಾರಕನಾದ ಶೆಬ್ನನಿಗೆ ಎಚ್ಚರಿಕೆ 15 ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಹೀಗೆ ನುಡಿದಿದ್ದಾರೆ : “ಹೋಗು, ಅರಮನೆಯ ಮೇಲ್ವಿಚಾರಕ ಶೆಬ್ನ ಎಂಬ ಅಧ್ಯಕ್ಷನಿಗೆ ಹೀಗೆಂದು ಹೇಳು : 16 ನಿನಗೇನು ಕೆಲಸವಿಲ್ಲಿ? ನಿನಗಾರಿಹರಿಲ್ಲಿ? ತೋಡಿಸಿಕೊಂಡಿರುವೆಯಾ ಗೂಡನ್ನಿಲ್ಲಿ? ಗೋರಿಯನ್ನು ಕೊರೆಯಿಸಿಕೊಂಡಿರುವೆಯಾ ಎತ್ತರದ ಬಂಡೆಯಲ್ಲಿ? ಕೆತ್ತಿಸಿಕೊಂಡಿರುವೆಯಾ ನಿನಗೊಂದು ನಿವಾಸವನಿಲ್ಲಿ? 17 ಎಲೈ ಬಲಾಢ್ಯನೇ, ಸರ್ವೇಶ್ವರ ನಿನ್ನನ್ನು ಬಿಗಿಹಿಡಿದು ದೂರಕ್ಕೆಸೆಯುವರು, 18 ಚೆಂಡಿನಂತೆ ಉಂಡೆ ಮಾಡಿ ನಿನ್ನನ್ನು ಗಿರ್ರನೆ ಸುತ್ತಿಸಿ ವಿಸ್ತಾರವಾದ ಬಯಲಿಗೆ ಬಿಸಾಡುವರು. ದಣಿಯ ಮನೆಗೆ ಅಪಮಾನ ತಂದವನೇ, ನೀನು ಸಾಯುವುದು ಅಲ್ಲೇ. 19 ನಿನ್ನನ್ನು ಕೆಲಸದಿಂದ ತೆಗೆದುಬಿಡುವರು, ನಿನ್ನ ಪದವಿಯಿಂದ ತೆಗೆದುಹಾಕುವರು. 20 “ಆ ದಿನದಂದು, ನನ್ನ ದಾಸನೂ ಹಿಲ್ಕಿಯನ ಮಗನೂ ಆದ ಎಲ್ಯಾಕೀಮನನ್ನು ಬರಮಾಡುವೆನು. 21 ನಿನ್ನ ವಸ್ತ್ರವನ್ನು ಅವನಿಗೆ ತೊಡಿಸುವೆನು. ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟುವೆನು. ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಜೆರುಸಲೇಮಿನ ನಿವಾಸಿಗಳಿಗೂ ಜುದೇಯದ ಮನೆತನಕ್ಕೂ ತಂದೆಯಾಗಿರುವನು. 22 ದಾವೀದ ಮನೆತನದ ಅಧಿಕಾರವನ್ನು ಅವನ ಹೆಗಲ ಮೇಲೆ ಹೊರಿಸುವೆನು. ಅವನು ತೆರೆದ ಬಾಗಿಲನ್ನು ಯಾರೂ ಮುಚ್ಚರು; ಅವನು ಮುಚ್ಚಿದ ಬಾಗಿಲನ್ನು ಯಾರೂ ತೆರೆಯರು. 23 ವಸ್ತುಗಳನ್ನು ತಗುಲಿಹಾಕುವ ಮೊಳೆಯಂತೆ ಗಟ್ಟಿಯಾದ ಸ್ಥಳದಲ್ಲಿ ಅವನನ್ನು ಬಿಗಿಯಾಗಿ ನಿಲ್ಲಿಸುವೆನು. ಅಲ್ಲದೆ, ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು.” 24 “ಬಟ್ಟಲು, ಬಿಂದಿಗೆ ಮುಂತಾದ ಪಾತ್ರೆಗಳನ್ನು ಮೊಳೆಗೆ ತಗಲುಹಾಕುವಂತೆ, ತಂದೆಯ ಮಕ್ಕಳು, ಮೊಮ್ಮಕ್ಕಳೆಲ್ಲರು ಅವನಿಗೆ ನೇತುಬೀಳುವರು. 25 ಇದರಿಂದ ಬಿಗಿಯಾಗಿ ಹೊಡೆಯಲಾಗಿದ್ದ ಆ ಮೊಳೆ ಸಡಿಲವಾಗಿ ಕುಸಿದುಬೀಳುವುದು. ಅದಕ್ಕೆ ತಗಲುಹಾಕಿದ್ದ ವಸ್ತುಗಳೆಲ್ಲ ಕಳಚಿಬೀಳುವುವು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಹೇಳಿರುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India