Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 21 - ಕನ್ನಡ ಸತ್ಯವೇದವು C.L. Bible (BSI)


ಬಾಬಿಲೋನಿನ ಪತನ

1 ಕಡಲಡವಿಯ ಕುರಿತು ದೈವೋಕ್ತಿ : ದಕ್ಷಿಣ ಸೀಮೆಯ ನಾಡನ್ನು ಕಸದಂತೆ ಗುಡಿಸುವ ಸುಂಟರಗಾಳಿಯ ಹಾಗೆ, ಅರಣ್ಯದ ಕಡೆಯ ಭಯಂಕರ ನಾಡಿನಿಂದ ಗಂಡಾಂತರ ಬರಲಿದೆ.

2 ಘೋರ ದರ್ಶನವೊಂದು ನನಗೆ ಕಂಡುಬಂತು: ದ್ರೋಹಿ ದ್ರೋಹವೆಸಗುತ್ತಿದ್ದಾನೆ. ಕೊಳ್ಳೆಗಾರ ಕೊಳ್ಳೆಹೊಡೆಯುತ್ತಿದ್ದಾನೆ. ಏಲಾಮೇ ಮುನ್ನುಗ್ಗು ! ಮೇದ್ಯವೇ, ಮುತ್ತಿಗೆ ಹಾಕು ! ಬಾಬಿಲೋನಿನಿಂದ ನಿನಗೊದಗಿದ ಗೋಳಾಟವನ್ನು ನಿಲ್ಲಿಸುತ್ತೇನೆ.

3 ನಾನು ಕಂಡ ಈ ಭೀಕರ ದರ್ಶನದಿಂದ ನನಗೆ ಸೊಂಟ ಮುರಿದಂತಾಗಿದೆ. ಹೆರಿಗೆಯಂಥ ಬೇನೆಯುಂಟಾಗಿದೆ. ಕಿವಿ ಕಿತ್ತುಹೋಗುವಂತಿದೆ. ಕಣ್ಣು ಕರುಡಾಗುವಂತಿದೆ.

4 ಹೃದಯ ಬಡಿದುಕೊಳ್ಳುತ್ತಿದೆ. ಭಯದಿಂದ ಮೈ ನಡುಗುತ್ತಿದೆ. ನಾ ಬಯಸಿದ ಸಂಜೆಯೇ ನನಗೆ ಅಂಜಿಕೆ ತರಬೇಕೆ?

5 ಔತಣ ಸಿದ್ಧವಾಗಿದೆ, ಚಾಪೆ ಹಾಸಿದ್ದಾರೆ. ಅತಿಥಿಗಳು ಭೋಜನ ಮಾಡುತ್ತಾ ಕುಡಿಯುತ್ತಾ ಇದ್ದಾರೆ. ಇದೋ, ಇದ್ದಕ್ಕಿದ್ದಂತೆ ಕೂಗೊಂದು ಕೇಳಿಬರುತ್ತಿದೆ : “ಪ್ರಭುಗಳೇ, ಎದ್ದೇಳಿ, ಗುರಾಣಿಗಳನ್ನು ಅಣಿಗೊಳಿಸಿರಿ.”

6 ಆಗ (ಸರ್ವೇಶ್ವರ ಸ್ವಾಮಿ) ನನಗೆ ಹೀಗೆಂದರು : “ಹೋಗು, ಪಹರೆಯೊಬ್ಬನನ್ನು ಇಡು. ಅವನು ಕಂಡದ್ದನ್ನು ವರದಿಮಾಡಲಿ.

7 ಜೋಡಿಜೋಡಿಯಾಗಿ ಬರುವ ಸವಾರರ ಪಂಕ್ತಿಯನ್ನೂ ಕತ್ತೆಗಳ ಹಾಗೂ ಒಂಟೆಗಳ ಸಾಲನ್ನೂ ನೋಡಿದಾಗ, ಎಚ್ಚರಿಕೆಯಿಂದ ಗಮನಿಸಲಿ !”

8 ಬಳಿಕ ಪಹರೆಯವನು ಸಿಂಹಧ್ವನಿಯಿಂದ : “ಸ್ವಾಮಿ, ಹಗಲೆಲ್ಲಾ ಕಾವಲು ಗೋಪುರದಲ್ಲಿ ನಿಂತಿದ್ದೇನೆ. ರಾತ್ರಿಯಲ್ಲೂ ಕಾವಲುಗೈದಿದ್ದೇನೆ.

9 ಇಗೋ, ಸವಾರರು ಜೋಡಿಜೋಡಿಯಾಗಿ ಬರುತಿಹರು,” ಎಂದು ಕೂಗಿ ಹೇಳುತ್ತಿದ್ದಾನೆ. ಅನಂತರ ಅವನು, “ಬಾಬಿಲೋನ್ ಬಿದ್ದುಹೋಯಿತು. ಅದರ ಪೂಜಾ ವಿಗ್ರಹಗಳೆಲ್ಲ ಒಡೆದು ಬೀದಿಪಾಲಾಗಿವೆ,” ಎಂದನು.

10 ನನ್ನ ಪ್ರಜೆಯೇ, ನನ್ನ ಕಣಜದ ದವಸವೇ, ಬಡಿತಕ್ಕೆ ಈಡಾದ ಜನರೇ, ಇಸ್ರಯೇಲರ ದೇವರಾದ ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯಿಂದ ನಾನು ಕೇಳಿದ್ದನ್ನೇ ತಿಳಿಸುತ್ತಿದ್ದೇನೆ.


ಎದೋಮನ್ನು ಕುರಿತ ಸಂದೇಶ

11 ‘ದೂಮ’ ಕುರಿತ ದೈವೋಕ್ತಿ : “ಪಹರೆಯವನೇ, ರಾತ್ರಿ ಕಳೆಯುವುದು ಯಾವಾಗ? ಪಹರೆಯವನೇ, ಕತ್ತಲು ಕಳೆಯುವುದು ಯಾವಾಗ?” ಎಂಬ ಕೂಗು ಸೇಯಾರಿನಿಂದ ನನಗೆ ಕೇಳಿಬಂತು.

12 ಅದಕ್ಕೆ ಪಹರೆಯವನು, “ಹಗಲು ಬರುತ್ತಿದೆ ಮತ್ತೆ ರಾತ್ರಿಯೂ ಬರುತ್ತದೆ. ಬೇಕಾದರೆ ಆಮೇಲೆ ಬಂದು ವಿಚಾರಿಸಿರಿ,” ಎಂದನು.


ಅರೇಬಿಯ ಕುರಿತ ಸಂದೇಶ

13 ಅರೇಬಿಯ ವಿಷಯವಾದ ದೈವೋಕ್ತಿ : ದೇದಾದಿನ ಜನರೇ, ಒಂಟೆ ಸವಾರರೇ, ಅರೇಬಿಯದ ಮರುಭೂಮಿಯಲ್ಲಿ ಬೀಡು ಬಿಡುವವರೇ,

14 “ಬಾಯಾರಿದವರಿಗೆ ನೀರನ್ನು ಕೊಡಿ. ತೇಮಾ ನಾಡಿನ ನಿವಾಸಿಗಳೇ, ವಲಸೆ ಬಂದವರಿಗೆ ಉಣಲು ಕೊಡಿ.

15 ಅವರೆಲ್ಲರು ಖಡ್ಗದಿಂದ, ಹಿರಿದ ಕತ್ತಿಯಿಂದ, ಹೂಡಿದ ಬಿಲ್ಲಿನಿಂದ, ಯುದ್ಧದ ಬಾಧೆಯಿಂದ ತಪ್ಪಿಸಿಕೊಂಡು ಓಡಿಬಂದಿರುವರು.”

16 ಸರ್ವೇಶ್ವರ ನನಗೆ ಹೀಗೆಂದರು : “ಗುಲಾಮಗಿರಿಯ ವಾಯಿದೆಯ ಪ್ರಕಾರ, ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವ ಗತಿಸಿಹೋಗುವುದು.

17 ಅಲ್ಲಿನ ಬಿಲ್ಲುಗಾರರಲ್ಲಿ ಉಳಿದವರಾಗಲೀ, ಕೇದಾರಿನ ರಣವೀರರಾಗಲೀ, ವಿರಳರಾಗುವರು. ಇಸ್ರಯೇಲರ ದೇವರಾದ ಸರ್ವೇಶ್ವರ ಸ್ವಾಮಿ ನಾನೇ ಇದನ್ನು ನುಡಿದಿದ್ದೇನೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು