ಯೆಶಾಯ 20 - ಕನ್ನಡ ಸತ್ಯವೇದವು C.L. Bible (BSI)ಈಜಿಪ್ಟಿನ ಸುಲಿಗೆ - ಪ್ರವಾದಿಯ ಮುನ್ಸೂಚನೆ 1 ಅಸ್ಸೀರಿಯಾದ ಅರಸನಾದ ಸರ್ಗೋನನು ಕಳುಹಿಸಿದ ದಳಪತಿ, ಫಿಲಿಷ್ಟಿಯರ ಪಟ್ಟಣವಾದ ಅಷ್ಡೋದಿಗೆ ಬಂದು ಅದನ್ನು ಮುತ್ತಿ ಆಕ್ರಮಿಸಿಕೊಂಡನು. 2 ಅದಕ್ಕೆ ಮೂರು ವರ್ಷಗಳಿಗೆ ಮುಂಚೆಯೆ ಆಮೋಚನ ಮಗ ಯೆಶಾಯನಿಗೆ ಸರ್ವೇಶ್ವರ ಮುನ್ಸೂಚನೆಯಾಗಿ ಹೀಗೆಂದು ಹೇಳಿದ್ದರು : “ಎದ್ದೇಳು, ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು, ಕಾಲಿಗೆ ಹಾಕಿರುವ ಕೆರವನ್ನು ಕಳಚು.” ಅಂತೆಯೇ ಯೆಶಾಯನು ದಿಗಂಬರನಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು. 3 ಆಗ ಸರ್ವೇಶ್ವರ : “ನನ್ನ ದಾಸ ಯೆಶಾಯನು ಈಜಿಪ್ಟಿನ ಮತ್ತು ಸುಡಾನಿನ ವಿನಾಶಕ್ಕೆ ಸೋಜಿಗದ ಗುರುತಾಗಿ ಮೂರು ವರ್ಷ ಬಟ್ಟೆಯಿಲ್ಲದೆ ಬರಿಗಾಲಿನಲ್ಲಿ ತಿರುಗಾಡಿದನು. 4 ಅದೇ ಪ್ರಕಾರ ಅಸ್ಸೀರಿಯದ ಅರಸನು ಈಜಿಪ್ಟಿನ ಸೆರೆಯಾಳುಗಳನ್ನೂ ಸುಡಾನಿನ ಕೈದಿಗಳನ್ನೂ - ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರನ್ನೂ ಬಟ್ಟೆಯಿಲ್ಲದೆ ಬೆತ್ತಲೆಯಾಗಿಸಿ, ಬರಿಗಾಲಿನಲ್ಲೇ ಸೆರೆಮನೆಗೆ ನಡೆಯುವಂತೆ ಮಾಡುವನು. ಹೀಗೆ ಈಜಿಪ್ಟಿನ ನಿವಾಸಿಗಳನ್ನು ಮಾನಭಂಗಕ್ಕೆ ಗುರಿಪಡಿಸುವನು. 5 ಸುಡಾನನ್ನು ನೆಚ್ಚಿಕೊಂಡಿದ್ದವರು ಮತ್ತು ಈಜಿಪ್ಟನ್ನು ಕುರಿತು ಕೊಚ್ಚಿಕೊಳ್ಳುತ್ತಿದ್ದವರು ನಾಚಿಕೆಪಟ್ಟು ನಿರಾಶೆಗೊಳ್ಳುವರು. 6 ಆ ದಿನದಂದು (ಫಿಲಿಷ್ಟಿಯದ) ಕರಾವಳಿಯಲ್ಲಿ ವಾಸಿಸುವರು. ‘ಅಯ್ಯೋ ಅಸ್ಸೀರಿಯರ ಅರಸನಿಂದ ನಾವು ಬಿಡುಗಡೆಯಾಗಬೇಕೆಂದು ಯಾರ ಆಶ್ರಯವನ್ನು ನಿರೀಕ್ಷಿಸಿಕೊಂಡಿದ್ದೇವೋ ಅವರಿಗೇ ಈ ಗತಿ ಬಂತಲ್ಲಾ; ಇನ್ನು ನಮ್ಮಂಥವರು ಉದ್ಧಾರವಾಗುವುದು ಹೇಗೆ?’ ಎಂದುಕೊಳ್ಳುವರು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India