ಯೆಶಾಯ 2 - ಕನ್ನಡ ಸತ್ಯವೇದವು C.L. Bible (BSI)ಶಾಶ್ವತ ಶಾಂತಿ 1 ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ : 2 ಸರ್ವೇಶ್ವರನ ಶ್ರೀನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು, ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದು ಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದು ಬರುವುವು. 3 ದೇಶವಿದೇಶಗಳವರು ಬಂದು ಹೇಳುವರು ಹೀಗೆ : “ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನು ನಾವು ಹಿಡಿದು ನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ. 4 ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ ಭರ್ಜಿಗಳನು ಕುಡುಗೋಲುಗಳನ್ನಾಗಿ. ಕತ್ತಿಯ ನೆತ್ತರು ಜನಾಂಗ ಜನಾಂಗದೆದುರಿಗೆ ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ. 5 ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ. ಅಹಂಕಾರಿಗಳ ಪತನ ನಿಶ್ಚಯ 6 ಹೇ ಸರ್ವೇಶ್ವರಾ ಯಕೋಬ ಮನೆತನದವರನ್ನು ನೀವು ಕೈ ಬಿಟ್ಟಿದ್ದೀರಿ. ಏಕೆಂದರೆ ಅವರು ಪೌರಸ್ತ್ಯರಂತೆ ಮಾಟಮಂತ್ರ ಮಾಡುವವರು. ಫಿಲಿಷ್ಟಿಯರಂತೆ ಕಣಿಹೇಳುವವರು, ಅನ್ಯದೇಶಿಯರಂತೆ ಆಚಾರವಿಚಾರಗಳನ್ನು ಅನುಕರಿಸುವವರು ಆಗಿಬಿಟ್ಟಿದ್ದಾರೆ. 7 ನಾಡು ಬೆಳ್ಳಿಬಂಗಾರದಿಂದ ತುಂಬಿಹೋಗಿದೆ. ಜನರ ನಿಧಿನಿಕ್ಷೇಪಗಳಿಗೆ ಮಿತಿಯಿಲ್ಲದಂತಿದೆ. ಎಲ್ಲಾ ಕಡೆ ಅಶ್ವಬಲ ಯಥೇಚ್ಛವಾಗಿದೆ. ರಥಗಳು ಅಪಾರವಾಗಿವೆ. 8 ದೇಶದಲ್ಲಿ ವಿಗ್ರಹಗಳು ತುಂಬಿ ತುಳುಕುತ್ತಿವೆ. ಜನರು ತಮ್ಮ ಕೈಯಿಂದ ಮಾಡಿದ ವಿಗ್ರಹಗಳನ್ನೇ ಪೂಜಿಸುತ್ತಿದ್ದಾರೆ. 9 ಮಾನವನು ತಗ್ಗಿಹೋಗಿದ್ದಾನೆ, ಅಧೋಗತಿಗೆ ಇಳಿದಿದ್ದಾನೆ. ಸ್ವಾಮೀ, ಅವನಿಗೆ ಕ್ಷಮೆ ನೀಡಬೇಡಿ. 10 ಸ್ವಾಮಿಯ ಭಯಂಕರ ಕೋಪಕ್ಕೆ ಅಂಜಿ, ಆ ಮಹೋನ್ನತನ ವೈಭವಕ್ಕೆ ಹೆದರಿ ಬಂಡೆಯ ಗುಹೆಗಳೊಳಗೆ ನುಗ್ಗಿರಿ, ನೆಲದ ಬಿಲಗಳಲ್ಲಿ ಅವಿತುಕೊಳ್ಳಿರಿ. 11 ಜನಸಾಮಾನ್ಯರ ಅಟ್ಟಹಾಸವನ್ನು ಅಡಗಿಸಲಾಗುವುದು, ಪ್ರಮುಖರ ಗರ್ವ ಕಮರಿಹೋಗುವುದು, ಸ್ವಾಮಿ ಮಾತ್ರ ಅಂದು ಉನ್ನತೋನ್ನತವಾಗಿರುವರು. 12 ಸೇನಾಧೀಶ್ವರ ಸರ್ವೇಶ್ವರ ದಿನವೊಂದನ್ನು ಗೊತ್ತುಮಾಡಿದ್ದಾರೆ. ಅಹಂಕಾರದಿಂದ ಉಬ್ಬಿಹೋದವರಿಗೆ, ಉದ್ಧಟತನದಿಂದ ಕೊಬ್ಬಿಹೋದವರಿಗೆ, 13 ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲ ದೇವದಾರು ವೃಕ್ಷಗಳಿಗೆ, ಬಾಷಾನಿನ ಎಲ್ಲಾ ಅಲ್ಲೋನ್ ಮರಗಳಿಗೆ, 14 ಉನ್ನತವಾಗಿರುವ ಮೇರುಪರ್ವತಗಳಿಗೆ, ಎಲ್ಲಾ ಗುಡ್ಡಬೆಟ್ಟಗಳಿಗೆ, 15 ಸಮಸ್ತ ಗುಮ್ಮಟ ಗೋಪುರಗಳಿಗೆ, ಸಮಸ್ತ ಕೋಟೆಕೊತ್ತಲಗಳಿಗೆ, 16 ಎಲ್ಲಾ ದೊಡ್ಡ ದೊಡ್ಡ ಹಡಗುಗಳಿಗೆ, ಎಲ್ಲಾ ಸುಂದರವಾದ ನೌಕೆಗಳಿಗೆ, ಆ ದಿನವು ತಪ್ಪದೆ ಬರುವುದು. 17 ಜನಸಾಮಾನ್ಯರ ಅಟ್ಟಹಾಸ ಕುಗ್ಗಿಹೋಗುವುದು, ಜನಪ್ರಮುಖರ ಅಹಂಕಾರ ತಗ್ಗಿಹೋಗುವುದು; ಸರ್ವೇಶ್ವರ ಮಾತ್ರ ಆ ದಿನದಂದು ಉನ್ನತೋನ್ನತವಾಗಿರುವರು. 18 ವಿಗ್ರಹಗಳು ಸಂಪೂರ್ಣವಾಗಿ ಮಾಯವಾಗುವುವು. 19 ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ಅವಿತುಕೊಳ್ಳುವರು ಜನರು ಕಲ್ಲುಬಂಡೆಗಳ ಗುಹೆಗಳಲ್ಲಿ, ನೆಲದ ಹಳ್ಳಕೊಳ್ಳಗಳಲ್ಲಿ. 20 ಆ ದಿನ ಬಂದಾಗ ಮಾನವರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಬಂಗಾರದ ವಿಗ್ರಹಗಳನ್ನೂ ಇಲಿ ಹೆಗ್ಗಣಗಳ ಬಿಲಗಳಲ್ಲಿ ಬಿಸಾಡುವರು. 21 ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ನುಗ್ಗುವರು ಜನರು ಕಲ್ಲುಬಂಡೆಗಳ ಸಂದುಗೊಂದುಗಳಲ್ಲಿ, ಶಿಲೆಗಳ ಸೀಳುಪಾಳುಗಳಲ್ಲಿ. 22 ನರಮಾನವರಲ್ಲಿ ಇಡದಿರು ಭರವಸೆಯನ್ನು; ಯಾವ ಗಣನೆಗೆ ಬಂದಾನು ಅವನು? ಮೂಗಿನಲ್ಲಿ ಉಸಿರಾಡುವ ಅಲ್ಪಪ್ರಾಣಿ ಅವನು! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India