Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 19 - ಕನ್ನಡ ಸತ್ಯವೇದವು C.L. Bible (BSI)


ಈಜಿಪ್ಟಿಗೆ ಬರಲಿರುವ ದಂಡನೆ

1 ಈಜಿಪ್ಟಿನ ವಿಷಯವಾಗಿ ದೈವೋಕ್ತಿ : ಇಗೋ, ಸರ್ವೇಶ್ವರ ವೇಗವಾಗಿ ಚಲಿಸುವ ಮೇಘಗಳ ಮೇಲೆ ಈಜಿಪ್ಟಿಗೆ ಬರುವರು. ಅವರ ಮುಂದೆ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯ ಕರಗಿ ನೀರಾಗುವುದು.

2 ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಈಜಿಪ್ಟಿನವರಲ್ಲಿ ಒಳಜಗಳವನ್ನು ಎಬ್ಬಿಸುವೆನು. ಅಣ್ಣತಮ್ಮಂದಿರು, ನೆರೆಹೊರೆಯವರು, ನಗರನಗರಗಳು, ರಾಜರಾಜರುಗಳು ಪರಸ್ಪರ ಕಾದಾಡುವರು.

3 ಈಜಿಪ್ಟಿನವರ ಚೈತನ್ಯ ಉಡುಗಿಹೋಗುವುದು. ಅವರ ಯೋಜನೆಗಳು ಭಂಗವಾಗುವುವು. ಜನರು ವಿಗ್ರಹಗಳನ್ನು, ಮಂತ್ರಗಾರರನ್ನು, ಪ್ರೇತವಿಚಾರಕರನ್ನು, ಕಣಿಹೇಳುವವರನ್ನು ಆಶ್ರಯಿಸುವರು.”

4 “ಇದಲ್ಲದೆ ಈಜಿಪ್ಟಿನವರನ್ನು ಕ್ರೂರ ಅರಸನ ವಶಕ್ಕೆ ಒಪ್ಪಿಸುವೆನು. ರಾಜನು ದಬ್ಬಾಳಿಕೆಯಿಂದ ಅವರನ್ನು ಆಳುವನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.”

5 ನೈಲ್ ನದಿಯ ನೀರು ಬತ್ತಿಹೋಗುವುದು. ಅದರ ಪ್ರಭಾವ ಕ್ರಮೇಣ ಒಣಗಿಹೋಗುವುದು.

6 ಕಾಲುವೆಗಳು ನಾರುವುವು. ಈಜಿಪ್ಟಿನ ಉಪನದಿಗಳು ಇಳಿದು ಇಂಗಿಹೋಗುವುವು.

7 ನದಿಯ ತೀರಗಳು ಬರಡಾಗುವುವು. ನದಿಯಲ್ಲಿ ಬಿದ್ದ ಬೀಜಗಳೆಲ್ಲ ಒಣಗಿ ಗಾಳಿಗೆ ತೂರಿಹೋಗುವುವು.

8 ಬೆಸ್ತರು ಕಣ್ಣೀರಿಡುವರು; ಗಾಳ ಹಾಕುವವರು ಗೋಳಿಡುವರು; ಬಲೆ ಬೀಸುವವರು ಸೊರಗಿಹೋಗುವರು.

9 ನಯವಾದ ನಾರುಮಡಿಯನ್ನು ಮತ್ತು ಬಿಳೀ ಬಟ್ಟೆಯನ್ನು ನೇಯುವವರೆಲ್ಲ ಹತಾಶರಾಗುವರು.

10 ನಾಡಿನ ಜವಳಿ ವ್ಯಾಪಾರಿಗಳು, ಕೂಲಿಯಾಳುಗಳು ಚಿಂತಾಕ್ರಾಂತರಾಗುವರು.

11 “ಚೋಯನಿನ ಅಧಿಪತಿಗಳು ಮಂದಮತಿಗಳು. ಫರೋಹನ ಮುಖ್ಯಮಂತ್ರಿಗಳು ಕೊಡುವುದು ಹುಚ್ಚು ಆಲೋಚನೆಗಳನ್ನೇ. ‘ನಾವು ಪುರಾತನ ವಿದ್ವಾಂಸರ ವಂಶಜರು. ರಾಜರ್ಷಿಗಳ ಸಂತತಿಯವರು’ ಎಂದು ನೀವು ಫರೋಹನಿಗೆ ಹೇಳಲು ಸಾಧ್ಯವೇ?

12 ಈಜಿಪ್ಟಿನ ಅರಸನೇ, ನಿನ್ನ ವಿದ್ವಾಂಸರೆಲ್ಲಿ? ಅವರೇ ನಿನಗೆ ತಿಳುವಳಿಕೆ ಕೊಡಲಿ. ಈಜಿಪ್ಟಿನ ವಿರೋಧವಾಗಿ ಸೇನಾಧೀಶ್ವರ ಸರ್ವೇಶ್ವರ ಯೋಚಿಸಿರುವುದನ್ನು ಅವರೇ ನಿನಗೆ ತಿಳಿಯಪಡಿಸಲಿ.

13 ಚೋಯನಿನ ಅಧಿಪತಿಗಳು ಮಂದಮತಿಗಳು. ನೋಫಿನ ಮುಖ್ಯಮಂತ್ರಿಗಳು ಮೋಸಗಾರರು. ಈಜಿಪ್ಟ್ ಜನಾಂಗದ ಮೂಲೆಗಲ್ಲಿನಂತಿದ್ದವರೇ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ.

14 ಸರ್ವೇಶ್ವರ ಅವರ ಮನಸ್ಸಿನಲ್ಲಿ ಚಂಚಲಭಾವವನ್ನು ಮೂಡಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಅತ್ತಿತ್ತ ಓಲಾಡುವ ಪ್ರಕಾರ ಈಜಿಪ್ಟಿನವರು ತಮ್ಮ ಒಂದೊಂದು ಕೆಲಸಕಾರ್ಯದಲ್ಲೂ ಅಸ್ಥಿರರಾಗಿರುವಂತೆ ಮಾಡಿದ್ದಾರೆ.

15 ಹೀಗೆ ಈಜಿಪ್ಟಿಗೆ ತಲೆಯಾಗಲಿ ಬಾಲವಾಗಲಿ, ತಾಳೆಯಾಗಲಿ ತೃಣವಾಗಲಿ ನೆರವಾಗಲು ಸಾಧ್ಯವಿಲ್ಲದಂತಾಗಿದೆ.


ಈಜಿಪ್ಟ್, ಅಸ್ಸೀರಿಯದವರ ಪರಿವರ್ತನೆ

16 ಆ ದಿನದಂದು ಈಜಿಪ್ಟಿನವರು ಹೆಂಗಸರಂತೆ ಅಂಜುಬುರುಕರಾಗುವರು; ಸೇನಾಧೀಶ್ವರ ಸರ್ವೇಶ್ವರ ತಮ್ಮನ್ನು ದಂಡಿಸಲು ಕೈಯೆತ್ತುವಾಗ ಅವರು ಭಯಪಟ್ಟು ನಡುಗುವರು.

17 ಜುದೇಯ ನಾಡು ಈಜಿಪ್ಟಿನವರಿಗೆ ಭಯಂಕರವಾಗಿರುವುದು. ಆ ನಾಡಿನ ಹೆಸರನ್ನು ಕೇಳಿದ್ದೇ ತಡ, ಪ್ರತಿಯೊಬ್ಬನೂ ಬೆಚ್ಚಿಬೀಳುವನು. ಪ್ರತಿಯೊಬ್ಬನೂ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಈಜಿಪ್ಟಿನ ವಿರುದ್ಧ ಮಾಡಿರುವ ಸಂಕಲ್ಪವನ್ನು ತಿಳಿದು ನಿಬ್ಬೆರಗಾಗುವನು.

18 ಆ ದಿನದಂದು ಈಜಿಪ್ಟಿನ ನಾಡಿನಲ್ಲಿ ಐದು ಪಟ್ಟಣಗಳಲ್ಲಿ ಕಾನಾನಿನ (ಹಿಬ್ರು) ಭಾಷೆಯನ್ನಾಡುವ ಜನರು ತುಂಬಿರುವರು. ಅವರು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಶರಣರೆಂದು ಪ್ರಮಾಣ ಮಾಡುವರು. ಆ ಪಟ್ಟಣಗಳಲ್ಲಿ ಒಂದಕ್ಕೆ “ರವಿಪುರ” ಎಂಬ ಹೆಸರಿರುವುದು.

19 ಆ ದಿನದಂದು ಈಜಿಪ್ಟಿನ ನಡುವೆ ಸರ್ವೇಶ್ವರ ಸ್ವಾಮಿಗೆ ಒಂದು ಬಲಿಪೀಠವಿರುವುದು ಮತ್ತು ನಾಡಿನ ಗಡಿಯಲ್ಲಿ ಸ್ವಾಮಿಯ ಸ್ಥಂಭ ಇರುವುದು.

20 ಇವು ಈಜಿಪ್ಟ್ ದೇಶಕ್ಕೆ ಸರ್ವೇಶ್ವರ ಸ್ವಾಮಿಯ ಸಂಕೇತವಾಗಿಯೂ ಸಾಕ್ಷಿಯಾಗಿಯೂ ಇರುವುವು. ಅವರು ತಮ್ಮನ್ನು ಬಾಧಿಸುವವರ ವಿರುದ್ಧ ಸರ್ವೇಶ್ವರ ಸ್ವಾಮಿಗೆ ಮೊರೆಯಿಟ್ಟಾಗ, ಸ್ವಾಮಿಯು ವೀರನಾದ ರಕ್ಷಕನೊಬ್ಬನನ್ನು ಕಳುಹಿಸುವರು. ಆತನು ಆ ಜನರನ್ನು ಬಿಡುಗಡೆಮಾಡಿ ಉದ್ಧರಿಸುವನು.

21 ಸರ್ವೇಶ್ವರ ಸ್ವಾಮಿಯೇ ಈಜಿಪ್ಟಿನವರಿಗೆ ತಿಳಿಯಪಡಿಸುವರು. ಜನರು ಸ್ವಾಮಿಯನ್ನು ಅರಿತುಕೊಂಡು, ಯಜ್ಞನೈವೇದ್ಯಗಳನ್ನು ಕಾಣಿಕೆಯಾಗಿ ಸಮರ್ಪಿಸುವರು, ಹೊತ್ತ ಹರಕೆಗಳನ್ನು ನೆರವೇರಿಸುವರು.

22 ಇದಲ್ಲದೆ ಸರ್ವೇಶ್ವರ ಈಜಿಪ್ಟಿನವರನ್ನು ದಂಡಿಸುವರು, ಗಾಯಗೊಳಿಸಿದರೂ ಗುಣಪಡಿಸುವರು. ಈಜಿಪ್ಟಿನವರು ಸ್ವಾಮಿಯ ಕಡೆಗೆ ತಿರುಗಿಕೊಳ್ಳುವರು. ಸ್ವಾಮಿ ಅವರ ಮೊರೆಯನ್ನು ಆಲಿಸಿ ಅವರನ್ನು ಗುಣಪಡಿಸುವರು.

23 ಆ ದಿನದಂದು ಈಜಿಪ್ಟ್ ಮತ್ತು ಅಸ್ಸೀರಿಯರ ನಡುವೆ ಹೆದ್ದಾರಿ ಇರುವುದು. ಅಸ್ಸೀರಿಯದವರು ಈಜಿಪ್ಟಿಗೂ ಈಜಿಪ್ಟಿನವರು ಅಸ್ಸೀರಿಯಕ್ಕೂ ಸಂಚಾರಮಾಡುವರು. ಈಜಿಪ್ಟಿನವರು ಅಸ್ಸೀರಿಯದವರೊಡನೆ ಸೇರಿ ಸರ್ವೇಶ್ವರ ಸ್ವಾಮಿಯನ್ನು ಆರಾಧಿಸುವರು.

24 ಆ ದಿನದಂದು ಇಸ್ರಯೇಲ್ ಈಜಿಪ್ಟಿನೊಂದಿಗೂ ಅಸ್ಸೀರಿಯದೊಂದಿಗೂ ಸೇರುವುದು. ಈ ಮೂರು ರಾಷ್ಟ್ರಗಳು ಇಡೀ ಜಗಕ್ಕೆ ಆಶೀರ್ವಾದದ ಕೇಂದ್ರವಾಗಿ ಪರಿಣಮಿಸುವುವು.

25 “ನನ್ನ ಪ್ರಜೆಯಾದ ಈಜಿಪ್ಟ್, ನನ್ನ ಕೈಚಳಕದ ಅಸ್ಸೀರಿಯಾ, ನನ್ನ ಸೊತ್ತಾದ ಇಸ್ರಯೇಲ್ ನಿಮಗೆ ಶುಭಮಂಗಳ,” ಎಂದು ಅವುಗಳನ್ನು ಸರ್ವಶಕ್ತ ಸರ್ವೇಶ್ವರ ಸ್ವಾಮಿ ಆಶೀರ್ವದಿಸುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು