Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 17 - ಕನ್ನಡ ಸತ್ಯವೇದವು C.L. Bible (BSI)


ಸಿರಿಯ ಹಾಗೂ ಇಸ್ರಯೇಲಿಗೆ ಬರಲಿರುವ ದಂಡನೆ

1 ದಮಸ್ಕಸ್ ವಿಷಯವಾಗಿ ದೈವೋಕ್ತಿ : “ಇದೋ, ದಮಸ್ಕಸ್ ಊರಾಗಿ ಉಳಿಯದು, ಅದೊಂದು ಹಾಳುದಿಬ್ಬವಾಗುವುದು.

2 ಸಿರಿಯದ ನಗರಗಳೆಲ್ಲ ನಿರ್ಜನ ಪ್ರದೇಶಗಳಾಗಿ ಗೋಮಾಳವಾಗುವುವು. ಅಲ್ಲಿ ದನಕರುಗಳು ನಿರ್ಭಯದಿಂದ ತಂಗುವುವು.

3 ಎಫ್ರಯಿಮಿಗೆ ಕೋಟೆಕೊತ್ತಲಗಳು, ದಮಸ್ಕಸ್ಸಿಗೆ ರಾಜ್ಯಾಡಳಿತವು ಇಲ್ಲದಂತಾಗುವುವು. ಸಿರಿಯದಲ್ಲಿ ಅಳಿದುಳಿದವರು ಅಪಮಾನಕ್ಕೀಡಾಗುವರು,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.

4 “ಆ ದಿನದಂದು ಇಸ್ರಯೇಲಿನ ಕೊಬ್ಬು ಕರಗುವುದು. ಅದರ ಮಹಿಮೆ ಕ್ಷಯಿಸಿಹೋಗುವುದು.

5 ಅದು ಕೊಯ್ದ ಹೊಲದಂತಿರುವುದು, ತೆನೆಕತ್ತರಿಸಿದ ಹುಲ್ಲಿನಂತಿರುವುದು. ಕೂಳೆಯನ್ನೂ ಬಿಡದೆ ಆಯ್ದುಕೊಂಡ ರೆಫಾಯಿಮ್ ಕಣಿವೆಯಂತೆ ಇರುವುದು.

6 ಓಲಿವ್ ಮರದಲ್ಲಿ ಕಾಯಿಯನ್ನು ಉದುರಿಸಿದ ನಂತರ ಅದರ ತುತ್ತತುದಿಯಲ್ಲಿ ಎರಡು ಮೂರೇ ಕಾಯಿಗಳಿರುವುವು: ಅದರ ಫಲಭರಿತ ರೆಂಬೆಗಳಲ್ಲಿ ನಾಲ್ಕೈದೇ ಕಾಯಿಗಳಿರುವುವು. ಅಂತೆಯೇ ಇಸ್ರಯೇಲಿನಲ್ಲಿ ಅಳಿದುಳಿಯುವವರು ಕೆಲವರು ಮಾತ್ರ” ಎನ್ನುತ್ತಾರೆ ಇಸ್ರಯೇಲಿನ ದೇವರಾದ ಸರ್ವೇಶ್ವರ.

7-8 ಆ ದಿನದಂದು ಜನರು ತಮ್ಮ ಕೈಯಿಂದ ಕಟ್ಟಿದ ಬಲಿಪೀಠಗಳನ್ನಾಗಲೀ, ಬೆರಳುಗಳಿಂದ ನಿರ್ಮಿಸಿದ ಆಶೇರಾ ದೇವತೆಯ ಸ್ತಂಭಗಳನ್ನಾಗಲೀ, ಧೂಪವೇದಿಕೆಗಳನ್ನಾಗಲೀ ಪೂಜಿಸದೆ ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ, ಇಸ್ರಯೇಲಿನ ಪರಮಪಾವನ ಸ್ವಾಮಿಯ ಕಡೆ ತಿರುಗಿಕೊಳ್ಳುವರು.

9 ಆ ದಿನದಂದು ನಾಡಿನ ಸುಭದ್ರವಾದ ನಗರಗಳು ನಿರ್ಜನ ಪ್ರದೇಶಗಳಾಗುವುವು. ಇಸ್ರಯೇಲರಿಗೆ ಹೆದರಿ ಅಮೋರ್ಯರು ಮತ್ತು ಹಿವ್ವಿಯರು ಬಿಟ್ಟುಹೋದ ಹಾಳು ನಿವೇಶನಗಳಂತಾಗುವುವು, ನಾಡೆಲ್ಲ ಹಾಳುಬೀಳುವುದು.

10 ಇಸ್ರಯೇಲೇ, ನಿನ್ನ ಉದ್ಧಾರಕನಾದ ದೇವರನ್ನು ನೀನು ಸ್ಮರಿಸಲಿಲ್ಲ. ನಿನಗೆ ಆಶ್ರಯವಿತ್ತ ಪೊರೆಬಂಡೆಯನ್ನು ಮರೆತುಹೋದೆ. ಬದಲಿಗೆ ಅನ್ಯದೇವರ ಆರಾಧನೆಗಾಗಿ ನಿನಗಿಷ್ಟವಾದ ಉದ್ಯಾನವನಗಳನ್ನು ನೆಟ್ಟೆ.

11 ಬೀಜವನ್ನು ನೆಟ್ಟ ದಿನವೇ ಬೇಲಿಕಟ್ಟಿದೆ. ಮಾರನೆಯ ದಿನವೇ ಅದು ಮೊಳೆಯುವಂತೆ ಮಾಡಿದೆ. ಆದರೂ ನಿನಗೆ ಸಿಗುವ ಸುಗ್ಗಿ, ವ್ಯಾಧಿ ಮತ್ತು ಅತೀವ ವ್ಯಥೆಯೇ.


ಶತ್ರುರಾಷ್ಟ್ರಗಳ ಪರಾಜಯ

12 ಸಮುದ್ರದಂತೆ ಭೋರ್ಗರೆಯುವ, ಪ್ರಚಂಡ ಜನಪ್ರವಾಹಗಳಂತೆ ಗರ್ಜಿಸುವ ಪ್ರಬಲ ರಾಷ್ಟ್ರಗಳ ಆರ್ಭಟವನ್ನು ಕೇಳಿ.

13 ಹೌದು, ಪ್ರಚಂಡ ಜಲಪ್ರವಾಹಗಳಂತೆ ಪ್ರಬಲ ರಾಷ್ಟ್ರಗಳು ಆರ್ಭಟಿಸುತ್ತವೆ. ಆದರೆ ದೇವರು ಅವರನ್ನು ಗದರಿಸುವರು. ಅವರು ಬಿರುಗಾಳಿಗೆ ಸಿಕ್ಕಿದ ಬೆಟ್ಟದ ಹೊಟ್ಟಿನಂತೆ, ಸುಂಟರಗಾಳಿಗೆ ಸುತ್ತುವ ಧೂಳಿನಂತೆ ಓಡುವರು.

14 ಬೈಗಿನಲ್ಲಿ ಇಗೋ, ಎಲ್ಲೆಲ್ಲೂ ಭಯ, ಬೆಳಗಾದಾಗ ಅವೆಲ್ಲ ಮಾಯ; ಇದೇ ನಮ್ಮನ್ನು ಸೂರೆಮಾಡುವವರ ಗತಿ, ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು !.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು