Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 16 - ಕನ್ನಡ ಸತ್ಯವೇದವು C.L. Bible (BSI)


ಮೋವಾಬ್ಯರ ದುರ್ಗತಿ

1 ಕಳುಹಿಸಿ ಕುರಿಗಳನು ಕಪ್ಪಕಾಣಿಕೆಯಾಗಿ ದೇಶಾಧಿಪತಿಗೆ, ಕಳುಹಿಸಿ ಮರುಭೂಮಿಯ ಸೆಲಾದಿಂದ ಸಿಯೋನ್ ಪರ್ವತಕೆ.

2 ಮೋವಾಬಿನ ಮಹಿಳೆಯರು ಅರ್ನೊನ್ ನದಿಯ ಹಾಯ್ಗಡಗಳಲಿ, ಅಲೆಯುತಿಹರು ಗೂಡಿಂದ ಹೊರದೂಡಲಾದ ಹಕ್ಕಿಮರಿಗಳ ಪರಿ.

3 ಇಂತೆನ್ನುವರವರು ಯೆಹೂದ ಜನತೆಗೆ : “ನೀಡಿ ಸಲಹೆಯೊಂದನ್ನು ನಮಗೆ, ಕೊಡಿ ನ್ಯಾಯತೀರ್ಪನೆಮಗೆ, ಇರುಳಿನಂತಿರಲಿ ನಿಮ್ಮ ನೆರಳು ಉರಿಬಿಸಿಲೊಳೆಮಗೆ, ನೆಲೆನೀಡಿ ವಲಸಿಗರಿಗೆ, ದೂಡಬೇಡಿ ಅಲೆಯುವವರನು ಬಯಲಿಗೆ.

4 ನೆಲೆನೀಡಿ ಮೋವಾಬ್ ನಾಡಿನಿಂದ ವಲಸೆಬಂದಿಹ ನಮಗೆ, ವಿನಾಶಕರಿಗೆ ವಶವಾಗದಂತೆ ಆಶ್ರಯ ನೀಡಿ ನಮಗೆ, ನಾಡಿನಿಂದ ನಿರ್ಮೂಲವಾಗುವರು ವಿಧ್ವಂಸಕರು, ನಿಂತುಹೋಗುವುವು ನಾಶವಿನಾಶಗಳು, ಅಳಿದುಹೋಗುವರು ತುಳಿದು ಹಾಳುಮಾಡುವವರು.

5 ಸ್ಥಾಪಿತವಾಗುವುದಾಗ ಅಚಲ ಒಲವಿನ ಸಿಂಹಾಸನವು, ಅದನಲಂಕರಿಸುವನು ಪ್ರಾಮಾಣಿಕ ದಾವೀದ ವಂಶಜನು. ದೊರಕಿಸುವನಾತ ನ್ಯಾಯನೀತಿಯನು, ಶೀಘ್ರದಲೆ ನೆರವೇರಿಸುವನು ಸರಿಕಂಡದುದನು.”

6 ಯೆಹೂದ ಜನತೆ ಪೇಳ್ವರವರಿಗೆ : “ನಮ್ಮ ಕಿವಿಗೆ ಬಿದ್ದಿದೆ ಮೋವಾಬ್ಯರ ಮದ, ತಿಳಿದಿದೆ ನಮಗೆ ಅವರ ದುರಹಂಕಾರ, ಅವರ ಒಣ ಡಂಭಾಚಾರ, ಗರ್ವೋದ್ರೇಕ".

7 ಇದಕಾರಣ ಮೋವಾಬ್ಯರೇ ಗೋಳಾಡಲಿ, ಪ್ರಲಾಪಿಸಲಿ ಪ್ರತಿಯೊಬ್ಬನು ಮೋವಾಬಿಗಾಗಿ, ಕೀರ್ ಹರೆಷೆಥಿನ ದೀಪದ್ರಾಕ್ಷಿಯ ಕಡುಬಿಗಾಗಿ, ನೆನೆದು ನರಳಿ ಹಲುಬಲಿ ಅದಕ್ಕಾಗಿ.

8 ನಿಸ್ಸಾರವಾಗಿದೆ ಹೆಷ್ಬೋನಿನ ಹೊಲ, ಸಿಬ್ಮದ ದ್ರಾಕ್ಷಾಲತೆ, ಒಮ್ಮೆ ವ್ಯಾಪಿಸಿತ್ತು ಆ ರಾಜ್ಯದ್ರಾಕ್ಷಿ ಯಜ್ಜೇರಿನವರೆಗೆ, ಹಬ್ಬಿತ್ತದರ ಶಾಖೆ ಮರುಭೂಮಿಗೆ, ಸಮುದ್ರದಾಚೆ, ಮಾಡಿತು ನಾಡಿನೊಡೆಯರನು ಕುಡಿದು ಮತ್ತರಾಗುವಂತೆ.

9 ಎಂದೇ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ, ಕಣ್ಣೀರಿಡುವೆನು ಯಜ್ಜೇರಿನವರ ಸಮೇತ, ತೋಯಿಸುತಿಹೆನು ಹೆಷ್ಬೋನನು, ಎಲ್ಲಾನನು ಕಣ್ಣೀರಿಂದ, ಏಕೆನೆ ಇಲ್ಲವಾಗಿದೆ ಅಲ್ಲಿ ಹಣ್ಣುಹಂಪಲು ಸುಗ್ಗಿಯ ಗೀತ.

10 ತೊಲಗಿದೆ ಹೊಲಗಳಿಂದ ಹರ್ಷಾನಂದ, ಇಲ್ಲವಾಗಿದೆ ತೋಟಗಳಲಿ ಜಯಕಾರದ ನಾದ, ದ್ರಾಕ್ಷಾರಸವನು ತೆಗೆವವರಿಲ್ಲ ಅರಮನೆಗಳಿಂದ, ಎಂತಲೆ ನಿಂತುಹೋಗಿಹುದಲ್ಲಿ ಸುಗ್ಗಿಯ ಗೀತ.

11 ಮೋವಾಬಿನ ನಿಮಿತ್ತ ಮಿಡಿಯುತಿದೆಯೆನ್ನ ಮನ ದುಃಖದಿಂದ, ವೀಣೆಯ ತಂತಿಯಂತೆ ತುಡಿಯುತಿದೆಯೆನ್ನ ಅಂತರಂಗ ಕೀರ್ ಹೆರೆಷಿನ ನಿಮಿತ್ತ.

12 ವ್ಯರ್ಥ, ಬೆಟ್ಟಗುಡ್ಡಗಳಿಗೆ ಮೋವಾಬ್ಯರು ತೀರ್ಥಯಾತ್ರೆಗೈದರೂ, ವ್ಯರ್ಥ, ಪ್ರಾರ್ಥನೆ ಮಾಡಲು ಅವರು ಗರ್ಭಗುಡಿಗೆ ಹೋದರೂ.

13 ಮೋವಾಬ್ಯರ ವಿಷಯವಾಗಿ ಸರ್ವೇಶ್ವರ ಹಿಂದೆ ನುಡಿದ ದೇವೋಕ್ತಿಯಿದೇ :

14 ಸರ್ವೇಶ್ವರ ಇಂತೆನ್ನುತ್ತಾರೆ : “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರ್ಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ಅಗಣ್ಯ ಜನಸಂಖ್ಯೆಯಲ್ಲಿ ಅಳಿದುಳಿಯುವವರು ಕೆಲವೇ ದುರ್ಬಲರು".

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು