Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 14 - ಕನ್ನಡ ಸತ್ಯವೇದವು C.L. Bible (BSI)


ಗಡೀಪಾರಾದವರು ಹಿಂದಿರುಗುವರು

1 ದಯೆತೋರಿಸುವರು ಸರ್ವೇಶ್ವರ ಯಕೋಬ್ಯರಿಗೆ, ಆರಿಸಿಕೊಳ್ಳುವರು ಮತ್ತೆ ಇಸ್ರಯೇಲರನ್ನೆ, ನೆಲೆಗೊಳಿಸುವರವರನ್ನು ತಾಯಿನಾಡಿನಲ್ಲೆ. ಹೊರನಾಡಿಗರು ಕೂಡಿಕೊಳ್ಳುವರು ಅವರೊಡನೆ, ಸೇರಿಕೊಳ್ಳುವರವರು ಯಕೋಬ ಮನೆತನಕ್ಕೆ.

2 ರಾಷ್ಟ್ರಗಳೇ ಇಸ್ರಯೇಲರನ್ನು ಕರೆತಂದು ಸೇರಿಸುವುವು ಸ್ವಂತ ನಾಡಿಗೆ ಸರ್ವೇಶ್ವರನ ಆ ನಾಡಿನಲಿ ದಾಸದಾಸಿಯರನ್ನಾಗಿಸಿಕೊಳ್ಳುವುದು ಇಸ್ರಯೇಲ್ ಮನೆತನವು ಆ ರಾಷ್ಟ್ರಗಳನ್ನೇ. ಸೆರೆಹಿಡಿಯುವರು ತಮ್ಮನ್ನು ಸೆರೆಹಿಡಿದವರನ್ನೇ ಅಧೀನಪಡಿಸುವರು ತಮ್ಮನ್ನು ಹಿಂಸಿಸಿದವರನ್ನೇ.


ಬಾಬಿಲೋನಿನ ಅರಸನ ಪತನ

3 ಸಂಕಟದಿಂದಲೂ ನೋವುನಷ್ಟದಿಂದಲೂ ಕ್ರೂರವಾದ ಬಿಟ್ಟಿಜೀತದಿಂದಲೂ ಸರ್ವೇಶ್ವರ ನಿಮ್ಮನ್ನು ಬಿಡುಗಡೆಮಾಡುವರು. ಆ ದಿನದಂದು ಬಾಬಿಲೋನಿನ ಅರಸನನ್ನು ಮೂದಲಿಸಿ ಈ ಪದ್ಯವನ್ನು ನೀವು ಹಾಡಬೇಕು :

4 ಬಿದ್ದುಹೋದನಿದೊ ವಿಧ್ವಂಸಕ ಸದ್ದಿಲ್ಲದಾಗಿದೆ ಅವನ ಅಟ್ಟಹಾಸದ ಬಿಂಕ.

5 ಮುರಿದಿಹನು ಸರ್ವೇಶ್ವರ ದುರುಳರಾ ಗದೆಯನು ಮುರಿದಿಹನು ಅರಸರ ರಾಜದಂಡವನು.

6 ಏಕೆನೆ, ಎಡೆಬಿಡದೆ ದಂಡಿಸಿದರು ಪ್ರಜೆಗಳನು ಕೋಪೋದ್ರೇಕದಿಂದ ತಡೆಯಿಲ್ಲದೆ ದಬ್ಬಾಳಿಕೆ ನಡೆಸಿದರು ರಾಷ್ಟ್ರಗಳ ಮೇಲೆ ಸಿಟ್ಟಿನಿಂದ.

7 ಕಟ್ಟಕಡೆಗೆ ಶಾಂತಿಯಿಂದ ಸುರಕ್ಷಿತವಾಗಿದೆ ಜಗವೆಲ್ಲ ಹರ್ಷಧ್ವನಿಗೈಯುತ ಹಾಡುತಿಹರು ಜನರೆಲ್ಲ.

8 ನಲಿಯುತಿಹವು ತುರಾಯಿ, ಲೆಬನೋನಿನ ದೇವದಾರು ವೃಕ್ಷಗಳು ಕೂಡಾ, ‘ಮಡಿದು ಹೋದನಿವನು, ಇನ್ನು, ಕಡಿವವರಾರು ನಮ್ಮನು?’ ಎನ್ನುತಾ.

9 ನಿನ್ನ ಸ್ವಾಗತಿಸಲು ಸಡಗರದಿಂದಿದೆ ಪಾತಾಳಲೋಕವು, ಚೇತನಗೊಂಡಿವೆ ಲೋಕಮುಖಂಡರ ಪ್ರೇತಗಳು, ಎದ್ದು ನಿಂತಿಹರು ಸಕಲ ರಾಷ್ಟ್ರಗಳ ಅರಸರುಗಳು.

10 ಇವರೆಲ್ಲರು ಇಂತೆನ್ನುವರು ನಿನಗೆ : ‘ನೀನು ಸಹ ದುರ್ಬಲ ನಾದೆ ನಮ್ಮ ಹಾಗೆ ನೀನೂ ಸರಿಸಮಾನನಾದೆ ನಮಗೆ’.

11 ಇಳಿದಿದೆ ನಿನ್ನ ವೈಭವ, ವೀಣಾನಾದ ಪಾತಾಳಕೆ ನಿನಗೀಗ ಹುಳುಗಳೇ ಹಾಸಿಗೆ, ಕ್ರಿಮಿಗಳೇ ಹೊದಿಕೆ.

12 ಮುಂಜಾನೆಯ ನಕ್ಷತ್ರವೆ, ಉದಯ ಕುಮಾರನೆ, ಆಗಸದಿಂದ ಹೇಗೆ ಬಿದ್ದೆ? ರಾಷ್ಟ್ರಗಳನ್ನು ಗೆದ್ದ ನೀನು, ನೆಲಕ್ಕೆ ಅದು ಹೇಗೆ ಉರುಳಿದೆ?

13 ‘ಹತ್ತಿಹೋಗುವೆನು ನಾನು ಆಕಾಶಮಂಡಲಕೆ ಉತ್ತರದಿಕ್ಕಿನ ಕೊನೆಗಿರುವ ಸುರಗಣ ಪರ್ವತಕ್ಕೆ ಎತ್ತುವೆ ಸಿಂಹಾಸನವನ್ನು ದೇವ ನಕ್ಷತ್ರಗಳ ಮೇಲಕೆ ‘ಕುಳಿತಲ್ಲಿ ರಾಜ್ಯವಾಳುವೆ’ ಎಂದುಕೊಂಡೆ ನಿನ್ನೊಳಗೆ.

14 ‘ಏರುವೆ ಉನ್ನತ ಮೇಘಮಂಡಲದ ಮೇಲಕೆ, ಸರಿಸಮಾನನಾಗುವೆ ಉನ್ನತೋನ್ನತನಿಗೆ’.

15 ಇಂತೆಂದ ನೀನು ದೂಡಲಾಗಿರುವೆ ಪಾತಾಳಕೆ ಅಧೋಲೋಕದ ಅಗಾಧ ಕೂಪಗಳಿಗೆ.

16 ಸತ್ತವರು ದಿಟ್ಟಿಸಿ ನಿನ್ನನು: ‘ಭುವಿಯನು ನಡುಗಿಸಿದವನು, ರಾಜ್ಯಗಳನು ಕದಲಿಸಿದವನು,

17 ನಗರಗಳನು ಕೆಡವಿಸಿದವನು, ನಾಡನು ಕಾಡಾಗಿಸಿದವನು, ಖೈದಿಗಳನು ಬಂಧನದಿಂದ ಬಿಡಿಸಿದವನು ಈತನೇ ಅಲ್ಲವೆ?’ ಎಂದಾಡಿಕೊಳ್ವರು.

18 ಸಂಭ್ರಮದಿ ಸ್ವಂತ ಸಮಾಧಿಗಳಲಿ ನಿರಂತರ ನಿದ್ರಿಸುತಿಹರು ಸಕಲ ರಾಷ್ಟ್ರಗಳ ಅರಸರು, ಸಮಸ್ತ ರಾಜರು.

19 ನಿನ್ನನ್ನಾದರೊ ಕೊಳೆತ ಕಡ್ಡಿಯಂತೆ ಬಿಸಾಡಿಹರು ಕೆಳಕೆ ಗೋರಿಯಿಲ್ಲದ ನಿನ್ನ ಶವ ಈಡಾಗಿದೆ ಪರರ ತುಳಿತಕ್ಕೆ, ಕತ್ತಿ ತಿವಿದ, ಕಲ್ಲುಗುಂಡಿಗೆ ಪಾಲಾದ ಹೆಣಗಳೇ ನಿನ್ನ ಹೊದಿಕೆ.

20 ಸ್ವಂತ ಜನರನೇ ಕೊಂದ ನಿನಗೆ ಸ್ವಂತ ನಾಡನೇ ನಾಶಗೈದ ನಿನಗೆ ಸಿಗದು ರಾಜ್ಯವೈಭವದ ಸಂಸ್ಕಾರ ಗೋರಿಗೆ, ‘ಹೇಳಹೆಸರಿಲ್ಲದ ಗತಿ ದುರುಳರ ಸಂತಾನಕೆ’.

21 ತಲೆಯೆತ್ತಿ ಪೃಥ್ವಿಯನೇ ವಶಪಡಿಸಿಕೊಳ್ಳದಂತೆ, ಧರೆಯ ಮೇಲೆಲ್ಲ ನಗರಗಳನ್ನು ಕಟ್ಟಿಕೊಳ್ಳದಂತೆ, ಸಿದ್ಧಮಾಡಿರಿವನ ಮಕ್ಕಳಿಗೆ ವಧ್ಯಸ್ಥಾನ, ಈತನ ಪಿತಾಪಿತೃಗಳ ಪಾಪಕೃತ್ಯಗಳ ಕಾರಣ.


ಬಾಬಿಲೋನಿನ ವಿನಾಶ

22 ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ನುಡಿಗಳು : “ನಾನವರಿಗೆ ವಿರುದ್ಧವಾಗಿ ಎದ್ದು ನಿರ್ನಾಮಮಾಡುವೆನು, ಬಾಬಿಲೋನಿನ ಹೆಸರನು, ಜನಶೇಷವನು, ಪುತ್ರಪೌತ್ರರನು.

23 ಪರಿವರ್ತಿಸುವೆನಾ ನಾಡನು ಜವುಗು ನೆಲವನ್ನಾಗಿ, ಅಹುದು, ಮುಳ್ಳುಹಂದಿಗಳ ರೊಪ್ಪವನ್ನಾಗಿ, ಗುಡಿಸಿಬಿಡುವೆನು ನಾಶವೆಂಬ ಪೊರಕೆಯಿಂದ ಪೂರ್ತಿಯಾಗಿ".


ಅಸ್ಸೀರಿಯಾದ ದುರ್ಗತಿ

24 ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಪ್ರತಿಜ್ಞೆಯಿದು : “ನೆರವೇರಿಯೇ ತೀರುವುದು ನಾ ಸಂಕಲ್ಪಿಸಿದ್ದು, ಈಡೇರಿಯೇ ತೀರುವುದು ನಾ ಯೋಚಿಸಿದ್ದು.

25 ನಶಿಸಿಬಿಡುವೆನಾ ಅಸ್ಸೀರಿಯರನು ನನ್ನ ನಾಡಿನಲಿ, ತುಳಿದುಬಿಡುವೆನು ಅವರನು ನನ್ನ ಬೆಟ್ಟಗಳಲಿ, ನೀಗುವುದಾಗ ನನ್ನ ಜನರಿಂದ ಅವರು ಹೂಡಿದ ನೊಗವು, ತೊಲಗುವುದಾಗ ಅವರು ಹೊರಿಸಿದ ಹೊರೆಯು.

26 ವಿಶ್ವದ ಬಗ್ಗೆ ನಾ ಮಾಡಿರುವ ಯೋಜನೆಯಿದು, ರಾಷ್ಟ್ರಗಳನ್ನು ದಂಡಿಸಲೆತ್ತಿರುವ ಕೈಯಿದು".

27 ವ್ಯರ್ಥಗೊಳಿಸುವವರಾರು ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ಯೋಜನೆಯನು? ಹಿಂತೆಗೆವವರಾರು ಅವರೆತ್ತಿದ ಕೈಯನು?.


ಫಿಲಿಷ್ಟಿಯರ ವಿನಾಶ

28 ಅರಸ ಆಹಾಜನು ಕಾಲವಾದ ವರುಷದಲಿ ಕೇಳಿಬಂದಿತು ಈ ದೈವೋಕ್ತಿ :

29 “ನಲಿಯದಿರಿ, ಎಲೈ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿಯಿತೆಂದು. ಹಾವು ಸತ್ತರೂ ಅದರ ಮೂಲದಿಂದ ಹುಟ್ಟುವುದು ಕ್ರೂರ ಕಾಳಿಂಗವು, ಅದರ ಮೊಟ್ಟೆಯಿಂದ ಹೊರಬರುವುದು ಹಾರುವ ಘಟಸರ್ಪವು.

30 ಪೋಷಣೆ ಪಡೆಯುವರು ದೀನದಲಿತರು, ನಿರ್ಭಯದಿಂದ ನಿದ್ರಿಸುವರು ದಿಕ್ಕಿಲ್ಲದವರು. ನಿನ್ನ ಸಂತಾನದವರಾದರೋ ಸಾಯುವರು ಕ್ಷಾಮದಿಂದ, ಅಳಿದುಳಿದವರು ಹತರಾಗುವರು ಆ ಘಟಸರ್ಪದಿಂದ.

31 ಪುರದ್ವಾರವೇ, ಗೋಳಾಡು; ಪಟ್ಟಣವೇ, ಬೊಬ್ಬೆಯಿಡು, ಫಿಲಿಷ್ಟಿಯವೇ, ಕರಗಿಹೋಗು, ಉತ್ತರದಿಂದ ಬರುತ್ತಿದೆ ಧೂಮಧೂಳಿ ಆ ದಂಡಿನಲ್ಲಿಲ್ಲ ನೋಡು, ಯಾವ ಹೇಡಿ.

32 ಹೊರನಾಡಿನ ರಾಯಭಾರಿಗಳಿಗೆ ನಮ್ಮ ಉತ್ತರವೇನು? “ಸರ್ವೇಶ್ವರ ಸ್ವಾಮಿ ಸ್ಥಾಪಿಸಿಹರು ಸಿಯೋನನ್ನು, ದೀನದಲಿತರು ಆಶ್ರಯಿಸಿಕೊಳ್ಳುವರು ಅದನ್ನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು