Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 11 - ಕನ್ನಡ ಸತ್ಯವೇದವು C.L. Bible (BSI)


ಶಾಂತಿಯುತ ಸಾಮ್ರಾಜ್ಯ

1 ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.

2 ನೆಲಸುವುದಾತನ ಮೇಲೆ ಜ್ಞಾನವಿವೇಕದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ.

3 ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ.

4 ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.

5 ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ.

6 ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ.

7 ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ.

8 ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈಹಾಕುವುದು ಮೊಲೆಬಿಟ್ಟ ಮಗು ಹಾವಿನ ಬಿಲದ ಒಳಗೆ.

9 ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.


ಸೆರೆಹೋದವರು ಮರಳಿ ಬರುವರು

10 ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿನಿಲಯವು.

11 ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.

12 ಇಸ್ರಯೇಲರಲ್ಲಿ ಸೆರೆಹೋದವರನ್ನು, ಜುದೇಯದಿಂದ ಚದರಿಹೋದವರನ್ನು ಕರೆತರಲು, ಧರೆಯ ಚತುರ್ದಿಕ್ಕುಗಳಿಂದವರನ್ನು ಬರಮಾಡಲು, ರಾಷ್ಟ್ರಗಳಿಗೆ ಗುರುತಾಗಿ ಧ್ವಜವನ್ನು ಆತ ಏರಿಸುವನು.

13 ತೊಲಗುವುದು ಎಫ್ರಯಿಮಿನ ಹೊಟ್ಟೆಕಿಚ್ಚು, ನಿರ್ಮೂಲವಾಗುವುದು ಜುದೇಯದ ವೈರಿಗಳ ಒಳಸಂಚು. ಎಫ್ರಯಿಮ್, ಜುದೇಯವನ್ನು ಮತ್ಸರಿಸದು; ಜುದೇಯ, ಎಫ್ರಯಿಮನ್ನು ವಿರೋಧಿಸದು.

14 ಒಟ್ಟಿಗೆ ಎರಗುವರು ಫಿಲಿಷ್ಟಿಯರ ಮೇಲೆ ಪಶ್ಚಿಮದಲ್ಲಿ; ಜೊತೆಯಾಗಿ ಸೂರೆಮಾಡುವರು ಜನರನ್ನು ಪೂರ್ವದಲ್ಲಿ; ಗೆಲ್ಲುವರು ಎದೋಮ್ ಮೊವಾಬ್ ನಾಡುಗಳನ್ನು; ಅಧೀನವಾಗಿಸುವರು ಅಮೋನ್ಯ ಜನರನ್ನು.

15 ಆತ ಬತ್ತಿಸುವನು ಈಜಿಪ್ಟಿನ ಕೊಲ್ಲಿಯನ್ನು, ಒಣಗಿಸುವನು ಬಿಸಿಗಾಳಿಯಿಂದ ಯೂಫ್ರೆಟಿಸ್ ನದಿಯನ್ನು, ಸೀಳುವನದನ್ನು ಏಳು ತೊರೆಗಳನ್ನಾಗಿ. ಈ ಪರಿ ದಾಟುವರು ಜನರು ಕೆರ ಮೆಟ್ಟಿದವರಾಗಿ.

16 ಈಜಿಪ್ಟನ್ನು ಬಿಟ್ಟು ಬಂದ ಇಸ್ರಯೇಲರಿಗೆ ಮಾರ್ಗವೊಂದು ಸಿದ್ಧವಾಯಿತು ಅಂತೆಯೆ ಸಿದ್ಧವಾಗುವುದು ರಾಜಮಾರ್ಗವೊಂದು ಅಸ್ಸೀರಿಯದಲ್ಲಿ ಅಳಿದುಳಿದ ಜನರಿಗೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು