Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಪ್ರವಾದಿ ಯೆರೆಮೀಯನ ಕಾಲ ಕ್ರಿಸ್ತಪೂರ್ವ 7ನೇ ಶತಮಾನದ ಉತ್ತರಾರ್ಧ ಹಾಗೂ 6ನೇ ಶತಮಾನದ ಪೂರ್ವಾರ್ಧ. ತನ್ನ ಈ ದೀರ್ಘಕಾಲದ ಸೇವಾವಧಿಯಲ್ಲಿ ದೇವಜನರಿಗೂ ಅವರ ನಾಡಿಗೂ ಬಂದೊದಗಲಿದ್ದ ಗಂಡಾಂತರಗಳನ್ನು ಮುಂತಿಳಿಸಬೇಕಾಗಿತ್ತು. ಜನರ ಪಾಪ ಹಾಗೂ ವಿಗ್ರಹಾರಾಧನೆ ಇವೇ ಇದಕ್ಕೆ ಮೂಲ ಕಾರಣವೆಂದು ಎಚ್ಚರಿಕೆ ನೀಡಬೇಕಾಗಿತ್ತು. ಆ ಕೇಡುಗಳೆಲ್ಲವು ಯೆರೆಮೀಯನ ಜೀವನ ಕಾಲದಲ್ಲಿ ಕಾರ್ಯಗತವಾದವು. ಪ್ರಖ್ಯಾತ ಜೆರುಸಲೇಮ್ (ಕ್ರಿ.ಪೂ. 586) ನಾಶವಾಯಿತು. ಬಾಬಿಲೋನಿಯಾದ ಅರಸ ನೆಬೂಕದ್ನೆಚ್ಚರನು ಬಂದು ಅದನ್ನು ಆಕ್ರಮಿಸಿಕೊಂಡನು. ಪವಿತ್ರವಾದ ಮಹಾದೇವಾಲಯ ನೆಲಸಮವಾಯಿತು. ಯೆಹೂದ ಜನತೆ ಸೆರೆಯಾಳಾಗಿ ಬಾಬಿಲೋನಿಗೆ ವಲಸೆ ಹೋಗಬೇಕಾಯಿತು.
ಈ ಅನಾಹುತಗಳ ಮಧ್ಯೆ ಯೆರೆಮೀಯನು ಭವ್ಯ ಭವಿಷ್ಯದ ಆಶ್ವಾಸನೆಯನ್ನು ನೀಡುತ್ತಾನೆ. ದೇವಜನರು ಸ್ವಂತ ನಾಡಿಗೆ ಹಿಂತಿರುಗುವರು. ಅವರ ನಾಡು ಪುನಃ ಉದ್ಧಾರವಾಗುವುದು ಎಂದು ಧೈರ್ಯ ನೀಡುತ್ತಾನೆ.
ಯೆರೆಮೀಯನದು ಸೂಕ್ಷ್ಮ ಮನಸ್ಸು, ಮೃದು ಹೃದಯ, ತನ್ನ ನಾಡಿಗರ ಬಗ್ಗೆ ಅಪಾರ ಪ್ರೀತಿ ಅವನಿಗಿತ್ತು. ಅವರ ಕಿವಿಗೆ ಕಹಿಯಾದ ವಿಷಯಗಳನ್ನು ತಿಳಿಸಲು ಅವನಿಗೆ ಎಷ್ಟು ಮಾತ್ರವು ಇಷ್ಟವಿರಲಿಲ್ಲ. ಆದರೂ ದೇವರ ಆಜ್ಞೆಗೆ ತಲೆಬಾಗಿ ಆ ಕಠಿಣವಾದ ಪ್ರವಾದನೆಗಳನ್ನು ನುಡಿಯಬೇಕಾಯಿತು. ದೇವರ ವಾಕ್ಯ ಅವನ ಹೃದಯದಲ್ಲಿ ಬೆಂಕಿಯಂತೆ ಕುದಿಯುತ್ತಿತ್ತು; ಅದನ್ನು ತಡೆಹಿಡಿಯಲು ಅವನಿಂದ ಆಗುತ್ತಿರಲಿಲ್ಲ. ಕಾಲ ಬರಲಿದೆ, ಆಗ ದೇವರೊಡನೆ ಹೊಸ ಒಡಂಬಡಿಕೆಯನ್ನೇ ಮಾಡಿಕೊಳ್ಳಬೇಕಾಗುವುದು. ಆ ಹೊಸ ಒಪ್ಪಂದವನ್ನು ಕಾರ್ಯರೂಪಕ್ಕೆ ತನ್ನಿ ಎಂದು ಬುದ್ಧಿ ಹೇಳಲು ಬೋಧಕರು ಬೇಕಾಗುವುದಿಲ್ಲ. ಏಕೆಂದರೆ ಅದು ಕಾಗದದ ಮೇಲಲ್ಲ. ಹೃದಯದ ಹಲಗೆಯ ಮೇಲೆ ಲಿಖಿತವಾಗಲಿದೆ (31:31-34). ಈ ಮುಂತಾದ ಮುತ್ತಿನಂತ ಮಾತುಗಳು ಈ ಗ್ರಂಥದಲ್ಲಿವೆ.
ಪರಿವಿಡಿ
1.ಯೆರೆಮೀಯನಿಗೆ ದೇವರಿಂದ ಬಂದ ಪ್ರತ್ಯೇಕ ಕರೆ 1:1-19
2. ಯೋಷೀಯಾ, ಯೆಹೋಯಾಕೀಮ್ ಮತ್ತು ಚಿದ್ಕೀಯ ಎಂಬ ಅರಸರುಗಳ ಕಾಲದಲ್ಲಿ ಮಾಡಲಾದ ಪ್ರವಾದನೆಗಳು 2:1—25:38
3. ಯೆರೆಮೀಯನ ಜೀವನದಲ್ಲಿ ನಡೆದ ಘಟನೆಗಳು 26:1—45:5
4. ರಾಷ್ಟ್ರಗಳಿಗೆ ವಿರುದ್ಧ ಮಾಡಿದ ಪ್ರವಾದನೆಗಳು 46:1—51:64
5. ಜೆರುಸಲೇಮಿನ ಪತನ 52:1-34

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು