Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 9 - ಕನ್ನಡ ಸತ್ಯವೇದವು C.L. Bible (BSI)

1 ನನ್ನ ತಲೆ ಒಂದು ಚಿಲುಮೆಯಾಗಿರಬಾರದಿತ್ತೆ? ನನ್ನ ಕಣ್ಣು ಒಂದು ಒರತೆಯಾಗಿರಬಾರದಿತ್ತೆ? ಆಗ ನನ್ನ ಜನರಲ್ಲಿ ಹತರಾದವರಿಗಾಗಿ ಹಗಲಿರುಳು ಅಳುತ್ತಿದ್ದೆ.

2 ಅಕಟಾ, ದಾರಿಗರು ತಂಗುವ ಗುಡಿಸಲೊಂದು ಕಾಡಿನಲ್ಲಿ ಸಿಗಬಾರದೆ ! ಆಗ ಜನರನ್ನು ತ್ಯಜಿಸಿಬಿಟ್ಟು ನಾನಲ್ಲಿಗೆ ತೆರಳುತ್ತಿದ್ದೆ ! ಅವರೆಲ್ಲರು ವ್ಯಭಿಚಾರಿಗಳು, ದ್ರೋಹಿಗಳ ಗುಂಪೇ ಅಲ್ಲವೆ?

3 ಸರ್ವೇಶ್ವರ : “ಸುಳ್ಳಾಡಲು ಬಿಲ್ಲಿನಂತೆ ನಾಲಿಗೆ ಬಗ್ಗಿಸುತ್ತಾರೆ ಸತ್ಯಕ್ಕೆ ಪ್ರತಿಕೂಲವಾಗಿಯೆ ನಾಡಿನಲ್ಲಿ ಪ್ರಬಲಿಸಿದ್ದಾರೆ ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನಾದರೊ ಅರಿಯದೆ ಇದ್ದಾರೆ.”

4 ನಿಮ್ಮ ನಿಮ್ಮ ಗೆಳೆಯರ ವಿಷಯದಲ್ಲಿ ಎಚ್ಚರಿಕೆಯಾಗಿರಿ ಯಾರೇ ಆಗಲಿ, ತನ್ನ ಸಹೋದರನನ್ನೂ ನಂಬದಿರಲಿ. ಪ್ರತಿಯೊಬ್ಬ ಸೋದರನೂ ವಂಚಿಸುವುದರಲ್ಲಿ ಯಕೋಬನಿಗೆ ಸಮಾನ. ಒಬ್ಬೊಬ್ಬ ಗೆಳೆಯನೂ ತಿರುಗಾಡುತ್ತಾನೆ ಚಾಡಿಹೇಳುತ್ತಾ.

5 ಎಲ್ಲರು ತಂತಮ್ಮ ಗೆಳೆಯರಿಗೆ ಮೋಸಮಾಡುತ್ತಾರೆ ಸತ್ಯವನ್ನು ನುಡಿವುದೇ ಇಲ್ಲ; ನಾಲಿಗೆಗೆ ಸುಳ್ಳನ್ನು ಕಲಿಸಿದ್ದಾರೆ ಆಯಾಸವಾಗುವ ಮಟ್ಟಿಗೂ ಕೆಡಕನ್ನು ಮಾಡುತ್ತಿದ್ದಾರೆ.

6 ‘ನೀನು (ಯೆರೆಮೀಯ) ವಾಸವಾಗಿರುವುದು ಮೋಸಗಾರರ ಮಧ್ಯೆ ಮೋಸಗಾರರಾಗಿರುವುದರಿಂದಲೆ ಅವರು ನನ್ನನ್ನು ಅರಿಯಲೊಲ್ಲರು’ ಎನ್ನುತ್ತಾರೆ ಸರ್ವೇಶ್ವರ.

7 ಹೀಗಿರಲು ಸರ್ವಶಕ್ತರಾದ ಸರ್ವೇಶ್ವರನ ಮಾತನ್ನು ಕೇಳಿ : “ಅಕಟಾ, ನನ್ನ ಜನರ ದ್ರೋಹಕ್ಕೆ ಏನು ಮಾಡಲಿ? ಅವರನ್ನು ಶೋಧಿಸುವೆನು ಪುಟಕ್ಕೆ ಹಾಕಿ !

8 ಅವರ ನಾಲಿಗೆ ಕೊಲ್ಲುವ ಬಾಣ, ಅದು ಆಡುವುದು ಸುಳ್ಳನ್ನೇ ಬಾಯಲ್ಲಿ ಶುಭವೆಂದು ಹೇಳಿದರೂ ಹೃದಯದಲ್ಲಿ ಒಡ್ಡಿದ್ದಾರೆ ಹೊಂಚನ್ನೇ.

9 ಇಂಥವುಗಳಿಗಾಗಿ ನಾನು ಅವರನ್ನು ಹಿಂಸಿಸಬಾರದೆ? ಇಂಥ ಜನಾಂಗದ ಮೇಲೆ ಸೇಡನ್ನು ತೀರಿಸಿಕೊಳ್ಳದಿರುವೆನೆ?”

10 ನಾನು : ಪರ್ವತಗಳಿಗಾಗಿ ಅತ್ತು ಗೋಳಾಡುವೆನು ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು ಅವು ಸುಟ್ಟುಹೋಗಿವೆ, ಯಾರೂ ಅಲ್ಲಿ ಹಾದುಹೋಗರು. ದನಕರುಗಳ ಸದ್ದೂ ಕಿವಿಗೆ ಬೀಳದು ತೊಲಗಿಹೋಗಿವೆ ಮೃಗಪಕ್ಷಿಗಳೂ !

11 ಸರ್ವೇಶ್ವರ : “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”

12 ನಾನು : “ಈ ನಾಡು ಯಾರೂ ಹಾದುಹೋಗದಷ್ಟು ಹಾಳಾಗಿ ಕಾಡಿನಂತೆ ಸುಟ್ಟುಹೋದದ್ದು ಏಕೆ? ಈ ವಿಷಯವನ್ನು ಗ್ರಹಿಸತಕ್ಕ ಜ್ಞಾನಿ ಯಾರು? ಅದನ್ನು ಸರ್ವೇಶ್ವರನ ಬಾಯಿಂದಲೆ ಕೇಳಿ ತಿಳಿಸಬಲ್ಲವನಾರು?”

13 ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ : “ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ.

14 ನನ್ನ ಮಾತನ್ನು ಕೇಳದೆ, ಧರ್ಮಮಾರ್ಗದಲ್ಲಿ ನಡೆಯದೆ, ಹಟಮಾರಿಗಳಂತೆ ಸ್ವೇಚ್ಛಾನುಸಾರ ನಡೆದುಕೊಂಡರು. ತಮ್ಮ ಪೂರ್ವಜರು ಕಲಿಸಿಕೊಟ್ಟ ಹಾಗೆ ಬಾಳ್‍ದೇವತೆಗಳನ್ನು ಹಿಂಬಾಲಿಸಿದರು.

15 ಆದುದರಿಂದ ಈ ಜನರು ಕಹಿಯಾದ ಇಟ್ಟಿಕಾಯನ್ನು ತಿನ್ನುವಂತೆ ಮಾಡುವೆನು; ವಿಷ ಬೆರೆತ ನೀರನ್ನು ಕುಡಿಯುವಂತೆ ಮಾಡುವೆನು.

16 ಇವರಿಗಾಗಲಿ ಇವರ ಪೂರ್ವಜರಿಗಾಗಲಿ ಪರಿಚಯವಿಲ್ಲದ ಜನಾಂಗಗಳ ನಡುವೆ ಇವರನ್ನು ಚದರಿಸಿಬಿಡುವೆನು. ಇವರು ಅಳಿದು ಹಾಳಾಗುವ ತನಕ ಇವರ ಹಿಂದೆ ಖಡ್ಗವನ್ನು ಕಳಿಸುವೆನು.”


ಜೆರುಸಲೇಮಿನವರ ಶೋಕಗೀತೆ

17 ಸರ್ವಶಕ್ತ ಸರ್ವೇಶ್ವರ ಸ್ವಾಮಿಯ ಮಾತು : “ನಡೆಯುತ್ತಿರುವ ಕಾರ್ಯಗಳನ್ನು ಆಲೋಚಿಸಿ ನೋಡಿ ರೋದನಾ ಗಾಯಕಿಯರನ್ನು ಕರೆಯಿಸಿರಿ ಅವರಲ್ಲಿ ಜಾಣೆಯರನ್ನು ಕರೆಯ ಕಳಿಸಿರಿ ಅವರೂ ಬಂದು ಸೇರಲಿ.”

18 ಜನರು : “ಅವರು ತ್ವರೆಯಾಗಿ ಬಂದು ನಮಗೋಸ್ಕರ ಗೋಳೆತ್ತಲಿ ನಮ್ಮ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿವಂತೆ ಮಾಡಲಿ ಕಣ್ಣಿನ ರೆಪ್ಪೆಗಳಿಂದ ನೀರು ಉಕ್ಕಿ ಹರಿವಂತೆ ಮಾಡಲಿ.”

19 ಸಿಯೋನಿನಿಂದ ಕೇಳಿಬಂದ ಪ್ರಲಾಪನೆ : “ಅಯ್ಯೋ ಹಾಳಾದೆವು, ನಮ್ಮ ಮಾನಮರ್ಯಾದೆ ಕಳೆದುಹೋಯಿತು ! ನಾವು ನಮ್ಮ ನಾಡನ್ನೇ ಬಿಟ್ಟು ತೊಲಗಬೇಕಾಗಿ ಬಂದಿತು. (ಶತ್ರುಗಳಿಂದ) ನಮ್ಮ ಮನೆಮಠಗಳು ನೆಲಸಮವಾದವು.”

20 ನಾನು : “ಮಹಿಳೆಯರೇ, ಸರ್ವೇಶ್ವರ ಸ್ವಾಮಿಯ ನುಡಿಯನ್ನು ಕೇಳಿರಿ ಅವರ ಬಾಯಿಂದ ಹೊರಟ ಮಾತಿಗೆ ಕಿವಿ ತೆಗೆಯಿರಿ ನಿಮ್ಮ ಹೆಣ್ಣುಮಕ್ಕಳಿಗೂ ಗೋಳಾಟವನ್ನು ಕಲಿಸಿರಿ ಪ್ರತಿಯೊಬ್ಬಳೂ ತನ್ನ ನೆರೆಯವಳಿಗೆ ಶೋಕಗೀತೆಯನ್ನು ಹೇಳಿಕೊಡಲಿ.

21 ಏಕೆಂದರೆ ಮೃತ್ಯು ನಮ್ಮ ಕಿಟಕಿಗಳನ್ನು ಏರಿಬಂದಿದೆ ನಮ್ಮ ಉಪ್ಪರಿಗೆಗಳೊಳಗೆ ನುಗ್ಗಿಬಿಟ್ಟಿದೆ ಬೀದಿಗಳಲ್ಲಿ ಮಕ್ಕಳೂ ಕಡಿದುಬಿದ್ದರು ಚೌಕಗಳಲ್ಲಿ ಯುವಕರೂ ಇಲ್ಲವಾದರು.

22 ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವುವು ಅವು ಹೊಲ ಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಅರಿಗಳಂತಿರುವುವು - ಈ ಮಾತುಗಳನ್ನು ಸಾರುವಂತೆ ಸರ್ವೇಶ್ವರನಿಂದ ನನಗೆ ಅಪ್ಪಣೆಯಾಯಿತು.”

23 ಸರ್ವೇಶ್ವರ ಸ್ವಾಮಿ : “ಜ್ಞಾನಿ ತನ್ನ ಜ್ಞಾನಕ್ಕಾಗಿ, ಪರಾಕ್ರಮಿ ತನ್ನ ಪರಾಕ್ರಮಕ್ಕಾಗಿ ಐಶ್ವರ್ಯವಂತ ತನ್ನ ಐಶ್ವರ್ಯಕ್ಕಾಗಿ ಹೆಚ್ಚಳಪಡದಿರಲಿ.

24 ಹೆಚ್ಚಳಪಡುವವನು ನನ್ನನ್ನು ತಾನು ತಿಳಿದುಕೊಂಡದ್ದಕ್ಕಾಗಿ ಹೆಚ್ಚಳಪಡಲಿ; ಜಗದಲ್ಲಿ ಅಚಲ ಪ್ರೀತಿಯನ್ನೂ ನ್ಯಾಯನೀತಿಯನ್ನೂ ತೋರ್ಪಡಿಸುವ ಸರ್ವೇಶ್ವರ ನಾನೇ; ನನಗೆ ಪ್ರಿಯವಾದುವು ಪ್ರೀತಿ, ನೀತಿ, ನ್ಯಾಯಗಳೇ. ಇದನ್ನು ಗ್ರಹಿಸಿಕೊಂಡದ್ದಕ್ಕಾಗಿ ಹೆಚ್ಚಳಪಡಲಿ. ಇದು ಸರ್ವೇಶ್ವರನಾದ ನನ್ನ ನುಡಿ.”

25 “ಈಜಿಪ್ಟರು, ಯೆಹೂದ್ಯರು, ಎದೋಮ್ಯರು, ಅಮ್ಮೋನ್ಯರು, ಮೊವಾಬ್ಯರು, ಮುಂದಲೆ ಕೂದಲನ್ನು ಕತ್ತರಿಸಿಕೊಳ್ಳುವ ಅರಣ್ಯವಾಸಿಗಳು, ಅಂತು ದೇಹದಲ್ಲಿ ಮಾತ್ರ ಸುನ್ನತಿಯುಳ್ಳವರು, ಇವರೆಲ್ಲರನ್ನು ದಂಡಿಸುವ ದಿನಗಳು ಬರುತ್ತವೆ.

26 ಏಕೆಂದರೆ ಈ ಎಲ್ಲ ಜನಾಂಗದವರು, ಇಸ್ರಯೇಲ್ ವಂಶದವರು ಕೂಡ, ಹೃದಯದಲ್ಲಿ ಸುನ್ನತಿಯಿಲ್ಲದವರು. ಇದು ಸರ್ವೇಶ್ವರನಾದ ನಾನು ಆಡುವ ಮಾತು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು