ಯೆರೆಮೀಯ 8 - ಕನ್ನಡ ಸತ್ಯವೇದವು C.L. Bible (BSI)1 “ಆ ಕಾಲ ಬಂದಾಗ ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು ಹಾಗು ಜೆರುಸಲೇಮಿನ ನಿವಾಸಿಗಳು ಇವರೆಲ್ಲರ ಎಲುಬುಗಳನ್ನು ಗೋರಿಯಿಂದ ಅಗೆದು ತೆಗೆದುಬಿಡುವರು. 2 ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ, ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು. 3 ಈ ಕೆಟ್ಟ ವಂಶದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು. ಇದು ಸರ್ವೇಶ್ವರನಾದ ನನ್ನ ನುಡಿ.” ಪಾಪ ಮತ್ತು ಪ್ರಾಯಶ್ಚಿತ್ತ 4 ನೀನು ಅವರಿಗೆ ಹೀಗೆ ಹೇಳಬೇಕು : “ಸರ್ವೇಶ್ವರ ಇಂತೆನ್ನುತ್ತಾರೆ : ಬಿದ್ದವರು ಮತ್ತೆ ಏಳುತ್ತಾರಲ್ಲವೆ? ಬಿಟ್ಟುಹೋದವನು ತಿರುಗಿಬರುತ್ತಾನಲ್ಲವೆ? 5 ಈ ಜೆರುಸಲೇಮಿನವರು ಎಂದಿಗೂ ಹಿಂದಿರುಗದಂತೆ ಬಿಟ್ಟುಹೋದದ್ದೇಕೆ? ಮೋಸವನ್ನೇ ಪಟ್ಟಾಗಿ ಹಿಡಿದಿದ್ದಾರೆ. ಹಿಂತಿರುಗಿ ಬರಲೊಲ್ಲರು. 6 ನಾನು ಕಿವಿಗೊಟ್ಟು ಕೇಳಿದೆ. ಅವರು ಸತ್ಯವಾದುದನ್ನು ನುಡಿಯುತ್ತಿರಲಿಲ್ಲ. ಯಾವನೂ ತನ್ನ ಅಕ್ರಮಕ್ಕಾಗಿ ಪಶ್ಚಾತ್ತಾಪಪಟ್ಟು, ‘ಅಯ್ಯೋ ನಾನು ಎಂಥ ಕೆಲಸ ಮಾಡಿಬಿಟ್ಟೆ !’ ಎಂದುಕೊಳ್ಳುತ್ತಿರಲಿಲ್ಲ. ಯುದ್ಧದಲ್ಲಿ ರಭಸವಾಗಿ ಓಡುವ ಕುದುರೆಗಳಂತೆ ಪ್ರತಿಯೊಬ್ಬನೂ ತನ್ನ ತನ್ನ ಮಾರ್ಗದಲ್ಲೆ ದೌಡಾಯಿಸುತ್ತಿದ್ದಾನೆ. 7 ಆಕಾಶದಲ್ಲಿ ಹಾರುವ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ. ಬೆಳವಕ್ಕಿ, ಬಾನಕ್ಕಿ, ಕೊಕ್ಕರೆ ಇವು ತಮ್ಮ ಗಮನಾಗಮನದ ಸಮಯಗಳನ್ನು ತಿಳಿದಿರುತ್ತವೆ. ಆದರೆ ನನ್ನ ಜನರು ಸರ್ವೇಶ್ವರನಾದ ನನ್ನ ನಿಯಮಗಳನ್ನೆ ತಿಳಿಯರು. 8 ‘ನಾವು ಜ್ಞಾನಿಗಳು. ಸರ್ವೇಶ್ವರನ ಧರ್ಮಶಾಸ್ತ್ರ ನಮ್ಮಲ್ಲಿದೆ’ ಎಂದು ನೀವು ಹೇಗೆ ತಾನೇ ಹೇಳಬಲ್ಲಿರಿ? ಧರ್ಮಶಾಸ್ತ್ರಿಗಳ ಸುಳ್ಳು ಲೇಖನಿ ಅದನ್ನು ಸುಳ್ಳನ್ನಾಗಿ ಮಾಡಿದೆ. 9 ಜ್ಞಾನಿಗಳು ನಾಚಿಕೆಪಡುವರು, ನಿಬ್ಬೆರಗಾಗಿ ಬೋನಿಗೆ ಸಿಕ್ಕಿಬೀಳುವರು. ಏಕೆಂದರೆ ಸರ್ವೇಶ್ವರನಾದ ನನ್ನ ಮಾತನ್ನು ಅವರು ನಿರಾಕರಿಸಿದ್ದಾರೆ. ಇದು ತಾನೋ ಅವರ ಜ್ಞಾನ? 10 ಆದುದರಿಂದಲೇ ಇವರ ಹೆಂಡತಿಯರನ್ನು ಅನ್ಯರಿಗೂ ಇವರ ಹೊಲಗದ್ದೆಗಳನ್ನು ಆಕ್ರಮಿಸುವವರಿಗೂ ಕೊಟ್ಟುಬಿಡುವೆನು. ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಅನ್ಯಾಯವಾಗಿ ದೋಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರೂ ಮೋಸಮಾಡುತ್ತಾರೆ. 11 ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ. 12 ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಲಜ್ಜೆಯ ಗಂಧವೂ ಅವರಿಗಿಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ. 13 “ನಾನು ಕೊಯ್ಲಿಗೆ ಕೈಹಾಕಲು ನೋಡಿದೆ. ಆದರೆ ದ್ರಾಕ್ಷೆಯ ಬಳ್ಳಿಗಳಲ್ಲಿ ಹಣ್ಣಿಲ್ಲ, ಅಂಜೂರದ ಮರದಲ್ಲಿ ಫಲವಿಲ್ಲ. ಎಲೆಯೂ ಬಾಡಿಹೋಗಿದೆ. ಪರರ ತುಳಿತಕ್ಕೆ ಈಡಾಗಿ ಇರುವುದು ಕಾಣುತ್ತದೆ. ಇದು ಸರ್ವೇಶ್ವರನಾದ ನನ್ನ ನುಡಿ.” 14 ಜನರು : “ನಾವು ಸುಮ್ಮನೆ ಕುಳಿತಿರುವುದೇಕೆ? ಕೂಡಿಬನ್ನಿ, ಕೋಟೆಕೊತ್ತಲುಗಳುಳ್ಳ ಊರುಗಳನ್ನು ಸೇರಿಕೊಳ್ಳೋಣ. ಅಲ್ಲೆ ನಾಶವಾಗೋಣ. ನಮ್ಮ ದೇವರಾದ ಸರ್ವೇಶ್ವರನಿಗೆ ನಾವು ಪಾಪಮಾಡಿದ್ದರಿಂದ ಅವರು ನಮ್ಮನ್ನು ನಾಶಕ್ಕೆ ಗುರಿಮಾಡಿದ್ದಾರೆ. ವಿಷಬೆರೆತ ನೀರನ್ನು ಕುಡಿಯಲು ಕೊಟ್ಟಿದ್ದಾರೆ. 15 ಸುಖಶಾಂತಿಯನ್ನು ನಿರೀಕ್ಷಿಸಿದೆವು, ಯಾವ ಒಳಿತೂ ಸಿಗಲಿಲ್ಲ. ಸುಕ್ಷೇಮ ಕಾಲವನ್ನು ಎದುರುನೋಡಿದೆವು. ನಮಗೆ ಗಿಟ್ಟಿದ್ದು ಭಯಭ್ರಾಂತಿ ಮಾತ್ರ. 16 ವೈರಿ ಕುದುರೆಗಳ ಬುಸುಗುಟ್ಟುವಿಕೆ ಏಕೆ ಕೇಳಿಬರುತ್ತಿದೆ ದಾನಿನಿಂದ? ನಾಡನ್ನೆ ಕಂಪಿಸುತ್ತಿದೆ ಅವುಗಳ ಕೆನೆತದ ನಾದ. ಶತ್ರುಗಳು ಬಂದೇಬಿಟ್ಟರು ! ನಾಡನ್ನೂ ಅದರಲ್ಲಿ ಇರುವುದೆಲ್ಲವನ್ನೂ, ನಗರವನ್ನೂ ಅದರ ನಿವಾಸಿಗಳನ್ನೂ ನುಂಗಿಯೇ ಬಿಟ್ಟರು !” 17 ಸರ್ವೇಶ್ವರ : “ಇಗೋ, ನಾನು ನಿಮ್ಮ ಮೇಲೆ ಹಾವುಗಳನ್ನು ಬಿಡುವೆನು. ಅವು ಮಾಯಮಂತ್ರಕ್ಕೆ ಬಾಗದ ನಾಗಸರ್ಪಗಳು ! ಅವು ನಿಮ್ಮನ್ನು ಕಚ್ಚದೆ ಬಿಡವು.” ದೇವಜನರಿಗಾಗಿ ಯೆರೆಮೀಯನ ದುಃಖ 18 ಅಯ್ಯೋ, ನಾನು ಮುಕ್ತನಾಗಿಲ್ಲ ದುಃಖದಿಂದ ನನ್ನ ಹೃದಯ ಕುಂದಿಹೋಗಿದೆ ಶೋಕದಿಂದ. 19 ಇದೋ, ದೂರ ನಾಡಿನಿಂದ ಕೇಳಿಬರುತ್ತಿದೆ ನನ್ನ ಪ್ರಜೆಯೆಂಬಾಕೆಯ ಈ ಮೊರೆ : “ಸಿಯೋನಿನಲ್ಲಿ ಇನ್ನು ಸರ್ವೇಶ್ವರನಿಲ್ಲವೊ? ಅದರ ರಾಜನು ಅಲ್ಲಿ ವಾಸವಾಗಿಲ್ಲವೊ?” ಅದಕ್ಕೆ ಸರ್ವೇಶ್ವರ : “ಇವರು ತಮ್ಮ ವಿಗ್ರಹಾರಾಧನೆಯಿಂದ ಅನ್ಯದೇವತೆಗಳ ಶೂನ್ಯರೂಪಗಳಿಂದ ನನ್ನನ್ನು ಕೆಣಕಿದ್ದೇಕೆ?” 20 ಜನರು : “ಸುಗ್ಗಿ ಮುಗಿಯಿತು, ಹಣ್ಣಿನಕಾಲ ಕಳೆಯಿತು. ನಮಗಾದರೊ ರಕ್ಷಣೆ ದೊರಕದೆಹೋಯಿತು.” 21 ನನ್ನ ಪ್ರಜೆಯೆಂಬಾಕೆಯ ವೇದನೆಯಿಂದಲೆ ನಾನು ಅನುಭವಿಸುತ್ತಿರುವೆ ಮನೋಯಾತನೆ. 22 ಗಿಲ್ಯಾದಿನಲ್ಲಿ ಔಷಧವಿಲ್ಲವೆ? ಅಲ್ಲಿ ವೈದ್ಯನು ಸಿಕ್ಕನೆ? ಮತ್ತೇಕೆ ಗುಣವಾಗಲಿಲ್ಲ ನನ್ನ ಜನತೆಗೆ? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India