Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 7 - ಕನ್ನಡ ಸತ್ಯವೇದವು C.L. Bible (BSI)


ದೇವಾಲಯದಲ್ಲಿ ಯೆರೆಮೀಯನಿಗೆ ಬೋಧನೆ

1 ಸರ್ವೇಶ್ವರ ಯೆರೆಮೀಯನಿಗೆ ಹೇಳಿದ ಮಾತು :

2 “ನೀನು ನನ್ನ ಆಲಯದ ಬಾಗಿಲಲ್ಲಿ ನಿಂತು ಈ ವಾಕ್ಯವನ್ನು ಸಾರು - ‘ಸರ್ವೇಶ್ವರ ಸ್ವಾಮಿಗೆ ಅಡ್ಡಬೀಳಲು ಈ ದ್ವಾರಗಳನ್ನು ಪ್ರವೇಶಿಸುವ ಎಲ್ಲ ಯೆಹೂದ್ಯರೇ, ಸರ್ವೇಶ್ವರನ ನುಡಿಯನ್ನು ಕೇಳಿ;

3 ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ : “ನೀವು ನಿಮ್ಮ ನಡತೆಯನ್ನೂ ಕೃತ್ಯಗಳನ್ನೂ ತಿದ್ದುಕೊಳ್ಳಿ. ಹಾಗೆ ಮಾಡಿದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ನೆಲೆಗೊಳಿಸುವೆನು.

4 ‘ಇದು ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, (ಆದುದರಿಂದ ಎಲ್ಲ ಸುಭದ್ರ)’ ಎಂಬ ಮೋಸಕರ ಮಾತುಗಳಲ್ಲಿ ಭರವಸೆ ಇಡಬೇಡಿ.

5 “ನೀವು ನಿಮ್ಮ ನಡೆಯನ್ನೂ ಕೃತ್ಯಗಳನ್ನೂ ಪೂರ್ತಿಯಾಗಿ ತಿದ್ದುಕೊಳ್ಳಿ. ಒಬ್ಬರು ಮತ್ತೊಬ್ಬರೊಡನೆ ನ್ಯಾಯನೀತಿಯಿಂದ ವರ್ತಿಸಿರಿ.

6 ಅನ್ಯರನ್ನಾಗಲಿ, ಅನಾಥರನ್ನಾಗಲಿ, ವಿಧವೆಯರನ್ನೇ ಆಗಲಿ ಶೋಷಣೆಗೆ ಗುರಿಪಡಿಸಬೇಡಿ! ಇಲ್ಲೆಲ್ಲೂ ನಿರ್ದೋಷಿಗಳ ರಕ್ತವನ್ನು ಸುರಿಸಬೇಡಿ. ನಿಮಗೆ ಹಾನಿಕರವಾದ ಅನ್ಯದೇವತಾ ಭಕ್ತಿಯನ್ನು ಬಿಟ್ಟುಬಿಡಿ.

7 ಆಗ ನಾನು ನಿಮ್ಮನ್ನು ಈ ಸ್ಥಳದಲ್ಲೆ ನೆಲೆಗೊಳಿಸುವೆನು. ನಿಮ್ಮ ಪೂರ್ವಜರಿಗೆ ನಾನು ಶಾಶ್ವತವಾಗಿ ದಯಪಾಲಿಸಿದ ಈ ನಾಡಿನಲ್ಲೆ ನೆಲೆಗೊಳಿಸುವೆನು.”

8 ನಿಷ್ಪ್ರಯೋಜಕವಾದ ಹಾಗೂ ಮೋಸದ ಮಾತುಗಳಲ್ಲಿ ನೀವು ಭರವಸೆ ಇಟ್ಟಿದ್ದೀರಿ.

9 ಕಳವು, ಕೊಲೆ, ವ್ಯಭಿಚಾರಗಳನ್ನು ಮಾಡುತ್ತೀರಿ. ಸುಳ್ಳುಸಾಕ್ಷಿ ಹೇಳುತ್ತೀರಿ. ಬಾಳನಿಗೆ ಧೂಪಾರತಿ ಎತ್ತುತ್ತೀರಿ. ಕಂಡು ಕೇಳದ ಅನ್ಯದೇವತೆಗಳನ್ನು ಆರಾಧಿಸುತ್ತೀರಿ.

10 ನನ್ನ ಹೆಸರು ಪಡೆದಿರುವ ಈ ದೇವಾಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು - ‘ನಾವು ಸುರಕ್ಷಿತರು’ ಎನ್ನುತ್ತೀರಿ. ಈ ಎಲ್ಲ ಅಸಹ್ಯಕಾರ್ಯಗಳನ್ನು ನಡೆಸುವುದಕ್ಕೋ ಈ ಸುರಕ್ಷತೆ?

11 ನನ್ನ ಹೆಸರಿನಲ್ಲಿ ಕಟ್ಟಿರುವ ದೇವಾಲಯ ನಿಮ್ಮ ದೃಷ್ಟಿಗೆ ಕಳ್ಳರ ಗುಹೆ ಆಗಿದೆಯೋ? ಹೌದು, ಇದನ್ನೆಲ್ಲ ನಾನೆ ಖುದ್ದಾಗಿ ನೋಡಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.

12 ನಾನು ನನ್ನ ನಾಮವನ್ನು ಮೊದಲು ಪ್ರತಿಷ್ಠಾಪಿಸಿದ ‘ಶಿಲೊ’ ಎಂಬ ಸ್ಥಾನಕ್ಕೆ ಹೋಗಿ ನೋಡಿ. ನನ್ನ ಜನ ಇಸ್ರಯೇಲರ ಅಧರ್ಮದ ನಿಮಿತ್ತ ಆ ಸ್ಥಳಕ್ಕೆ ತಂದ ಗತಿಯನ್ನು ಹೋಗಿ ನೋಡಿ.

13 ನಾನು ತಡಮಾಡದೆ ನುಡಿದ ಮಾತುಗಳನ್ನು ನೀವು ಕೇಳದೆ, ನಿಮ್ಮನ್ನು ಕರೆದ ನನಗೆ ಓಗೊಡದೆ, ಈ ಕೃತ್ಯಗಳನ್ನೆಲ್ಲ ಮಾಡಿದ್ದೀರಿ.

14 ಈ ಕಾರಣ ನನ್ನ ನಾಮಕ್ಕೆ ನೆಲೆಯಾದ ಹಾಗು ನಿಮ್ಮ ಭರವಸೆಗೆ ಆಧಾರವಾದ ಈ ದೇವಾಲಯಕ್ಕೆ, ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ಈ ಸ್ಥಳಕ್ಕೆ ನಾನು ಶಿಲೋಗೆ ಬರಮಾಡಿದ ಗತಿಯನ್ನೇ ಬರಮಾಡುವೆನು.

15 ನಿಮ್ಮ ಬಂಧುಬಳಗದವರನ್ನು ಅಂದರೆ, ಇಡಿ ಎಫ್ರಯಿಮ್ ವಂಶದವರನ್ನು ತೊಲಗಿಸಿಬಿಟ್ಟಂತೆ, ನಿಮ್ಮನ್ನೂ ನನ್ನ ಸನ್ನಿಧಿಯಿಂದ ತೊಲಗಿಸುವೆನು.”


ದಂಡಿಸಿದರೂ ತಿದ್ದುಕೊಳ್ಳದ ಮೊಂಡು ಜನ

16 “ಯೆರೆಮೀಯನೇ, ನೀನಂತು ಈ ಜನರಿಗಾಗಿ ಬೇಡಿಕೊಳ್ಳಬೇಡ. ಇವರ ಪರವಾಗಿ ಮೊರೆ ಇಡಬೇಡ. ಪ್ರಾರ್ಥಿಸಲೂ ಬೇಡ, ನನ್ನ ಬಳಿ ವಿಜ್ಞಾಪಿಸಲೂ ಬೇಡ. ನಾನು ಅದನ್ನು ಕೇಳಲಾರೆ.

17 ಇವರು ಜುದೇಯ ಪಟ್ಟಣಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಮಾಡುವುದನ್ನು ನೀನೆ ನೋಡಿರುವೆ ಅಲ್ಲವೆ?

18 ‘ಗಗನದೊಡತಿ’ ಎಂದು ಇವರು ಕರೆದ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ.

19 ಇವರು ಮಾಡುತ್ತಿರುವ ಕೇಡು ನನಗೋ? ಲಜ್ಜೆಯಿಂದ ಮುಖಮುಚ್ಚಿಕೊಳ್ಳುವಷ್ಟು ಕೇಡನ್ನು ತಮಗೆ ತಾವೇ ತಂದುಕೊಳ್ಳುತ್ತಿದ್ದಾರಲ್ಲವೆ?” ಎನ್ನುತ್ತಾರೆ ಸರ್ವೇಶ್ವರ.

20 “ಸರ್ವೇಶ್ವರನಾದ ನಾನು ಹೇಳುವುದನ್ನು ಗಮನಿಸಿರಿ; ಇಗೋ, ನನ್ನ ಕೋಪವೆಂಬ ರೋಷಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಕಾಡುಮರಗಳ ಮೇಲೂ ಭೂಮಿಯ ಬೆಳೆಯ ಮೇಲೂ ಅದನ್ನು ಕಾರುವೆನು. ಅದು ಆರದೆ ದಹಿಸುವುದು!”

21 ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ ಇದು: “ನೀವು ಅರ್ಪಿಸುವ ದಹನಬಲಿಗಳನ್ನು, ಸಾಧಾರಣ ಯಜ್ಞಬಲಿಗಳೆಂದು ಭಾವಿಸಿ ಅವುಗಳ ಮಾಂಸವನ್ನು ಕೂಡ ನೀವೇ ತಿನ್ನಿರಿ.

22 ನಿಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಬರಮಾಡಿದಾಗ ದಹನಬಲಿಯ ವಿಷಯವಾಗಿಯಾಗಲಿ, ಯಜ್ಞಬಲಿಯ ವಿಷಯವಾಗಿಯಾಗಲಿ ನಾನು ಅವರಿಗೆ ಏನೂ ಹೇಳಲಿಲ್ಲ; ಯಾವ ಕಟ್ಟಳೆಯನ್ನೂ ಕೊಡಲಿಲ್ಲ.

23 ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ.

24 ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು.

25 ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದು ಇದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ.

26 ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ. ನನ್ನ ಆಜ್ಞೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು.”

27 “ಯೆರೆಮೀಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ.

28 ಆದಕಾರಣ ನೀನು ಅವರಿಗೆ - ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದುಹೋಗಿದೆ’ ಎಂದು ಹೇಳು.”


ಕಣಿವೆಯಲ್ಲಿ ಕಲ್ಲಿಗೆ ಆರಾಧನೆ

29 “ಎಲೈ ಜೆರುಸಲೇಮೇ ! ತಲೆಬೋಳಿಸಿಕೊಂಡು ಕೂದಲನ್ನು ಬಿಸಾಡಿಬಿಡು ಬೋಳುಗುಡ್ಡಗಳಲ್ಲಿ ಶೋಕಗೀತೆಯನ್ನು ಹಾಡು. ಏಕೆಂದರೆ ಸರ್ವೇಶ್ವರನಾದ ನಾನು ಕೋಪಗೊಂಡು, ನಿರಾಕರಿಸಿ, ತ್ಯಜಿಸಿಬಿಟ್ಟಿದ್ದೇನೆ ಈ ವಂಶವನ್ನು,”

30 ಸರ್ವೇಶ್ವರನ ನುಡಿ : “ಯೆಹೂದ್ಯರು ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೆ ಮಾಡಿದ್ದಾರೆ. ನನ್ನ ಹೆಸರಿನಿಂದ ಪ್ರಖ್ಯಾತಗೊಂಡ ದೇವಾಲಯದಲ್ಲಿ ತಮ್ಮ ಅಸಹ್ಯವಸ್ತುಗಳನ್ನು ಇಟ್ಟು ಅದನ್ನು ಹೊಲೆಮಾಡಿದ್ದಾರೆ.

31 ತಮ್ಮ ಗಂಡುಹೆಣ್ಣು ಮಕ್ಕಳನ್ನೂ ಆಹುತಿಕೊಡುವುದಕ್ಕೆ ಬೆನ್‍ಹಿನ್ನೋಮ್ ಕಣಿವೆಯಲ್ಲಿನ ತೋಫೆತೆಂಬ ಬಲಿಪೀಠವನ್ನು ಕಟ್ಟಿದ್ದಾರೆ. ಇಂಥ ಕಾರ್ಯವನ್ನು ನಾನು ವಿಧಿಸಿಲ್ಲ. ಅದು ನನ್ನ ಮನಸ್ಸಿಗೂ ಸುಳಿದಿಲ್ಲ.

32 ಆದ್ದರಿಂದ ಇಗೋ, ಆ ಕಣಿವೆಗೆ ತೋಫೆತ್ ಮತ್ತು ಬೆನ್‍ಹಿನ್ನೋಮ್ ಎಂಬ ಹೆಸರುಗಳು ಹೋಗಿ ಸಂಹಾರದ ಕಣಿವೆ ಎಂದು ಕರೆಯಲಾಗುವ ದಿನಗಳು ಬರಲಿವೆ. ಇನ್ನೆಲ್ಲೂ ಸ್ಥಳವಿಲ್ಲವಾಗಿ ಶವಗಳನ್ನು ಆ ತೋಫೆತಿನಲ್ಲಿ ಹೂಣುವರು.

33 ಈ ಜನರ ಹೆಣಗಳು ಆಕಾಶಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವುವು. ಅವುಗಳನ್ನು ಬೆದರಿಸಿ ಓಡಿಸಲು ಯಾರೂ ಇರುವುದಿಲ್ಲ.

34 ಜುದೇಯದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಹರ್ಷಾಡಂಬರಗಳು ಕೇಳಿಬರುವುದಿಲ್ಲ. ವಧೂವರರ ಸೊಲ್ಲನ್ನು ನಿಲ್ಲಿಸಿಬಿಡುವೆನು, ನಾಡಿಗೆ ನಾಡೇ ಹಾಳಾಗುವುದು. ಇದು ಸರ್ವೇಶ್ವರನಾದ ನನ್ನ ನುಡಿ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು