Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 6 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿನ ಸುತ್ತಲು ಶತ್ರುಗಳು

1 ಬೆನ್ಯಮೀನ್ ಕುಲದವರೇ, ಜೆರುಸಲೇಮಿನಿಂದ ವಲಸೆಹೋಗಿರಿ. ತೆಕೋವದಲ್ಲಿ ಕೊಂಬನ್ನೂದಿರಿ. ಬೇತ್‍ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ. ಏಕೆಂದರೆ ಅತಿ ವಿನಾಶಕರವಾದ ವಿಪತ್ತು ಉತ್ತರದಿಂದ ತಲೆದೋರುತ್ತಿದೆ.

2 ಸುಂದರವೂ, ಸೊಂಪಾದ ಹಸಿರುಗಾವಲಿಗೆ ಸಮಾನವೂ ಆದ ಸಿಯೋನ್ ನಗರ ನಾಶವಾಗಲಿದೆ.

3 ವೈರಿಗಳಾದ ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರ ಎದುರಿಗೆ ಹಾಗೂ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು. ಪ್ರತಿಯೊಬ್ಬನೂ ತನಗೆ ಇಷ್ಟಬಂದ ಸ್ಥಳದಲ್ಲೇ ಮೇಯಿಸಿಬಿಡುವನು.

4 ಅವರು : “ಸಿಯೋನಿಗೆ ವಿರುದ್ಧ ಯುದ್ಧಸನ್ನದ್ಧರಾಗಿರಿ. ಏಳಿ, ನಡುಮಧ್ಯಾಹ್ನದಲ್ಲೆ ಅದರ ಮೇಲೆ ನುಗ್ಗುವ. ಅಯ್ಯೋ, ಇದೇನು ಹೊತ್ತುಮೀರಿ ಹೋಗುತ್ತಿದೆ ಅಲ್ಲಾ, ಸಂಜೆಯ ನೆರಳು ಉದ್ದುದ್ದವಾಗುತ್ತಿದೆಯಲ್ಲಾ !

5 ಎದ್ದು ರಾತ್ರಿಯಲ್ಲೆ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ,” ಎಂದುಕೊಳ್ಳುತ್ತಿದ್ದಾರೆ.

6 ಸರ್ವಶಕ್ತನಾದ ಸರ್ವೇಶ್ವರ ಸ್ವಾಮಿ ಹೀಗೆ ಎನ್ನುತ್ತಾರೆ : “ಸಿಯೋನ್ ಸುತ್ತಣ ಮರಗಳನ್ನು ಕಡಿದುಬಿಡಿ. ಜೆರುಸಲೇಮ್ ಎದುರಿಗೆ ದಿಬ್ಬಗಳನ್ನು ಎಬ್ಬಿಸಿರಿ. ನೀವು ದಂಡಿಸಬೇಕಾದ ನಗರ ಇದುವೆ. ದರೋಡೆ ದಬ್ಬಾಳಿಕೆಗಳಿಂದ ಅದು ತುಂಬಿದೆ.

7 ತೊಟ್ಟಿ ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ನಗರ ತನ್ನಲ್ಲಿನ ನೀಚತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ. ಇಲ್ಲಿಂದ ಕೇಳಿಬರುವುದೆಲ್ಲ ಹಿಂಸಾಚಾರದ ಹಾಗೂ ಕೊಳ್ಳೆಯ ಸುದ್ದಿಯೆ. ರೋಗ ರುಜಿನಗಳೂ ಗಾಯಹುಣ್ಣುಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತಿವೆ.

8 ಜೆರುಸಲೇಮ್, ಎಚ್ಚರಿಕೆಯಿಂದ ನಡೆದುಕೊ. ಇಲ್ಲವಾದರೆ ನಾನು ನಿನ್ನನ್ನು ಅಗಲಿಬಿಡುವೆನು. ನಿನ್ನನ್ನು ಪಾಳುಬಿದ್ದ ನಿರ್ಜನ ಪ್ರದೇಶವಾಗಿಸುವೆನು.”


ದಂಗೆಕೋರ ಇಸ್ರಯೇಲ್

9 ಸರ್ವಶಕ್ತರಾದ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದರು : “ಇಸ್ರಯೇಲಿನ ಅಳಿದುಳಿದವರನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯ್ದುಕೊ. ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನಿನ್ನ ಕೈಯನ್ನು ಮತ್ತೆ ರೆಂಬೆಗಳಿಗೆ ಹಾಕು.”

10 ಅದಕ್ಕೆ ನಾನು, “ಅಯ್ಯೋ ! ಯಾರ ಸಂಗಡ ನಾನು ಮಾತಾಡಿ ಅವರು ಗಮನಿಸುವಂತೆ ಮಾಡಲಿ? ಅವರ ಕಿವಿ ಮಂದ . ಅವರು ಕೇಳಿಸಿಕೊಳ್ಳುವುದಿಲ್ಲ . ಸರ್ವೇಶ್ವರ ಆದ ನಿಮ್ಮ ಮಾತು ಎಂದರೆ ಅವರಿಗೆ ತಿರಸ್ಕಾರ. ಅದು ಅವರಿಗೆ ರುಚಿಸುವುದಿಲ್ಲ.

11 ಆದಕಾರಣವೇ ನಿಮ್ಮ ಕೋಪ ನನ್ನಲ್ಲೂ ತುಂಬಿತುಳುಕುತ್ತಿದೆ. ಅದನ್ನು ತಡೆದು ನನಗೆ ಸಾಕಾಗಿದೆ,” ಎಂದೆನು. ಆಗ ಸರ್ವೇಶ್ವರ ನನಗೆ : “ಹಾಗಾದರೆ ಆ ಕೋಪವನ್ನು ಬೀದಿಯಲ್ಲಿನ ಮಕ್ಕಳ ಮೇಲೂ ಯುವಕರ ಕೂಟ಼ಗಳ ಮೇಲೂ ಕಾರಿಬಿಡು. ಗಂಡಹೆಂಡತಿಯರನ್ನೂ ಮುದುಕರನ್ನೂ ವಯೋವೃದ್ಧರನ್ನೂ ಅಪಹರಿಸಲಾಗುವುದು.

12 ಅವರ ಹೆಂಡತಿ, ಮನೆ, ಹೊಲ, ಗದ್ದೆ ಎಲ್ಲವೂ ಅನ್ಯರ ಪಾಲಾಗುವುದು.” “ನಾಡಿನ ನಿವಾಸಿಗಳ ಮೇಲೆ ಕೈಮಾಡುವೆನೆಂಬುದು ಖಚಿತ. ಇದು ಸರ್ವೇಶ್ವರನಾದ ನನ್ನ ನುಡಿ.

13 ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಅನ್ಯಾಯವಾಗಿ ದೋಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರು ಮೋಸಮಾಡುತ್ತಾ ಇದ್ದಾರೆ.

14 ಅವರು, ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಕೇವಲ ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ.

15 ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಅವರಿಗೆ ಲಜ್ಜೆಯ ಗಂಧವೂ ಇಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದರು.


ದೇವರ ಮಾರ್ಗವನ್ನು ತೊರೆದ ಇಸ್ರಯೇಲ್

16 ಸರ್ವೇಶ್ವರ ಸ್ವಾಮಿ ತಮ್ಮ ಜನರಿಗೆ : “ನೀವು ದಾರಿಗಳು ಕೂಡುವ ಸ್ಥಳಗಳಲ್ಲಿ ನಿಂತು ನೋಡಿ. ಸನಾತನ ಮಾರ್ಗಗಳು ಯಾವುವು? ಸನ್ಮಾರ್ಗ ಎಲ್ಲಿದೆ? ಎಂದು ವಿಚಾರಿಸಿರಿ. ಅದರಲ್ಲೆ ಮುನ್ನಡೆಯಿರಿ. ಆಗ ನಿಮಗೆ ಮನನೆಮ್ಮದಿ ದೊರಕುವುದು.” ಆದರೆ ಆ ಜನರು : “ಇಲ್ಲ, ನಾವು ಅದರಲ್ಲಿ ನಡೆಯುವುದೇ ಇಲ್ಲ” ಎಂದರು.

17 ಸರ್ವೇಶ್ವರ ಸ್ವಾಮಿ ಕಾವಲುಗಾರರನ್ನು ನೇಮಿಸಿ, “ಕಹಳೆಯ ಕೂಗನ್ನು ಕೇಳಿ” ಎಂದರು. ಅವರು “ಇಲ್ಲ, ಕೇಳುವುದಿಲ್ಲ” ಎಂದು ಉತ್ತರಿಸಿದರು.

18 ಆದುದರಿಂದ ಸರ್ವೇಶ್ವರ : “ರಾಷ್ಟ್ರಗಳೇ ಆಲಿಸಿ. ನನ್ನ ಜನರಿಗೆ ಸಂಭವಿಸಲಿರುವುದನ್ನು ಗಮನಿಸಿ.

19 ಜಗವೇ ಕೇಳು. ಇದೋ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕೇಡನ್ನು ಬರಮಾಡುವೆನು. ಅವರ ಯೋಜನೆಗಳಿಗೆ ಅದೇ ತಕ್ಕ ಪ್ರತಿಫಲ.

20 ಅವರು ಶೆಬದ ಧೂಪವನ್ನಾಗಲಿ, ದೂರದೇಶದ ಒಳ್ಳೆಯ ಸುಗಂಧವನ್ನಾಗಲಿ ತಂದು ನನಗೆ ಅರ್ಪಿಸುವುದರಿಂದ ನನಗೆ ಏನೂ ಪ್ರಯೋಜನವಿಲ್ಲ. ಅವರು ಒಪ್ಪಿಸುವ ದಹನಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಯಜ್ಞಬಲಿಗಳೂ ನನಗೆ ಇಷ್ಟವಿಲ್ಲ.

21 ಆದಕಾರಣ ಈ ಜನರಿಗೆ ಅಡ್ಡಿಆತಂಕಗಳನ್ನು ಒಡ್ಡುವೆನು. ಹೆತ್ತವರೂ ಮಕ್ಕಳೂ ಎಡವಿಬೀಳುವರು, ನೆಂಟರಿಷ್ಟರೂ ನಾಶವಾಗಿ ಹೋಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”


ಉತ್ತರದಿಂದ ಆಕ್ರಮಣ

22 ಮತ್ತೆ ಸರ್ವೇಶ್ವರ ಸ್ವಾಮಿ, “ಇಗೋ, ಉತ್ತರದಿಂದ ಒಂದು ರಾಷ್ಟ್ರ ಬರುತ್ತಿದೆ. ಅದು ಮಹಾ ಬಲಿಷ್ಠ ರಾಷ್ಟ್ರ. ಜಗದ ಕಟ್ಟಕಡೆಯಿಂದ ಹೊರಟುಬರುತ್ತಿದೆ.

23 ಅವರು ಬಿಲ್ಲನ್ನೂ ಈಟಿಯನ್ನೂ ಹಿಡಿದಿದ್ದಾರೆ. ಅವರು ಕ್ರೂರಿಗಳು, ನಿಷ್ಕರುಣಿಗಳು. ಅವರ ಧ್ವನಿ ಸಮುದ್ರದಂತೆ ಭೋರ್ಗರೆಯುತ್ತಿದೆ. ಕುದುರೆಗಳನ್ನು ಏರಿದ್ದಾರೆ. ಎಲೌ ಸಿಯೋನ್ ನಗರಿಯೇ, ಆ ಶತ್ರುಸೈನ್ಯ ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.”

24 ಜೆರುಸಲೇಮಿನ ಜನರು : “ಈ ಸುದ್ದಿಯನ್ನು ಕೇಳಿದಾಗ ನಮ್ಮ ಕೈಗಳು ಜೋಲುಬಿದ್ದುವು. ಪ್ರಸವವೇದನೆಯಂಥ ಯಾತನೆ ನಮ್ಮನ್ನು ಆವರಿಸಿತು.

25 ಊರ ಹೊರಗೆ ಹೋಗುವಂತಿಲ್ಲ, ದಾರಿಯಲ್ಲಿ ನಡೆಯುವಂತಿಲ್ಲ. ಸುತ್ತಮುತ್ತಲೂ ಶತ್ರುವಿನ ಕತ್ತಿ, ಎಲ್ಲೆಲ್ಲೂ ದಿಗಿಲು ಎಂದರೆ ದಿಗಿಲು!”

26 ಸರ್ವೇಶ್ವರ ಜನರಿಗೆ : “ನನ್ನ ಪ್ರಜೆಯೆಂಬ ಕುವರಿಯೇ, ಗೋಣಿತಟ್ಟನ್ನು ಸುತ್ತಿಕೊ, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡವಳಂತೆ ದುಃಖಪಟ್ಟು ಘೋರವಾಗಿ ಪ್ರಲಾಪಮಾಡು. ಕೊಳ್ಳೆಗಾರ ತಟ್ಟನೆ ನಿನ್ನ ಮೇಲೆ ಬೀಳಲಿದ್ದಾನೆ ಎಂಬುದನ್ನು ಮನದಲ್ಲಿಡು.”

27 ಸರ್ವೇಶ್ವರ ಯೆರೆಮೀಯನಿಗೆ ಹೀಗೆ ಎಂದರು : “ನಿನ್ನನ್ನು ನನ್ನ ಜನವೆಂಬ ಅದುರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ. ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.

28 ಅವರೆಲ್ಲರು ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ತಾಮ್ರ, ಕಬ್ಬಿಣಕ್ಕೆ ಸಮಾನರು, ಎಲ್ಲರೂ ಕೇಡಿಗರು.

29 ತಿದಿ ಬುಸುಬುಸುಗುಟ್ಟುತ್ತದೆ. ಸೀಸ ಉರಿಯಿಂದ ಸುಟ್ಟುಹೋಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ಅವನ ಶ್ರಮವೆಲ್ಲ ವ್ಯರ್ಥ. ಏಕೆಂದರೆ ಕಲ್ಮಷವನ್ನು ಅವನಿಂದ ತೆಗೆಯಲಾಗಲಿಲ್ಲ.

30 ಸರ್ವೇಶ್ವರ ಆದ ನಾನು ಅವರನ್ನು ತಳ್ಳಿಬಿಟ್ಟಿರುವುದರಿಂದ ಅವರು ಕಂದುಬೆಳ್ಳಿ ಎನಿಸಿಕೊಳ್ಳುವರು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು