Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 47 - ಕನ್ನಡ ಸತ್ಯವೇದವು C.L. Bible (BSI)


ಫಿಲಿಷ್ಟಿಯವನ್ನು ಕುರಿತ ವಾಣಿ

1 ಫರೋಹನು ಗಾಜಾ ಊರಿಗೆ ಮುತ್ತಿಗೆ ಹಾಕುವ ಮೊದಲು ಫಿಲಿಷ್ಟಿಯರ ವಿಷಯವಾಗಿ ಪ್ರವಾದಿ ಯೆರೆಮೀಯನಿಗೆ ಸರ್ವೇಶ್ವರನಿಂದ ಕೇಳಿಬಂದ ವಾಣಿ:

2 “ಸರ್ವೇಶ್ವರನ ವಾರ್ತೆ ಇದು: ಇಗೋ, ಬಡಗಲಿಂದ ಪ್ರವಾಹ ಹೊರಡುವುದು ತುಂಬಿತುಳುಕುವ ತೊರೆಯಾಗಿ ಬರುವುದು. ಆಕ್ರಮಿಸುವುದು ನಾಡನ್ನು, ಅದರಲ್ಲಿರುವ ಸಮಸ್ತವನ್ನು. ನಗರವನ್ನು, ಅದರ ನಿವಾಸಿಗಳನ್ನು. ಆಗ ನಾಡಿನವರೆಲ್ಲರೂ ಮೊರೆಯಿಡುವರು ದೇಶದವರೆಲ್ಲರು ಗೋಳಾಡುವರು.

3 ಯುದ್ಧ ಕುದುರೆಗಳೋಟದ ಶಬ್ದಕ್ಕೂ ರಥಗಳ ರಭಸಕ್ಕೂ ಚಕ್ರಗಳ ಚಟಪಟಕ್ಕೂ ಹೆದರಿ ಜೋಲುಬೀಳುವುವು ಹೆತ್ತವರ ಕೈಗಳು. ತಮ್ಮ ಮಕ್ಕಳನ್ನೂ ಹಿಂದಿರುಗಿ ನೋಡದೆ ಹೋಗುವರು.

4 ಆ ದಿನದಲ್ಲಿ ಸೂರೆಯಾಗುವರು ಫಿಲಿಷ್ಟಿಯರೆಲ್ಲರು ನಿರ್ಮೂಲವಾಗುವರು ಟೈರ್-ಸಿಡೋನಿನ ಸಹಾಯಕರಲ್ಲಿ ಅಳಿದುಳಿದವರು. ಸರ್ವೇಶ್ವರನೆ ನಾಶಮಾಡುವನು ಕ್ರೇಟ್ ದ್ವೀಪದಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು.

5 ಗಾಜಾ ಊರು ತಲೆಬೋಳಿಸಿಕೊಂಡಿದೆ ಅಷ್ಕೆಲೋನ್ ಊರು ನಿಶ್ಶಬ್ದವಾಗಿದೆ. ಅನಕಿಮ್ ಬೈಲುನಾಡಿನ ಅವಶೇಷವೇ, ಎಂದಿನವರೆಗೆ ನಿನ್ನನ್ನೇ ಕತ್ತರಿಸಿಕೊಳ್ಳುತ್ತಿರುವೆ !

6 ಎಲೈ, ಸರ್ವೇಶ್ವರನ ಖಡ್ಗವೇ, ಇನ್ನೆಷ್ಟರವರೆಗೆ ವಿಶ್ರಾಂತಿಗೊಳ್ಳದಿರುವೆ? ಓರೆಯಲ್ಲಿ ಅವಿತುಕೊಂಡರು, ಶಾಂತಿಗೊಳ್ಳು, ಸುಮ್ಮನಿರು.

7 ಆ ಖಡ್ಗ ವಿಶ್ರಾಂತಿಗೊಳ್ಳುವುದು ಹೇಗೆ? ಅದಕ್ಕೆ ಸರ್ವೇಶ್ವರನೇ ಆಜ್ಞಾಪಿಸಿದ್ದಾನಲ್ಲವೇ? ಅಷ್ಕೆಲೋನಿನ ಹಾಗು ಕರಾವಳಿಯವರೆಗೆ ಅದಕ್ಕೆ ಕೆಲಸ ವಿಧಿಸಿದ್ದಾನಲ್ಲವೆ?”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು