ಯೆರೆಮೀಯ 4 - ಕನ್ನಡ ಸತ್ಯವೇದವು C.L. Bible (BSI)ಪಶ್ಚಾತ್ತಾಪಕ್ಕೆ ಕರೆ 1 ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ಇಸ್ರಯೇಲಿನ ಜನರೇ, ನೀವು ಹಿಂದಿರುಗುವಿರಾದರೆ ನನ್ನ ಬಳಿಗೆ ಬನ್ನಿ. ಅಸಹ್ಯವಾದ ನಿಮ್ಮ ಮೂರ್ತಿ ಪೂಜಾವಸ್ತುಗಳನ್ನು ನನ್ನ ಕಣ್ಣೆದುರಿನಿಂದ ತೆಗೆದುಬಿಡಿ. ಆಗ ನೀವು ಅತ್ತಿತ್ತ ತೂರಾಡಲಾರಿರಿ. 2 ‘ಸರ್ವೇಶ್ವರ ಸ್ವಾಮಿಯ ಜೀವದಾಣೆ’ ಎಂದು ಸತ್ಯ, ನ್ಯಾಯ, ನೀತಿಗೆ ಅನುಗುಣವಾಗಿ ಪ್ರಮಾಣಮಾಡಿರಿ, ಆಗ ರಾಷ್ಟ್ರಗಳೆಲ್ಲ ನನ್ನಿಂದ ಆಶೀರ್ವಾದ ಪಡೆಯಲು ಆಶಿಸುವರು, ನನ್ನಲ್ಲೇ ಹೆಮ್ಮೆಪಡುವರು.” 3 ಜುದೇಯದವರಿಗೂ ಜೆರುಸಲೇಮಿನವರಿಗೂ ಸರ್ವೇಶ್ವರ ಹೇಳುವುದೇನೆಂದರೆ - “ಪಾಳುಬಿದ್ದ ನಿಮ್ಮ ಹೊಲಗದ್ದೆಗಳನ್ನು ಉತ್ತು ಹದಮಾಡಿ, ಮುಳ್ಳುಗಳ ನಡುವೆ ಬಿತ್ತಬೇಡಿ. 4 ಜುದೇಯದವರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನಾದ ನನಗಾಗಿ ಸುನ್ನತಿಯಾಗಿರಿ. ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲವಾದರೆ ನಿಮ್ಮ ಪಾಪಾಕ್ರಮಗಳ ನಿಮಿತ್ತ ನನ್ನ ಕೋಪಾಗ್ನಿಯು ಭುಗಿಲೆದ್ದು ಆರಿಸಲಾಗದಷ್ಟು ಧಗಧಗಿಸುವುದು.” ಶತ್ರುವಿನಿಂದ ಜುದೇಯದ ಆಕ್ರಮಣ 5 ಜುದೇಯದಲ್ಲಿ ಸಾರಿರಿ; ಜೆರುಸಲೇಮಿನಲ್ಲಿ ಪ್ರಕಟಿಸಿರಿ. ನಾಡಿನಲ್ಲೆಲ್ಲ ಕೊಂಬೂದುತ್ತಾ ಆಜ್ಞಾಪಿಸಿರಿ. ‘ಕೂಡಿಬನ್ನಿ, ಕೋಟೆಕೊತ್ತಲಗಳುಳ್ಳ ಊರುಗಳನ್ನು ಸೇರಿಕೊಳ್ಳೋಣ’ ಎಂದು ಕೂಗಿ ಹೇಳಿರಿ. 6 ಸಿಯೋನಿನ ಕಡೆಗೆ ಧ್ವಜವನ್ನೆತ್ತಿರಿ. ತಡಮಾಡದೆ ವಲಸೆಹೋಗಿರಿ. ಸರ್ವೇಶ್ವರ ಉತ್ತರದಿಂದ ವಿಪತ್ತನ್ನೂ ಘೋರ ನಾಶವನ್ನೂ ಬರಮಾಡುವರು. 7 ಗುಹೆಬಿಟ್ಟು ಹೊರಟುಬರುವ ಸಿಂಹದಂತೆ ರಾಷ್ಟ್ರಗಳ ವಿನಾಶಕನೊಬ್ಬನು ಎದ್ದಿದ್ದಾನೆ; ಹೊರಟು ಬರುತ್ತಿದ್ದಾನೆ. ಅವನು ಜುದೇಯ ನಾಡನ್ನು ಹಾಳುಮಾಡುವನು. ಅದರ ಪಟ್ಟಣಗಳು ನಿರ್ಜನ ಪ್ರದೇಶಗಳಾಗುವುವು. 8 ಈ ನಿಮಿತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಅತ್ತುಗೋಳಾಡಿರಿ. ಸರ್ವೇಶ್ವರ ಸ್ವಾಮಿಯ ಕೋಪ ಅಗ್ನಿಯು ಜುದೇಯವನ್ನು ಬಿಟ್ಟುಹೋಗಿಲ್ಲ. 9 ಸರ್ವೇಶ್ವರ ಸ್ವಾಮಿ ಹೀಗೆಂದರು - “ಆ ದಿನದಂದು ಅರಸರು ಎದೆಗುಂದುವರು, ಅಧಿಪತಿಗಳ ಹೃದಯ ಕುಗ್ಗುವುದು. ಯಾಜಕರು ಸ್ತಬ್ಧರಾಗುವರು; ಪ್ರವಾದಿಗಳು ನಿಬ್ಬೆರಗಾಗುವರು.” 10 ಆಗ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನೀವು ನಿಶ್ಚಯವಾಗಿಯೂ ಈ ಜನರನ್ನು ಹಾಗೂ ಜೆರುಸಲೇಮಿನವರನ್ನು ಮೋಸಗೊಳಿಸಿದ್ದೀರಿ. ‘ನಿಮಗೆ ಸಮಾಧಾನವಾಗುವುದು’ ಎಂದು ಅವರಿಗೆ ಹೇಳಿದಿರಿ, ಆದರೆ ಕತ್ತಿ ಅವರ ಕುತ್ತಿಗೆಗೆ ಬಂದಿದೆ” ಎಂದೆನು. 11 ಆ ದಿನ ಬಂದಾಗ ಈ ಜನರಿಗೂ ಜೆರುಸಲೇಮಿಗೂ ಈ ಮಾತುಗಳನ್ನು ತಿಳಿಸಲಾಗುವುದು; ಬಿಸಿಗಾಳಿ ಒಣಗಾಡಿನ ಗುಡ್ಡಗಳಿಂದ ಬೀಸಿ ದೇವಪ್ರಜೆಯೆಂಬ ಯುವತಿಯ ಮೇಲೆ ಬೀಸುವುದು. ಅದು ಹೊಟ್ಟನ್ನು ತೂರುವುದಕ್ಕೆ ಅಲ್ಲ, ಕಾಳನ್ನು ಶೋಧಿಸುವುದಕ್ಕೆ ಅಲ್ಲ. 12 ಸರ್ವೇಶ್ವರನ ಆಜ್ಞೆಯ ಮೇರೆಗೆ ಬರುವ ಆ ಗಾಳಿ ಬಿರುಸಾಗಿ ಬಡಿಯುವುದು. ತಮ್ಮ ಜನರಿಗೆ ನ್ಯಾಯ ದಂಡನೆಯನ್ನು ಸ್ವಾಮಿ ಸರ್ವೇಶ್ವರನೇ ವಿಧಿಸುವರು. ಜುದೇಯದ ಸುತ್ತಲೂ ಶತ್ರುಗಳು 13 ಮೇಘಗಳೋಪಾದಿಯಲ್ಲಿ ಶತ್ರು ಬರುತ್ತಿರುವುದನ್ನು ನೋಡು. ಅವನ ರಥಗಳು ಬಿರುಗಾಳಿಯಂತೆ ! ಅವನ ಕುದುರೆಗಳು ರಣಹದ್ದುಗಳಂತೆ ! ಅಯ್ಯೋ ನಮಗೆ ಕೇಡು, ಇನ್ನು ನಮ್ಮ ಗತಿ ಮುಗಿಯಿತು ! 14 ಜೆರುಸಲೇಮ್, ನೀನು ತಪ್ಪಿಸಿಕೊಳ್ಳಬೇಕಾದರೆ ನಿನ್ನ ಹೃದಯದಲ್ಲಿರುವ ಕೆಟ್ಟತನವನ್ನು ತೊಳೆದುಬಿಡು. ದುರಾಲೋಚನೆಗಳನ್ನು ನಿನ್ನ ಮನದಲ್ಲಿ ಇನ್ನೆಷ್ಟರವರೆಗೆ ಇಟ್ಟುಕೊಂಡಿರುವೆ? 15 ದಾನ್ ನಗರದಿಂದ ಪ್ರಕಟನೆಯ ಧ್ವನಿ ಕೇಳಿ ಬರುತ್ತದೆ. ಎಫ್ರಯಿಮಿನ ಬೆಟ್ಟದಿಂದ ಕೇಡನ್ನು ಸಾರಲಾಗುತ್ತದೆ. 16 ಇಗೋ ಅವರು ರಾಷ್ಟ್ರಗಳಿಗೆ ಅರುಹಿಸುವ ಸಮಾಚಾರ : ಮುತ್ತಿಗೆ ಹಾಕುವವರು ದೂರದೇಶದಿಂದ ಜೆರುಸಲೇಮಿಗೆ ಬರುವರು. ಜುದೇಯದ ಪಟ್ಟಣಗಳಿಗೆ ವಿರುದ್ಧ ಘೋಷಣೆಗಳನ್ನು ಪ್ರಕಟಿಸುವರು. 17 ಹೊಲ ಕಾಯುವವರಂತೆ ಅದನ್ನು ಸುತ್ತುಗಟ್ಟುವರು. ಏಕೆಂದರೆ ಅದರ ಜನರು ಸರ್ವೇಶ್ವರ ಸ್ವಾಮಿಗೇ ತಿರುಗಿಬಿದ್ದಿದ್ದಾರೆ. ಇದು ಆ ಸ್ವಾಮಿಯ ನುಡಿ. 18 ಜುದೇಯ ನಾಡೇ, ನಿನ್ನ ನಡತೆ ಹಾಗೂ ಕೃತ್ಯಗಳೇ ನಿನಗೆ ಈ ವಿಪತ್ತನ್ನು ಒದಗಿಸಿವೆ. ಇದು ನಿನ್ನ ಪಾಪದ ಪ್ರತಿಫಲ. ನೋಡು ಎಷ್ಟು ಕಹಿಯಾಗಿದೆ; ಹೃದಯ ಇರಿಯುವಂತಿದೆ ! ತನ್ನ ಜನತೆಗಾಗಿ ಯೆರೆಮೀಯನು ಅನುಭವಿಸಿದ ದುಃಖ 19 ಅಯ್ಯೋ, ನನ್ನ ಕರುಳು ಯಾತನೆಯಿಂದ ಕಿತ್ತುಬರುವಂತಿದೆ. ಅಕಟಾ ! ನನ್ನ ಗುಂಡಿಗೆಯ ಪಕ್ಕೆಗಳು ಸೀಳುವಂತಿದೆ, ಹೃದಯ ತಳಮಳಗೊಂಡಿದೆ ! ಇನ್ನು ಬಾಯಿಮುಚ್ಚಿಕೊಂಡಿರಲು ನನ್ನಿಂದಾಗದು; ನನ್ನ ಮನವೇ, ಕಾಳಗದ ಕಹಳೆಯನ್ನೂ ಯುದ್ಧದ ಕೋಲಾಹಲವನ್ನೂ ಕೇಳುತ್ತಿರುವೆ, ಅಲ್ಲವೆ? 20 ನಾಶನದ ಮೇಲೆ ನಾಶನದ ಸುದ್ದಿ, ನಾಡೆಲ್ಲ ಕಾಡಾಯಿತು. ದಿಢೀರೆಂದು ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ತುಂಡುತುಂಡಾದವು ! 21 ಎಷ್ಟರವರೆಗೆ ನಾನು ಯುದ್ಧಪತಾಕೆಗಳನ್ನು ನೋಡುತ್ತಿರಲಿ ! ಯುದ್ಧ ಕಹಳೆಗಳು ಮೊಳಗುವುದನ್ನು ಕೇಳುತ್ತಿರಲಿ ! 22 ಸರ್ವೇಶ್ವರ ಹೀಗೆನ್ನುತ್ತಾರೆ: ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು. ಪೆದ್ದ ಮಕ್ಕಳು, ಬುದ್ಧಿಯಿಲ್ಲದವರು ಕೇಡುಮಾಡುವುದರಲ್ಲಿ ಪ್ರವೀಣರು ಒಳಿತನ್ನು ಮಾಡಲು ಅರಿಯರು ಬರಲಿರುವ ವಿನಾಶದ ದೃಶ್ಯ 23 ನಾನು ಭೂಮಿಯನ್ನು ನೋಡಿದೆ, ಅದು ಬಿಕೋ ಎನ್ನುತ್ತಿತ್ತು. ಆಕಾಶವನ್ನು ದಿಟ್ಟಿಸಿದೆ, ಅದರಲ್ಲಿ ಬೆಳಕೇ ಇರಲಿಲ್ಲ. 24 ಬೆಟ್ಟಗಳನ್ನು ನೋಡಿದೆ, ಅವು ನಡುನಡುಗುತ್ತಿದ್ದವು. ಗುಡ್ಡ ದಿಣ್ಣೆಗಳೂ ಅಲ್ಲೋಲಕಲ್ಲೋಲವಾಗಿದ್ದವು. 25 ಕಣ್ಣೆತ್ತಿ ನೋಡಿದೆ, ಏನಾಶ್ಚರ್ಯ ! ಜನರೊಬ್ಬರೂ ಇಲ್ಲ, ಆಕಾಶದ ಪಕ್ಷಿಗಳೆಲ್ಲವೂ ಕಾಣೆಯಾಗಿದ್ದವು. 26 ಇನ್ನೂ ನೋಡಿದೆ - ಸೊಂಪಾದ ನಾಡು ಈಗ ಸುಡುಗಾಡು ಅಕಟಾ ! ಸರ್ವೇಶ್ವರನ ಮುಂದೆ, ಅವರ ಕೋಪಾಗ್ನಿಯ ಮುಂದೆ ಊರುಗಳೆಲ್ಲವು ಪಾಳುಬಿದ್ದಿದ್ದವು. 27 ಸರ್ವೇಶ್ವರ ಸ್ವಾಮಿ ಹೀಗೆಂದಿದ್ದಾರೆ : ನಾಡೆಲ್ಲ ಬಟ್ಟಬರಿದಾಗುವುದು; ಆದರೆ ನಾನು ಅದನ್ನು ಸಂಪೂರ್ಣವಾಗಿ ಲಯಮಾಡುವುದಿಲ್ಲ. 28 ಲೋಕ ದುಃಖಿಸುವುದು ಆಕಾಶ ಕಪ್ಪಗಾಗುವುದು ಇದು ಸರ್ವೇಶ್ವರ ಆಡಿದ ಮಾತು. ಇದನ್ನು ಬದಲಾಯಿಸುವಂತಿಲ್ಲ. ಇದು ಅವರ ತೀರ್ಮಾನ; ಇದನ್ನು ರದ್ದುಗೊಳಿಸುವಂತಿಲ್ಲ. 29 ರಾಹುತರ ಹಾಗೂ ಬಿಲ್ಲುಗಾರರ ಅಬ್ಬರಕ್ಕೆ ಓಡುತ್ತಿರುವವರು ಪಟ್ಟಣಿಗರೆಲ್ಲರು ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ. ಅತ್ತ ಬಂಡೆಗಳನ್ನು ಹತ್ತುತ್ತಿದ್ದಾರೆ. ಪ್ರತಿಯೊಂದು ಪಟ್ಟಣ ಪಾಳುಬಿದ್ದ ಬೀಡು ಅದರಲ್ಲಿ ಮತ್ತೆ ವಾಸಮಾಡುವವರು ಒಬ್ಬರೂ ಇಲ್ಲ. 30 ಎಲೈ ಜೆರುಸಲೇಮ್, ಸೂರೆಯಾಗುವಾಗ ಏನು ಮಾಡುವೆ? ಪಟ್ಟದ ಬಟ್ಟೆಗಳನ್ನು ಉಟ್ಟುಕೊಂಡು ಚಿನ್ನದ ಒಡವೆಗಳನ್ನು ತೊಟ್ಟುಕೊಂಡು ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೆ ಏನು ಪ್ರಯೋಜನ? ಎಲ್ಲವೂ ವ್ಯರ್ಥ ! ನಿನ್ನ ಮಿಂಡರೇ ನಿನ್ನನ್ನು ತಿರಸ್ಕರಿಸಿ ನಿನ್ನ ಪ್ರಾಣಹುಡುಕುವರು. 31 ಸಿಯೋನ್ ನಗರಿ ಪ್ರಸವವೇದನೆ ಪಡುವವಳಂತೆ ಚೊಚ್ಚಲ ಹೆರಿಗೆಯ ವೇದನೆಯನ್ನು ಅನುಭವಿಸುವವಳಂತೆ ಕಿರಿಚಿಕೊಳ್ಳುವ ಕೂಗನ್ನು ನಾನು ಕೇಳಿದ್ದೇನೆ. ಉಬ್ಬಸಪಡುತ್ತಾ ಎರಡು ಕೈಗಳನ್ನೂ ಚಾಚಿ ‘ಅಯ್ಯೋ ನನಗೆ ಕೇಡು, ಕೊಲೆಗಡುಕನ ಮುಂದೆ ನನ್ನ ಪ್ರಾಣ ಉಡುಗುತ್ತಿದೆ’ ಎಂದು ಅರುಚಿಕೊಳ್ಳುತ್ತಿಹಳು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India