ಯೆರೆಮೀಯ 30 - ಕನ್ನಡ ಸತ್ಯವೇದವು C.L. Bible (BSI)ಬಿಡುಗಡೆಯ ವಾಗ್ದಾನ 1 ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು: 2 “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ - ‘ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲ ಗ್ರಂಥರೂಪವಾಗಿ ಬರೆ. 3 ಇಗೋ, ನಾನು ನನ್ನ ಪ್ರಜೆಯಾದ ಇಸ್ರಯೇಲರನ್ನೂ ಯೆಹೂದ್ಯರನ್ನೂ ಅವರ ದುರವಸ್ಥೆಯಿಂದ ಬಿಡುಗಡೆಮಾಡುವ ದಿನಗಳು ಬರುವುವು. ಆಗ ನಾನು ಅವರನ್ನು ಅವರ ಪೂರ್ವಜರಿಗೆ ಅನುಗ್ರಹಿಸಿದ ನಾಡಿಗೆ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಸರ್ವೇಶ್ವರನಾದ ನನ್ನ ನುಡಿ’.” 4 ಸರ್ವೇಶ್ವರ ಇಸ್ರಯೇಲಿನ ಮತ್ತು ಜುದೇಯದ ವಿಷಯವಾಗಿ ಈ ಮಾತುಗಳನ್ನು ಹೇಳಿದರು: 5 “ಸರ್ವೇಶ್ವರ ಹೀಗೆನ್ನುತ್ತಾರೆ: ಕೇಳಿಸಿದೆ ಭಯದಿಂದ ಕೂಡಿದ ಶಬ್ದ ಹೌದು, ಅದು ಕೂಡಿದೆ ಭೀತಿಯಿಂದ, ಶಾಂತಿಯಿಂದಲ್ಲ. 6 ಗಂಡಸು ಪ್ರಸವವೇದನೆ ಪಡುವುದುಂಟೆ, ಹೇಳು? ಆದರೂ ಪ್ರತಿಯೊಬ್ಬನು ಹೆರುವ ಮಹಿಳೆಯಂತೆ ಸೊಂಟ ಹಿಸಿಕಿಕೊಳ್ಳುವುದು ನನ್ನ ಕಣ್ಣಿಗೆ ಬೀಳುತ್ತಿದೆ ಏಕೆ? ಅವರ ಮುಖಗಳು ಬಿಳಿಚಿಕೊಂಡಿವೆ ಏಕೆ? 7 ಹೌದು, ಭಯಂಕರವಾದ ದಿನ ಬರಲಿದೆ, ಅದಕ್ಕಿರದು ಎಣೆ! ಅದು ಇಕ್ಕಟ್ಟಿನ ದಿನ, ಆದರೂ ಅದರಿಂದ ಯಕೋಬ್ಯರಿಗಿದೆ ಬಿಡುಗಡೆ.” 8 (ಸೇನಾಧೀಶ್ವರರಾದ ಸರ್ವೇಶ್ವರ ಹೇಳುವುದನ್ನು ಕೇಳು: “ಅವರ ಮೇಲೆ ಹೇರಲಾಗಿರುವ ನೊಗವನ್ನು ನಾನು ಆ ದಿನದಂದು ಮುರಿದುಬಿಡುವೆನು. ಕಣ್ಣಿಗಳನ್ನು ಕಿತ್ತುಹಾಕುವೆನು. ಅನ್ಯಕುಲದವರು ಇನ್ನು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು. 9 ಅವರು ತಮ್ಮ ದೇವರಾದ ಸರ್ವೇಶ್ವರನೆಂಬ ನನಗೆ ಮತ್ತು ಅವರಿಗಾಗಿ ನಾನು ಏರ್ಪಡಿಸಲಿರುವ ರಾಜ ದಾವೀದನಿಗೆ ಸೇವೆಸಲ್ಲಿಸುವರು.) 10 “ನನ್ನ ದಾಸ ಯಕೋಬನೇ, ಅಂಜಬೇಡ! ಇಸ್ರಯೇಲೇ, ಭಯಪಡಬೇಡ” ಎನ್ನುತ್ತಾರೆ ಸರ್ವೇಶ್ವರ. “ದೂರ ನಾಡಿನಿಂದ ನಿನ್ನನ್ನು ಮುಕ್ತನನ್ನಾಗಿಸುವೆನು ನಿನ್ನ ಸಂತಾನ ಸೆರೆಹೋದ ಸೀಮೆಯಿಂದ ನಿನ್ನನ್ನು ಉದ್ಧರಿಸುವೆನು. ಹಿಂದಿರುಗಿ, ಹಾಯಾಗಿ ನೆಮ್ಮದಿಯಿಂದಿರುವುದು ಯಕೋಬು ಯಾರಿಂದಲೂ ಅದನ್ನು ಹೆದರಿಸಲಾಗದು. 11 ನಿನ್ನನ್ನು ರಕ್ಷಿಸಲು ನಿನ್ನೊಂದಿಗೆ ನಾನಿರುವೆನು ನಿನ್ನನ್ನು ಯಾವ ರಾಷ್ಟ್ರಗಳಿಗೆ ಅಟ್ಟಿ ಚದರಿಸಿದೆನೋ ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು. ನಿನ್ನನ್ನು ನಿರ್ಮೂಲ ಮಾಡೆನು, ಮಿತಿಮೀರಿ ಶಿಕ್ಷಿಸೆನು; ಆದರೆ ಶಿಕ್ಷಿಸದೆ ಮಾತ್ರ ಬಿಡೆನು - ಇದು ಸರ್ವೇಶ್ವರನಾದ ನನ್ನ ನುಡಿ.” 12 ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು. 13 ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ. 14 ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ. 15 ‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ. 16 ಆದರೂ ನಿನ್ನನ್ನು ಕಬಳಿಸುವವರನ್ನು ಕಬಳಿಸಲಾಗುವುದು ನಿನ್ನ ಶತ್ರುಗಳೆಲ್ಲ ತಪ್ಪದೆ ಸೆರೆಹೋಗುವರು ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು ನಿನ್ನನ್ನು ಕೊಳ್ಳೆಹೊಡೆಯುವವರು ಕೊಳ್ಳೆಗೆ ಈಡಾಗುವರು. 17 ‘ಇಗೋ, ಸಿಯೋನ್ ಯಾರಿಗೂ ಬೇಡವಾದವಳು, ಭ್ರಷ್ಟಳಾದಳು’ ಎಂದು ಜನರು ನಿನ್ನನ್ನು ಜರೆವುದು ನನಗೆ ಹಿಡಿಸದು ನಿನ್ನನ್ನು ಗುಣಪಡಿಸುವೆನು ನಿನ್ನ ಗಾಯಗಳನ್ನು ವಾಸಿಮಾಡುವೆನು - ಇದು ಸರ್ವೇಶ್ವರನಾದ ನನ್ನ ನುಡಿ. 18 ಯಕೋಬನ ಮನೆಗಳ ದುರವಸ್ಥೆಯನ್ನು ತಪ್ಪಿಸುವೆನು ಜೆರುಸಲೇಮಿನ ನಿವಾಸಗಳನ್ನು ನಿಶ್ಚಯವಾಗಿ ಕರುಣಿಸುವೆನು. ಅದರ ಹಾಳುದಿಬ್ಬಗಳ ಮೇಲೆ ಹೊಸನಗರ ಕಟ್ಟುವೆನು ಅದರ ಅರಮನೆ ಮೊದಲಿದ್ದ ಸ್ಥಳದಲ್ಲೆ ನೆಲೆಯಾಗಿ ನಿಲ್ಲುವುದು. 19 ಅವುಗಳಿಂದ ಸ್ತುತಿಸ್ತೋತ್ರ ಕೇಳಿಬರುವುದು ಅಲ್ಲಿಂದ ನಲಿವುನಾದ ಕೇಳಿಸುವುದು. ಆ ಜನರನ್ನು ಹೆಚ್ಚಿಸುವೆನು, ಅವರು ಕೊಂಚವಾಗಿರರು. ಅವರನ್ನು ಘನಪಡಿಸುವೆನು, ಅವರು ಹೀನರಾಗಿರರು. 20 ಅವನ ಸಂತಾನ ಹಿಂದಿನ ಸುಸ್ಥಿತಿಯನ್ನು ಹೊಂದುವುದು ಅವರ ಸಮಾಜ ನನ್ನ ಮುಂದೆ ನೆಲೆಯಾಗಿ ನಿಲ್ಲುವುದು ಅವರನ್ನು ಬಾಧಿಸುವವರನ್ನೆಲ್ಲ ನಾನು ದಂಡಿಸುವೆನು. 21 ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗುವನು ಅವರ ವಂಶದವನೇ ಅವರನ್ನು ಆಳುವನು. ಅವನನ್ನು ನಾನು ನನ್ನ ಹತ್ತಿರ ಬರಗೊಡಿಸುವೆನು ಅವನು ನನ್ನ ಸನ್ನಿಧಾನಕ್ಕೆ ಸೇರುವನು. ಇಲ್ಲದಿದ್ದಲ್ಲಿ, ನನ್ನನು ಸಮೀಪಿಸಲು ಧೈರ್ಯಗೊಳ್ಳುವವನಾರು? - ಇದು ಸರ್ವೇಶ್ವರನಾದ ನನ್ನ ನುಡಿ. 22 ನೀವು ನನಗೆ ಪ್ರಜೆಯಾಗಿರುವಿರಿ ನಾನು ನಿಮಗೆ ದೇವರಾಗಿರುವೆನು. 23 ಇಗೋ, ಹೊರಟಿದೆ ಬಡಿದುಕೊಂಡು ಹೋಗುವ ಗಾಳಿ ಸರ್ವೇಶ್ವರನ ರೋಷವೆಂಬ ಬಿರುಗಾಳಿ ದುರುಳರ ತಲೆಯ ಮೇಲೆ ಬಡಿದೋಡುವ ಸುಂಟರ ಗಾಳಿ! 24 ಆತನ ಮನದಾಲೋಚನೆಗಳನ್ನು ನಡೆಸಿ ನೆರವೇರಿಸುವ ತನಕ ಹಿಂದಿರುಗದು ಆತನ ರೋಷವೆಂಬಾ ಬಿರುಗಾಳಿ, ಇದನ್ನು ನೀವು ಗ್ರಹಿಸುವಿರಿ ಕಟ್ಟಕಡೆಯ ದಿನಗಳಲ್ಲಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India