ಯೆರೆಮೀಯ 3 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿನ ವಿಶ್ವಾಸಘಾತ 1 ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ಗಂಡನು ತ್ಯಜಿಸಿದವಳು, ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ, ಅವಳನ್ನು ಆ ಗಂಡನು ಮತ್ತೆ ಸೇರಿಸಿಕೊಳ್ಳುತ್ತಾನೆಯೆ? ಸೇರಿಸಿಕೊಂಡರೆ ಆ ನಾಡು ಕೆಟ್ಟು ಅಪವಿತ್ರವಾಗಿ ಹೋಗುವುದಿಲ್ಲವೇ? ಹೀಗಿರಲು ಓ ಇಸ್ರಯೇಲ್, ಬಹುಮಂದಿ ಮಿಂಡರೊಡನೆ ವೇಶ್ಯವಾಟಿಕೆ ನಡೆಸಿದ ನೀನು ನನ್ನ ಬಳಿಗೆ ಬರುವೆಯಾ? 2 ಕಣ್ಣೆತ್ತಿ ಬೋಳು ಬೆಟ್ಟಗಳನ್ನು ನೋಡು, ಯಾವುದರಲ್ಲಿ ತಾನೆ ನೀನು ವೇಶ್ಯೆಯಾಗಿ ವರ್ತಿಸಲಿಲ್ಲ? ಅರಬೀಯನು ಅಡವಿಯಲ್ಲಿ ಹೊಂಚುಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚುಹಾಕುತ್ತಾ ಕುಳಿತಿದ್ದೆ. ನಿನ್ನ ವೇಶ್ಯೆತನದಿಂದಲೂ ನಿನ್ನ ಕೆಟ್ಟತನದಿಂದಲೂ ನಾಡನ್ನು ಅಪವಿತ್ರಮಾಡಿರುವೆ. 3 ಆದಕಾರಣವೇ ಹದಮಳೆಗೆ ಅಡ್ಡಿಯಾಯಿತು. ವಸಂತಕಾಲದ ಮಳೆ ಬರದೆಹೋಯಿತು. ಇನ್ನೂ ನೀನು ವೇಶ್ಯೆ ಮುಖದವಳು, ಲಜ್ಜೆಗೆಟ್ಟವಳು ! 4 “ಈಗತಾನೆ. ‘ನೀವೆ ನನ್ನ ತಂದೆ, ನನ್ನ ಯೌವನದ ಆಪ್ತರು’ ಎಂದು ಕರೆಯುತ್ತಿರುವೆ. 5 ನಿತ್ಯಕ್ಕೂ ಕೋಪ ಮಾಡಬೇಡಿ; ಕೊನೆಯತನಕ ಸಿಟ್ಟುಗೊಳ್ಳಬೇಡಿ’ ಎಂದು ಕೋರುತ್ತಿರುವೆ. ಹೀಗಲ್ಲ ನೀನು ಹೇಳುತ್ತಿರುವೆಯಾದರೂ ನಿನ್ನಿಂದ ಸಾಧ್ಯವಾಗುವಷ್ಟು ದುಷ್ಕೃತ್ಯಗಳನ್ನು ಮಾಡಿ ಕೃತಾರ್ಥಳಾಗಿರುವೆ!” ಇಸ್ರಯೇಲ್ ಮತ್ತು ಜುದೇಯದ ಪ್ರಾಂತ್ಯಗಳು ಪಶ್ಚಾತ್ತಾಪಪಡಬೇಕು 6 ಅರಸ ಯೋಷೀಯನ ಕಾಲದಲ್ಲಿ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದು ಹೇಳಿದರು - “ಭ್ರಷ್ಟಳಾದ ಇಸ್ರಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ನನ್ನನ್ನು ತೊರೆದುಬಿಟ್ಟು ಎತ್ತರವಾದ ಗುಡ್ಡಗಳನ್ನೆಲ್ಲ ಹತ್ತಿ, ಹುಲುಸಾಗಿ ಬೆಳೆದ ಎಲ್ಲ ಮರಗಳ ಕೆಳಗೆ ಹೋಗಿ ವೇಶ್ಯೆಯಂತೆ ವರ್ತಿಸುತ್ತಿದ್ದಾಳೆ. 7 ಅವಳು ಇಂಥವುಗಳನ್ನೆಲ್ಲ ಮಾಡಿದ ಮೇಲೆ ನನ್ನ ಬಳಿಗೆ ಮರಳಿ ಬಂದೇ ಬರುವಳು ಎಂದುಕೊಂಡಿದ್ದೆ. ಆದರೆ ಬರಲಿಲ್ಲ. ಆಗ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ಇದನ್ನು ನೋಡಿದಳು. 8 ಭ್ರಷ್ಟಳಾದ ಇಸ್ರಯೇಲ್ ನನಗೆ ವಿಮುಖಳಾಗಿ ವ್ಯಭಿಚಾರಿಣಿಯಂತೆ ವರ್ತಿಸಿದ ಕಾರಣದಿಂದಲೆ, ನಾನು ಅವಳನ್ನು ನಿರಾಕರಿಸಿ ವಿವಾಹ ವಿಚ್ಛೇದನ ಪತ್ರಕೊಟ್ಟದ್ದನ್ನು ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನೋಡಿಯೂ ಅಂಜದೆಹೋದಳು. ತಾನೂ ಹೋಗಿ ವೇಶ್ಯೆಯಂತೆ ವರ್ತಿಸಿದಳು. 9 ಕಲ್ಲುಮರಗಳಿಗೆ ಆರಾಧನೆಮಾಡಿ ವ್ಯಭಿಚಾರಿಣಿಯಾದಳು. ಇದೆಲ್ಲ ಲಘುವೆಂದು ಭಾವಿಸಿ ತನ್ನ ವೇಶ್ಯಾ ವರ್ತನೆಯಿಂದ ನಾಡನ್ನು ಅಪವಿತ್ರಪಡಿಸಿದಳು. 10 ಇಸ್ರಯೇಲಳಿಗೆ ಇಷ್ಟು ದಂಡನೆ ಆದರೂ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನನ್ನ ಕಡೆಗೆ ಪೂರ್ಣಮನಸ್ಸಿನಿಂದ ತಿರುಗಿಕೊಳ್ಳಲಿಲ್ಲ. ತಿರುಗಿಕೊಂಡಂತೆ ನಟಿಸಿದಳು ಮಾತ್ರ. ಇದು ಸರ್ವೇಶ್ವರನಾದ ನನ್ನ ನುಡಿ.” 11 ಬಳಿಕ ಸರ್ವೇಶ್ವರ ಸ್ವಾಮಿ ನನಗೆ ಇಂತೆಂದರು - “ಭ್ರಷ್ಟಳಾದ ಇಸ್ರಯೇಲ್ ದ್ರೋಹಿಯಾದ ಜುದೇಯಳಿಗಿಂತ ಶಿಷ್ಟಳಾಗಿ ಕಂಡುಬಂದಿದ್ದಾಳೆ. 12 ನೀನು ಉತ್ತರ ದಿಕ್ಕಿಗೆ ಹೋಗಿ ಆ ಇಸ್ರಯೇಲಿಗೆ ಈ ಸಂದೇಶವನ್ನು ಸಾರು - ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ; ಭ್ರಷ್ಟಳಾದ ಇಸ್ರಯೇಲೇ, ಹಿಂದಿರುಗು; ನಾನು ಅಷ್ಟು ಕೋಪಮುಖದಿಂದ ನಿನ್ನನ್ನು ನೋಡುವುದಿಲ್ಲ. ನಾನು ಕರುಣಾಮೂರ್ತಿ, ನಿತ್ಯಕೋಪಿಯಲ್ಲ. 13 ನೀನು ನಿನ್ನ ತಪ್ಪನ್ನು ಮಾತ್ರ ಒಪ್ಪಿಕೊ. ಕಂಡ ಕಡೆಯೆಲ್ಲ ಅಲೆದಾಡಿ, ಹುಲುಸಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೆ ಅನ್ಯದೇವರುಗಳನ್ನು ಸೇರಿ, ನನ್ನ ಮಾತುಗಳನ್ನು ಕೇಳದೆ, ನಿನ್ನ ದೇವರಾದ ಸರ್ವೇಶ್ವರ ಎಂಬ ನನಗೇ ದ್ರೋಹಮಾಡಿರುವೆ ಎಂಬುದನ್ನು ಒಪ್ಪಿಕೊ. 14 “ಭ್ರಷ್ಟರಾದ ಜನರೇ, ನನಗೆ ಅಭಿಮುಖರಾಗಿರಿ, ನಾನು ನಿಮಗೆ ಅಧಿಪತಿ. ನಿಮ್ಮಲ್ಲಿ ಒಂದು ಪಟ್ಟಣಕ್ಕೆ ಒಬ್ಬನಂತೆ, ಗೋತ್ರಕ್ಕೆ ಇಬ್ಬರಂತೆ ಆರಿಸಿ ಸಿಯೋನಿಗೆ ಕರೆತರುವೆನು. 15 ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ಕೊಡುವೆನು. ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು. 16 ನೀವು ನಾಡಿನಲ್ಲಿ ಹೆಚ್ಚಿ ಅಭಿವೃದ್ಧಿಯಾದಾಗ, ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ?’ ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸಿಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ. 17 ಆ ಕಾಲ ಬಂದಾಗ ಜೆರುಸಲೇಮನ್ನೇ ‘ಸರ್ವೇಶ್ವರನ ಸಿಂಹಾಸನ’ ಎಂದು ಕರೆಯುವರು. ನನ್ನ ನಾಮಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದುಬರುವರು. ಆಮೇಲೆ ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು. 18 ಆ ಕಾಲದಲ್ಲಿ ಜುದೇಯ ವಂಶವು ಇಸ್ರಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತ್ಯವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.” ದೇವಜನರಿಂದ ವಿಗ್ರಹಾರಾಧನೆ 19 ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ಎಲೈ ಇಸ್ರಯೇಲ್, ನಾನು ಎಷ್ಟೋ ಆದರದಿಂದ ನಿನ್ನನ್ನು ನನ್ನ ಪುತ್ರನೆಂದು ಭಾವಿಸಿ, ನಿನಗೆ ಮನೋಹರವಾದ ನಾಡನ್ನು, ಅಂದರೆ, ಸಮಸ್ತ ರಾಷ್ಟ್ರಗಳಲ್ಲಿ ರಮಣೀಯವಾದ ಸೊತ್ತನ್ನು ಕೊಡಬೇಕು ಎಂದುಕೊಂಡಿದ್ದೆ. ನೀನು ನನ್ನನ್ನು ‘ತಂದೆ’ ಎಂದು ಸನ್ಮಾನಿಸಿ, ನನ್ನನ್ನು ತಪ್ಪದೆ ಹಿಂಬಾಲಿಸಿ ಬರುವೆಯೆಂದಿದ್ದೆ. 20 “ಆದರೆ ಓ ಇಸ್ರಯೇಲ್ ವಂಶಜರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹಮಾಡಿರುವುದು ನಿಶ್ಚಯ. ಇದು ಸರ್ವೇಶ್ವರನಾದ ನನ್ನ ನುಡಿ.” 21 ಇಗೋ ಕೇಳಿ, ಬೋಳು ಗುಡ್ಡಗಳ ಮೇಲಿಂದ ಒಂದು ಶಬ್ದ : ‘ನಾವು ಡೊಂಕುದಾರಿಯನ್ನು ಹಿಡಿದಿದ್ದೇವೆ. ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯನ್ನು ಮರೆತುಬಿಟ್ಟಿದ್ದೇವೆ’ ಎಂದು ಇಸ್ರಯೇಲರು ಕಣ್ಣೀರು ಸುರಿಸುತ್ತಾ ದೇವರ ಕೃಪೆಯನ್ನು ಬೇಡುತ್ತಿದ್ದಾರೆ. 22 ಸರ್ವೇಶ್ವರ : “ಭ್ರಷ್ಟರಾದ ಜನರೇ, ಹಿಂದಿರುಗಿ ಬನ್ನಿ, ನಾನು ನಿಮ್ಮ ಭ್ರಷ್ಟತನವನ್ನು ಪರಿಹರಿಸುವೆನು.” 23 ಜನರು : “ಇಗೋ, ನಿಮಗೆ ಅಭಿಮುಖರಾಗಿ ಬಂದಿದ್ದೇವೆ. ನೀವೇ ನಮ್ಮ ಸರ್ವೇಶ್ವರ, ನಮ್ಮ ದೇವರು. ನಿಶ್ಚಯವಾಗಿ ಬೆಟ್ಟಗುಡ್ಡಗಳಿಂದಲೂ ಜಾತ್ರೆಜಂಗುಳಿಯಿಂದಲೂ ನಮಗೆ ಮೋಸವಾಯಿತು. ಇಸ್ರಯೇಲಿನ ಉದ್ಧಾರ ಇರುವುದು ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಕೈಯಲ್ಲೇ, ಇದು ಸತ್ಯಕ್ಕೂ ಸತ್ಯ. 24 ನಾವು ಚಿಕ್ಕಂದಿನಿಂದ ನೋಡಿರುವಂತೆ ನಮ್ಮ ಪಿತೃಗಳು ದುಡಿದದ್ದನ್ನೂ ಅವರ ದನಕುರಿಗಳನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಬಾಳ್ ದೇವತೆ ಕಬಳಿಸುತ್ತಾ ಬಂದಿದೆ. 25 ನಾವೇ ತಂದುಕೊಂಡ ಅವಮಾನವೆಂಬ ಹಾಸಿಗೆಯಲ್ಲಿ ಬಿದ್ದಿರೋಣ. ನಾಚಿಕೆಯೆಂಬ ಹೊದಿಕೆ ನಮ್ಮನ್ನು ಮುಚ್ಚಿಬಿಡಲಿ. ಚಿಕ್ಕತನದಿಂದ ಈವರೆಗು ನಾವೂ ನಮ್ಮ ಪೂರ್ವಜರೂ ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ಇದಿರಾಗಿ ಪಾಪಮಾಡುತ್ತಾ ಬಂದಿರುವುದು ನಿಶ್ಚಯ. ಆ ಸ್ವಾಮಿಯ ಮಾತನ್ನು ಕೇಳದೆಹೋದೆವಲ್ಲಾ!” ಎಂದು ಮೊರೆಯಿಡುತ್ತಿದ್ದಾರೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India