ಯೆರೆಮೀಯ 29 - ಕನ್ನಡ ಸತ್ಯವೇದವು C.L. Bible (BSI)ಬಾಬಿಲೋನಿನಲ್ಲಿದ್ದ ಯೆಹೂದ್ಯರಿಗೆ ಯೆರೆಮೀಯನು ಬರೆದ ಪತ್ರ 1 ಜೆರುಸಲೇಮಿನಿಂದ ಬಾಬಿಲೋನಿಗೆ ನೆಬೂಕದ್ನೆಚ್ಚರನು ಸೆರೆ ಒಯ್ದಿದ್ದ ಹಿರಿಯರಿಗೂ ಯಾಜಕರಿಗೂ ಪ್ರವಾದಿಗಳಿಗೂ ಸಕಲ ಜನರಿಗೂ ಪ್ರವಾದಿ ಯೆರೆಮೀಯನು ಜೆರುಸಲೇಮಿನಿಂದ ಒಂದು ಪತ್ರವನ್ನು ಬರೆದನು. 2 ಅರಸ ಯೆಕೋನ್ಯನು, ರಾಜಮಾತೆಯು, ಕಂಚುಕಿಗಳು, ಜುದೇಯದ ಮತ್ತು ಜೆರುಸಲೇಮಿನ ಪದಾಧಿಕಾರಿಗಳು, ಶಿಲ್ಪಿಗಳು, ಕಮ್ಮಾರರು, ಇವರೆಲ್ಲರು ಜೆರುಸಲೇಮನ್ನು ಬಿಟ್ಟುಹೋದ ಮೇಲೆ ಈ ಪತ್ರವನ್ನು ಬರೆದನು. 3 ಅದನ್ನು ಶಾಫಾನನ ಮಗ ಎಲ್ಲಾಸ, ಹಿಲ್ಕೀಯನ ಮಗ ಗೆಮರ್ಯ ಇವರ ಕೈಯಲ್ಲಿ ಕಳಿಸಿದನು. ಇವರು ಜುದೇಯದ ಅರಸ ಚಿದ್ಕೀಯನಿಂದ ಬಾಬಿಲೋನಿಗೆ ಅದರ ಅರಸ ನೆಬೂಕದ್ನೆಚ್ಚರನ ಬಳಿಗೆ ಕಳಿಸಲಾಗಿದ್ದ ರಾಯಭಾರಿಗಳು. ಆ ಪತ್ರದ ಮಾತುಗಳು ಇವು: 4 “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಸ್ವಾಮಿ ಜೆರುಸಲೇಮಿನಿಂದ ಬಾಬಿಲೋನಿಗೆ ಸಾಗಿಸಲಾಗಿರುವ ಸೆರೆಯವರೆಲ್ಲರಿಗೆ ಹೀಗೆಂದು ತಿಳಿಸುತ್ತಾರೆ: 5 ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ. ತೋಟಗಳನ್ನು ಮಾಡಿಕೊಂಡು ಅವುಗಳ ಫಲಗಳನ್ನು ಅನುಭವಿಸಿರಿ. 6 ಸಂಸಾರಿಗಳಾಗಿ ಗಂಡು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೆ ಹೆಣ್ಣುಗಳನ್ನು ತೆಗೆದುಕೊಳ್ಳಿ. ನಿಮ್ಮ ಹೆಣ್ಣುಗಳನ್ನು ಗಂಡುಗಳಿಗೆ ಕೊಡಿ. ಅವರೂ ಗಂಡುಹೆಣ್ಣು ಮಕ್ಕಳನ್ನು ಪಡೆಯಲಿ. ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕಡಿಮೆಯಾಗದಿರಿ. 7 ನಾನು ಯಾವ ನಗರಕ್ಕೆ ನಿಮ್ಮನ್ನು ಸಾಗಿಸಿದ್ದೇನೋ ಅದರ ಕ್ಷೇಮವನ್ನು ಹಾರೈಸಿ, ಅದಕ್ಕಾಗಿ ಸರ್ವೇಶ್ವರನಾದ ನನ್ನನ್ನು ಪ್ರಾರ್ಥಿಸಿರಿ. ಅದರ ಕ್ಷೇಮವೇ ನಿಮ್ಮ ಕ್ಷೇಮ. 8 ಇಸ್ರಯೇಲರ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಮಗೆ ಹೇಳುತ್ತೇನೆ: ನಿಮ್ಮ ಮಧ್ಯೆ ಇರುವ ಪ್ರವಾದಿಗಳಿಗೂ ಶಕುನದವರಿಗೂ ಕಿವಿಗೊಟ್ಟು ಮೋಸಹೋಗದಿರಿ. ನಿಮಗಾಗಿ ಕನಸುಕಂಡು ಹೇಳುವವರನ್ನು ನಂಬಬೇಡಿ. 9 ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನೇ ಸಾರುತ್ತಾರೆ. ಅವರು ನನ್ನಿಂದ ಕಳಿಸಿದವರಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ. 10 “ಸರ್ವೇಶ್ವರ ಹೀಗೆನ್ನುತ್ತಾರೆ: ‘ಬಾಬಿಲೋನಿನ ರಾಜ್ಯ ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಸಂಧಿಸಿ ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಈ ಶುಭವಾಕ್ಯವನ್ನು ನಿಮ್ಮ ಮೇಲ್ಮೆಗಾಗಿ ನೆರವೇರಿಸುವೆನು. 11 ನಿಮಗೆ ಇಂಥ ಗತಿ ಬರಲಿ ಎಂದಲ್ಲ, ನಿರೀಕ್ಷೆ ಇರಲಿ ಎಂದೇ ನಾನು ನಿಮ್ಮ ವಿಷಯದಲ್ಲಿ ಮಾಡಿಕೊಂಡ ಆಲೋಚನೆಗಳನ್ನು ನಾನು ಮಾತ್ರ ಬಲ್ಲೆ. ಅವು ಅಹಿತ ಯೋಜನೆಗಳೇನೂ ಅಲ್ಲ, ಹಿತಕರವಾದ ಯೋಜನೆಗಳೇ. 12 ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಬರುವಿರಿ; ನಾನು ಕಿವಿಗೊಡುವೆನು. 13 ನೀವು ನನ್ನನ್ನು ಹುಡುಕುವಿರಿ. ಮನಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14 ಹೌದು, ನಾನು ನಿಮಗೆ ದೊರೆಯುವೆನು. ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಿಮ್ಮನ್ನು ಅಟ್ಟಲಾಗಿದ್ದ ಸಮಸ್ತ ದೇಶಗಳಿಂದಲೂ ಸಕಲ ರಾಷ್ಟ್ರಗಳ ಮಧ್ಯೆಯಿಂದಲೂ ಒಟ್ಟುಗೂಡಿಸಿ, ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.’ 15 “ನೀವೋ, ‘ಸರ್ವೇಶ್ವರ ನಮಗಾಗಿ ಬಾಬಿಲೋನಿನಲ್ಲೇ ಪ್ರವಾದಿಗಳನ್ನು ಏರ್ಪಡಿಸಿದ್ದಾರೆ’ ಎಂದುಕೊಂಡಿದ್ದೀರಿ. 16 ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ, ದಾವೀದನ ಸಿಂಹಾಸನವನ್ನು ಅಲಂಕರಿಸಿದ್ದ ಅರಸನ ವಿಷಯವಾಗಿ ಹಾಗೂ ನಿಮ್ಮೊಂದಿಗೆ ಸೆರೆಹೋಗದ ನಿಮ್ಮ ಸೋದರರೂ ಈ ನಗರದ ನಿವಾಸಿಗಳೂ ಆದವರ ವಿಷಯವಾಗಿ ಹೇಳಿರುವುದನ್ನು ಕೇಳಿ: 17 ‘ಇಗೋ, ನಾನು ಅವರ ಮೇಲೆ ಖಡ್ಗ-ಕ್ಷಾಮ-ವ್ಯಾಧಿಗಳನ್ನು ಬರಮಾಡುವೆನು. ಯಾರೂ ತಿನ್ನಲಾಗದಷ್ಟು ಕೆಟ್ಟು ಅಸಹ್ಯವಾದ ಅಂಜೂರದ ಹಣ್ಣಿನ ಗತಿಗೆ ಅವರನ್ನು ಇಳಿಸುವೆನು. 18 ಖಡ್ಗ-ಕ್ಷಾಮ-ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ ಲೋಕದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗಿರುವ ಎಲ್ಲ ರಾಷ್ಟ್ರಗಳಲ್ಲಿ ಅವರು ಶಾಪ, ಪರಿಹಾಸ್ಯ, ದೂಷಣೆಗಳಿಗೆ ಗುರಿಯಾಗುವಂತೆ ಮಾಡುವೆನು. 19 ಏಕೆಂದರೆ ಅವರು ನನ್ನ ಮಾತುಗಳನ್ನು ಕೇಳದೆಹೋದರು. ನನ್ನ ದಾಸರಾದ ಪ್ರವಾದಿಗಳನ್ನು ಪದೇಪದೇ ಅವರ ಬಳಿಗೆ ಕಳಿಸಿದರೂ ಕೇಳಲೊಲ್ಲದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ. 20 ಜೆರುಸಲೇಮಿನಿಂದ ಬಾಬಿಲೋನಿಗೆ ಸಾಗಿಸಲಾಗಿರುವ ಸೆರೆಯವರೇ, ನೀವೆಲ್ಲರು ಸರ್ವೇಶ್ವರನಾದ ನನ್ನ ವಾಕ್ಯಕ್ಕೆ ಕಿವಿಗೊಡಿ.’ 21 “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ತಮ್ಮ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗ ಅಹಾಬ ಮತ್ತು ಮಾಸೇಯನ ಮಗ ಚಿದ್ಕೀಯ ಇವರ ವಿಷಯವಾಗಿ ಹೀಗೆನ್ನುತ್ತಾರೆ: ‘ಇಗೋ ನಾನು ಇವರನ್ನು ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನ ಕೈಗೆ ಬಿಡುವೆನು. ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು. 22 ಇವರಿಗೆ ಒದಗಿದ ಗತಿಯನ್ನು ನೆನೆದು, ಬಾಬಿಲೋನಿಯದಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಯಾರನ್ನಾದರು ಶಪಿಸುವಾಗ, ‘ಬಾಬಿಲೋನಿಯದ ಅರಸ ಬೆಂಕಿಯಲ್ಲಿ ಸುಟ್ಟು ಭಸ್ಮಮಾಡಿದ ಚಿದ್ಕೀಯನ ಹಾಗು ಅಹಾಬನ ಗತಿಯನ್ನೆ ಸರ್ವೇಶ್ವರ ನಿನಗೂ ತರಲಿ’ ಎಂದು ಶಾಪಹಾಕುವರು. 23 ಏಕೆಂದರೆ ಇವರು ಇಸ್ರಯೇಲಿನಲ್ಲಿ ದುರಾಚಾರವನ್ನು ನಡೆಸಿದರು. ನೆರೆಯವರ ಹೆಂಡಿರಲ್ಲಿ ವ್ಯಭಿಚಾರಮಾಡಿದರು. ನಾನು ಆಜ್ಞಾಪಿಸಿದ ಮಾತುಗಳನ್ನು ನನ್ನ ಹೆಸರೆತ್ತಿಯೇ ಸುಳ್ಳಾಗಿ ಸಾರಿದರು. ಇದೆಲ್ಲ ನನಗೆ ಗೊತ್ತಿದೆ, ಇದಕ್ಕೆಲ್ಲಾ ನಾನೇ ಸಾಕ್ಷಿ’ ಎನ್ನುತ್ತಾರೆ ಸರ್ವೇಶ್ವರ.” ಯೆರೆಮೀಯನ ಪತ್ರಕ್ಕೆ ಶೆಮಾಯನ ಆಕ್ಷೇಪಣೆ 24 ನೆಹೆಲಾಮ್ಯನಾದ ಶೆಮಾಯನಿಗೆ ಹೀಗೆ ತಿಳಿಸಬೇಕೆಂದು ಸರ್ವೇಶ್ವರ ಯೆರೆಮೀಯನಿಗೆ ಅಪ್ಪಣೆಕೊಟ್ಟರು: 25 “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ - ‘ನೀನು ಜೆರುಸಲೇಮಿನಲ್ಲಿರುವ ಜನರೆಲ್ಲರಿಗೂ ಯಾಜಕನಾದ ಮಾಸೇಯನ ಮಗ ಚೆಫನ್ಯನಿಗೂ ಸಮಸ್ತ ಯಾಜಕರಿಗೂ ನಿನ್ನ ಹೆಸರಿನಲ್ಲೆ ಪತ್ರ ಬರೆದು ಕಳಿಸಿರುವೆ. ಚೆಫನ್ಯನಿಗೆ ನೀನು ಹೀಗೆಂದು ಬರೆದಿರುವೆ: 26 ‘ಸರ್ವೇಶ್ವರ ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ದೇವಾಲಯದ ಯಾಜಕನನ್ನಾಗಿ ನೇಮಿಸಿದ್ದಾರೆ. ಯಾವನಾದರು ಮೈದುಂಬಿ ಪ್ರವಾದಿಯಾಗಿ ನಟಿಸಿದ್ದೇ ಆದರೆ ಅವನನ್ನು ಕೊಳಕ್ಕೆಹಾಕಿ, ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ನಿನಗೆ ವಹಿಸಿದ್ದಾರೆ. 27 ಹೀಗಿರುವಲ್ಲಿ, ನಿಮ್ಮ ಮಧ್ಯೆ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಖಂಡಿಸಲಿಲ್ಲವೇಕೆ? 28 ಅವನು ಬಾಬಿಲೋನಿನಲ್ಲಿರುವ ನಮಗೆ ಪತ್ರ ಕಳಿಸಿ, ‘ಪರದೇಶವಾಸವು ನಿಮಗೆ ದೀರ್ಘವಾಗುವುದು, ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಫಲವನ್ನು ಅನುಭವಿಸಿರಿ’ ಎಂದು ತಿಳಿಸಿದ್ದಾನೆ.” 29 ಯಾಜಕನಾದ ಚೆಫನ್ಯನು ಈ ಪತ್ರವನ್ನು ನನ್ನ ಮುಂದೆ ಓದಿದನು. 30 “ಸರ್ವೇಶ್ವರ ನನಗೆ ಹೀಗೆಂದು ಅಪ್ಪಣೆ ಮಾಡಿದ್ದಾರೆ: 31 ‘ಸೆರೆಯಲ್ಲಿ ಇರುವ ಎಲ್ಲರಿಗೆ ಹೀಗೆಂದು ಹೇಳಿಕಳಿಸು - ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಸರ್ವೇಶ್ವರ ಇಂತೆನ್ನುತ್ತಾರೆ: ನಾನು ಕಳಿಸದೆ ಇದ್ದರೂ ಶೆಮಾಯನು ನಿಮಗೆ ಪ್ರವಾದನೆಮಾಡಿ ಸುಳ್ಳನ್ನು ನಂಬುವಂತೆ ಮಾಡಿದ್ದಾನೆ. 32 ಈ ಕಾರಣ, ಇಗೋ, ನಾನು ಆ ನೆಹೆಲಾಮ್ಯನಾದ ಶೆಮಾಯನನ್ನು ಮತ್ತು ಅವನ ಸಂತತಿಯವರನ್ನು ದಂಡಿಸುವೆನು. ಈ ಜನರ ಮಧ್ಯೆ ಅವನಿಗೆ ಯಾವ ಸಂತಾನವೂ ಇರದು. ಜನರಿಗೆ ‘ನಾನು ಮಾಡಬೇಕೆಂದಿರುವ ಒಳಿತನ್ನು ಅವನು ನೋಡದೆಹೋಗುವನು. ಏಕೆಂದರೆ ಅವನು ನನಗೆ ವಿರುದ್ಧ ಪ್ರಚೋದನೆಯ ಮಾತನ್ನು ಆಡಿದ್ದಾನೆ. ಇದು ಸರ್ವೇಶ್ವರನಾದ ನನ್ನ ನುಡಿ’.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India