Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 26 - ಕನ್ನಡ ಸತ್ಯವೇದವು C.L. Bible (BSI)


ಯೆರೆಮೀಯನಿಗೆ ಮರಣದಂಡನೆಯ ಬೆದರಿಕೆ

1 ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆರೆಮೀಯನಿಗೆ ಸರ್ವೇಶ್ವರ ಸ್ವಾಮಿಯಿಂದ ಈ ಅಪ್ಪಣೆ ಆಯಿತು;

2 “ನೀನು ನನ್ನ ದೇವಾಲಯದ ಪ್ರಾಕಾರದಲ್ಲಿ ನಿಂತು, ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಜುದೇಯದ ಎಲ್ಲ ಊರಿನವರಿಗೆ ನಾನು ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದನ್ನೂ ಬಿಡಬೇಡ.

3 ಬಹುಶಃ ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಕೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು.

4 “ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ,

5 ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆಹೋದರೆ,

6 ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”

7 ಯೆರೆಮೀಯನು ಸರ್ವೇಶ್ವರನ ಆಲಯದಲ್ಲಿ ಹೀಗೆ ಸಾರುವುದನ್ನು ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಕೇಳಿದರು.

8 ಜನರಿಗೆ ತಿಳಿಸಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಯೆರೆಮೀಯನು ನುಡಿದು ಮುಗಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಸುತ್ತುಗಟ್ಟಿದರು.

9 “ನಿನಗೆ ಖಂಡಿತವಾಗಿ ಮರಣದಂಡನೆಯಾಗಬೇಕು. ನೀನು ‘ಈ ದೇವಾಲಯಕ್ಕೆ ಶಿಲೋವಿನ ಗತಿ ಬರುವುದು, ಈ ನಗರ ಪಾಳುಬಿದ್ದು ನಿರ್ಜನ ಪ್ರದೇಶವಾಗುವುದು,’ ಎಂದು ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಿದ್ದೇಕೆ?” ಎಂದು ಕೂಗಾಡಿದರು. ಆಲಯದಲ್ಲಿದ್ದ ಯೆರೆಮೀಯನನ್ನು ಜನರ ಗುಂಪು ಮುತ್ತಿಕೊಂಡಿತು.

10 ಜುದೇಯದ ನಾಯಕರಿಗೂ ಈ ಸಮಾಚಾರ ಮುಟ್ಟಿತು. ಅವರು ಅರಮನೆಯಿಂದ ಧಾವಿಸಿಬಂದು ಸರ್ವೇಶ್ವರನಾಲಯದ ಹೊಸ ಬಾಗಿಲ ಬಳಿ ಆಸೀನರಾದರು.

11 ಯಾಜಕರೂ ಪ್ರವಾದಿಗಳೂ, “ಇವನು ಮರಣದಂಡನೆಗೆ ಪಾತ್ರನು; ನಗರಕ್ಕೆ ಅಹಿತವಾದುದನ್ನು ನುಡಿದಿದ್ದಾನೆ. ಇದನ್ನು ನೀವೇ ಕೇಳಿದ್ದೀರಿ,” ಎಂದು ನಾಯಕರಿಗೂ ಜನರೆಲ್ಲರಿಗೂ ದೂರು ಇತ್ತರು.

12 ಆಗ ಯೆರೆಮೀಯನು, “ನೀವು ಕೇಳಿದ ಮಾತುಗಳನ್ನೆಲ್ಲ, ಅಂದರೆ ಈ ದೇವಾಲಯಕ್ಕೂ ನಗರಕ್ಕೂ ವಿರುದ್ಧವಾದ ಮಾತುಗಳನ್ನು ನುಡಿಯಲು ನನ್ನನ್ನು ಕಳಿಸಿದವರು ಸರ್ವೇಶ್ವರನೇ.

13 ಇದೀಗಲೇ ನೀವು ನಿಮ್ಮ ಮಾರ್ಗಗಳನ್ನೂ ನಡತೆಗಳನ್ನೂ ತಿದ್ದುಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡಿ. ಆಗ ನಿಮಗೆ ತಿಳಿಸಿದ ಕೇಡು ಒದಗದಂತೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು.

14 ನಾನೋ ನಿಮ್ಮ ಕೈಯಲ್ಲಿದ್ದೇನೆ. ನಿಮಗೆ ಯಾವುದು ಒಳ್ಳೆಯದು, ಯಾವುದು ನ್ಯಾಯವಾದುದು ಎಂದು ತೋರುತ್ತದೆಯೋ ಅದನ್ನು ನನಗೆ ಮಾಡಿ.

15 ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು.

16 ಇದನ್ನು ಕೇಳಿದ ನಾಯಕರು ಮತ್ತು ಸಕಲ ಜನರು ಯಾಜಕ - ಪ್ರವಾದಿಗಳಿಗೆ, “ಇವನು ಮರಣದಂಡನೆಗೆ ಪಾತ್ರನಲ್ಲ. ಏಕೆಂದರೆ ನಮ್ಮ ದೇವರಾದ ಸರ್ವೇಶ್ವರನ ಹೆಸರಿನಲ್ಲೇ ಇದನ್ನು ನಮಗೆ ನುಡಿದಿದ್ದಾನೆ,” ಎಂದರು.

17 ತರುವಾಯ ನಾಡಿನ ಹಿರಿಯರಲ್ಲಿ ಕೆಲವರು ಎದ್ದು ನಿಂತು ನೆರೆದಿದ್ದ ಜನರನ್ನು ಉದ್ದೇಶಿಸಿ ಹೀಗೆಂದರು:

18 “ಜುದೇಯದ ಅರಸನಾದ ಹಿಜ್ಕೀಯನ ಕಾಲದಲ್ಲಿ ಮೋರೆಷೆತ್ ಊರಿನವನಾದ ಮಿಕಾಯನು ಯೆಹೂದ್ಯರೆಲ್ಲರಿಗೆ: ‘ಸೇನಾಧೀಶ್ವರ ಸರ್ವೇಶ್ವರನ ಮಾತನ್ನು ಕೇಳಿರಿ: ಸಿಯೋನ್ ನಗರವನ್ನು ಹೊಲದಂತೆ ಉಳಲಾಗುವುದು; ಜೆರುಸಲೇಮ್ ಹಾಳುದಿಬ್ಬಗಳಾಗಿ ಮಾರ್ಪಡುವುದು; ಸರ್ವೇಶ್ವರನ ಆಲಯವಿರುವ ಪರ್ವತ ಕಾಡುಗುಡ್ಡಗಳಂತಾಗುವುದು’ ಎಂದು ಸಾರಿದ.

19 ಆಗ ಜುದೇಯದ ಅರಸ ಹಿಜ್ಕೀಯನು ಮತ್ತು ಯೆಹೂದ್ಯರೆಲ್ಲರು, “ಅವನನ್ನು ಕೊಂದುಹಾಕಿದರೋ? ಇಲ್ಲವೇ ಇಲ್ಲ. ಬದಲಿಗೆ ಆ ಅರಸ ಭಯಭಕ್ತಿಯಿಂದ ಸರ್ವೇಶ್ವರನ ದಯೆಯನ್ನು ಬೇಡಿಕೊಂಡ. ಆಗ ಸರ್ವೇಶ್ವರ ವಿಧಿಸಬೇಕೆಂದಿದ್ದ ದಂಡನೆಯನ್ನು ವಿಧಿಸದೆ ಮನಸ್ಸನ್ನು ಬದಲಾಯಿಸಿಕೊಂಡರಲ್ಲವೆ? ಇವನನ್ನು ಕೊಂದುಹಾಕುವುದರಿಂದ ನಾವು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿಕೊಳ್ಳುತ್ತೇವೆ,” ಎಂದರು.

20 ಸರ್ವೇಶ್ವರನ ಹೆಸರಿನಲ್ಲಿ ಪ್ರವಾದನೆ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಇದ್ದ. ಅವನು ಕಿರ್ಯತ್‍ಯಾರೀಮ್ ಊರಿಗೆ ಸೇರಿದ ಶಮಾಯನ ಮಗ ಊರೀಯ ಎಂಬುವನು. ಯೆರೆಮೀಯನು ನುಡಿದಂತೆಯೇ ಈ ನಗರಕ್ಕೂ ಈ ನಾಡಿಗೂ ಅಹಿತವಾದುದನ್ನೆ ನುಡಿಯುತ್ತಿದ್ದ.

21 ಅರಸ ಯೆಹೋಯಾಕೀಮನು ಮತ್ತು ಅವನ ಎಲ್ಲ ವೀರಶೂರರು ಹಾಗು ನಾಯಕರು ಆ ಊರೀಯನ ಮಾತುಗಳನ್ನು ಕೇಳಿಸಿಕೊಂಡರು. ಕೂಡಲೆ ಅರಸ ಅವನನ್ನು ಕೊಂದುಹಾಕಲು ಮನಸ್ಸುಮಾಡಿದ. ಈ ಸುದ್ದಿಯನ್ನು ಕೇಳಿದ ಊರೀಯ ಭಯಪಟ್ಟು ಓಡಿಹೋಗಿ ಈಜಿಪ್ಟನ್ನು ಸೇರಿಕೊಂಡ.

22 ಆಗ ಅರಸ ಯೆಹೋಯಾಕೀಮನು ಅಕ್ಬೋರನ ಮಗ ಎಲ್ನಾಥಾನನನ್ನೂ ಕೆಲವು ಸಂಗಡಿಗರನ್ನೂ ಅಲ್ಲಿಗೆ ಕಳಿಸಿದ.

23 ಅವರು ಊರೀಯನನ್ನು ಈಜಿಪ್ಟಿನಿಂದ ಎಳೆದು ಅರಸ ಯೆಹೋಯಾಕೀಮನ ಬಳಿಗೆ ತಂದರು. ಅರಸ ಅವನನ್ನು ಕತ್ತಿಯಿಂದ ಕಡಿಸಿ, ಶವವನ್ನು ಜನಸಾಮಾನ್ಯರ ಸಮಾಧಿಗಳ ನಡುವೆ ಹೂಣಿಸಿದ.

24 ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು