Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 25 - ಕನ್ನಡ ಸತ್ಯವೇದವು C.L. Bible (BSI)


ಬಾಬಿಲೋನ್ - ಸರ್ವೇಶ್ವರನ ಕೈಚಾಟಿ

1 ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಮೊದಲನೇ ವರ್ಷದಲ್ಲಿ ಅಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೇ ವರ್ಷದಲ್ಲಿ, ಪ್ರವಾದಿ ಯೆರೆಮೀಯನಿಗೆ ಯೆಹೂದ್ಯರೆಲ್ಲರ ವಿಷಯವಾಗಿ ದೈವೋಕ್ತಿಯೊಂದು ಉಂಟಾಯಿತು.

2 ಅದನ್ನು ಯೆರೆಮೀಯನು ಯೆಹೂದ್ಯರೆಲ್ಲರಿಗೂ ಸಮಸ್ತ ಜೆರುಸಲೇಮಿನವರಿಗೂ ಸಾರಿದನು;

3 “ಆಮೋನನ ಮಗನೂ ಜುದೇಯದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೇ ವರ್ಷದಿಂದ ಈ ದಿನದವರೆಗೆ, ಅಂದರೆ ಕಳೆದ ಇಪ್ಪತ್ತು ಮೂರು ವರ್ಷಗಳಿಂದ ಸರ್ವೇಶ್ವರ ಸ್ವಾಮಿ ತಮ್ಮ ವಾಕ್ಯವನ್ನು ನನಗೆ ತಿಳಿಸಿದ್ದಾರೆ. ಅದನ್ನು ನಾನು ನಿಮಗೆ ತಡಮಾಡದೆ ಪ್ರಕಟಿಸುತ್ತಾ ಬಂದಿದ್ದೇನೆ. ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.

4 ಸರ್ವೇಶ್ವರ ತಮ್ಮ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳಿಸುತ್ತಿದ್ದರು. ಆದರೂ ನೀವು ಗಮನಿಸಲಿಲ್ಲ; ಕಿವಿಗೊಡಲೂ ಇಲ್ಲ.

5 ಅವರು ತಂದ ಸಮಾಚಾರ ಇದು: ‘ನೀವೆಲ್ಲರು ನಿಮ್ಮನಿಮ್ಮ ದುರ್ಮಾರ್ಗದಿಂದಲೂ ದುಷ್ಕೃತ್ಯಗಳಿಂದಲೂ ಹಿಂದಿರುಗಬೇಕು. ಆಗ, ಸರ್ವೇಶ್ವರ ನಿಮಗೂ ನಿಮ್ಮ ಪೂರ್ವಜರಿಗೂ ಶಾಶ್ವತ ಸೊತ್ತಾಗಿ ಅನುಗ್ರಹಿಸಿದ ನಾಡಿನಲ್ಲಿ ನೀವು ನೆಲೆಗೊಳ್ಳುವಿರಿ.

6 ಬೇರೆ ದೇವರುಗಳನ್ನು ಹಿಂಬಾಲಿಸಿ, ಅವರನ್ನು ಸೇವಿಸಿ ಪೂಜಿಸಬೇಡಿ. ನಿಮ್ಮ ಕೈ ಕೃತಿಗಳಾದ ವಿಗ್ರಹಗಳನ್ನು ಆರಾಧಿಸಿ, ನನ್ನನ್ನು ರೇಗಿಸಬೇಡಿ. ಆಗ ನಾನು ನಿಮಗೆ ಯಾವ ಕೇಡನ್ನೂ ಮಾಡೆನು.’

7 ಆದರೆ ಸರ್ವೇಶ್ವರ ಸ್ವಾಮಿಯೇ ಹೇಳುವಂತೆ ನೀವು ಅವರಿಗೆ ಕಿವಿಗೊಡದೆ ನಿಮ್ಮ ಕೈಕೃತಿಗಳಾದ ವಿಗ್ರಹಗಳಿಂದ ಅವರನ್ನು ಕೆಣಕಿ ನಿಮಗೇ ಕೇಡನ್ನು ತಂದುಕೊಂಡಿದ್ದೀರಿ.

8 “ಆದುದರಿಂದ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಈ ನುಡಿಯನ್ನು ಕೇಳಿರಿ:

9 “ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.

10 ಇವುಗಳಲ್ಲಿ ಸಂಭ್ರಮ ಸಡಗರಗಳ ಧ್ವನಿಯಾಗಲಿ. ವಧುವರರ ಸ್ವರವಾಗಲಿ ಏಳದಂತೆ ಮಾಡುವೆನು. ಬೀಸುಕಲ್ಲಿನ ಸದ್ದನ್ನು ಅಡಗಿಸುವೆನು. ದೀಪಕ್ಕೆ ಎಣ್ಣೆ ಇಲ್ಲದಂತೆ ಮಾಡುವೆನು.

11 ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.

12 ಆ ಅವಧಿಯ ತರುವಾಯ ನಾನು ಬಾಬಿಲೋನನ್ನೂ ಅದರ ಅರಸನನ್ನೂ ದಂಡಿಸುವೆನು. ಅದರ ದ್ರೋಹದ ನಿಮಿತ್ತ ಆ ಬಾಬಿಲೋನಿನ ನಾಡನ್ನು ನಿತ್ಯ ವಿನಾಶಕ್ಕೆ ಗುರಿಪಡಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.

13 ನಾನು ಈ ನಾಡಿನ ವಿಷಯದಲ್ಲಿ ನುಡಿದುದೆಲ್ಲವನ್ನು, ಅಂದರೆ ಯೆರೆಮೀಯನ ಮುಖಾಂತರ ಸಕಲ ರಾಷ್ಟ್ರಗಳ ವಿರುದ್ಧ ನುಡಿದಿರುವ ಹಾಗು ಪ್ರವಾದನೆಗಳ ಗ್ರಂಥದಲ್ಲಿ ಬರೆದುದೆಲ್ಲವನ್ನು ಅದರ ಮೇಲೆ ಬರಮಾಡುವೆನು.

14 ಅನೇಕ ರಾಷ್ಟ್ರಗಳೂ ಮಹಾರಾಜರೂ ಅವರನ್ನು ಗುಲಾಮರನ್ನಾಗಿಸಿಕೊಳ್ಳುವರು. ಅವರ ಕೃತ್ಯಗಳಿಗೂ ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿ ತೀರಿಸುವೆನು.”


ಕೋಪ ತುಂಬಿದ ಕೊಡ

15 ಇಸ್ರಯೇಲರ ದೇವರಾದ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದರು: “ಕೋಪವೆಂಬ ಮದ್ಯದಿಂದ ತುಂಬಿರುವ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊ. ಯಾವ ರಾಷ್ಟ್ರಗಳ ಬಳಿಗೆ ನಿನ್ನನ್ನು ಕಳಿಸುತ್ತೇನೋ ಆ ರಾಷ್ಟ್ರಗಳೆಲ್ಲ ಈ ಪಾತ್ರೆಯಿಂದ ಕುಡಿಯುವಂತೆ ಮಾಡು.

16 ಅವರು ಅದನ್ನು ಕುಡಿದು ಓಲಾಡುವರು, ನಾನು ಕಳಿಸುವ ಖಡ್ಗದಿಂದ ಹುಚ್ಚುಚ್ಚಾಗುವರು.”

17 ನಾನು ಸರ್ವೇಶ್ವರನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡೆ. ಸರ್ವೇಶ್ವರ ಯಾವ ರಾಷ್ಟ್ರಗಳ ಬಳಿಗೆ ನನ್ನನ್ನು ಕಳಿಸಿದರೋ, ಆ ಎಲ್ಲ ರಾಷ್ಟ್ರಗಳು ಅದರಿಂದ ಕುಡಿಯುವಂತೆ ಮಾಡಿದೆ.

18 ಜೆರುಸಲೇಮಿಗೂ ಜುದೇಯದ ನಗರಗಳಿಗೂ, ಅರಸರುಗಳಿಗೂ ಕುಡಿಸಿದೆ. ಇದರಿಂದ ಅವರು ಹಾಳಾಗಿ ಇಂದು ಪರಿಹಾಸ್ಯಕ್ಕೂ ಶಾಪಕ್ಕೂ ಗುರಿಯಾಗುವಂತಾಯಿತು.

19 ಆ ಕೊಡದಿಂದ ಕುಡಿದ ಮತ್ತಿತರರು ಇವರು: ಈಜಿಪ್ಟಿನ ಅರಸ ಫರೋಹನು ಅವನ ಸೇವಕರು, ಮಂತ್ರಿಗಳು, ಎಲ್ಲ ಪ್ರಜೆಗಳು ಮತ್ತು ಅಲ್ಲಿನ ವಿದೇಶೀಯರು;

20 ಊಚ್ ನಾಡಿನ ಎಲ್ಲ ಅರಸರು, ಫಿಲಿಷ್ಟಿಯ ದೇಶದ ಎಲ್ಲ ಅರಸರು, ಅಷ್ಕೆಲೋನ್, ಗಾಜಾ, ಎಕ್ರೋನ್, ಅಷ್ಟೋದಿನ ಶೇಷ, ಈ ಪ್ರಾಂತ್ಯಗಳ ಎಲ್ಲ ಅರಸರು;

21 ಎದೋಮ್, ಮೋವಾಬ್, ಅಮ್ಮೋನ್ ಜನರೆಲ್ಲರು;

22 ಟೈರ್ ಮತ್ತು ಸಿದೋನ್ ಇವುಗಳ ಅರಸರೆಲ್ಲರು;

23 ಸಮುದ್ರದ ಆಚಿನ ಕರಾವಳಿಯ ಅರಸರು, ದೆದಾನ್ಯರು, ತೇಮಾ, ಬೂಜ್ ನಾಡಿನವರು, ಮುಂದಲೆಗೂದಲು ಕತ್ತರಿಸಿಕೊಳ್ಳುವವರೆಲ್ಲರು;

24 ಅರಬೀಯದ ಎಲ್ಲ ಅರಸರು, ಅರಣ್ಯವಾಸಿಗಳಾದ ಮಿಶ್ರಜಾತಿಯ ಎಲ್ಲ ನಾಯಕರು;

25 ಏಲಾಮಿನ ಎಲ್ಲ ಅರಸರು, ಮೇದ್ಯರ ಎಲ್ಲ ಅರಸರು;

26 ದೂರ - ಹತ್ತಿರವಿರುವ ಉತ್ತರ ನಾಡಿನ ಎಲ್ಲ ಅರಸರು, ಲೋಕದ ಸಕಲ ರಾಜ್ಯಗಳು, ಇವರೆಲ್ಲರು ಕುಡಿದ ಮೇಲೆ ಬಾಬಿಲೋನಿನ ಅರಸನು ಕುಡಿಯುವನು.

27 ಸರ್ವೇಶ್ವರಾ: “ನೀನು ಅವರಿಗೆ ಹೀಗೆಂದು ಹೇಳು: ‘ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೇಳಿದ್ದಾರೆ - ನೀವು ಕುಡಿಯಬೇಕು, ಕುಡಿದು ಕಕ್ಕಬೇಕು. ನಾನು ಕಳಿಸುವ ಖಡ್ಗಕ್ಕೆ ತುತ್ತಾಗಿ ಬೀಳಬೇಕು, ಬಿದ್ದು ಏಳಬಾರದು.’

28 ಒಂದು ವೇಳೆ ಅವರು ಆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ ಕುಡಿಯಲಿಕ್ಕೂ ಒಪ್ಪದಿದ್ದರೆ ಅವರಿಗೆ ಹೀಗೆಂದು ಹೇಳು - ‘ಸರ್ವಶಕ್ತ ಸರ್ವೇಶ್ವರನ ನುಡಿ ಇವು: ನೀವು ಕುಡಿಯಲೇಬೇಕು;

29 ಇಗೋ, ನನ್ನ ಹೆಸರುಗೊಂಡಿರುವ ನಗರದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಳ್ಳುವಿರೊ? ಆಗುವುದೇ ಇಲ್ಲ. ಏಕೆಂದರೆ ಭೂನಿವಾಸಿಗಳೆಲ್ಲರಿಗೆ ವಿರುದ್ಧವಾಗಿ ಖಡ್ಗವನ್ನು ಬರಮಾಡುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.’

30 “(ಯೆರೆಮೀಯನೇ), ನೀನು ಪ್ರವಾದಿಸುತ್ತಾ ಅವರಿಗೆ ಈ ಮಾತುಗಳನ್ನು ಹೇಳು: ‘ಸರ್ವೇಶ್ವರ ಗರ್ಜಿಸುವನು ಮೇಲಣಲೋಕದಿಂದ ದನಿಗೈವನು ತನ್ನ ಘನ ನಿವಾಸದಿಂದ ಗಟ್ಟಿಯಾಗಿ ಕೂಗುವನು ತನ್ನ ಹುಲ್ಲುಗಾವಲಿನ ಮಂದೆಯ ವಿರುದ್ಧ ಕೂಗಾಡುವನು ದ್ರಾಕ್ಷೆಯ ಹಣ್ಣನ್ನು ತುಳಿಯುವವರಂತೆ ಭೂನಿವಾಸಿಗಳೆಲ್ಲರು ಭಯಭ್ರಾಂತರಾಗುವಂತೆ.

31 ಆತನ ಶಬ್ದ ವ್ಯಾಪಿಸುವುದು ಭೂಮಿಯ ಕಟ್ಟಕಡೆಗೆ ಸರ್ವೇಶ್ವರನೆ ಆಪಾದನೆ ಹೊರಿಸುವನು ಜನಾಂಗಗಳ ಮೇಲೆ ನರಮಾನವರನ್ನೆಲ್ಲ ಗುರಿಮಾಡುವನು ತೀರ್ಪಿಗೆ ದುರುಳರನ್ನು ತುತ್ತಾಗಿಸುವನು ಕತ್ತಿಗೆ - ಇದು ಸರ್ವೇಶ್ವರನ ನುಡಿ’.”

32 ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: ‘ಹರಡುವುದು ಕೇಡು ಜನಾಂಗದಿಂದ ಜನಾಂಗಕ್ಕೆ ಏಳುವುದು ಚಂಡಮಾರುತ ಲೋಕದ ಕಟ್ಟಕಡೆಯಿಂದ’.”

33 ಆ ದಿನದಲ್ಲಿ ಸರ್ವೇಶ್ವರನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಿದ್ದಿರುವರು. ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣರು. ಭೂಮಿಯ ಮೇಲೆ ಗೊಬ್ಬರವಾಗಿ ಬಿದ್ದಿರುವರು.

34 ‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದುಹೋದ ಅಂದವಾದ ಪಾತ್ರೆಯಂತೆ.

35 ಕುರಿಗಾಹಿಗಳು ಓಡಿಹೋಗುವುದಕ್ಕೆ ದಾರಿ ಸಿಕ್ಕದು ಮೇಷಪಾಲರು ತಲೆತಪ್ಪಿಸಿಕೊಳ್ಳಲಿಕ್ಕೆ ಆಸ್ಪದ ದೊರಕದು.

36 ಅಕಟಕಟಾ, ಕುರಿಗಾಹಿಗಳ ಕೂಗಾಟ ಮೇಷಪಾಲರ ಕಿರುಚಾಟ ಸರ್ವೇಶ್ವರನಿಂದಲೆ ಆ ಹುಲ್ಲುಗಾವಲಿನ ವಿನಾಶ!

37 ಆತನ ಕೋಪಾಗ್ನಿಯ ನಿಮಿತ್ತ ಹಾಯಾದ ಗೋಮಾಳಗಳ ಧ್ವಂಸ!

38 ಗುಹೆಬಿಟ್ಟು ಬಂದ ಸಿಂಹದಂತೆ ಬಂದಿರುವನಾತ. ಆತನ ಕೋಪಾಗ್ನಿಯ ನಿಮಿತ್ತ ತುಂಡರಿಸುವಾ ಖಡ್ಗದ ಪ್ರಯುಕ್ತ ಅವರ ನಾಡಾಗಿದೆ ಬೆಂಗಾಡು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು