Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 24 - ಕನ್ನಡ ಸತ್ಯವೇದವು C.L. Bible (BSI)


ಇಬ್ಬಗೆಯ ಹಣ್ಣುಗಳ ದರ್ಶನ

1 ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗ ಹಾಗೂ ಜುದೇಯದ ಅರಸ ಆದ ಯೆಕೊನ್ಯನನ್ನು, ಜುದೇಯದ ಪ್ರಧಾನಿಗಳನ್ನು, ಶಿಲ್ಪಿಗಳನ್ನು ಮತ್ತು ಕಮ್ಮಾರರನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದನು. ಇದಾದ ಬಳಿಕ ಸರ್ವೇಶ್ವರ ಸ್ವಾಮಿ ತಮ್ಮ ಆಲಯದ ಮುಂದೆ ಇಟ್ಟಿದ್ದ, ಅಂಜೂರದ ಹಣ್ಣು ತುಂಬಿದ್ದ, ಎರಡು ಬುಟ್ಟಿಗಳನ್ನು ನನಗೆ ಕಾಣುವಂತೆ ಮಾಡಿದರು.

2 ಒಂದು ಬುಟ್ಟಿಯಲ್ಲಿ ಕಾಲಕ್ಕೆ ಮುಂಚೆ ಮಾಗಿದ್ದ ಹಣ್ಣುಗಳು ತುಂಬಿದ್ದವು. ಅವು ಅತ್ಯುತ್ತಮವಾದ ಅಂಜೂರದ ಹಣ್ಣುಗಳು. ಇನ್ನೊಂದು ಬುಟ್ಟಿಯಲ್ಲಿ ಯಾರೂ ತಿನ್ನಲಾಗದಷ್ಟು ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.

3 ಆಗ ಸರ್ವೇಶ್ವರ ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.

4 ಆಗ ಸರ್ವೇಶ್ವರ ನನಗೆ ದಯಪಾಲಿಸಿದ ಸಂದೇಶ ಇದು:

5 “ಇಸ್ರಯೇಲರ ದೇವರಾದ ಸರ್ವೇಶ್ವರ ಹೇಳುವುದನ್ನು ಕೇಳು - ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳಿಸಿಬಿಟ್ಟು ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂಥವರು. ಅವರನ್ನು ಆದರದಿಂದ ನೋಡಿ ಅವರಿಗೆ ಒಳ್ಳೆಯದನ್ನೇ ಮಾಡುವೆನು.

6 ಅವರ ಮೇಲೆ ಕನಿಕರ ತೋರಿ ಕಟಾಕ್ಷಿಸಿ ಈ ನಾಡಿಗೆ ಮರಳಿ ಬರಮಾಡುವೆನು. ಅವರನ್ನು ಕಟ್ಟುವೆನು, ಕೆಡುವುದಿಲ್ಲ; ನೆಡುವೆನು, ಕೀಳುವುದಿಲ್ಲ.

7 ನಾನೇ ಸರ್ವೇಶ್ವರ ಎಂದು ಒಪ್ಪಿಕೊಳ್ಳುವ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು. ಅವರು ನನ್ನತ್ತ ಮನಪೂರ್ವಕವಾಗಿ ಹಿಂದಿರುಗಿ ಬರುವರು.

8 “ಇದಲ್ಲದೆ ಸರ್ವೇಶ್ವರನಾದ ನಾನು ಹೇಳುವುದು ಇದು: ಜುದೇಯದ ಅರಸ ಚಿದ್ಕೀಯನು, ಅವನ ಪ್ರಧಾನಿಗಳು, ಜೆರುಸಲೇಮಿನ ಜನರು ಶೇಷವಾಗಿ ಈ ನಾಡಿನಲ್ಲೆ ಉಳಿದವರು ಮತ್ತು ಈಜಿಪ್ಟ್ ದೇಶಕ್ಕೆ ವಲಸೆಹೋದವರು - ಇವರೆಲ್ಲರು ಕೆಟ್ಟು ಯಾರೂ ತಿನ್ನಲಾಗದಷ್ಟು ಅಸಹ್ಯವಾದ ಅಂಜೂರದ ಹಣ್ಣುಗಳಂಥವರು. ಅವರನ್ನು ಅಂಥ ಗತಿಗೆ ಇಳಿಸುವೆನು.

9 ಅವರ ಕೇಡಿಗಾಗಿ ನಾನು ಅವರನ್ನು ಜಗದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗುವ ಸ್ಥಳಗಳಲ್ಲೆಲ್ಲ ಅವರು ಕಟ್ಟುಗಾದೆಗೆ, ನಿಂದೆ ಪರಿಹಾಸ್ಯಕ್ಕೆ, ಶಾಪತಾಪಕ್ಕೆ ಗುರಿಯಾಗುವರು.

10 ಅವರಿಗೂ ಅವರ ಪೂರ್ವಜರಿಗೂ ನಾನು ಅನುಗ್ರಹಿಸಿದ ನಾಡಿನಿಂದ ಅವರು ನಿರ್ಮೂಲರಾಗುವ ತನಕ ಖಡ್ಗ, ಕ್ಷಾಮ, ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು