Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 22 - ಕನ್ನಡ ಸತ್ಯವೇದವು C.L. Bible (BSI)


ಜುದೇಯದ ರಾಜಮನೆತನಕ್ಕೆ ಧಿಕ್ಕಾರ!

1 ಸರ್ವೇಶ್ವರ ಸ್ವಾಮಿ ನನಗೆ ಹೀಗೆ ಎಂದು ಆಜ್ಞೆಮಾಡಿದರು: “ನೀನು ಜುದೇಯದ ಅರಸನ ಮನೆಗೆ ಹೋಗು. ಅಲ್ಲಿ ಈ ಮಾತನ್ನು ಹೇಳು:

2 ‘ದಾವೀದನ ಸಿಂಹಾಸನಾರೂಢನಾದ ಜುದೇಯದ ಅರಸನೇ, ಸರ್ವೇಶ್ವರನ ಮಾತನ್ನು ಕೇಳು; ನಿನ್ನ ಪರಿವಾರದವರೂ ಈ ಬಾಗಿಲುಗಳಲ್ಲಿ ಪ್ರವೇಶಿಸುವ ನಿನ್ನ ಪ್ರಜೆಗಳೂ ಕೇಳಲಿ;

3 ಸರ್ವೇಶ್ವರನ ಸಂದೇಶ ಇದು: ನ್ಯಾಯನೀತಿಯನ್ನು ಆಚರಿಸಿರಿ. ವಂಚಿತನಾದವನನ್ನು ದೋಚಿಕೊಳ್ಳುವವನ ಕೈಯಿಂದ ಬಿಡಿಸಿರಿ. ಪರದೇಶೀಯರಿಗೆ, ಅನಾಥರಿಗೆ, ವಿಧವೆಯರಿಗೆ ಅನ್ಯಾಯಮಾಡಬೇಡಿ, ಅವರನ್ನು ಹಿಂಸಿಸಬೇಡಿ. ನಿರಪರಾಧಿಗಳ ರಕ್ತವನ್ನು ಈ ಸ್ಥಳದಲ್ಲಿ ಸುರಿಸಬೇಡಿ.

4 ನೀವು ಈ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಂಡು ನಡೆದಿರಾದರೆ ದಾವೀದನ ಸಿಂಹಾಸನಾರೂಢರಾದ ಅರಸರು ರಥಾಶ್ವಗಳನ್ನೇರಿ ತಮ್ಮ ಪರಿವಾರದೊಡನೆ ಹಾಗು ಪ್ರಜೆಗಳೊಡನೆ ಈ ಅರಮನೆಯ ಬಾಗಿಲುಗಳಲ್ಲಿ ಪ್ರವೇಶಿಸುವರು.

5 ನೀವು ಈ ಮಾತುಗಳನ್ನು ಕೇಳದೆಹೋದರೆ ಈ ಅರಮನೆ ಹಾಳುಬೀಳುವುದು. ಇದನ್ನು ನನ್ನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”

6 ಹೌದು, ಜುದೇಯದ ಅರಸನ ಮನೆತನವನ್ನು ಕುರಿತು ಸರ್ವೇಶ್ವರ ಹೀಗೆನ್ನುತ್ತಾರೆ : “ನನ್ನ ದೃಷ್ಟಿಗೆ ನೀನಿರುವೆ ಗಿಲ್ಯಾದಿನಂತೆ, ಲೆಬನೋನಿನ ಶಿಖರದಂತೆ ಆದರೆ ನಿನ್ನನ್ನು ಮರುಭೂಮಿಯಂತೆ , ನಿರ್ಜನಪ್ರದೇಶದಂತೆ ಮಾಡುವೆನೆಂಬುದು ನಿಶ್ಚಯ.

7 ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನಗೆ ವಿರುದ್ಧ ಏರ್ಪಡಿಸುವೆನು. ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಬೆಂಕಿಗೆ ಕಡಿದು ಹಾಕುವರು.

8 ಅನೇಕ ಅನ್ಯಜನಾಂಗದವರು ಈ ನಗರದ ಮಾರ್ಗವಾಗಿ ಹೋಗುತ್ತಾ ಸರ್ವೇಶ್ವರ ಈ ಮಹಾನಗರಕ್ಕೆ ಹೀಗೇಕೆ ಮಾಡಿದರೆಂದು ಮಾತಾಡಿಕೊಳ್ಳುವರು.

9 ‘ಈ ನಗರದವರು ತಮ್ಮ ದೇವರಾದ ಸರ್ವೇಶ್ವರನ ಒಡಂಬಡಿಕೆಯನ್ನು ನಿರಾಕರಿಸಿ ಅನ್ಯದೇವತೆಗಳನ್ನು ಪೂಜಿಸಿ ಆರಾಧಿಸಿದ್ದರಿಂದಲೇ ಇದಕ್ಕೆ ಈ ಗತಿಯಾಯಿತು’ ಎಂದು ಹೇಳಿಕೊಳ್ಳುವರು.”


ಯೋಷೀಯನಿಗೆ ಧಿಕ್ಕಾರ!

10 “ಸತ್ತವನಿಗಾಗಿ (ಯೋಷೀಯನಿಗಾಗಿ) ಅಳಬೇಡಿ ಅವನಿಗಾಗಿ ಗೋಳಾಡಬೇಡಿ. ಬದಲಿಗೆ ಸೆರೆಹೋದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ ಇನ್ನು ಅವನು ಹಿಂತಿರುಗನು ಸ್ವಂತ ನಾಡನ್ನು ಮತ್ತೆ ನೋಡನು!


ಶಲ್ಲೂಮನಿಗೆ ಧಿಕ್ಕಾರ!

11 ಜುದೇಯದ ಅರಸನಾದ ಯೋಷೀಯನ ಮಗನೂ ತನ್ನ ತಂದೆ ಯೋಷೀಯನ ತರುವಾಯ ಪಟ್ಟಕ್ಕೆ ಬಂದವನೂ ಹಾಗು ಇಲ್ಲಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನ ವಿಷಯವಾಗಿ ಸರ್ವೇಶ್ವರ ಹೇಳುವುದು ಏನೆಂದರೆ:

12 “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದಿಲ್ಲ. ಅವನನ್ನು ಎಲ್ಲಿಗೆ ಸೆರೆ ಒಯ್ದರೋ ಅಲ್ಲೇ ಅವನು ಸಾಯುವನು. ಈ ನಾಡನ್ನು ಇನ್ನು ಅವನು ನೋಡುವುದಿಲ್ಲ.”


ಯೆಹೋಯಾಕೀಮನಿಗೆ ಧಿಕ್ಕಾರ !

13 “ನೆರೆಯವನಿಗೆ ಕೂಲಿಕೊಡದೆ ಬಿಟ್ಟಿಕೆಲಸ ಮಾಡಿಸಿಕೊಂಡು ಅರಮನೆಯನ್ನು ಕಟ್ಟಿಸಿಕೊಳ್ಳುವವನಿಗೆ ಧಿಕ್ಕಾರ ! ಅವನು ಅರಮನೆಯನ್ನು ಕಟ್ಟಿಸಿಕೊಳ್ಳುವುದು ಅನೀತಿಯಿಂದ ಮಹಡಿಗಳನ್ನು ನಿರ್ಮಿಸಿಕೊಳ್ಳುವುದು ಅನ್ಯಾಯದಿಂದ.

14 ‘ಸವಿಸ್ತಾರವಾದ ಅರಮನೆ ನಿರ್ಮಿಸಿಕೊಳ್ಳುವೆನು ವಿಶಾಲವಾದ ಮಹಡಿ ಕಟ್ಟಿಸಿಕೊಳ್ಳುವೆನು’ ಎನ್ನುವನಿಗೆ ಧಿಕ್ಕಾರ ! ಅವನು ಅಗಲಗಲವಾದ ಕಿಟಕಿಗಳನ್ನಿಡಿಸಿಕೊಳ್ಳುತ್ತಾನೆ ಅವುಗಳಿಗೆ ಕೆಂಪು ಬಣ್ಣವನ್ನೂ ಬಳಿಸಿಕೊಳ್ಳುತ್ತಾನೆ.

15 ದೇವದಾರಿನ ಕೆಲಸದಲ್ಲಿ, ಬೇರೆಯವರನ್ನು ಮೀರಿಸುವುದರಲ್ಲಿ ಅಡಗಿದೆಯೇ ನಿನ್ನ ದೊರೆತನದ ಹಿರಿಮೆ? ನಿನ್ನ ತಂದೆ ಎಷ್ಟೇ ಕುಡಿದರೂ ತಿಂದರೂ ನ್ಯಾಯನೀತಿಯನ್ನು ಪಾಲಿಸುತ್ತಿದ್ದನಲ್ಲವೆ? ಆಗ ಅವನಿಗೆ ಎಲ್ಲವು ನೆಮ್ಮದಿಯಾಗಿತ್ತಲ್ಲವೆ?

16 ಆತ ದೀನದಲಿತರಿಗೆ ನ್ಯಾಯ ದೊರಕಿಸುತ್ತಿದ್ದ ಆಗ ಅವನಿಗೆ ಎಲ್ಲವು ಸುಗಮವಾಗಿತ್ತು. ನನ್ನನ್ನು ಅರಿಯುವುದು ಎಂದರೆ ಇದುವೇ. ಇದು ಸರ್ವೇಶ್ವರನಾದ ನನ್ನ ನುಡಿ.

17 ಆದರೆ ನಿನ್ನ ದೃಷ್ಟಿ, ನಿನ್ನ ಮನಸ್ಸು ನೆಲೆಗೊಂಡಿವೆ ದುರ್ಲಾಭದಲ್ಲಿ, ನಿರ್ದೋಷಿಯ ರಕ್ತ ಸುರಿಸುವುದರಲ್ಲಿ ದಬ್ಬಾಳಿಕೆಯಲ್ಲಿ, ಹಿಂಸಾಚಾರಗಳಲ್ಲಿ.”

18 ಆದಕಾರಣ ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ವಿಷಯವಾಗಿ ಸರ್ವೇಶ್ವರ ಹೀಗೆನ್ನುತ್ತಾರೆ: “ಇವನಿಗಾಗಿ ಯಾರೂ ‘ಅಯ್ಯೋ ಸೋದರಸೋದರಿಯೇ’ ಎಂದು ಗೋಳಾಡರು ‘ಅಯ್ಯೋ ನಮ್ಮೊಡೆಯಾ, ರಾಜಾಧಿರಾಜ’ ಎಂದು ಪ್ರಲಾಪಿಸರು.

19 ಇವನನ್ನು ಜೆರುಸಲೇಮಿನ ಬಾಗಿಲ ಹೊರಗಡೆ ಬಿಸಾಡುವರು ಕತ್ತೆಗೆ ತಕ್ಕ ಮರ್ಯಾದೆಯೊಂದಿಗೆ ಹೂಣುವರು.”


ಜೆರುಸಲೇಮ್ ನಗರಿಗೆ ಧಿಕ್ಕಾರ !

20 “ಲೆಬನೋನ್ ಬೆಟ್ಟವನ್ನು ಹತ್ತಿ ಬೊಬ್ಬೆಯಿಡು ! ಬಾಷಾನಿನಲ್ಲಿ ಮೊರೆಯಿಡು ! ಅಬಾರೀಮಿನಲ್ಲಿ ಕಿರುಚಾಡು ! ಏಕೆಂದರೆ ನಿನ್ನ ಮಿಂಡರೆಲ್ಲ ಹಾಳಾಗಿಹೋದರು !

21 ನೀನು ನೆಮ್ಮದಿಯಾಗಿದ್ದ ಕಾಲದಲ್ಲಿ ನಿನ್ನೊಡನೆ ಮಾತಾಡಿದೆ ಆದರೆ ನೀನು, “ಕೇಳಲೊಲ್ಲೆ” ಎಂದು ಹೇಳಿಬಿಟ್ಟೆ. ನನ್ನ ಮಾತಿಗೆ ಕಿವಿಗೊಡದಿರುವುದು ನಿನಗೆ ಬಾಲ್ಯದಿಂದಲೆ ವಾಡಿಕೆ !

22 ನಿನ್ನನ್ನು ಅಟ್ಟಿ ಮೇಯಿಸುವ ಕುರುಬರನ್ನು ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಮಿಂಡರನ್ನು ಸೆರೆಹಿಡಿದುಕೊಂಡು ಹೋಗುವರು. ಆಗ ಖಂಡಿತವಾಗಿ ನೀನು ಆಶಾಭಂಗಪಡುವೆ ನಿನ್ನ ದುಷ್ಕೃತ್ಯಗಳ ನಿಮಿತ್ತ ಅವಮಾನಕ್ಕೀಡಾಗುವೆ.

23 ‘ಲೆಬನೋನ್’ ಅರಮನೆಯಲ್ಲಿ ವಾಸಿಸುವವಳೇ, ದೇವದಾರುಗಳ ನಡುವೆ ಗೂಡುಮಾಡಿಕೊಂಡಿರುವವಳೇ, ಪ್ರಸವವೇದನೆಯಂಥ ಸಂಕಟಗಳು ಸಂಭವಿಸಿದಾಗ ನಿನಗೊದಗುವ ಪರಿಸ್ಥಿತಿ ಎಷ್ಟೋ ದುಃಖಕರ !


ಅರಸ ಕೊನ್ಯನಿಗೆ ಧಿಕ್ಕಾರ !

24 ಸರ್ವೇಶ್ವರನ ಮಾತಿದು - “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಕೊನ್ಯನೇ, ನೀನು ನನ್ನ ಬಲಗೈ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆ.

25 ನಿನ್ನ ಪ್ರಾಣ ಹುಡುಕುತ್ತಿರುವವರ ಕೈಗೆ, ನಿನ್ನಲ್ಲಿ ಭಯಹುಟ್ಟಿಸುವವರ ಕೈಗೆ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಮತ್ತು ಬಾಬಿಲೋನಿನ ಜನರ ಕೈಗೆ ನಿನ್ನನ್ನು ಕೊಟ್ಟುಬಿಡುವೆನು.

26 ನಿನ್ನನ್ನೂ ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು. ನೀವು ಅಲ್ಲೇ ಸಾಯುವಿರಿ.

27 ಹಿಂದಿರುಗಬೇಕೆಂದು ಹಂಬಲಿಸಿದರೂ ತಾಯ್ನಾಡಿಗೆ ಹಿಂದಿರುಗುವುದೇ ಇಲ್ಲ.”

28 ಕೊನ್ಯನು ಬಿಸಾಡಲ್ಪಟ್ಟ ಒಡಕು ಕುಡಿಕೆಯೆ? ಯಾರಿಗೂ ಬೇಡವಾದ ಮಣ್ಣಿನ ಮಡಿಕೆಯೆ? ಅವನೂ ಅವನ ಮಡದಿಮಕ್ಕಳೇಕೆ ಬೀದಿಪಾಲಾಗಿದ್ದಾರೆ?

29 ನಾಡೇ, ನಾಡೇ, ಎಲೈ ನಾಡೇ, ಸರ್ವೇಶ್ವರನ ಮಾತಿಗೆ ಕಿವಿಗೊಡು.

30 ಹೀಗಿದೆ ಸರ್ವೇಶ್ವರನ ನುಡಿ: “ಇವನು ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳದ ವ್ಯಕ್ತಿ ಇವನ ಸಂತಾನದಲ್ಲಿ ಇನ್ನು ಯಾವನೂ ದಾವೀದನ ಸಿಂಹಾಸನದಲ್ಲಿ ಕೂರನು, ಜುದೇಯವನ್ನು ಆಳಿ ಬಾಳನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು