ಯೆರೆಮೀಯ 20 - ಕನ್ನಡ ಸತ್ಯವೇದವು C.L. Bible (BSI)ಯಾಜಕ ಪಷ್ಹೂರನಿಗೆ ಶಾಪ 1 ಯೆರೆಮೀಯ ಈ ಪ್ರವಾದನೆ ಮಾಡುವುದನ್ನು ಇಮ್ಮೇರನ ಮಗ ಹಾಗು ಸರ್ವೇಶ್ವರನ ಆಲಯದ ಮುಖ್ಯಾಧಿಕಾರಿಯಾದ ಯಾಜಕ ಪಷ್ಹೂರನು ಕೇಳಿದನು. 2 ಅವನು ಪ್ರವಾದಿ ಯೆರೆಮೀಯನನ್ನು ಹೊಡೆಯಿಸಿ ಸರ್ವೇಶ್ವರನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲ ಬಳಿಯಲ್ಲಿದ್ದ ಸೆರೆಗೆ ಹಾಕಿಸಿದನು. 3 ಮರುದಿನ ಆ ಪಷ್ಹೂರನು ಯೆರೆಮೀಯನನ್ನು ಸೆರೆಯಿಂದ ಬಿಡಿಸಿದಾಗ ಯೆರೆಮೀಯ ಅವನಿಗೆ ಹೀಗೆಂದು ಹೇಳಿದನು: “ಸರ್ವೇಶ್ವರ ನಿನ್ನ ಹೆಸರನ್ನು ಪಷ್ಹೂರ್ ಎಂದು ಕರೆಯದೆ ‘ಮಾಗೋರ್ ಮಿಸ್ಸಾಬೀಬ್’ ಎಂದು ಕರೆದಿದ್ದಾರೆ. 4 ಏಕೆಂದರೆ ಸರ್ವೇಶ್ವರನೆ ಹೇಳಿರುವ ಮಾತಿವು - ‘ಇಗೋ, ನಾನು ನಿನ್ನನ್ನು ನಿನಗೂ ನಿನ್ನ ಎಲ್ಲ ಸ್ನೇಹಿತರಿಗೂ ಭಯಾನಕನನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ಅದನ್ನು ನೀನು ಕಣ್ಣಾರೆ ಕಾಣುವೆ. ನಾನು ಜುದೇಯರನೆಲ್ಲ ಬಾಬಿಲೋನಿನ ಅರಸನ ಕೈಗೊಪ್ಪಿಸುವೆನು. ಅವನು ಇವರನ್ನು ಬಾಬಿಲೋನಿಗೆ ಸೆರೆಯಾಗಿ ಕೊಂಡೊಯ್ದು ಕತ್ತಿಗೆ ತುತ್ತಾಗಿಸುವನು. 5 ಅಷ್ಟು ಮಾತ್ರವಲ್ಲ, ಈ ನಗರದ ಎಲ್ಲ ಆಸ್ತಿಯನ್ನೂ ಆದಾಯವನ್ನೂ ಸಂಪತ್ತನ್ನೂ ಹಾಗು ಜುದೇಯದ ಅರಸರ ಸಕಲ ನಿಧಿನಿಕ್ಷೇಪಗಳನ್ನೂ ಇವರ ಶತ್ರುಗಳ ಕೈವಶಮಾಡುವೆನು. ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು. 6 ಪಷ್ಹೂರನೇ ಕೇಳು, ನೀನು ನಿನ್ನ ಮನೆಯ ಎಲ್ಲರೊಡನೆ ಸೆರೆಗೆ ಹೋಗುವೆ. ನೀನು ಮತ್ತು ನಿನ್ನ ಸುಳ್ಳು ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಗೆಳೆಯರೂ ಬಾಬಿಲೋನಿಗೆ ಸೇರಿ ಅಲ್ಲೆ ಸತ್ತು ಮಣ್ಣಾಗುವಿರಿ’.” ಯೆರೆಮೀಯನ ಪ್ರಲಾಪ 7 ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ. 8 ನನ್ನ ಮಾತೆಲ್ಲ ಅರಚಾಟ ‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ. ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ. 9 ‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು, ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆ ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ. ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ. 10 ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹುಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ. 11 ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ. 12 ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ. 13 ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ. 14 ಶಪಿಸಲ್ಪಡಲಿ ನಾ ಹುಟ್ಟಿದಾ ದಿನವು ! ಶುಭವೆನಿಸಿಕೊಳ್ಳದಿರಲಿ ತಾಯಿ ನನ್ನನ್ನು ಹೆತ್ತಿದಾ ದಿನವು. 15 ಶಪಿಸಲ್ಪಡಲಿ ‘ನಿನಗೆ ಗಂಡು ಹುಟ್ಟಿದೆ’ ಎಂದು ನನ್ನ ತಂದೆಗೆ ತಿಳಿಸಿದಾತ ! ಕೇವಲ ಸಂತಸವನ್ನು ನನ್ನ ತಂದೆಯಲ್ಲಿ ಉಂಟುಮಾಡಿದಾತ. 16 ಸರ್ವೇಶ್ವರನು ಕನಿಕರಿಸದೆ ಕೆಡವಿಬಿಟ್ಟ ಪಟ್ಟಣದ ಗತಿ ಅವನಿಗಾಗಲಿ ! ಬೆಳಿಗ್ಗೆ ಕಿರುಚಾಟ, ನಡುಹಗಲಲ್ಲಿ ಕೂಗಾಟ ಅವನ ಕಿವಿಗೆ ಬೀಳಲಿ ! 17 ತಾಯಗರ್ಭದಲ್ಲಿರುವಾಗಲೆ ಅವನೇಕೆ ನನ್ನನ್ನು ಕೊಂದುಹಾಕಲಿಲ್ಲ? ಆಗ ನನ್ನ ತಾಯೇ ನನಗೆ ಗೋರಿಯಾಗುತ್ತಿದ್ದಳಲ್ಲಾ ! ಆಕೆಯ ಗರ್ಭ ಸದಾ ಬಸಿರಾಗಿಯೇ ಇರುತ್ತಿತ್ತಲ್ಲಾ ! 18 ಗರ್ಭ ಬಿಟ್ಟು ನಾನೇಕೆ ಹೊರಬಂದೆ? ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ? ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India