Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 18 - ಕನ್ನಡ ಸತ್ಯವೇದವು C.L. Bible (BSI)


ಕುಂಬಾರನ ಸಾಮತಿ

1 ಸರ್ವೇಶ್ವರ ಸ್ವಾಮಿ ನನಗೆ :

2 “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು.

3 ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ.

4 ಅವನು ಜೇಡಿ ಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟುಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ.

5 ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ :

6 “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ.

7 ಒಂದು ಜನಾಂಗವನ್ನು ಅಥವಾ ಒಂದು ರಾಜ್ಯವನ್ನು ಕಿತ್ತು, ಕೆಡವಿ, ನಾಶಪಡಿಸಿ ಎಂದು ನಾನು ಎಂದಾದರೂ ಅಪ್ಪಣೆ ಕೊಡಲು ಸಾಧ್ಯ.

8 ದಂಡನೆಗೆ ನಿರ್ಣಯಿಸಲಾದ ಆ ಜನಾಂಗದವರು ತಮ್ಮ ಕೆಟ್ಟತನವನ್ನು ಬಿಟ್ಟು ಹಿಂತಿರುಗಿದ್ದೇ ಆದರೆ ನಾನು ಬರಮಾಡಬೇಕೆಂದಿದ್ದ ಆ ವಿಪತ್ತನ್ನು ನಾನು ಮನಮರುಗಿ ಬರಮಾಡದಿರುವೆನು.

9 ಹಾಗೆಯೇ ಒಂದು ಜನಾಂಗವನ್ನು ಅಥವಾ ಒಂದು ರಾಜ್ಯವನ್ನು ನೆಟ್ಟು ಕಟ್ಟಬೇಕೆಂದು ನಾನು ಎಂದಾದರೂ ಅಪ್ಪಣೆಕೊಡಲು ಸಾಧ್ಯ.

10 ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ್ದೇ ಆದರೆ ನಾನು ಮನಸ್ಸನ್ನು ಬದಲಾಯಿಸುವೆನು. ಅದಕ್ಕೆ ಮಾಡಬೇಕೆಂದಿದ್ದ ಒಳಿತನ್ನು ಮಾಡದಿರುವೆನು.

11 ಈಗ ನೀನು ಜುದೇಯದ ಹಾಗು ಜೆರುಸಲೇಮಿನ ಜನರಿಗೆ ಈ ಸಂದೇಶವನ್ನು ತಿಳಿಸು - ‘ಸರ್ವೇಶ್ವರ ಹೀಗೆನ್ನುತ್ತಾರೆ : ನಾನು ನಿಮಗೆ ವಿರುದ್ಧ ವಿಪತ್ತನ್ನು ಕಲ್ಪಿಸುತ್ತಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ದುರ್ಮಾರ್ಗವನ್ನು ಬಿಟ್ಟು ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ.

12 “ಆದರೆ ಅವರು, ‘ಇದೆಲ್ಲ ಹೇಳಿ ಏನು ಪ್ರಯೋಜನವಿಲ್ಲ; ನಾವು ನಮ್ಮ ಆಲೋಚನೆ ಪ್ರಕಾರ ನಡೆಯುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಮ್ಮ ಹೃದಯದ ಚಟದಂತೆಯೇ ನಡೆಯುತ್ತೇವೆ’ ಎಂದು ಹೇಳುವರು.”


ಇಸ್ರಯೇಲಿನ ದೇವದ್ರೋಹ

13 ಸರ್ವೇಶ್ವರ ಇಂತೆಂದರು : “ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆಂದು ಅನ್ಯಜನಾಂಗಗಳಲ್ಲೆ ವಿಚಾರಿಸಿರಿ. ಇಸ್ರಯೇಲೆಂಬ ಯುವತಿ ಕೇವಲ ಅಸಹ್ಯಕಾರ್ಯವನ್ನೆ ಎಸಗಿದ್ದಾಳೆ.

14 ಲೆಬನೋನಿನ ಹಿಮವು ಅರಣ್ಯದಾ ಶಿಖರದಿಂದ ತಪ್ಪುವುದುಂಟೆ? ಅಲ್ಲಿಂದ ಇಳಿದು ಹರಿಯುವ ತೊರೆಯ ನೀರು ಬತ್ತುವುದುಂಟೆ?

15 ನನ್ನ ಜನರಾದರೋ ನನ್ನನ್ನು ಮರೆತು ವ್ಯರ್ಥವಿಗ್ರಹಗಳಿಗೆ ಧೂಪಾರತಿ ಎತ್ತಿದ್ದುಂಟು. ಸನಾತನ ಸನ್ಮಾರ್ಗಗಳಲ್ಲಿ ಮುಗ್ಗರಿಸಿ ಸರಿಯಲ್ಲದ ಸೀಳುದಾರಿಯಲ್ಲಿ ಅಲೆದದ್ದುಂಟು.

16 ಆದ್ದರಿಂದ ನಾಡನ್ನು ಭಯಾನಕವಾಗಿಸುವರು ಹಾದು ಹೋಗುವವರೆಲ್ಲ ಬೆಬ್ಬೆರಗಾಗಿ ತಲೆದೂಗುವರು, ಸಿಳ್ಳು ಹಾಕಿ ಅದನ್ನು ಪರಿಹಾಸ್ಯ ಮಾಡುವರು.

17 ಶತ್ರುಗಳು ಮೇಲೆ ಬಿದ್ದು ದಾಳಿಮಾಡಲು ಬಂದಾಗ ಮೂಡಣ ಬಿರುಗಾಳಿ ಮುಂದೆ ಧೂಳಿ ಮಣ್ಣಿನಂತೆ ನನ್ನ ಜನರನ್ನು ದಿಕ್ಕುಪಾಲಾಗಿ ಚದರಿಸುವೆನು. ಅವರ ಆ ವಿಪತ್ತಿನ ದಿನದಂದು ಅವರತ್ತ ಮುಖತಿರುಗಿಸದೆ ಬೆನ್ನು ಮಾಡುವೆನು.”


ಯೆರೆಮೀಯನ ವಿರುದ್ಧ ಒಳಸಂಚು

18 ಆಗ ಜನರು, “ಬನ್ನಿ, ಈ ಯೆರೆಮೀಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.

19 ಯೆರೆಮೀಯ : “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ.

20 ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.

21 ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.

22 ಕಳ್ಳಕಾಕರ ಗುಂಪು ಫಕ್ಕನೆ ಅವರ ಮೇಲೆ ಬೀಳಲಿ. ಅವರ ಮನೆಮಠಗಳಿಂದ ಕಿರಿಚಾಟ ಕೇಳಿಬರಲಿ. ಅವರು ನನ್ನನ್ನು ಕೆಡವಲು ಗುಂಡಿಯನ್ನು ತೋಡಿದ್ದಾರೆ. ನನ್ನ ಕಾಲುಗಳಿಗೆ ಉರುಲನ್ನು ಗುಟ್ಟಾಗಿ ಒಡ್ಡಿದ್ದಾರೆ.

23 ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ್ನು ಅಳಿಸಬೇಡಿ, ಅದು ನಿಮ್ಮ ಕಣ್ಣೆದುರಿಗೇ ಇರಲಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು