Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 17 - ಕನ್ನಡ ಸತ್ಯವೇದವು C.L. Bible (BSI)


ಜುದೇಯದ ಪಾಪ ಮತ್ತು ಪ್ರಾಯಶ್ಚಿತ್ತ

1 ಸರ್ವೇಶ್ವರ ಸ್ವಾಮಿ ಜುದೇಯದ ಜನರಿಗೆ ಹೀಗೆನ್ನುತ್ತಾರೆ : “ಜುದೇಯದ ಪಾಪವನ್ನು ಕಬ್ಬಿಣದ ಲೇಖನಿಯಿಂದ, ವಜ್ರದ ಮೊನೆಯಿಂದ ಬರೆಯಲಾಗಿದೆ. ಅದನ್ನು ನಿಮ್ಮ ಜನರ ಹೃದಯದ ಹಲಗೆಯ ಮೇಲೂ ಅವರ ಬಲಿಪೀಠಗಳ ಕೊಂಬುಗಳ ಮೇಲೂ ಕೆತ್ತಲಾಗಿದೆ.

2 ನಿಮ್ಮ ಮಕ್ಕಳು ಸೊಂಪಾಗಿ ಬೆಳೆದ ಮರಗಳನ್ನಾಗಲಿ ಎತ್ತರವಾದ ಗುಡ್ಡಗಳನ್ನಾಗಲಿ, ಬೈಲಿನ ಬೆಟ್ಟಗಳನ್ನಾಗಲಿ ಕಂಡಾಗಲೆಲ್ಲ ಅವರ ಬಲಿಪೀಠಗಳನ್ನು ಹಾಗು ಅಶೇರ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.

3 ನಿಮ್ಮ ಪ್ರಾಂತ್ಯಗಳಲ್ಲೆಲ್ಲ ನೀವು ಮಾಡಿದ ಪಾಪದ ನಿಮಿತ್ತ ನಾನು ನಿಮ್ಮ ಎಲ್ಲ ಸೊತ್ತುಸಂಪತ್ತುಗಳನ್ನು ಮತ್ತು ಪೂಜಾಸ್ಥಳಗಳನ್ನು ಸೂರೆಗೆ ಈಡುಮಾಡುವೆನು.

4 ನಾನು ನಿಮಗೆ ಹಕ್ಕು ಬಾಧ್ಯತೆಯಾಗಿ ದಯಪಾಲಿಸಿದ ಸೊತ್ತನ್ನು ನೀವು ದೋಷದಿಂದಲೆ ಕಳೆದುಕೊಳ್ಳುವಿರಿ. ನೀವು ನೋಡದ ನಾಡಿನಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೇ ಊಳಿಗದವರನ್ನಾಗಿ ಮಾಡುವೆನು. ನೀವು ನನ್ನ ಕೋಪಾಗ್ನಿಯನ್ನು ಹೊತ್ತಿಸಿದ್ದೀರಿ. ಅದು ನಿರಂತರವಾಗಿ ಉರಿಯುತ್ತಿರುವುದು.


ಮುತ್ತಿನಂಥ ಕೆಲವು ಮಾತುಗಳು

5 ಇವು ಸರ್ವೇಶ್ವರನ ಮಾತುಗಳು : “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು !

6 ಇಂಥವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು.

7 ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ.

8 ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆಬಿಡುವ, ಫಲನೀಡುವ ಮರಕ್ಕೆ ಸಮಾನನು ಆತ.

9 ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ.

10 ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.

11 ಅನ್ಯಾಯವಾಗಿ ಆಸ್ತಿಪಾಸ್ತಿಗಳನ್ನು ಗಳಿಸಿಕೊಳ್ಳುವ ಮಾನವ ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಕೌಜುಗ ಹಕ್ಕಿಗೆ ಸಮಾನ. ಅವು ಅವನಿಂದ ತೊಲಗಿಹೋಗುವುವು ನಡುಪ್ರಾಯದಲ್ಲಿ ಅವನು ಮೂರ್ಖನಾಗಿ ಕಂಡುಬರುವನು ಅಂತ್ಯಕಾಲದಲ್ಲಿ.”

12 ಆದಿಯಿಂದಲೂ ಉನ್ನತಸ್ಥಾನದಲ್ಲಿದೆ ನಮ್ಮ ಪವಿತ್ರಾಲಯ ಅದು ಮಹಿಮೆಯ ಸಿಂಹಾಸನ.

13 ಸ್ವಾಮಿ ಸರ್ವೇಶ್ವರಾ, ನೀವು ಇಸ್ರಯೇಲರ ಆಶ್ರಯ ! ನಿಮ್ಮನ್ನು ಬಿಟ್ಟುಹೋಗುವವರು ಆಶಾಭಂಗಪಡುವರು ಅವರು ಜೀವಜಲದ ಬುಗ್ಗೆಯನ್ನೆ ತೊರೆದವರು ತಮ್ಮ ಹೆಸರನ್ನು ಧೂಳಿನಲ್ಲಿ ಬರೆಸಿಕೊಂಡವರು.


ಯೆರೆಮೀಯನ ವಿಜ್ಞಾಪನೆ

14 ಹೇ ಸರ್ವೇಶ್ವರಾ, ನನ್ನನ್ನು ಸ್ವಸ್ಥಪಡಿಸಿರಿ, ನಾನು ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸಿರಿ, ನಾನು ರಕ್ಷಿತನಾಗಿಯೆ ತೀರುವೆನು. ನೀವೇ ನನಗೆ ಸ್ತುತ್ಯಾರ್ಹರು !

15 ಅಕಟಾ, ಜನರು ನನ್ನನ್ನು ‘ಸರ್ವೇಶ್ವರನ ಮಾತೆಲ್ಲಿ? ಅದು ಈಗಲೇ ನೆರವೇರಲಿ’ ಎಂದು ಮೂದಲಿಸುತ್ತಾರೆ.

16 ನಾನಾದರೋ ‘ಕೇಡನ್ನು ಬರಮಾಡಿ’ ಎಂದು ನಿಮ್ಮನ್ನು ತವಕಪಡಿಸಲಿಲ್ಲ. ಅನಿವಾರ್ಯ ವಿಪತ್ತಿನ ದಿನವನ್ನು ನಾನು ಅಪೇಕ್ಷಿಸಲಿಲ್ಲ. ಇದು ನಿಮಗೆ ತಿಳಿದ ವಿಷಯ. ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು.

17 ನನಗೆ ಭಯಕ್ಕೆ ಕಾರಣವಾಗಬೇಡಿ, ಕೇಡಿನ ಕಾಲದಲ್ಲಿ ನನಗೆ ಆಶ್ರಯ ನೀಡಿ.

18 ನನಗಲ್ಲ, ನನ್ನ ಹಿಂಸಕರಿಗೆ ಅವಮಾನವಾಗಲಿ. ಭಯಭ್ರಾಂತಿ ನನ್ನನ್ನಲ್ಲ, ಅವರನ್ನು ಅಪಹರಿಸಲಿ. ಅವರಿಗೆ ಕೇಡುಗಾಲವನ್ನು ಬರಮಾಡಿ ಬೇರುಸಹಿತ ಅವರನ್ನು ನಾಶಪಡಿಸಿರಿ !


ಸಬ್ಬತ್ ದಿನಾಚರಣೆ

19 ಸರ್ವೇಶ್ವರ ನನಗೆ ಕೊಟ್ಟ ಆದೇಶ : “ನೀನು ಹೊರಟು ಜುದೇಯದ ಅರಸರು ಹೋಗಿಬರುವ ಜನತಾದ್ವಾರದಲ್ಲೂ ಜೆರುಸಲೇಮಿನ ಇತರ ಬಾಗಿಲುಗಳಲ್ಲೂ ನಿಂತುಕೊಂಡು ಹೀಗೆಂದು ಸಾರು :

20 ‘ಈ ಬಾಗಿಲುಗಳಲ್ಲಿ ಸೇರುವ ಜುದೇಯದ ಅರಸರೇ, ಎಲ್ಲ ಯೆಹೂದ್ಯರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಕೇಳಿರಿ.

21 ಮನಮುಟ್ಟಿ ಇದನ್ನು ಗಮನಿಸಿರಿ : ಸಬ್ಬತ್ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿ. ಜೆರುಸಲೇಮಿನ ಬಾಗಿಲುಗಳಲ್ಲಿ ಅದನ್ನು ತರಲೇಬೇಡಿ.

22 ಆ ಸಬ್ಬತ್ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿ. ಯಾವ ಕೆಲಸವನ್ನೂ ಮಾಡದಿರಿ. ನಾನು ನಿಮ್ಮ ಪೂರ್ವಜರಿಗೆ ಆಜ್ಞೆಮಾಡಿದಂತೆ ಸಬ್ಬತ್ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿರಿ.

23 ಅವರಾದರೋ ನನಗೆ ಕಿವಿಗೊಡಲಿಲ್ಲ. ಕೇಳಲಿಕ್ಕೂ ಕಲಿತುಕೊಳ್ಳಲಿಕ್ಕೂ ಅವರು ಒಪ್ಪಲಿಲ್ಲ.

24 “ಸರ್ವೇಶ್ವರನಾದ ನಾನು ಹೇಳುವ ಮಾತಿದು : ನೀವು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನು ತರದೆ, ಯಾವ ಕೆಲಸವನ್ನೂ ಮಾಡದೆ, ಆ ದಿನವನ್ನು ಪವಿತ್ರವಾಗಿ ಆಚರಿಸಿದರೆ,

25 ಆಗ ದಾವೀದನ ಸಿಂಹಾಸನಾರೂಢರಾದ ಅರಸರೂ ಹಾಗು ಪ್ರಭುಗಳೂ ರಥಾಶ್ವಗಳನ್ನು ಏರಿದವರಾಗಿ ಈ ನಗರದ ಬಾಗಿಲುಗಳನ್ನು ಪ್ರವೇಶಿಸುವರು. ಇವರು ಮಾತ್ರವಲ್ಲ, ಇವರ ಪ್ರಧಾನರು, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು ಎಲ್ಲರೂ ಇಲ್ಲಿ ಸೇರುವರು. ಈ ನಗರದಲ್ಲಿ ಜನರು ಯಾವಾಗಲು ತುಂಬಿರುವರು.

26 ಜುದೇಯದ ನಗರಗಳು, ಜೆರುಸಲೇಮಿನ ಸುತ್ತಮುತ್ತಲಿನ ಪ್ರದೇಶಗಳು, ಬೆನ್ಯಾಮಿನ್ ಪ್ರಾಂತ್ಯ, ಇಳಕಲಿನ ಪ್ರದೇಶ, ಬೆಟ್ಟದ ಮೇಲಣ ಪ್ರದೇಶ, ದಕ್ಷಿಣ ಪ್ರಾಂತ್ಯ, ಈ ಎಲ್ಲ ಸ್ಥಳಗಳಿಂದ ಸರ್ವಾಂಗಹೋಮಪಶು, ಯಜ್ಞಪಶು, ಧಾನ್ಯನೈವೇದ್ಯ, ಧೂಪ ಮತ್ತು ಕೃತಜ್ಞತಾರ್ಪಣೆ ಇವುಗಳನ್ನು ಜನರು ನನ್ನ ಆಲಯಕ್ಕೆ ತೆಗೆದುಕೊಂಡು ಬರುವರು.

27 ಆದರೆ ನನ್ನ ಕಡೆಗೆ ಕಿವಿಗೊಡದೆ, ಸಬ್ಬತ್ ದಿನದಲ್ಲಿ ಹೊರೆಹೊತ್ತು, ಜೆರುಸಲೇಮಿನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಗೊಳ್ಳದೆ, ಆ ಸಬ್ಬತ್ ದಿನವನ್ನು ಪವಿತ್ರ ದಿನ ಎಂದು ಆಚರಿಸದೆಹೋದರೆ, ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು. ಅದು ಜೆರುಸಲೇಮಿನ ಅರಮನೆಗಳನ್ನು ದಹಿಸಿಬಿಡುವುದು, ಆ ಬೆಂಕಿ ಆರುವುದೇ ಇಲ್ಲ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು